ನಿರೂಪಣೆ ನೀವಿಲ್ಲದೆ ಅಪೂರ್ಣ ಅಪರ್ಣ ಅಕ್ಕ; ಆಂಕರ್ ಅನುಶ್ರೀ ಕಣ್ಣೀರು, ಇನ್ಯಾರಿಗೆ ಅಕ್ಕ ಎನ್ನಲಿ ಎಂದ ಶ್ವೇತಾ ಚೆಂಗಪ್ಪ
ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ವಸ್ತಾರೆ ಅವರ ನಿಧನಕ್ಕೆ ಸಿನಿಮಾಮಂದಿಯ ಸಂತಾಪ ಸಂದಾಯವಾಗುತ್ತಿದೆ. ಈ ನಡುವೆ ನಿರೂಪಕಿಯರಾದ ಅನುಶ್ರೀ ಮತ್ತು ಶ್ವೇತಾ ಚಂಗಪ್ಪ ಅಪರ್ಣಾ ಸಾವಿಗೆ ಕಂಬನಿ ಮಿಡಿದಿದ್ದಾರೆ.
Aparna Vastarey Death: ಕನ್ನಡ ಕಂಡ ಖ್ಯಾತ ನಿರೂಪಕಿ, 7 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಿರೂಪಿಸಿದ ಏಕೈಕ ಕನ್ನಡದ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಪರ್ಣಾ ವಸ್ತಾರೆ ವಿಧಿಯಾಟಕ್ಕೆ ತಲೆಬಾಗಿದ್ದಾರೆ. ಬಹುಕಾಲದ ಕ್ಯಾನ್ಸರ್ ಕಾಯಿಲೆ ಅವರನ್ನು ವಶಕ್ಕೆ ಪಡೆದಿದೆ. ಗುರುವಾರ ರಾತ್ರಿ 9;30ರ ಸುಮಾರಿಗೆ ಅಪರ್ಣಾ (Aparna Vastarey Death) ಇಹಲೋಕ ತ್ಯಜಿಸಿದ್ದಾರೆ. ಸಿನಿಮಾ ಆಪ್ತರಿಂದ ಹಿಡಿದು, ರಾಜಕೀಯ ಗಣ್ಯರು, ಕುಟುಂಬದವರು ಅಚ್ಚ ಕನ್ನಡದ ನಿರೂಪಕಿಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ.
ಇತ್ತ ಅಪರ್ಣಾ ನಿಧನಕ್ಕೆ ಕನ್ನಡದ ಮತ್ತೋರ್ವ ಖ್ಯಾತ ನಿರೂಪಕಿ ಅನುಶ್ರೀ ಕಂಬನಿ ಮಿಡಿದಿದ್ದಾರೆ. ಅವರ ಜತೆಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಅಕ್ಷರ ರೂಪದಲ್ಲಿ ಕೆಲ ಸಾಲುಗಳನ್ನು ಅಪರ್ಣಾ ಅವರಿಗೋಸ್ಕರ ಮೀಸಲಿಟ್ಟಿದ್ದಾರೆ. ಹೀಗಿದೆ ಅನುಶ್ರೀ ಬರೆದ ಸಾಲುಗಳು.
ಅಪರ್ಣಾಗೆ ಆಂಕರ್ ಅನುಶ್ರೀ ಭಾವುಕ ನಮನ
ನಿರೂಪಣೆಗೆ ಘನತೆ ನೀವು..
ಕನ್ನಡಕ್ಕೆ ಶೋಭೆ ನೀವು ...
ನಿರೂಪಣೆ ನೀವಿಲ್ಲದೆ ಅಪೂರ್ಣ ... ಅಪರ್ಣ ಅಕ್ಕ
Deeply saddened.. disappointed…
Bigg boss ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ .. ಇಂದಿಗೂ ಹಸಿರಾಗಿದೆ ..
ಅಂದು ಇಂದು ಎಂದೆಂದೂ ಕನ್ನಡಕ್ಕೆ ಒಬ್ಬರೇ ಮಹಾ ನಿರೂಪಕಿ .. ಅದು ನೀವು.. ಓಂ ಶಾಂತಿ
ಬಿಗ್ಬಾಸ್ನಲ್ಲಿ ಅಪರ್ಣ ಅವರನ್ನು ಭೇಟಿಯಾದ ಕ್ಷಣ ಮತ್ತದರ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ಅನುಶ್ರೀ. ಅಪರ್ಣ ಜತೆ ಮಾತನಾಡಿದ್ದನ್ನು ಅಮ್ಮನ ಜತೆಗೇ ಮಾತನಾಡಿದ ಭಾವ ನನಗಾಯ್ತು ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. ಹೀಗೆ ಅನುಶ್ರೀ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ಸಾಕಷ್ಟು ಮಂದಿ ಕಾಮೆಂಟ್ ಮೂಲಕ ಅಪರ್ಣ ಅವರಿಗೆ ನುಡಿ ನಮನ ಸಲ್ಲಿಸುತ್ತಿದ್ದಾರೆ.
ಇನ್ಯಾರಿಗೆ ಅಕ್ಕ ಎನ್ನಲಿ ಎಂದ ಶ್ವೇತಾ ಚೆಂಗಪ್ಪ
"ಅಪರ್ಣಾ ಅಕ್ಕ RIP. ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ... ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನ ವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ. ತುಂಬಾ ಬೇಗ ಹೊರಟ್ ಬಿಟ್ರಿ.. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕಂಬನಿ
- ನಮ್ಮ ಮೆಟ್ರೋ ದಲ್ಲಿ ನಿಮ್ಮ ಧ್ವನಿ ಕೇಳಿದಾಗ ನಮ್ ಕನ್ನಡ ಇವ್ರ ಕಂಠದಲ್ಲಿ ಎಷ್ಟು ಚಂದ ಅನ್ಸ್ತಿತ್ತು
- ಅಚ್ಚ ಕನ್ನಡದ ಸ್ವಚ್ಛ ಶುಭ್ರ ದ್ವನಿಯೊಂದು ನಮ್ಮನ್ನ ಅಗಲಿದೆ .. ಪಂಚ ಭೂತಗಳಲ್ಲಿ ಲೀನ ವಾದ ಅಪ್ಪಟ ಕರ್ನಾಟಕದ ಸ್ವರ್ಣ ನಮ್ಮ ಪ್ರೀತಿಯ ಅಪರ್ಣ
- ರಾಜ್ಯ ಮತ್ತೊಂದು ಮುತ್ತನ್ನು ಕಳೆದುಕೊಂಡಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ…
- ಪ್ರತಿ ದಿನ ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಅಂಥ ದ್ವನಿ ಕೇಳ್ತಿರುವ ನಾವು ನಾಳೆ ಇಂದ ನಿಮ್ಮ ಧ್ವನಿ ಕೇಳುದ್ರೆ ಏನೋ ಕಳ್ಕೊಂಡಿದೀವಿ ಅನ್ಸತ್ತೆ
- ನಮ್ಮ ನಿರೂಪಕರ ಕ್ಷೇತ್ರದಲ್ಲಿ ಒಂದು ಮುಖ್ಯವಾದ ರತ್ನ ಇಂದು ಕಳಚಿ ಬಿದ್ದಿದೆ
- ಕನ್ನಡದ ಜನಪ್ರಿಯ ನಟಿ ಹಾಗು ಕನ್ನಡದ ಸಾಹಿತಿ ಮತ್ತು ರಚನೆ ಒಡತಿ ಎಂದು ಕರೆಸಿಕೊಂಡಾಕಿ ಇಂದು ನಮ್ಮನ್ನು ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿಯನ್ನು ಆ ಭಗವಂತನು ಕರುಣಿಸಲಿ. ಇದು ನಂಬಲಾದ ಆಘಾತಕಾರಿ ವಿಷಯ.
- ನೀರರ್ಗಳ ಕನ್ನಡ ನಿರೂಪಕಿ... ನಿಮ್ಮ ಅಗಲಿಕೆ ಕನ್ನಡ ಚಿತ್ರರಂಗ ಹಾಗು ನಿಮ್ಮ ಅಭಿಮಾನಿಳಿಗೆ ತುಂಬಲಾರದ ನಷ್ಟ.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ
- ಕನ್ನಡ ನೆಲದ ಖ್ಯಾತ ನಿರೂಪಕಿ ಶ್ರೀಮತಿ ಅಪರ್ಣ ಅವರು ಇನ್ನಿಲ್ಲ ಎಂಬ ಸುದ್ದಿ ನೋವು ತಂದಿದೆ. ಕನ್ನಡಿಗರ ಜನ ಮಾನಸದಲ್ಲಿ ನಿಮ್ಮ ನೆನಪುಗಳು ಹಾಗೂ ನಿಮ್ಮ ನಿರೂಪಣೆ ಎಂದೆಂದಿಗೂ ಶಾಶ್ವತವಾಗಿರುತ್ತದೆ.
ವಿಭಾಗ