ಚಳಿಚಳಿ ತಾಳೇನು ಈ ಚಳಿಯಾ, ಮಂಜುಗಡ್ಡೆ ಈಜುಕೊಳದಲ್ಲಿ ಮಿಂದ ನಟಿ ಶರ್ಮಿಲಾ ಮಾಂಡ್ರೆ; ಐಸ್ ಬಾತ್‌ನಿಂದ ಇದೆ ಹಲವು ಪ್ರಯೋಜನ
ಈಜುಕೊಳ ತುಸು ತಣ್ಣಗಿದ್ದರೂ ಚಳಿಚಳಿ ತಾಳೇನು ಈ ಚಳಿಯ ಎನ್ನುವವರ ನಡುವೆ ನಟಿ ಶರ್ಮಿಲಾ ಮಾಂಡ್ರೆ ಐಸ್ ಈಜುಕೊಳದಲ್ಲಿ ಮಿಂದಿದ್ದಾರೆ. ಇದೇ ಸಮಯದಲ್ಲಿ ಇಂತಹ ಕೊಳದಲ್ಲಿ ಸ್ನಾನ ಮಾಡುವ ಪ್ರಯೋಜನಗಳು ಮತ್ತು ವಹಿಸಬೇಕಾದ ಎಚ್ಚರಿಕೆಗಳ ಕುರಿತೂ ಅವರು ಸಲಹೆ ನೀಡಿದ್ದಾರೆ.
ಬೆಂಗಳೂರು: ನಟಿ ಶರ್ಮಿಲಾ ಮಾಡ್ರೆ ಬಾಲಿ ಪ್ರವಾಸದಲ್ಲಿದ್ದಾರೆ. ಹೀಗೆ ಪ್ರವಾಸಕ್ಕೆ ಹೋದವರು ಬಾಲಿಯ ಉಲುವಾತುಗೆ (Uluwatu) ಹೋಗಿದ್ದಾರೆ. "ಬಾಲಿಯ ಉಲುವಾಟುವಿನಲ್ಲಿರುವ ಪ್ರಶಾಂತ ಅಭಯಾರಣ್ಯದಲ್ಲಿರುವ ಐಸ್ ಈಜುಕೊಳ ಥೆರಪಿಗೆ ಧುಮಿಕಿದೆ. ನನ್ನ ಅನುಭವ ಹೇಗಿತ್ತು ಎನ್ನುವುದನ್ನು ನನ್ನ ಮುಖವೇ ಹೇಳುತ್ತದೆ" ಎಂದು ಶರ್ಮಿಲಾ ಮಾಂಡ್ರೆ ಹೇಳಿದ್ದಾರೆ.
ಐಸ್ ಬಾತ್‌ನಿಂದ ಏನು ಪ್ರಯೋಜನ?
"7 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನವನ್ನು ಹೊಂದಿರುವ ಈ ಭೂಗತ ಈಜುಕೊಳಗಳು ಪ್ರಾಚೀನ ಪ್ರಕೃತಿಚಿಕಿತ್ಸೆಯ ಗುಣಲಕ್ಷಣಗಳನ್ನು ಹೊಂದಿವೆ. ಈಜುಕೊಳ ನನಗೆ ಒಂದು ಅನನ್ಯ ಅನುಭವ ನೀಡಿತ್ತು. ಐಸ್ ಈಜುಕೊಳದಿಂದ ಅನೇಕ ಪ್ರಯೋಜನಗಳಿವೆ. ಗಾಯದ ಚೇತರಿಕೆಗೆ ಸಹಾಯ ಮಾಡುವುದರಿಂದ ಹಿಡಿದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವವರೆಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಅಂತೂ ಇಂತೂ ಧೈರ್ಯವನ್ನು ಒಟ್ಟುಗೂಡಿಸಿ ನಾನು 25 ಸೆಕೆಂಡ್‌ಗಳ ಕಾಲ ಈ ಈಜುಕೊಳದಲ್ಲಿ ಮುಳುಗಿದೆ. 90 ಸೆಕೆಂಡ್ ಈಜುಕೊಳದಲ್ಲಿ ಮುಳುಗುವುದು ಉತ್ತಮ. ನನಗೆ ಇದು ಮೊದಲ ಅನುಭವವಾದ ಕಾರಣ ಕೇವಲ 25 ಸೆಕೆಂಡ್‌ನಲ್ಲಿ ಈ ಅನುಭವ ಪಡೆದೆ. ನೀವೂ ಕೂಡ ಇಲ್ಲಿಗೆ ಬಂದರೆ ಒಮ್ಮೆ ಪ್ರಯತ್ನಿಸಿ ನೋಡಬಹುದು" ಎಂದು ಶರ್ಮಿಲಾ ಮಾಂಡ್ರೆ ಹೇಳಿದ್ದಾರೆ.
ಶರ್ಮಿಲಾ ಐಸ್ ಬಾತ್ ವಿಡಿಯೋ ನೋಡಿ
ಐಸ್ ಈಜುಕೊಳಕ್ಕೆ ಇಳಿಯುವ ಮುನ್ನ
"ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆಯಿದ್ದರೆ ದಯವಿಟ್ಟು ಐಸ್ ಈಜುಕೊಳಕ್ಕೆ ಇಳಿಯುವ ಮೊದಲು ಆರೋಗ್ಯಸೇವಾ ವೃತ್ತಿಪರರ ಸಲಹೆ ಪಡೆದು ಮುಂದುವರೆಯಿರಿ" ಎಂದು ಶರ್ಮಿಲಾ ಮಾಂಡ್ರೆ ಸಲಹೆ ನೀಡಿದ್ದಾರೆ.
ಐಸ್ ಬಾತ್ ಪ್ರಯೋಜನಗಳೇನು?
ಐಸ್ ಬಾತ್‌ಗೆ ಕೋಲ್ಡ್ ವಾಟರ್ ಥೆರಪಿ ಎಂದೂ ಹೇಳಲಾಗುತ್ತದೆ. ಇದು ನಮ್ಮ ದೇಹದ ರಕ್ತದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದ ಕೋರ್‌ಗೆ ಹೆಚ್ಚಿನ ರಕ್ತದ ಹರಿವು ಉಂಟಾಗಲು ನೆರವಾಗುತ್ತದೆ. ಐಸ್ ಬಾತ್ ಮಾಡಿದ ಬಳಿಕ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ನಮ್ಮ ದೇಹದ ಅಂಗಾಂಶಗಳಿಗೆ ರಕ್ತದ ಹರಿವು ಉಂಟಾಗುತ್ತದೆ. ಐಸ್ ಬಾತ್‌ನಿಂದ ನಮ್ಮಲ್ಲಿನ ಜಾಗೃತ ಸ್ಥಿತಿ ಹೆಚ್ಚುತ್ತದೆ, ನೋವು ಕಡಿಮೆ ಮಾಡಲು, ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಸ್ನಾಯು ನೋವು, ನೋವಿಗೆ ಪರಿಹಾರ, ಮನಸ್ಸಿನ ಆರೋಗ್ಯ ಪ್ರಯೋಜನಗಳು ದೊರಕುತ್ತವೆ. ಆದರೆ, ಈ ಕುರಿತಂತೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ನಿಮ್ಮ ಆರೋಗ್ಯ ಉತ್ತಮವಾಗಿಲ್ಲದೆ ಇದ್ದರೆ ನೇರವಾಗಿ ಐಸ್ ನೀರಿಗೆ ಇಳಿಯಬೇಡಿ. ವೈದ್ಯರ ಜತೆ ಸಮಲೋಚನೆ ನಡೆಸಿದ ಬಳಿಕವೇ ಮುಂದುವರೆಯಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಶರ್ಮಿಲಾ ಮಾಂಡ್ರೆ ಪರಿಚಯ
ಕನ್ನಡದ ಜನಪ್ರಿಯ ನಟಿ ಶರ್ಮಿಲಾ ಮಾಂಡ್ರೆ ಅವರು ಸಜ್ನಿ (2007) ಚಿತ್ರದ ಮೂಲಕ ಸಿನಿಜಗತ್ತಿಗೆ ಪ್ರವೇಶಿಸಿದರು. ಇವರು 2018ರಲ್ಲಿ ತಮಿಳು ಸಿನಿಮಾ ಎನಂಕು ಎಂಗೆಯೋ ಮಚ್ಚುಮ್ ಇರುಕು ಚಿತ್ರದ ನಿರ್ಮಾಪಕರಾದರು. ವೆಂಕಟ ಇನ್ ಸಂಕಟ, ಸ್ವಯಂವರ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದರು. ಮಿರಾತಲ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ 2012ರಲ್ಲಿ ಎಂಟ್ರಿ ನೀಡಿದರು. ಕೆವ್ವು ಕೇಕ ಚಿತ್ರಾದ ಮೂಲಕ 2013ರಲ್ಲಿ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಸಿನಿಮಾದ ನಟನೆಗೆ ಸೈಮಾ ಅವಾರ್ಡ್ (ತೆಲುಗು ನಾಮಿನೇಷನ್) ಪ್ರಶಸ್ತಿ ಪಡೆದರು. ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.