Arata Movie Review: ಹದಿಹರೆಯದ ಕ್ರಶ್, ಬಣ್ಣ ಬದಲಾಯಿಸುವ ಮನುಷ್ಯರ ಕತೆ; ಓದಿ ಆರಾಟ ಕನ್ನಡ ಸಿನಿಮಾದ ಚಿತ್ರವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Arata Movie Review: ಹದಿಹರೆಯದ ಕ್ರಶ್, ಬಣ್ಣ ಬದಲಾಯಿಸುವ ಮನುಷ್ಯರ ಕತೆ; ಓದಿ ಆರಾಟ ಕನ್ನಡ ಸಿನಿಮಾದ ಚಿತ್ರವಿಮರ್ಶೆ

Arata Movie Review: ಹದಿಹರೆಯದ ಕ್ರಶ್, ಬಣ್ಣ ಬದಲಾಯಿಸುವ ಮನುಷ್ಯರ ಕತೆ; ಓದಿ ಆರಾಟ ಕನ್ನಡ ಸಿನಿಮಾದ ಚಿತ್ರವಿಮರ್ಶೆ

Arata Kannada Movie Review: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ದಡ್ಡಪ್ರವೀಣ ಖ್ಯಾತಿಯ ರಂಜನ್ ಕಾಸರಗೋಡು ನಟನೆಯ, ಪುಷ್ಪರಾಜ್ ರೈ ಮಲಾರ್ ನಟನೆಯ ಆರಾಟ ಕನ್ನಡ ಸಿನಿಮಾದ ಚಿತ್ರ ವಿಮರ್ಶೆ ಇಲ್ಲಿದೆ. (ಚಿತ್ರ ವಿಮರ್ಶೆ: ಹರೀಶ್‌ ಮಾಂಬಾಡಿ, ಮಂಗಳೂರು)

ಆರಾಟ ಕನ್ನಡ ಸಿನಿಮಾ ವಿಮರ್ಶೆ
ಆರಾಟ ಕನ್ನಡ ಸಿನಿಮಾ ವಿಮರ್ಶೆ

Arata Kannada Movie Review: ಹಿಂದೆಲ್ಲ ಕರಾವಳಿ ಕನ್ನಡ ಹಾಸ್ಯ ಪಾತ್ರಕ್ಕೆ ಮೀಸಲಾಗಿತ್ತು. ಕಾಂತಾರ ಬಿಡುಗಡೆಯಾದ ಮೇಲೆ ಇಡೀ ಕರ್ನಾಟಕ ಕರಾವಳಿಯ ಪಾತ್ರಧಾರಿಗಳು ದೇಶದಾದ್ಯಂತ ಮಿಂಚಿಬಿಟ್ಟರು. ಸಿನಿಮಾದ ಶಕ್ತಿ ಅಂಥದ್ದು. ಅದಾದ ಮೇಲೆ ಹಲವು ಚಿತ್ರಗಳು ಕಡಲು, ಭೂತಾರಾಧನೆ, ಯಕ್ಷಗಾನ, ನಂಬಿಕೆಗಳ ಕುರಿತು ಬಂದು ಹೋದವು. ಆರಾಟ ಚಿತ್ರವನ್ನು ಹತ್ತರಲ್ಲಿ ಹನ್ನೊಂದಾಗಿಸದೆ, ಭಿನ್ನ ನಿರೂಪಣೆಯ ಮೂಲಕ ಹದಿಹರೆಯದ ಪ್ರೇಮ, ಕುಟುಂಬದೊಳಗಿನ ವೈಮನಸ್ಸು, ಬೆಸುಗೆ, ಸಂಪ್ರದಾಯ, ನಂಬಿಕೆಗಳ ಜೊತೆಗೆ ಪ್ರಚಲಿತ ಸನ್ನಿವೇಶಗಳನ್ನು ಕಟ್ಟಿಕೊಡಲು ಚಿತ್ರತಂಡ ಪ್ರಯತ್ನಿಸಿದೆ. ಇಂಥ ಕತೆಗಳು ಬಂದು ಹೋದವೆಯಾದರೂ ತಾಜಾತನದ ಮೂಲಕ ಸಿನಿಮಾ ಗಮನ ಸೆಳೆದಿದೆ. ಇಲ್ಲಿ ಎಲ್ಲ ಕಲಾವಿದರೂ ಕರಾವಳಿಯವರು ಕಥೆಯೂ ಅಲ್ಲಿಯದ್ದೇ. ಭಾಷೆ ಮಾತ್ರ ಕನ್ನಡ.

ರಾಘವೇಂದ್ರ ಹೊಳ್ಳ ತಿಂಬರ, ನಿತೀಶ್ ಮಾಡಮ್ಮೆ ಹಾಗೂ ರಾಮಪ್ರಸಾದ್ ಕೊಂಬಿಲ ಎಂಬ ಮೂವರು ಸ್ನೇಹಿತರು ನಿರ್ಮಿಸಿದ ಆರಾಟವನ್ನು ನಿರ್ದೇಶಿಸಿದವರು ಪುಷ್ಪರಾಜ್ ರೈ ಮಲಾರ್ ಬೀಡು.́

ಮನಸು ಕಸದ ತೊಟ್ಟಿಯಲ್ಲ

ಇಡೀ ಸಿನಿಮಾದ ಥೀಮ್ ಅನ್ನು ಹುಚ್ಚನ ಪಾತ್ರವೊಂದು ವಿಮರ್ಶಿಸುತ್ತದೆ. ಕ್ಷಣ ಕ್ಷಣಕ್ಕೂ ಬಣ್ಣ ಬದಲಾಯಿಸುವ ಪಾತ್ರಗಳು ಎಚ್ಚರತಪ್ಪುವ ಸನ್ನಿವೇಶ ಬಂದಾಗ ಹುಚ್ಚನ ಪಾತ್ರ ನಿಗೂಢ, ಅಷ್ಟೇ ಮಾರ್ಮಿಕ ಡೈಲಾಗ್ ಗಳನ್ನು ಹೇಳುತ್ತಾ ಹೋಗುತ್ತದೆ. ಮನಸ್ಸು ಕಸದ ತೊಟ್ಟಿಯಲ್ಲ ಎಂಬುದು ಅಂಥದ್ದೊಂದು ಸಂಭಾಷಣೆಯ ಸಾಲು. ಕುಟುಂಬವೊಂದಕ್ಕೆ ಸೇರಿದ ದೇವರ ಕಟ್ಟೆಯ ಮೇಲೆ ಮನೆಯವರಿಗೂ ಕಣ್ಣು, ಹೊರಗಿನವರಿಗೂ ಕಣ್ಣು. ಹರೀಶ ಎಂಬಾತನ ಮನೆ, ಅವನ ಮಗಳು, ಆಕೆಯನ್ನು ಪ್ರೀತಿಸುವ ಹುಡುಗ, ಕುಟುಂಬಕ್ಕೆ ಬರುವ ಸಂಕಷ್ಟ, ಅದಕ್ಕೆ ಪರಿಹಾರೋಪಾಯ…ಹೀಗೆ ಕಥೆ ಸಾಗುತ್ತದೆ. ಮಧ್ಯೆ ಹುಡುಗಿಯರನ್ನು ಚುಡಾಯಿಸುವ ಗ್ಯಾಂಗ್, ಬಡ್ಡಿಗೆ ಸಾಲ ನೀಡುವ ಆಸಾಮಿಗಳು ಹೀಗೆ ನಾನಾ ಪಾತ್ರಗಳು ಬಂದುಹೋಗುತ್ತವೆ. ಕೊನೆಗೆ ಏನಾಗುತ್ತದೆ ಎಂಬುದು ಕ್ಲೈಮ್ಯಾಕ್ಸ್.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ದಡ್ಡಪ್ರವೀಣ ಖ್ಯಾತಿಯ ರಂಜನ್ ಕಾಸರಗೋಡು ಇಲ್ಲಿಯೂ ಹುಡುಗಿಯ ಹಿಂದೆ ಬೀಳುವ ಚಿಗುರುಮೀಸೆಯ ಹುಡುಗನಾಗಿ ಲವಲವಿಕೆಯಿಂದ ಅಭಿನಯಿಸಿದ್ದಾರೆ, ಹೊಸಮುಖವಾದರೂ ಭಾವನಾತ್ಮಕ ಸನ್ನಿವೇಶದಲ್ಲಿ ಅಷ್ಟೇ ಪ್ರೌಢವಾಗಿ ನಟಿಸಿರುವ ವೆನ್ಯಾ ರೈ ಭರವಸೆ ಮೂಡಿಸುವಂತಿದ್ದಾರೆ. ಮಾಧವ ಪಾತ್ರದಲ್ಲಿ ಜ್ಯೋತಿಷ್ ಶೆಟ್ಟಿ, ಉಣ್ಣಿಕೃಷ್ಣನ್ ಪೊದುವಾಳ್ ಪಾತ್ರದಲ್ಲಿ ಚೇತನ್ ರೈ ಮಾಣಿ ಗಮನ ಸೆಳೆದರೆ, ಕ್ಷಣಕ್ಷಣಕ್ಕೆ ಭಾವ ಬದಲಾಯಿಸುವ ರಾಧಣ್ಣನ ಪಾತ್ರಕ್ಕೆ ಅನಿಲ್ ರಾಜ್ ಉಪ್ಪಳ ಹೊಳಪು ನೀಡಿದ್ದಾರೆ. ಇಡೀ ಸಿನಿಮಾವನ್ನು ಆವರಿಸುವ ಹರೀಶನ ಪಾತ್ರದಲ್ಲಿ ಸುನಿಲ್ ನೆಲ್ಲಿಗುಡ್ಡೆ ಭರವಸೆಯ ಪೋಷಕ ನಟರಾಗಿ ಗಮನ ಸೆಳೆದಿದ್ದಾರೆ. ಇನ್ನು ಚಿಂಗಮ್ ರವಿ ಪಾತ್ರದಲ್ಲಿ ರವಿ ರಾಮಕುಂಜ,ಸತ್ಯನಾರಾಯಣ ಪಾತ್ರದಲ್ಲಿ ಸಂದೀಪ್ ಭಕ್ತ ಗಮನ ಸೆಳೆಯುತ್ತಾರೆ. ಶಮೀರ್ ಮುಡಿಪು ಅವರ ಎರಡು ಹಾಡುಗಳು ಕಿವಿಗಿಂಪು. ರವಿ ಸುವರ್ಣ ತನ್ನ ಕ್ಯಾಮರಾದಲ್ಲಿ ಕರಾವಳಿಯ ಸುಂದರ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸಿಗರೇಟ್, ಗಾಂಜಾ ಎಳೆಯುತ್ತಾ, ಹುಡುಗಿಯರ ಹಿಂದೆ ಸುತ್ತುತ್ತಾ ಆತಂಕ ಮೂಡಿಸುವ ಮೂವರು ಹುಡುಗರ ಪಾತ್ರಗಳೂ ಅಷ್ಟೇ ಮಾರ್ಮಿಕವಾಗಿವೆ. ಒಟ್ಟಾರೆಯಾಗಿ ಆರಾಟ – ಫೀಲ್ ಗುಡ್ ಸಿನಿಮಾ.

  • ಚಿತ್ರ ವಿಮರ್ಶೆ: ಹರೀಶ್‌ ಮಾಂಬಾಡಿ, ಮಂಗಳೂರು

 

Whats_app_banner