ಕನ್ನಡ ಸುದ್ದಿ  /  ಮನರಂಜನೆ  /  Bahaddur Movie: ಧ್ರುವ ಸರ್ಜಾ- ರಾಧಿಕಾ ಪಂಡಿತ್‌ ನಟನೆಯ ಬಹದ್ಧೂರ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ

Bahaddur Movie: ಧ್ರುವ ಸರ್ಜಾ- ರಾಧಿಕಾ ಪಂಡಿತ್‌ ನಟನೆಯ ಬಹದ್ಧೂರ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ

Bahaddur Movie re-release: ಸ್ಯಾಂಡ್‌ವುಡ್‌ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಮತ್ತು ರಾಧಿಕಾ ಪಂಡಿತ್‌ ನಟನೆಯ ಬಹದ್ಧೂರ್‌ ಸಿನಿಮಾ ಚಿತ್ರಂದಿರಗಳಲ್ಲಿ ಇದೇ ಜೂನ್‌ 21ರಂದು ಮರು ಬಿಡುಗಡೆಯಾಗುತ್ತಿದೆ. ಬಹದ್ಧೂರ್‌ ಸಿನಿಮಾ ಬಿಡುಗಡೆಯಾದ ಹತ್ತು ವರ್ಷಗಳ ಬಳಿಕ ಮತ್ತೆ ರಿ ರಿಲೀಸ್‌ ಆಗುತ್ತಿದೆ.

Bahaddur Movie: ಧ್ರುವ ಸರ್ಜಾ- ರಾಧಿಕಾ ಪಂಡಿತ್‌ ನಟನೆಯ ಬಹದ್ಧೂರ್‌ ಸಿನಿಮಾ ಮರು ಬಿಡುಗಡೆ
Bahaddur Movie: ಧ್ರುವ ಸರ್ಜಾ- ರಾಧಿಕಾ ಪಂಡಿತ್‌ ನಟನೆಯ ಬಹದ್ಧೂರ್‌ ಸಿನಿಮಾ ಮರು ಬಿಡುಗಡೆ

ಬೆಂಗಳೂರು: ಕನ್ನಡ ನಟ ಧ್ರು ಸರ್ಜಾ ಮತ್ತು ರಾಧಿಕಾ ಪಂಡಿತ್‌ ನಟನೆಯ ಬಹದ್ಧೂರ್‌ ಸಿನಿಮಾ ಇದೇ ಜೂನ್‌ 21ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ. ಈ ವರ್ಷ ಕೆಡಿ ದಿ ಹೀರೋ ಎಂಬ ಬಹುನಿರೀಕ್ಷಿತ ಸಿನಿಮಾದಲ್ಲಿ ಚಿತ್ರಮಂದಿರಗಳಿಗೆ ಆಗಮಿಸಲಿರುವ ಧ್ರುವ ಸರ್ಜಾರ ಹಳೆಯ ಸಿನಿಮಾವನ್ನು ಮತ್ತೆ ರಿಲೀಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಸರ್‌ಫ್ರೈಸ್‌ ನೀಡಿದೆ. ಹನ್ನೆರಡು ವರ್ಷದ ಹಿಂದೆ ಧ್ರುವ ಸರ್ಜಾ ಸಿನಿ ಕರಿಯರ್‌ ನಿಧಾನಗತಿಯಲ್ಲಿ ಸಾಗುತ್ತಿತ್ತು. ರಾಧಿಕಾ ಪಂಡಿತ್‌ ಜತೆ 2014ರಲ್ಲಿ ಬಹದ್ಧೂರ್‌ ಎಂಬ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ದಾಖಲಿಸಿತ್ತು. ಇದೀಗ ಚೇತನ್‌ ಕುಮಾರ್‌ ನಿರ್ದೇಶನದ ಬಹದ್ಧೂರ್‌ ಸಿನಿಮಾ ಕರ್ನಾಟಕದ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ.

ಬಹದ್ಧೂರ್‌ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ರಾಯಲ್‌ ಕುಟುಂಬದ ಅಶೋಕ್‌ ಪಾತ್ರದಲ್ಲಿ ನಟಿಸಿದ್ದರು. ಈತ ಅಂಜಲಿ (ರಾಧಿಕಾ)ಯನ್ನು ಪ್ರೀತಿಸುತ್ತಾನೆ. ಆದರೆ, ಈಕೆಯನ್ನು ಪಡೆಯಲು ಅಶೋಕ್‌ಗೆ ಒಂದು ಅಂಶ ಅಡ್ಡಿಯಾಗುತ್ತದೆ. ತಾನು ತಂದೆ ತೋರಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ತಂದೆಗೆ ಅಂಜಲಿ ಪ್ರಾಮೀಸ್‌ ಮಾಡಿರುತ್ತಾಳೆ. ಇಂತಹ ಸಂದರ್ಭದಲ್ಲಿ ತನ್ನ ಪ್ರೀತಿಯನ್ನು ಪಡೆಯಲು ನಾಯಕನಿಗೆ ಸಾಧ್ಯವಾಗುತ್ತ? ಇತ್ಯಾದಿ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಹದ್ಧೂರ್‌ ಸಿನಿಮಾದಲ್ಲಿ ಸುಂದರ್ ಸಿ, ಪಿ ರವಿಶಂಕರ್, ಶ್ರೀನಿವಾಸ ಮೂರ್ತಿ, ಅಚ್ಯುತ್ ಕುಮಾರ್, ಸಂಗೀತ, ಜೈ ಜಗದೀಶ್, ಸುಧಾ ರಾಣಿ, ಗುರುರಾಜ್ ಹೊಸಕೋಟೆ, ಅವಿನಾಶ್, ಪದ್ಮಜಾ ರಾವ್, ದತ್ತಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯನ್ನು ಈ ಸಿನಿಮಾದಲ್ಲಿ ಕೇಳಬಹುದು. ಬಹದ್ಧೂರ್‌ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮತ್ತು ಮಂಡ್ಯದಲ್ಲಿ ಚಿತ್ರೀಕರಣಗೊಂಡ ಬಹದ್ದೂರ್ ಸಿನಿಮಾವು ಬಿಡುಗಡೆಯಾದಾಗ ಕಮರ್ಷಿಯಲ್‌ ಆಗಿ ಚಿತ್ರತಂಡಕ್ಕೆ ಲಾಭ ತಂದುಕೊಟ್ಟಿತ್ತು.

ಜೂನ್‌ 21ರಂದು ಕರ್ನಾಟಕದ ಥಿಯೇಟರ್‌ಗಳಲ್ಲಿ ಪ್ರಮುಖ ಹೊಸ ಸಿನಿಮಾಗಳ ಬಿಡುಗಡೆ ಇಲ್ಲದೆ ಇರುವುದರಿಂದ ಈ ಹಳೆಯ ಸಿನಿಮಾವನ್ನ ಮರುಬಿಡುಗಡೆ ಮಾಡಲಾಗುತ್ತಿದೆ. ಧ್ರುವ ಸರ್ಜಾ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. 2017ರಲ್ಲಿ ಭರ್ಜರಿ, 2019ರಲ್ಲಿ ಪೊಗರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಧ್ರುವ ಸರ್ಜಾರ 5ನೇ ಸಿನಿಮಾ ಮಾರ್ಟಿನ್‌ ಬಿಡುಗಡೆ ವಿಳಂಬವಾಗಿದೆ. ಆರನೇ ಸಿನಿಮಾ ಕೆಡಿ ದಿ ಡೆವಿಲ್‌ ಸಿನಿಮಾ ಅಂತಿಮ ಹಂತದಲ್ಲಿದ್ದು, ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಮಾರ್ಟಿನ್‌ ಸಿನಿಮಾ ಈ ವರ್ಷ ದಸರಾ ಹಬ್ಬದ ವೇಳೆಗೆ ಬಿಡುಗಡೆಯಾಗುವ ಸೂಚನೆಯಿದೆ. ಮಾರ್ಟಿನ್‌ ಸಿನಿಮಾ ಎರಡು ವರ್ಷದ ಹಿಂದೆ ದಸರಾ ಹಬ್ಬದ ವೇಳೆ ಸೆಟ್ಟೇರಿತ್ತು. ಹೀಗಾಗಿ ಈ ವರ್ಷ ಧ್ರುವ ಸರ್ಜಾ ಅಭಿಮಾನಿಗಳಿಗೆ ಎರಡೆರಡು ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರಕಲಿದೆ.

ಚಿತ್ರಮಂದಿರಗಳಲ್ಲಿ ಸ್ಟಾರ್‌ ನಟರ ಸಿನಿಮಾಗಳು ರಿಲೀಸ್‌ ಆಗುತ್ತಿರುವುದು ಕಡಿಮೆಯಾಗಿದೆ. ಇದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಚಿತ್ರಮಂದಿರಗಳಲ್ಲಿ ಉಂಟಾಗುವ ಇಂತಹ ನಿರ್ವಾತವನ್ನು ತಪ್ಪಿಸಲು ಈ ವರ್ಷ ಹಲವು ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿದೆ. ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ಜಾಕಿ ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಕಳೆದ ತಿಂಗಳು ಉಪೇಂದ್ರ ಅವರ ಎ ಸಿನಿಮಾ ಮರು ಬಿಡುಗಡೆಯಾಗಿತ್ತು. ಈ ನಡುವೆ ಹಲವು ಸಿನಿಮಾಗಳು ರಿ ರಿಲೀಸ್‌ ಆಗಿದ್ದು, ಚಿತ್ರದ ಮಾಲೀಕರಿಗೆ ಹಲವು ಲಕ್ಷದಿಂದ ಕೆಲವು ಕೋಟಿಯವರೆಗೆ ಮತ್ತೆ ಲಾಭ ತಂದುಕೊಟ್ಟಿವೆ. ಉಪೇಂದ್ರ ನಟನೆಯ ಎ ಚಿತ್ರ ಕರ್ನಾಟಕದಲ್ಲಿ ಮರುಬಿಡುಗಡೆಯಾಗಿ ಸಾಕಷ್ಟು ಗಳಿಕೆ ಮಾಡಿದೆ. ಈ ಎ ಸಿನಿಮಾವನ್ನು ಆಂಧ್ರದಲ್ಲೂ ಬಿಡುಗಡೆ ಮಾಡಲು ಬೇಡಿಕೆ ಬಂದಿದೆ. ಹೀಗಾಗಿ ಜೂನ್ 21 ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ A ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಎದುರು ಚಾಂದಿನಿ ನಾಯಕಿಯಾಗಿ ನಟಿಸಿದ್ದರು. 1 ಕೋಟಿ 25 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 20 ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಸೃಷ್ಟಿಸಿತ್ತು.