ಕಾಮಿಡಿ ಪಂಚು, ಡಬಲ್ ಮೀನಿಂಗ್ ಡೈಲಾಗ್ ಮಿಂಚು; ಬ್ಯಾಕ್ ಬೆಂಚರ್ಸ್ ಚಿತ್ರದ ಟೀಸರ್ ರಿಲೀಸ್
ಹೊಸಬರೇ ಸೇರಿ ನಿರ್ಮಾಣ ಮಾಡಿರುವ ಬ್ಯಾಕ್ ಬೆಂಚರ್ಸ್ ಸಿನಿಮಾ ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿದೆ. ಶೀರ್ಷಿಕೆ ಹೇಳುವಂತೆ ಇದು ಕಾಲೇಜ್ ಕಥೆಯನ್ನು ಹೇಳಲಿದೆ.
Back Benchers teaser: ಕಾಲೇಜು, ಕ್ಯಾಂಪಸ್ಸು, ವಿದ್ಯಾರ್ಥಿಗಳು.. ಹೀಗೆ ಫನ್ ಆಗಿಯೇ ನೋಡಿಸಿಕೊಂಡು ಹೋಗುವ ಕಥೆಗಳೆಂದರೆ ಈಗಿನ ಜನರೇಷನ್‌ಗೆ ಬಲು ಇಷ್ಟ. ಅದರಲ್ಲೂ ಅಲ್ಲೊಂದು ಪ್ರೀತಿ, ಹುಸಿ ಮುನಿಸು, ಕಾಡುವ ಕಥೆ, ಡಬಲ್ ಮೀನಿಂಗ್ ಡೈಲಾಗು ಇದೆಲ್ಲವನ್ನೂ ಯುವ ಪೀಳಿಗೆ ನೋಡಲು ಬಯಸುತ್ತದೆ. ಈಗ ಅಂಥದ್ದೇ ಕಥೆಯೊಂದನ್ನು ಹೊತ್ತು ಬಂದಿದೆ ಹೊಸ ತಂಡ. ಆ ಕಥೆಗೆ ಬ್ಯಾಕ್ ಬೆಂಚರ್ಸ್ ಎಂಬ ಶೀರ್ಷಿಕೆಯನ್ನೂ ಇಟ್ಟು, ಇತ್ತೀಚೆಗಷ್ಟೇ ಅದರ ಟೀಸರ್ ಸಹ ಬಿಡುಗಡೆ ಆಗಿದೆ. ಟೀಸರ್‌ನಲ್ಲಿರೋ ದೃಶ್ಯಗಳು, ಕಾಮಿಡಿ ಪಂಚುಗಳಿಗೆ ಪ್ರೇಕ್ಷಕರು ಮನಸೋತಿದ್ದಾರೆ.
ಟೀಸರ್ ಮೂಲಕ ಗಮನ ಸೆಳೆದ ಚಿತ್ರ
ಇದು ಬಿ.ಆರ್ ರಾಜಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಪೂರ್ತಿ ಹೊಸಬರಿಗಾಗಿಯೇ ಹೊಸತನದಲ್ಲಿಯೇ ಹೊರತಂದಿರುವ ಸಿನಿಮಾ ಈ ಬ್ಯಾಕ್ ಬೆಂಚರ್ಸ್. ಒಂದು ವರ್ಗದ ಪ್ರೇಕ್ಷಕರಿಗಷ್ಟೇ ಸೀಮಿತ ಮಾಡದೇ, ಎಲ್ಲರನ್ನೂ ಓಲೈಸುವ ಕಥೆಯೊಂದಿಗೆ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಬ್ಯಾಕ್ ಬೆಂಚರ್ಸ್ ಇದೀಗ ಟೀಸರ್ ಮೂಲಕ ನಗುವಿನ ಕಚಗುಳಿ ಇಟ್ಟಿದೆ.
ಈ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ಟೀಸರ್‌ಗೆ ಮೆಚ್ಚುಗೆ ಸಿಗುವುದರ ಜತೆಗೆ ಒಳ್ಳೆಯ ಕಾರಣಕ್ಕೆ ಟ್ರೋಲ್ ಆಗುತ್ತಿದೆ. ಇದು ಇಡೀ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿದೆ. ಕುತೂಹಲಕಾರಿಯಾದ ಕಂಟೆಂಟಿನೊಂದಿಗೆ, ನಾಜೂಕಾಗಿ ಕಾಮಿಡಿ ಬೆರೆಸಿ ಈ ಸಿನಿಮಾವನ್ನು ರೂಪಿಸಿದ್ದಾರೆ ಎಂಬ ಸ್ಪಷ್ಟ ಅಂದಾಜನ್ನು ಟೀಸರ್ ರವಾನಿಸಿದೆ.
ಕಾಲೇಜು ಕೇಂದ್ರಿತ ಕಥೆ
ಈ ಹಿಂದೆ ಹಂತ ಹಂತವಾಗಿ "ಬ್ಯಾಕ್ ಬೆಂಚರ್ಸ್" ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದವು. ಆ ಮೂಲಕ ಸೃಷ್ಟಿಯಾಗಿದ್ದ ಕುತೂಹಲ, ಈಗ ಟೀಸರ್ ನೊಂದಿಗೆ ಮತ್ತಷ್ಟು ತೀವ್ರಗೊಂಡಿದೆ. ಈಗಾಗಲೇ ಕಾಲೇಜು ಕೇಂದ್ರಿತವಾದ ಒಂದಷ್ಟು ಸಿನಿಮಾಗಳು ಬಂದಿವೆ. ಗೆಲುವನ್ನೂ ಕಂಡಿವೆ. ಆದರೆ, ಬ್ಯಾಕ್ ಬೆಂಚರ್ಸ್ ಕಥೆಯನ್ನು ನಿರ್ದೇಶಕ ರಾಜಶೇಖರ್ ಅಂದಾಜಿಗೆ ನಿಲುಕದಂತೆ ರೂಪಿಸಿದ್ದಾರಂತೆ. ಕಾಲೇಜು ಕಥೆಯೆಂದಾಕ್ಷಣ ನಿಮ್ಮಲ್ಲೊಂದು ಕಲ್ಪನೆಯ ಚಿತ್ರಣ ಮೂಡಿಕೊಂಡಿದ್ದರೆ, ಅದಕ್ಕೆ ಮೀರಿದ ದೃಷ್ಯರೂಪದ ಅಚ್ಚರಿಗಳು ಎಲ್ಲರನ್ನೂ ಚಕಿತಗೊಳಿಸಲು ಕಾದಿವೆ.
ಒಟ್ಟಾರೆಯಾಗಿ, ಈಗ ಬಿಡುಗಡೆಗೊಂಡಿರುವುದು ನಿಜಕ್ಕೂ ಪ್ರಾಮಿಸಿಂಗ್ ಟೀಸರ್ ಎಂಬ ಅಭಿಪ್ರಾಯ ಪ್ರೇಕ್ಷಕರ ಕಡೆಯಿಂದಲೇ ಹೊಮ್ಮುತ್ತಿದೆ. ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಖುದ್ದು ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬಹುತೇಕ ಹೊಸಬರ ತಂಡ
ತಾಂತ್ರಿಕ ಬಳಗದಲ್ಲಿ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಮನೋಹರ್ ಜೋಶಿ ಈ ಚಿತ್ರದ ಕ್ಯಾಮರಾಮನ್. ರಂಜನ್ ಮತ್ತು ಅಮರ್ ಗೌಡ ಜಂಟಿಯಾಗಿ ಎಡಿಟಿಂಗ್ ವಿಭಾಗ ನಿಭಾಯಿಸಿದ್ದಾರೆ. ತಾರಾಗಣದಲ್ಲಿ ರಂಜನ್, ಆಕಾಶ್ ಎಂ.ಪಿ, ಜತಿನ್ ಆರ್ಯನ್, ಸುಚೇಂದ್ರ ಪ್ರಸಾದ್, ಶಶಾಂಕ್ ಸಿಂಹ, ಮಾನ್ಯ ಗೌಡ, ಅರವಿಂದ್ ಕುಪ್ಳೀಕರ್, ಕುಂಕುಮ್ ಹೆಚ್, ವಿಯೋಮಿ ವನಿತಾ, ಅನುಷಾ ಸುರೇಶ್, ಮನೋಜ್ ಶೆಟ್ಟಿ, ನಮಿತಾ ಗೌಡ, ಚತುರ್ಥಿ ರಾಜ್, ಗೌರವ್, ವಿಕಾಸ್, ರನ್ನ, ವಿಜಯ್ ಪ್ರಸಾದ್ ಮುಂತಾದವರ ತಾರಾಗಣವಿದೆ.