‘ವಿವಾಹಿತ ಪುರುಷನ ಜತೆ ಗೌಪ್ಯ ಮದುವೆ ಆಗಿದ್ದಕ್ಕೆ ಮಕ್ಕಳೇ ಬೇಡ ಎಂದು ನಿರ್ಧರಿಸಿದೆ!’ ‘ಅಣ್ಣಯ್ಯ’ ಚಿತ್ರದ ಅರುಣಾ ಇರಾನಿ ಕಥೆ -ವ್ಯಥೆ
Veteran Indian Actress Aruna Irani: ಅಣ್ಣಯ್ಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೂ ಪರಿಚಿತರಾದ ಭಾರತೀಯ ಸಿನಿಮಾರಂಗ ಕಂಡವರು ಹಿರಿಯ ನಟಿ ಅರುಣಾ ಇರಾನಿ. ಇದೇ ನಟಿ ವಿವಾಹಿತ ಪುರುಷನ ಜತೆ ಗೌಪ್ಯ ಮದುವೆಯಾಗಿದ್ದರು. ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನದಲ್ಲಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
Aruna Irani: ಭಾರತೀಯ ಸಿನಿಮಾರಂಗ ಕಂಡ ಖ್ಯಾತ ಖಳನಟಿ ಅರುಣಾ ಇರಾನಿ, ಬರೀ ಒಂದೇ ಭಾಷೆಗೆ ಸೀಮಿತವಾಗದ ನಟಿ. ಭಾರತದ ಎಲ್ಲ ಸಿನಿಮಾರಂಗಗಳಲ್ಲೂ ತಮ್ಮ ನಟನಾ ಕೌಶಪ ಪ್ರದರ್ಶಿಸಿ ಆ ನೆಲದ ಸಿನಿಮಾಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಅದರಲ್ಲೂ ಬಾಲಿವುಡ್ ಜತೆಗೆ ಸೌತ್ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿದ ಅರುಣಾ ಇರಾನಿ, ತಮ್ಮ ವೃತ್ತಿ ಜೀವನದಲ್ಲಿ 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ತಮ್ಮ 10ನೇ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಬಂದ ಅರುಣಾ, ಮತ್ತೆಂದು ಹಿಂದೆ ತಿರುಗಿ ನೋಡುವ ಪ್ರಸಂಗ ಬರಲೇ ಇಲ್ಲ!
1958ರಲ್ಲಿ ಶಿಕ್ವಾ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದ ಅರುಣಾ, ಅದಾದ ಮೇಲೆ ಸಾಲು ಸಾಲು ಚಿತ್ರಗಳ ಅವಕಾಶಗಳನ್ನು ಪಡೆಯುತ್ತಲೇ ಹೋದರು. ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಬಹುತೇಕ ನೆಗೆಟಿವ್ ಶೇಡ್ ಪಾತ್ರಗಳನ್ನೇ ನಿರ್ವಹಿಸಿದ ಈ ನಟಿ, ಖಳನಾಯಕಿಯಾಗಿಯೇ ತಮ್ಮ ಗತ್ತು ಪ್ರದರ್ಶಿಸಿದ್ದೇ ಹೆಚ್ಚು. ಅದ್ಯಾವ ಮಟ್ಟಿಗೆ ಎಂದರೆ, ನಿಜ ಜೀವನದಲ್ಲಿಯೂ ಎದುರಾದರೂ, ಲೇಡಿ ವಿಲನ್ ಬಂದ್ರು ಎಂದೇ ಅವರನ್ನು ಸಂಬೋಧಿಸುತ್ತಿದ್ದರಂತೆ. ಅಷ್ಟೊಂದು ಪ್ರಭಾವ ಬೀರಿತ್ತು ಅವರ ಗ್ರೇ ಶೇಡ್ ಪಾತ್ರ. ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಈ ನಟಿ, ಹಿಂದಿ ಕಿರುತೆರೆಯಲ್ಲೂ ನಟಿಸುತ್ತಿದ್ದಾರೆ. ಈಗ ಇವರಿಗೆ 77 ವರ್ಷ ವಯಸ್ಸು.
ಅಣ್ಣಯ್ಯ ಚಿತ್ರದ ನಾಗಮಣಿಯ ಮದುವೆ ದಿನಗಳು
ಕನ್ನಡದಲ್ಲಿ 1993 ತೆರೆಗೆ ಬಂದಿದ್ದ ಅಣ್ಣಯ್ಯ ಸಿನಿಮಾದಲ್ಲಿಯೂ ನಾಗಮಣಿಯಾಗಿ ನಟಿಸಿದ್ದರು ಅರುಣಾ ಇರಾನಿ. ಡಾ. ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಮಧೂ ನಾಯಕ ನಾಯಕಿಯಾಗಿದ್ದರು. ಕಥಾನಾಯಕ ಅಣ್ಣಯ್ಯನ ತಾಯಿಯಾಗಿ ಅರುಣಾ ಕನ್ನಡಕ್ಕೆ ಆಗಮಿಸಿದ್ದರು. ಈ ಬಣ್ಣದ ಜಗತ್ತನ್ನು ಹೊರತುಪಡಿಸಿ ವೈಯಕ್ತಿಕ ಬದುಕಲ್ಲೂ ಒಂದಷ್ಟು ಏರಿಳಿತ ಕಂಡಿದ್ದಾರೆ ಈ ನಟಿ. ಸಿನಿಮಾಗಳ ಜತೆಗೆ ಗೌಪ್ಯ ಮದುವೆ ವಿಚಾರಕ್ಕೆ ಆಗಿನ ಕಾಲದಲ್ಲಿ ಸುದ್ದಿಯಾಗಿದ್ದರು ಅರುಣಾ.
ವಿವಾಹಿತನ ಜತೆ ಗೌಪ್ಯ ಮದುವೆ..
ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಗೌಪ್ಯ ಮದುವೆಯ ಬಗ್ಗೆ ಅರುಣಾ ಮಾತನಾಡಿದ್ದರು. ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ, ಬರಹಗಾರರಾಗಿ ಗುರುತಿಸಿಕೊಂಡಿದ್ದ ಕುಕು ಕೊಹ್ಲಿ ಜತೆಗೆ ತಮ್ಮ 44ನೇ ವಯಸ್ಸಿನಲ್ಲಿ ನಟಿ ಅರುಣಾ ಇರಾನಿ ಗೌಪ್ಯವಾಗಿ ಮದುವೆಯಾಗಿದ್ದರು. ಆ ಮದುವೆಯ ವಿಚಾರ ತನಗೂ ಮತ್ತು ಪತಿಗೆ ಬಿಟ್ಟು ಬೇರೆ ಯಾರ ಗಮನಕ್ಕೂ ತಂದಿರಲಿಲ್ಲ ಅರುಣಾ. ಅದಕ್ಕೆ ಕಾರಣ; ಕುಕು ಕೊಹ್ಲಿ ಓರ್ವ ವಿವಾಹಿತ. ಅವರಿಗೆ ಅದಾಗಲೇ ಮದುವೆ ಆಗಿತ್ತು. ಮುದ್ದಾದ ಹೆಂಡತಿ, ಮಕ್ಕಳೂ ಇದ್ದವು. ತನ್ನಿಂದ ಈ ಕುಟುಂಬ ಒಡೆಯುತ್ತೆ ಎಂಬ ಕಾರಣಕ್ಕೆ ಗೌಪ್ಯವಾಗಿ ಮದುವೆಯಾಗಿದ್ದರು. ಜತೆಗೆ ಮಕ್ಕಳನ್ನೂ ಮಾಡಿಕೊಂಡಿರಲಿಲ್ಲ ಅರುಣಾ.
ನನ್ನ ಪಡೆಯಲು ಸಾಕಷ್ಟು ಹೋರಾಡಿದ..
“ಕುಕು ಕೊಹ್ಲಿ ವಿವಾಹಿತ ವ್ಯಕ್ತಿಯಾಗಿದ್ದರಿಂದ ನಾನು ನಮ್ಮ ಮದುವೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ನನ್ನ ಈ ಮದುವೆಯ ವಿಚಾರ ಹೊರಬಂದು ರಾದ್ಧಾಂತ ಆಗುತ್ತೋ ಎಂಬ ಭಯವೂ ನನಗಿತ್ತು. ಪತ್ನಿ ಮಕ್ಕಳೊಂದಿಗೆ ಕುಕು ಕೊಹ್ಲಿ ಸೆಟ್‌ಗೆ ಬರುತ್ತಿದ್ದರು. ಆ ಬಗ್ಗೆ ನನಗೆ ಗೊತ್ತಿತ್ತು. ಆದರೂ ಮದುವೆ ಆಗಲೇಬೇಕು ಎಂಬುದು ನಮ್ಮಿಬ್ಬರ ಪಾಲಿನ ಕಠಿಣ ನಿರ್ಧಾರವಾಗಿತ್ತು. ಹೇಗೋ 1990ರಲ್ಲಿ ಮದುವೆಯಾದೆವು. ನನ್ನನ್ನು ಮದುವೆಯಾಗಲು ಕುಕು ಕೊಹ್ಲಿ ದೊಡ್ಡ ಹೋರಾಟವನ್ನೇ ಮಾಡಿದ. ಇಷ್ಟೆಲ್ಲ ಆದ ಮೇಲೆ ನಾವು ಮಕ್ಕಳು ಮಾಡಿಕೊಳ್ಳುವುದು ಸರಿಯಾದ ನಿರ್ಧಾರವಲ್ಲ ಎಂದೆನಿಸಿ ಮಕ್ಕಳನ್ನೂ ಮಾಡಿಕೊಳ್ಳಲಿಲ್ಲ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅರುಣಾ ಇರಾನಿ.
ವಿಭಾಗ