ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಶ್ರುತಿ ನಾಟಕ; ‘ಪಾರುನ ಹಾರಾಟ ಹನುಮನ ಚೆಲ್ಲಾಟ’ ಮೂಲಕ ಮತ್ತೆ ಡ್ರಾಮಾ ಕಂಪನಿ ಸೇರಿದ ನಟಿ
ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟಿ ಶ್ರುತಿ, ಇದೀಗ ಬಾದಾಮಿಯ ಬನಶಂಕರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘದ ನಾಟಕದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.
Shruthi Krishna: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಕೃಷ್ಣ, ವೃತ್ತಿರಂಗಭೂಮಿ ಹಿನ್ನೆಲೆಯಿಂದ ಬಂದು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಕುಟುಂಬದ ಜತೆಗೆ ಊರೂರುಗಳಲ್ಲಿ ನಡೆಯುವ ಜಾತ್ರೆಗಳಿಗೆ ಹೋಗಿ ನಾಟಕ ಪ್ರದರ್ಶನದಲ್ಲಿ ಭಾಗಿಯಾಗುತ್ತಿದ್ದರು ಶ್ರುತಿ ಹೆತ್ತವರು. ಇಂದಿಗೂ ಆ ರಂಗಭೂಮಿಯ ನಂಟಿನ ಬಗ್ಗೆ ಶ್ರುತಿ ಮತ್ತು ಶರಣ್ ಮಾತನಾಡುತ್ತಿರುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕಕ್ಕೆ ಹೋದರೆ, ಹಳೇ ದಿನಗಳನ್ನು ಮೆಲುಕು ಹಾಕುತ್ತಾರೆ. ಇದೀಗ ತುಂಬ ದಿನಗಳ ಬಳಿಕ ಮತ್ತೆ ಡ್ರಾಮಾ ಕಂಪನಿ ಸೇರಿದ್ದಾರೆ ನಟಿ ಶ್ರುತಿ!
ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ಜಾತ್ರೆಗೆ ಇಂದಿನಿಂದ (ಜ. 25) ಚಾಲನೆ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆಗಳಲ್ಲಿ ಬಾದಾಮಿಯ ಬನಶಂಕರಿ ಜಾತ್ರೆಯೂ ಒಂದು. ಲಕ್ಷಾಂತರ ಜನ ಸೇರುವ ಈ ಜಾತ್ರೆಯಲ್ಲಿ ಹತ್ತಾರು ಡ್ರಾಮಾ ಕಂಪನಿಗಳೂ ಈ ಭಾಗದ ಜನರನ್ನು ಮನರಂಜಿಸಲು ಆಗಮಿಸುತ್ತವೆ. ಅದರಂತೆ, ಈ ಸಲ ಒಟ್ಟು 10 ನಾಟಕ ಕಂಪನಿಗಳು ಜಾತ್ರೆಗೆ ಬಂದಿವೆ. ಆ ಪೈಕಿ ಶ್ರೀಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರ ಅವರ ನಾಟಕ ಕಂಪನಿಯ ನಾಟಕದಲ್ಲಿ ನಟಿಸಲಿದ್ದಾರೆ ಶ್ರುತಿ.
ಪಾರುನ ಹಾರಾಟ ಹನುಮನ ಚೆಲ್ಲಾಟ ನಾಟಕದಲ್ಲಿ ಶ್ರುತಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ನಾಳೆಯಿಂದ (ಜ. 26) ಮೂರು ದಿನ ನಾಟಕದಲ್ಲಿ ಶ್ರುತಿ ನಟಿಸಲಿದ್ದಾರೆ. ಸಂಜೆ 6:15, 9:30 ಹಾಗೂ ರಾತ್ರಿ 12:45 ನಿತ್ಯ ಹೀಗೆ ಮೂರು ಪ್ರದರ್ಶನಗಳು ನಡೆಯಲಿದ್ದು, ಈ ನಾಟಕದ ಬಗ್ಗೆ ವಿಡಿಯೋ ಮೂಲಕ ಅಭಿಮಾನಿಗಳಿಗೆ ನಟಿ ಶ್ರುತಿ ಮಾಹಿತಿ ನೀಡಿದ್ದಾರೆ. ಕಲಾಭಿಮಾನಿಗಳಿಗೆ ಆಮಂತ್ರಣ ನೀಡಿದ್ದಾರೆ.
"ನಮ್ಮ ಬಾದಾಮಿ ಬನಶಂಕರಿ ಜಾತ್ರೆ ನಿಮಿತ್ತ, ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರು ಕಂಪನಿ. ದಿನಾಂಕ 26, 27, 28ರಂದು ಭಗವಂತನ ಆಶೀರ್ವಾದ ಇದ್ದರೆ, ಸಮಯದ ಅವಕಾಶ ಸಿಕ್ಕರೆ 29ರಂದು ನಿಮ್ಮನ್ನು ಭೇಟಿ ಮಾಡಿ ರಂಜಿಸಲಿದ್ದೇನೆ. 26, 27, 28 ಈ ಮೂರು ದಿನ ಪಾರುವಿನ ಹಾರಾಟಟ, ಹನುಮನ ಚಲ್ಲಾಟ ನಾಟಕದಲ್ಲಿ ಅತಿಥಿಯಾಗಿ ಬರ್ತಿದ್ದೇನೆ. ಎಲ್ಲ ಕಲಾಭಿಮಾನಿಗಳು ಬಂದು, ಕಲೆಯನ್ನು ಪ್ರೋತ್ಸಾಹಿಸಿ, ಕಲೆಯನ್ನು ಉಳಿಸಿ ಎಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ ಶ್ರುತಿ.
ಇದೇ ನಾಟಕದಲ್ಲಿ ಹಾಸ್ಯ ಪಾತ್ರ ನಿರ್ವಹಿಸಲಿರುವ ಪ್ರಸಿದ್ದ ರಂಗಭೂಮಿ ಕಲಾವಿದೆ ಸೌಂದರ್ಯ ಬಾದಾಮಿ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತ ಬುಧವಾರದಿಂದಲೇ ನಾಟಕ ಪ್ರದರ್ಶನಗಳು ಆರಂಭವಾಗಿದ್ದು, ಮುಂದಿನ ಒಂದು ತಿಂಗಳ ಕಾಲ ಹಗಲು ರಾತ್ರಿ ಈ ಬನಶಂಕರಿ ಜಾತ್ರೆ ನಡೆಯಲಿದೆ.