ಗೃಹಿಣಿಯರಿಂದ ಬಿಡುಗಡೆಯಾಯ್ತು ‘ಕಾಲಾಪತ್ಥರ್’ ಚಿತ್ರದ ಬಾಂಡ್ಲಿ ಸ್ಟವ್ ಹಾಡು; ಇದು ‘ಕೆಂಡಸಂಪಿಗೆ’ ನಟ ವಿಕ್ಕಿಯ ಹೊಸ ಸಿನಿಮಾ
ವಿಕ್ಕಿ ವರುಣ್, ಧನ್ಯಾ ರಾಮ್‌ಕುಮಾರ್ ನಟನೆಯ ಕಾಲಾಪತ್ಥರ್ ಚಿತ್ರದ ಬಾಂಡ್ಲಿ ಸ್ಟವ್ ಹಾಡು ಬಿಡುಗಡೆ ಆಗಿದೆ. ವಿಶೇಷ ಏನೆಂದರೆ ಈ ಹಾಡನ್ನು ಗೃಹಿಣಿಯರಿಂದ ರಿಲೀಸ್ ಮಾಡಿಸಿದೆ ಚಿತ್ರತಂಡ.
Kaalapatthar Baandli Stoveu Lyrical video: ಕೆಂಡಸಂಪಿಗೆ ಸಿನಿಮಾದಿಂದ ಚಂದನವನದಲ್ಲಿ ನಟನಾಗಿ ಗುರುತಿಸಿಕೊಂಡವರು ವಿಕ್ಕಿ ವರುಣ್. ಕಾಲೇಜ್‌ಕುಮಾರ್ ಸಿನಿಮಾದಲ್ಲಿಯೂ ನಟಿಸಿದ ವಿಕ್ಕಿ, ಇದೀಗ ಕಪ್ಪು ಕಲ್ಲೊಂದನ್ನು ಹಿಡಿದುಕೊಂಡು ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ. ಆ ಚಿತ್ರದ ಹೆಸರು ಕಾಲಾಪತ್ಥರ್. ವಿಕ್ಕಿ ವರುಣ್ ಅವರೇ ನಿರ್ದೇಶಿಸಿ ನಾಯಕನಾಗಿಯೂ ನಟಿಸಿರುವ ಕಾಲಾಪತ್ಥರ್ ಸಿನಿಮಾ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿದೆ. ಈ ನಡುವೆ ಇದೇ ಸಿನಿಮಾದಿಂದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ.
ಭುವನ್ ಮೂವೀಸ್ ಬ್ಯಾನರ್‌ನಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಸಿನಿಮಾ ಕಾಲಾಪತ್ಥರ್. ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ ಬಾಂಡ್ಲಿ ಸೌಟು ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿಶೇಷ ಏನೆಂದರೆ ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದೆ.
ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಮೊದಲು ಒಂದು ಹಾಡು ಶುರುವಾಗಬೇಕು ಎಂದಾಗ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು. ಈಗ ಹಾಗಲ್ಲ. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅವರು ಕಾರಣ. ಹಾಡುಗಳಿಗೆ ಹಾಗೂ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಗೃಹಿಣಿಯರಿಂದ ಹಾಡು ಬಿಡುಗಡೆ
ಬಾಂಡ್ಲಿ, ಸ್ವವ್ ಹಾಗೂ ಸೌಟ್ ಅನ್ನು ಹೆಚ್ಚಾಗಿ ಗೃಹಿಣಿಯರು ಬಳಸುತ್ತಾರೆ. ಹಾಗಾಗಿ ಈ ಹಾಡನ್ನು ಅವರಿಂದ ಬಿಡುಗಡೆ ಮಾಡಿಸಿದ್ದೇವೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಚೆನ್ನಾಗಿದೆ. ನೃತ್ಯ ಬಾರದ ನನ್ನಿಂದ ಧನು ಮಾಸ್ಟರ್ ಚೆನ್ನಾಗಿ ನೃತ್ಯ ಮಾಡಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 13 ಚಿತ್ರ ತೆರೆಗೆ ಬರಲಿದೆ ಎಂದರು ನಾಯಕ ಹಾಗೂ ನಿರ್ದೇಶಕ ವಿಕ್ಕಿ ವರುಣ್.
ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ಚಿತ್ರ ಎರಡು ಚೆನ್ನಾಗಿದೆ ಎಂದರು ನಾಯಕಿ ಧನ್ಯ ರಾಮಕುಮಾರ್. ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ "ಬಾಂಡ್ಲಿ ಸ್ಟವ್" ಹಾಡಿನ ಕುರಿತು ಮಾತನಾಡಿದರು.
ಏನಿದು ಕಾಲಾ ಪತ್ಥರ್?
ಕಾಲಾಪತ್ಥರ್, ಕಪ್ಪುಕಲ್ಲಿಗೆ ಸಂಬಂಧಿಸಿದ ಕಥೆ. ಸತ್ಯಪ್ರಕಾಶ್ ಅವರು ಈ ಕಥೆ ಬರೆದಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರದ ಬಳಿ ಈ ಸಿನಿಮಾ ಹೆಚ್ಚು ಚಿತ್ರೀಕರಣವಾಗಿದೆ. ಆಲಮಟ್ಟಿಯ ಹಿನ್ನೀರಿನ ಜೈನಾಪುರ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದೆ. ಇನ್ನು ವಿಕ್ಕಿ ವರುಣ್‌ಗೂ ಈ ಸಿನಿಮಾ ತುಂಬ ವಿಶೇಷ. ಅದಕ್ಕೆ ಕಾರಣ, ಕೆಂಡಸಂಪಿಗೆ ಸಿನಿಮಾ. ಈ ಸೆಪ್ಟೆಂಬರ್‌ಗೆ ಚಿತ್ರ ತೆರೆಕಂಡು ಒಂಭತ್ತು ವರ್ಷಗಳಾಗುತ್ತಿದೆ. ಇದೇ ಸೆಪ್ಟೆಂಬರ್‌ನಲ್ಲಿ ಕಾಲಾ ಪತ್ಥರ್ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.
ವಿಭಾಗ