ಲಾಫಿಂಗ್ ಬುದ್ಧ ಯಶಸ್ಸಿನ ಬೆನ್ನಲ್ಲೇ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ ಮಾಡಿದ ಪ್ರಮೋದ್ ಶೆಟ್ಟಿ
ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪ್ರಮೋದ್ ಶೆಟ್ಟಿ ನಟನೆಯ ಮುಂಬರುವ ಚಿತ್ರ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗದ ಕುರಿತು ಹೊಸ ಅಪ್‌ಡೇಟ್ ದೊರಕಿದೆ.
ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಾಣದ, ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಸಂದರ್ಭದಲ್ಲಿ ಹೊಸ ಸಿನಿಮಾದ ಅಪ್‌ಡೇಟ್ ದೊರಕಿದೆ. ಪ್ರಮೋದ್ ಶೆಟ್ಟಿ ನಟನೆಯ ಮುಂಬರುವ ಚಿತ್ರ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗದ ಕುರಿತು ಹೊಸ ಮಾಹಿತಿ ದೊರಕಿದೆ. ಪ್ರಮೋದ್ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ ಟೀಸರ್ ಕಮಿಂಗ್ ಎಂದು ಅನೌನ್ಸ್ ಮಾಡಿದ್ದಾರೆ.
ವಡ್ಡಾರಾಧಕ , ಶಬರಿಯಂತಹ ಕಿರುಚಿತ್ರಗಳಿಂದ ತಮ್ಮೂರಿನ ಕಥೆಗಳು ಎಲ್ಲಾ ಊರುಗಳಲ್ಲೂ ತಲುಪಬೇಕೆಂಬ ಆಶಯವುಳ್ಳ ಅನೀಶ್ ಎಸ್ ಶರ್ಮಾ ಈ ಸಿನಿಮಾದ ಮುಂದಾಳತ್ವ ವಹಿಸಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ ಸೂರಿ ಮತ್ತು ಸುನೀತ್ ಹಲಗೇರಿ ತಮ್ಮ ಸಂಸ್ಥೆ Gunnybag Studios ಮೂಲಕ ಹೊಸ ಹೊಸ ಪ್ರಯೋಗಗಳನ್ನು ತಮ್ಮ ಚೀಲದಲ್ಲಿ ತುಂಬಿಕೊಂಡು ಅದಕ್ಕೆ ಹಣ ಹೂಡುತ್ತಿದ್ದಾರೆ.
ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರನ್ನು ಹೊರತುಪಡಿಸಿ ರಾಘು ಶಿವಮೊಗ್ಗ, ಕಿರಣ್ ನಾಯ್ಕ್, ಮಂಜುನಾಥ್ ಹೆಗ್ಡೆ, ಚಂದ್ರಕಲಾ, ಕೆ ಜಿ ಕೃಷ್ಣಮೂರ್ತಿ ಮತ್ತು ಮುಂತಾದವರು ಬಣ್ಣ ಹಚ್ಚಿದ್ದಾರೆ. ಸುಮಂತ್ ಶರ್ಮಾ ಅವರ ಛಾಯಾಗ್ರಹಣ, ಚೇತನ್ ಕುಮಾರ್ ಸಂಗೀತ, ಸಂಜೀವ್ ಜಾಗಿರ್ದರ್ ಅವರ ಸಂಕಲನ ಈ ಚಿತ್ರಕ್ಕೆ ಶಕ್ತಿ ತುಂಬಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇನ್ನೇನು ತಮ್ಮ ಮೊದಲ ಟೀಸರ್ ಬಿಡುಗಡೆ ಮಾಡಲು ಸಿದ್ಧರಾಗುತ್ತಿದ್ದಾರೆ.
ಪ್ರಮೋದ್ ಶೆಟ್ಟಿ ಸಿನಿಮಾಗಳು
ಪ್ರಮೋದ್ ಶೆಟ್ಟಿ ಅವರು 2010ರಲ್ಲಿ ಜುಗಾರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಉಳಿದವರು ಕಂಡಂತೆ ಮತ್ತು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದರು. ರಂಗಿ ತರಂಗದಲ್ಲಿ ಮನೋಹರ್ ಆಳ್ವಾ ಪಾತ್ರದಲ್ಲಿ ನಟಿಸಿದರು. ಯು ಟರ್ನ್, ರಿಕ್ಕಿ, ಚೂರಿಕಟ್ಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬೆಲ್ ಬಾಟಮ್, ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್, ಡೇಸ್ ಆಫ್ ಬೊರಾಪುರ, ಕಿನ್ನಾರೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಕಥಾ ಸಂಗಮ, ಅವನೇ ಶ್ರೀಮನ್‌ನಾರಾಯಣ, ಆಕ್ಟ್ 1978, ಒಂದು ಶಿಕಾರಿಯ ಕಥೆ, ಹೀರೋ, ಕೃಷ್ಣ ಟಾಕೀಸ್, ದೃಶ್ಯ 2, ಹರಿಕಥೆ ಅಲ್ಲ ಗಿರಿಕಥೆ, ತೂತು ಮಡಿಕೆ, ಚೇಸ್, 9 ಸುಳ್ಳು ಕತೆಗಳು, ದೀರನ್, ಕಾಂತಾರ, ರೂಪಾಯಿ, ಕಬ್ಜಾ, ಪೆಂಟಗನ್, ಇನಾಮ್ದರ್, ನೈಟ್ ಕರ್ಫ್ಯೂ, ಲಾಫಿಂಗ್ ಬುದ್ಧ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಇವರೇ ಹೀರೋ.
ಹೇಗಿದೆ ಲಾಫಿಂಗ್ ಬುದ್ಧ ಸಿನಿಮಾ?
ಲಾಫಿಂಗ್ ಬುದ್ಧ ಸಿನಿಮಾದ ಕುರಿತು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ವಿಮರ್ಶೆ ಮಾಡಿದೆ. "ಲಾಫಿಂಗ್ ಬುದ್ಧ ಸಿನಿಮಾ ಸಹಜ ಲಯದಿಂದ ಇಷ್ಟವಾಗುತ್ತದೆ ನಿಜ. ಆದರೆ, ಚಿತ್ರಮಂದಿರದಲ್ಲಿ ವಿಶೇಷವಾಗಿ ಮಲ್ಟಿಫ್ಲೆಕ್ಸ್‌ಗಳಲ್ಲಿ 50- 100 ರೂಪಾಯಿ ಮೌಲ್ಯದ ಪಾಪ್‌ಕಾರ್ನ್‌ಗೆ 300 ರೂಪಾಯಿ ನೀಡಿ ಅನಿವಾರ್ಯವಾಗಿ (ಅಲ್ಲಿ ಬೇರೆ ಉತ್ತಮ ಆಯ್ಕೆ ಇಲ್ಲದೆ ಇರುವಾಗ) ಖರೀದಿಸುತ್ತೇವೆ ಅಲ್ವ. ಆಗ ಮನಸ್ಸಲ್ಲಿ ಮೂಡುವ ಸಣ್ಣ ನಿರಾಶೆ ಲಾಫಿಂಗ್ ಬುದ್ಧ ಸಿನಿಮಾ ನೋಡಿ ಹೊರಬಂದಾಗ ಉಂಟಾಗುತ್ತದೆ". ಪೂರ್ತಿ ವಿಮರ್ಶೆ ಇಲ್ಲಿದೆ ಓದಿ.