ಬ್ಯಾಚುಲರ್ ಪಾರ್ಟಿ ಚಿತ್ರದ ಕಾಪಿ ರೈಟ್ ವಿವಾದ; ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಆದೇಶ
Bachelor Party Movie copyright issue: ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಅನುಮತಿ ಇಲ್ಲದೆ ಎರಡು ಹಾಡುಗಳ ತುಣುಕನ್ನು ಬಳಸಿಕೊಂಡಿದ್ದಕ್ಕೆ, ದೆಹಲಿ ಹೈಕೋರ್ಟ್ 20 ಲಕ್ಷ ಠೇವಣಿ ಇಡುವಂತೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಡುಡಿಯೋಸ್‌ಗೆ ಆದೇಶಿಸಿದೆ.
Rakshit Shetty: ನಟ ರಕ್ಷಿತ್ ಶೆಟ್ಟಿಗೆ ಕಾಪಿ ರೈಟ್ ವಿವಾದ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ತಮ್ಮದೇ ಪರಂವಾ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾ ಮಾಡಿದ್ದ ನಟ ರಕ್ಷಿತ್, ಆ ಚಿತ್ರದಲ್ಲಿ ಅನುಮತಿ ಪಡೆಯದೇ ಎಂಆರ್‌ಟಿ ಆಡಿಯೋ ಕಂಪನಿ ಸ್ವಾಮ್ಯದ ಎರಡು ಹಾಡುಗಳನ್ನು ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಇದೀಗ ದೆಹಲಿ ಹೈಕೋರ್ಟ್‌ನಿಂದ ಮತ್ತೊಂದು ಆದೇಶ ಹೊರಬಿದ್ದಿದೆ. ಚಿತ್ರದಲ್ಲಿ ಹಾಡು ಬಳಕೆ ಮಾಡಿದ್ದ ನಿರ್ಮಾಪಕ ರಕ್ಷಿತ್ ಶೆಟ್ಟಿ, 20 ಲಕ್ಷ ಠೇವಣಿ ಇಡುವಂತೆ ಹೇಳಿದೆ.
ದಿಗಂತ್ ಮಂಚಾಲೆ, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾವನ್ನು ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ನ್ಯಾಯ ಎಲ್ಲಿದೆ... ಮತ್ತು ಒಮ್ಮೆ ನಿನ್ನನ್ನು.. ಹಾಡುಗಳ ಸಣ್ಣ ತುಣುಕನ್ನು ಬಳಕೆ ಮಾಡಲಾಗಿತ್ತು. ಇದರ ವಿರುದ್ಧ ಆಡಿಯೋ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ಕಾಪಿರೈಟ್ ಹಕ್ಕು ಉಲ್ಲಂಘನೆ ಆದ ವಿಚಾರಕ್ಕೆ ಪರಿಹಾರ ನೀಡುವಂತೆಯೂ ಹೇಳಿತ್ತು. ಅದರಂತೆ, ಕೆಲವೇ ಸೆಕೆಂಡ್‌ಗಳ ಈ ಹಾಡು ಬಳಕೆಗೆ ಅನುಮತಿ ಬೇಕಾ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಇದೇ ವಿಚಾರವಾಗಿ ಕೋರ್ಟ್‌ನಿಂದ ರಕ್ಷಿತ್‌ಗೆ ನೋಟೀಸ್ ರವಾನೆಯಾಗಿತ್ತು. ನೋಟೀಸ್‌ಗೂ ಉತ್ತರಿಸಿದೇ, ಕೋರ್ಟ್‌ಗೂ ಹಾಜರಾಗಿರಲಿಲ್ಲ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, 20 ಲಕ್ಷ ಠೇವಣಿ ಇರಿಸಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ಆ ಕಂಟೆಂಟ್‌ಅನ್ನು ತೆಗೆದುಹಾಕುವಂತೆಯೂ ಹೇಳಿದೆ.
ಅಂದಹಾಗೆ, ಈ ಮೊದಲು ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡಿದ್ದರ ಬಗ್ಗೆ ಎಂಆರ್‌ಟಿ ಆಡಿಯೋ ಸಂಸ್ಥೆಯ ನವೀನ್ ಕುಮಾರ್, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕಾಪಿ ರೈಟ್ಸ್ ಉಲ್ಲಂಘನೆ ಕುರಿತು ದೂರು ನೀಡಿದ್ದರು. ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ಸಹ ದಾಖಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ವಿಚಾರಣೆಗೂ ಹಾಜರಾಗಿದ್ದ ರಕ್ಷಿತ್, ಇದರ ವಿರುದ್ಧ ಧ್ವನಿಯೆತ್ತುವೆ ಎಂದಿದ್ದರು.