ರಂಜನಿ ರಾಘವನ್ ಮದುವೆ ಸುದ್ದಿ ಕೇಳಿ ಹೃದಯಬಿರಿದು ಅನ್‌ಫ್ರೆಂಡ್ ಆದ ಆತ ಯಾರು? ನಿಮ್ಮ ಮೇಲೆ ಗೌರವವಿದೆ ಎಂದ ಕನ್ನಡತಿ
Ranjani Raghavan love Sagar Bhardwaj: ಕನ್ನಡತಿ, ಪುಟ್ಟಗೌರಿ ಮದುವೆ ಸೀರಿಯಲ್ ಮತ್ತು ಕನ್ನಡ ಸಿನಿಮಾ ನಟಿ ರಂಜನಿ ರಾಘವನ್ ತನ್ನ ಜೀವನ ಸಂಗಾತಿ ಬಗ್ಗೆ ಸುದ್ದಿಹಂಚಿಕೊಂಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗ ಸಾಗರ್ ಭಾರಧ್ವಜ್ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬರು ಅನ್‌ಫ್ರೆಂಡ್ ಆಗಿದ್ದಾರೆ.
ಬೆಂಗಳೂರು: ರಂಜನಿ ರಾಘವನ್ (Actress Ranjani Raghavan) ಕನ್ನಡದ ಪ್ರತಿಭಾನ್ವಿತ ನಟಿ. ಕನ್ನಡತಿ, ಪುಟ್ಟಗೌರಿ ಮದುವೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮನೋಜ್ಞವಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ರಂಜನಿ ರಾಘವನ್ ತನ್ನ ಲೈಫ್ ಪಾಟ್ನರ್ ಬಗ್ಗೆ ತಿಳಿಸಿದ್ದಾರೆ. ರಂಜನಿ ರಾಘವನ್ ಲವ್ ಸಾಗರ್ ಭಾರಧ್ವಜ್ ಎಂದಿದ್ದಾರೆ. ಸಾಗರ್ ಭಾರಧ್ವಜ್ ಜತೆಗೆ ಕನ್ನಡಿ ಮುಂದೆ ನಿಂತ ಫೋಟೋವನ್ನು ಹಂಚಿಕೊಂಡಿದ್ದಾರೆ. "ಕನ್ನಡಿಯಲ್ಲಿ ಕಾಣಿಸುವ ವಿಷಯಗಳು ಅವು ಕಾಣಿಸುವುದಕ್ಕಿಂತಲೂ ಹತ್ತಿರವಾಗಿರುತ್ತವೆ" ಎಂಬ ಮಿರರ್ ಡೈಲಾಗ್ ಅನ್ನು ಕ್ಯಾಪ್ಷನ್ ಆಗಿ ನೀಡಿದ್ದಾರೆ. ನನ್ನ ಹುಡುಗ, ಲೈಫ್ ಪಾಟ್ನರ್ ಎಂಬ ಹ್ಯಾಷ್‌ಟ್ಯಾಗ್‌ನಡಿ ಈ ಲೈಫ್ ಪಾಟ್ನರ್ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮೆಚ್ಚಿನ ನಟಿಯ ಲೈಫ್ ಪಾಟ್ನರ್ ವಿಷಯ ತಿಳಿದು ಸಾಕಷ್ಟು ಜನರು ಕಾಮೆಂಟ್‌ಗಳ ಪ್ರವಾಹವನ್ನೇ ಹರಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಸುದ್ದಿ ಕೇಳಿ ಒಬ್ಬರು ಬೇಸರದಲ್ಲಿ ಕಾಮೆಂಟ್ ಮಾಡಿದ್ದಾರೆ.
ಆ ವ್ಯಕ್ತಿಯ ಪ್ರತಿಕ್ರಿಯೆ ಏನು?
"ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ! ನಿಮ್ಮ ಬಗ್ಗೆ ನನಗಿದ್ದ ಕನಸು ಮತ್ತು ನಂಬಿಕೆಯೂ ಅದೇರೀತಿ. ಪ್ರತಿದಿನ ನಾನು ನಿನಗಾಗಿ ಪ್ರಾರ್ಥಿಸುತ್ತಿದ್ದೆ. ನನ್ನ ಹೃದಯವು ಪ್ರೀತಿಯಿಂದ ತುಂಬಿತ್ತು!! ಈಗ ಅದು ಬುಡಸಮೇತ ಕುಸಿದುಬಿದ್ದಿದೆ. ನೀವು ಲೈಫ್ ಪಾಟ್ನರ್ ಬಗ್ಗೆ ತಿಳಿಸುವ ಮೊದಲೇ ಮದುವೆಯಾಗಬೇಕಿತ್ತು. ಏಕೆಂದರೆ, ಇದರಿಂದ ನೀವು ನನ್ನ ಸಮಯ, ಶಕ್ತಿ, ಭರವಸೆ ಮತ್ತು ಭಾವನೆಗಳನ್ನು ನೋಯಿಸುತ್ತಿರಲಿಲ್ಲ ಅಥವಾ ವ್ಯರ್ಥ ಮಾಡುತ್ತಿರಲಿಲ್ಲ!!!. ನಾನು ನಿಮ್ಮನ್ನು ಅನ್ ಫಾಲೋ ಮಾಡುತ್ತಿದ್ದೇನೆ. ನಿಮಗೆ ಶುಭವಾಗಲಿ" ಎಂದು ಆ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.
ರಂಜನಿ ರಾಘವನ್ ಪ್ರತಿಕ್ರಿಯೆ ಏನು?
ಆ ವ್ಯಕ್ತಿಯ ಪೋಸ್ಟ್‌ಗೆ ರಂಜನಿ ರಾಘವನ್ ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮ ಎಲ್ಲಾ ಪ್ರಯತ್ನಗಳು ಮತ್ತು ಪ್ರೀತಿಯನ್ನು ನಾನು ಗೌರವಿಸುವೆ. ನಿಮ್ಮ ಬಗ್ಗೆ ಲೋಡ್‌ನಷ್ಟು ಪ್ರೀತಿ ಮತ್ತು ಗೌರವ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಕಪ್ಪು ಬಣ್ಣದ ಲವ್ ಇಮೋಜಿ ಜೋಡಿಸಿದ್ದಾರೆ.
ಈ ರೀತಿ ಕಾಮೆಂಟ್ ಮಾಡಿದ "ವ್ಯಕ್ತಿ" ಒಂದು ಫ್ಯಾನ್ ಪೇಜ್. ಎ ಪ್ಯಾಷನೇಟ್ ಹಾರ್ಟ್ ಎನ್ನುವುದು ಆ ಫ್ಯಾನ್ ಪೇಜ್ ಹೆಸರು. ಆ ಫ್ಯಾನ್ ಪೇಜ್ ಹಿಂದಿರುವ ವ್ಯಕ್ತಿ ಯಾರೆಂದು ಸದ್ಯ ಯಾರಿಗೂ ಗೊತ್ತಿಲ್ಲ. ಕನ್ನಡತಿ ಸೀರಿಯಲ್ ಖ್ಯಾತಿಯ ಸಂದರ್ಭದಲ್ಲಿ ರಂಜನಿಗೆ ಸಾಕಷ್ಟು ಅಭಿಮಾನಿ ಪುಟಗಳು ಹುಟ್ಟಿಕೊಂಡಿದ್ದವು. ಇವರ ಜನಪ್ರಿಯತೆ ಹೆಚ್ಚಲು ಫ್ಯಾನ್ ಪುಟಗಳು ನೆರವಾಗಿದ್ದವು. ಆದರೆ, ಇದೀಗ ಈಕೆಯ ಲೈಫ್ ಪಾಟ್ನರ್ ವಿಷಯ ತಿಳಿದು ಒಂದು ಫ್ಯಾನ್ ಪೇಜ್ ಮುನಿಸಿಕೊಂಡಿದೆ. ಆ ಫ್ಯಾನ್ ಪೇಜ್ ಹೃದಯಕ್ಕೆ ಸಾಕಷ್ಟು ನೋವಾಗಿದೆ. ಆ ಫ್ಯಾನ್ ಪೇಜ್ ಈಕೆಯನ್ನು ಲವ್ ಮಾಡುತ್ತಿತ್ತು. ಮದುವೆಯಾಗಲು ಬಯಸಿತ್ತೇನೋ!. ಅಂದಹಾಗೆ, ಈ ವ್ಯಕ್ತಿ ನಿಜಕ್ಕೂ ಅನ್‌ಫ್ರೆಂಡ್ ಆಗಿದ್ದಾರೋ ಅಥವಾ ಅದೊಂದು ಹಾಗೇ ಸುಮ್ಮನೆ ಬರಹವೋ ಯಾರಿಗೊತ್ತು?
ಎ ಪ್ಯಾಷನೇಟ್ ಹಾರ್ಟ್ ಫ್ಯಾನ್‌ಪೇಜ್
ಇನ್‌ಸ್ಟಾಗ್ರಾಂನ ಆ ಫ್ಯಾನ್ ಪೇಜ್‌ನಲ್ಲಿ ಕನ್ನಡತಿ ಸೀರಿಯಲ್‌ನ ಪೋಸ್ಟರ್‌ಗಳೇ ಕಾಣಿಸುತ್ತವೆ. ರಂಜನಿ ರಾಘವನ್ ಮತ್ತು ಕಿರಣ್ ರಾಜ್ ಜತೆಗಿರುವ ಸೀರಿಯಲ್ ಫೋಟೋಗಳು ಇವೆ. ಕನ್ನಡತಿ ಸೀರಿಯಲ್ ಜನಪ್ರಿಯತೆ ಪಡೆದ ಸಮಯದಲ್ಲಿ ಸಾಕಷ್ಟು ಜನರು ಕಿರಣ್ ರಾಜ್ ಮತ್ತು ರಂಜನಿ ರಾಘವನ್ ನಿಜವಾಗಿಯೂ ಮದುವೆಯಾಬೇಕೆಂದು ಬಯಸಿದ್ದರು. ಸೀರಿಯಲ್ ಜನರ ಮೇಲೆ ಬೀರುವ ಪ್ರಭಾವದ ಪರಿಣಾಮವಿದು. ಆದರೆ, ತೆರೆಯ ಹಿಂದೆ ಎಲ್ಲರೂ ನಟರೇ ಆಗಿರುತ್ತಾರೆ.