ರಶ್ಮಿಕಾ ಶ್ರೀಲೀಲಾ ಆಯ್ತು ಇದೀಗ ರುಕ್ಮಿಣಿ ವಸಂತ್‌ರತ್ತ ಟಾಲಿವುಡ್‌ ಕಣ್ಣು; ಸ್ಯಾಂಡಲ್‌ವುಡ್‌ ದಾಟಿ ಹೋಗುವರೇ ಸಪ್ತಸಾಗರದಾಚೆ ನಟಿ
ಕನ್ನಡ ಸುದ್ದಿ  /  ಮನರಂಜನೆ  /  ರಶ್ಮಿಕಾ ಶ್ರೀಲೀಲಾ ಆಯ್ತು ಇದೀಗ ರುಕ್ಮಿಣಿ ವಸಂತ್‌ರತ್ತ ಟಾಲಿವುಡ್‌ ಕಣ್ಣು; ಸ್ಯಾಂಡಲ್‌ವುಡ್‌ ದಾಟಿ ಹೋಗುವರೇ ಸಪ್ತಸಾಗರದಾಚೆ ನಟಿ

ರಶ್ಮಿಕಾ ಶ್ರೀಲೀಲಾ ಆಯ್ತು ಇದೀಗ ರುಕ್ಮಿಣಿ ವಸಂತ್‌ರತ್ತ ಟಾಲಿವುಡ್‌ ಕಣ್ಣು; ಸ್ಯಾಂಡಲ್‌ವುಡ್‌ ದಾಟಿ ಹೋಗುವರೇ ಸಪ್ತಸಾಗರದಾಚೆ ನಟಿ

ಸಪ್ತ ಸಾಗರದಾಚೆ ಎಲ್ಲೋ ನಟಿ ರುಕ್ಮಿಣಿ ವಸಂತ್‌ರ ಮೇಲೆ ಟಾಲಿವುಡ್‌ ನಿರ್ದೇಶಕರ ಕಣ್ಣು ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಕನ್ನಡದಲ್ಲಿ ಕೈತುಂಬಾ ಅವಕಾಶ ಹೊಂದಿರುವ ರುಕ್ಮಿಣಿ ವಸಂತ್‌ರಿಗೆ ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆ ಪರಭಾಷೆಗಳಲ್ಲಿ ಬೇಡಿಕೆ ಬಂದರೆ ಅಚ್ಚರಿಯಿಲ್ಲ.

ರುಕ್ಮಿಣಿ ವಸಂತ್‌ರತ್ತ ಟಾಲಿವುಡ್‌ ಕಣ್ಣು
ರುಕ್ಮಿಣಿ ವಸಂತ್‌ರತ್ತ ಟಾಲಿವುಡ್‌ ಕಣ್ಣು (rukmini.vasanth)

ಕನ್ನಡ ಸಿನಿಮಾ ಪ್ರಿಯರ ಹೊಸ ಕ್ರಶ್‌ ರುಕ್ಮಿಣಿ ವಸಂತ್‌ ನಟಿಸಿದ ಕನ್ನಡ ಸಿನಿಮಾ ಬಾನ ದಾರಿಯಲ್ಲಿ ಇಂದು ಬಿಡುಗಡೆಯಾಗಿದ್ದು, ಹೊಸ ನಿರೀಕ್ಷೆ ಹುಟ್ಟಿಸಿದೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಈ ಚಿತ್ರ ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದರೂ ಬಿಡುಗಡೆಯಾದ ನಂತರ ಸದ್ದು ಮಾಡುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೂ ಮುನ್ನ ಸಪ್ತ ಸಾಗರದಾಚೆ ದಾಟಿಯೂ ಕನ್ನಡ ಚಿತ್ರರಂಗದಲ್ಲಿ ಹೊಸ ಭಾವ ಹುಟ್ಟಿಸಿತ್ತು. ರಕ್ಷಿತ್‌ ಶೆಟ್ಟಿ ಜತೆಗೆ ನಟಿಸಿದ ರುಕ್ಮಿಣಿ ವಸಂತ್‌ ಹೊಸ ಭರವಸೆಯ ನಟಿಯಾಗಿ ಕಂಗೊಳಿಸಿದರು. ಇತ್ತೀಚೆಗೆ ಸಪ್ತ ಸಾಗರದಾಚೆ ಎಲ್ಲೋ ತೆಲುಗಿನಲ್ಲಿ ಸಪ್ತ ಸಾಗರಲು ದಾಟಿ ಎಂದು ಬಿಡುಗಡೆಯಾಗಿತ್ತು.

ತೆಲುಗು ಸಿನಿ ರಸಿಕರು ರಕ್ಷಿತ್‌ ಶೆಟ್ಟಿ- ರುಕ್ಮಿಣಿ ವಸಂತ್‌ ಸಿನಿಮಾವನ್ನು ತಕ್ಕಮಟ್ಟಿಗೆ ಇಷ್ಟಪಟ್ಟಿದ್ದರು. ಸಪ್ತ ಸಾಗರಾಲು ದಾಟಿ ಚಿತ್ರದಲ್ಲಿ ರುಕ್ಮಿಣಿ ವಸಂತ್‌ ನಟನೆಯನ್ನು ತೆಲುಗು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈ ನಟಿಯ ಮೇಲೆ ತೆಲುಗು ನಿರ್ದೇಶಕರ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. "ರುಕ್ಮಿಣಿ ವಸಂತ್‌ ಅವರು ಈಗ ಟಾಲಿವುಡ್‌ನಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದ್ದಾರೆ. ಟಾಲಿವುಡ್‌ನಲ್ಲಿ ಶೈನ್‌ ಆಗಲು ಸಿದ್ಧರಾಗಿದ್ದಾರೆ" ಎಂದು ಗುಲ್ಟೆ.ಕಾಂ ವರದಿ ಮಾಡಿದೆ.

ಸ್ಯಾಂಡಲ್‌ವುಡ್‌ ಕುಡಿಗಳಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಈಗಾಗಲೇ ತೆಲುಗು ಸಿನಿಮಾದಲ್ಲಿ ಬೇಡಿಕೆ ಪಡೆದಿದ್ದಾರೆ. ಇದೇ ರೀತಿ ಸಪ್ತ ಸಾಗರದಾಚೆ ನಟಿ ರುಕ್ಮಿಣಿ ವಸಂತ್‌ ಸ್ಯಾಂಡಲ್‌ವುಡ್‌ ದಾಟಿ ಪರಭಾಷೆಗಳತ್ತ ಹೋಗುವರೇ ಎಂಬ ಪ್ರಶ್ನೆಯೆದ್ದಿದೆ. ಬೆಂಗಳೂರು ಮೂಲದ ರುಕ್ಮಿಣಿ ವಸಂತ್‌ ಅವರು ನಟನಾ ತರಬೇತಿ ಕೋರ್ಸ್‌ ಅನ್ನು ಲಂಡನ್‌ನಲ್ಲಿ ಪಡೆದಿದ್ದಾರೆ. 2019ರಲ್ಲಿ ಬೀರಬಲ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಇತ್ತೀಚಿನ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಇವರು ಜನಪ್ರಿಯತೆ ಪಡೆದರು.

ಆದರೆ, ರಶ್ಮಿಕಾ ಮಂದಣ್ಣರಂತೆ ತಕ್ಷಣ ರುಕ್ಮಿಣಿ ವಸಂತ್‌ ಟಾಲಿವುಡ್‌ಗೆ ಹೋಗುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ. ಕನ್ನಡಿಗರ ಹೊಸ ಕ್ರಶ್‌ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಬಾನ ದಾರಿಯಲ್ಲಿ ಮಿಂಚಿದ್ದಾರೆ. ಈ ಚಿತ್ರವೂ ಕ್ಲಿಕ್‌ ಆಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಇದೇ ರೀತಿ, ಸಪ್ತ ಸಾಗರದಾಚೆ ಎಲ್ಲೋದ ಫಾರ್ಟ್‌ ಬಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಶ್ರೀಮುರಳಿ ನಾಯಕನಟನಾಗಿರುವ ಬಘೀರ ಚಿತ್ರಕ್ಕೂ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಬೈರತಿ ರಣಗಲ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ಗೆ ರುಕ್ಮಿಣಿ ಮಂದಣ್ಣ ನಾಯಕಿ. ಹೀಗಾಗಿ, ಸ್ಯಾಂಡಲ್‌ವುಡ್‌ನಲ್ಲಿ ರುಕ್ಮಿಣಿಗೆ ಕೈತುಂಬಾ ಅವಕಾಶಗಳು ಇವೆ ಎನ್ನಬಹುದು. ಇಂತಹ ಸಂದರ್ಭದಲ್ಲಿ ಪರಭಾಷೆಯ ಚಿತ್ರಗಳಲ್ಲಿಯೂ ಅವಕಾಶ ದೊರಕಬಹುದು. ಸಪ್ತ ಸಾಗರಾಲು ದಾಟಿ ಪ್ರಮೋಷನ್‌ ವೇಳೆ "ನಂಗೆ ಸ್ವಲ್ಪ ತೆಲುಗು ಅರ್ಥವಾಗುತ್ತದೆ" ಎಂದು ರುಕ್ಮಿಣಿ ಹೇಳಿದ್ದಾರೆ. ತೆಲುಗಿನಲ್ಲಿ ಯಾರ ಜತೆ ನಟಿಸಲು ಬಯಸುವಿರಿ ಎಂಬ ಪ್ರಶ್ನೆಗೆ "ನಾನಿ" ಎಂದಿದ್ದರು. ತೆಲುಗು ಪ್ರೇಕ್ಷಕರು ಕೂಡ "ನಾನಿ ಮತ್ತು ರುಕ್ಮಿಣಿ" ಒಳ್ಳೆ ಜೋಡಿ, ಬೇಗ ಇವರಿಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡಿ"ಎನ್ನುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಉದಯಿಸಿದ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ನಟಿಯರು ಪರಭಾಷೆಗಳಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದೇ ಸಾಲಿಗೆ ರುಕ್ಮಿಣಿಯೂ ಸೇರುತ್ತಾರ ಎಂದು ಕಾದುನೋಡಬೇಕಿದೆ.

Whats_app_banner