3 ಮಕ್ಕಳ ತಂದೆಯೊಂದಿಗೆ ಪ್ರೀತಿ, ಮದುವೆ, ಆತ್ಮಹತ್ಯೆ ಯತ್ನ; ಖ್ಯಾತ ನಟಿ ಜಯಪ್ರದಾ ತೆರೆ ಮರೆ ಕಥೆ
ಜಯಪ್ರದಾ ಹಾಗೂ ಶ್ರೀಕಾಂತ್ ದಂಪತಿಗೆ ಮಕ್ಕಳಿಲ್ಲ, ವೈವಾಹಿಕ ಜೀವನ ಹೀಗಾಯ್ತಲ್ಲ ಎಂಬ ನೋವಿನೊಂದಿಗೆ ಮಕ್ಕಳಿಲ್ಲದ ಬೇಸರ ಜಯಪ್ರದಾಗೆ ಕಾಡುತ್ತಿತ್ತು. ಈ ಕಾರಣದಿಂದಲೇ ಅವರು ತಮ್ಮ ಸಹೋದರಿ ಪುತ್ರ ಸಿದ್ದಾರ್ಥ್ ಎಂಬುವರನ್ನು ದತ್ತು ಪಡೆದರು.
ಸುಮಾರು 30-40 ವರ್ಷಗಳ ಹಿಂದೆ ಹಿಂದಿ ಚಿತ್ರರಂಗವನ್ನು ಆಳಿದ ನಟಿಯರಲ್ಲಿ ಜಯಪ್ರದಾ ಕೂಡಾ ಒಬ್ಬರು. ಆಂಧ್ರ ಪ್ರದೇಶದ ಸಾಮಾನ್ಯ ಕುಟುಂಬಕ್ಕೆ ಸೇರಿದ ಜಯಪ್ರದಾ ಅಲಿಯಾಸ್ ಲಲಿತಾ ರಾಣಿ ರಾವ್, ನಟಿಯಾಗಿ ಬಾಲಿವುಡ್ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ನಟಿಯಾಗಿ ಹೆಸರು ಮಾಡಿ ಲಕ್ಷಾಂತರ ಫ್ಯಾನ್ ಫಾಲೋಯಿಂಗ್ ಹೊಂದಿರುವವರು.
ಆಂಧ್ರಪ್ರದೇಶದ ರಾಜಮುಂಡ್ರಿಗೆ ಸೇರಿದ ಲಲಿತಾ ರಾಣಿ
ಜಯಪ್ರದಾ ತಂದೆ ಕೃಷ್ಣ ರಾವ್ ಟಾಲಿವುಡ್‌ನಲ್ಲಿ ಫೈನಾನ್ಶಿಯರ್ ಆಗಿದ್ದರಿಂದ ಅವರಿಗೆ ತೆಲುಗು ಸೆಲೆಬ್ರಿಟಿಗಳ ಪರಿಚಯ ಚೆನ್ನಾಗಿತ್ತು. ಬಾಲ್ಯದಲ್ಲೇ ಡ್ಯಾನ್ಸ್ ಸೇರಿದಂತೆ ಇತರ ಸಾಂಸ್ಕೃತಿಕ ಕಲೆಗಳಲ್ಲಿ ತೊಡಗಿಸಿಕೊಂಡಿದ್ದ ಜಯಪ್ರದಾ ಒಮ್ಮೆ ಸ್ಕೂಲ್ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದ್ದರು. ಆಕೆಯನ್ನು ನೋಡಿದ ನಿರ್ದೇಶಕರೊಬ್ಬರು ತಮ್ಮ 'ಭೂಮಿ ಕೋಸಂ' ಎಂಬ ಸಿನಿಮಾದಲ್ಲಿ ನೃತ್ಯ ಮಾಡಲು ಅವಕಾಶ ನೀಡಿದರು. ಅದರೆ ಆ ಚಿತ್ರದಲ್ಲಿ ಲಲಿತಾ ರಾಣಿ 3 ನಿಮಿಷ ಮಾತ್ರ ತೆರೆ ಮೇಲೆ ಬಂದು ಹೋಗಿದ್ದರು. ಅಷ್ಟಾದರೂ ಆಕೆಯ ಡ್ಯಾನ್ಸ್, ಸೌಂದರ್ಯ ಎಲ್ಲರ ಗಮನ ಸೆಳೆಯಿತು. ಅಂದಿನ ಖ್ಯಾತ ತಮಿಳು ನಿರ್ದೇಶಕ ಕೆ. ಬಾಲಚಂದರ್ ತಮ್ಮ ಸಿನಿಮಾದಲ್ಲಿ ಲಲಿತಾಗೆ ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದರು. 'ಅಂತುಲೇನಿ ಕಥಾ' ಚಿತ್ರದ ಮೂಲಕ ಲಲಿತಾ ರಾಣಿ, ಜಯಪ್ರದಾ ಆಗಿ ಬದಲಾದರು. ಅಂದಿನಿಂದ ಆಕೆ ಹಿಂತಿರುಗಿ ನೋಡಿದ್ದೇ ಇಲ್ಲ.
ಮಾತೃಭಾಷೆ ತೆಲುಗು ಆದರೂ ಜಯಪ್ರದಾಗೆ ತೆಲುಗು ಭಾಷೆಗಿಂತ ಹಿಂದಿ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚು ಹುಡುಕಿ ಬಂದವು. ಕಡಿಮೆ ಸಮಯದಲ್ಲಿ ಜಯಪ್ರದಾ ಸ್ಟಾರ್ ನಟಿಯಾದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಜಯಪ್ರದಾಗೆ ಎಲ್ಲಾ ಭಾಷೆಗಳಲ್ಲೂ ಬಹಳ ಡಿಮ್ಯಾಂಡ್ ಇತ್ತು. ಅಂದಿನ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಈ ಚೆಲುವೆ ತೆರೆ ಹಂಚಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಇಷ್ಟೆಲ್ಲಾ ಯಶಸ್ಸು ಕಂಡ ಜಯಪ್ರದಾ ವೈವಾಹಿಕ ಜೀವನದಲ್ಲಿ ನೋವು ಕಂಡರು.
ನಿರ್ಮಾಪಕ ಶ್ರೀಕಾಂತ್ ನಹಾತ ಜೊತೆ ಪ್ರೀತಿ, ಮದುವೆ
ಖ್ಯಾತಿಯ ಉತ್ತುಂಗದಲ್ಲಿದ್ದ ಜಯಪ್ರದಾ ನಿರ್ಮಾಪಕ ಶ್ರೀಕಾಂತ್ ನಹಾತ ಅವರೊಂದಿಗೆ ಪ್ರೀತಿಯಲ್ಲಿದ್ದರು. ಆದರೆ ಆಗಲೇ ಶ್ರೀಕಾಂತ್‌ಗೆ ಮದುವೆ ಆಗಿ ಮಕ್ಕಳಿದ್ದರು. ಯಾರಿಗಾದರೂ ಗೊತ್ತಾದರೆ ಮದುವೆಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಜಯಪ್ರದಾ ಹಾಗೂ ಶ್ರೀಕಾಂತ್ 22 ಫೆಬ್ರವರಿ 1986ರಂದು ಮುಂಬೈನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮದುವೆ ಆದರು. ನಂತರ ಇವರ ಮದುವೆ ಹೆಚ್ಚು ದಿನ ಗುಟ್ಟಾಗಿ ಉಳಿಯಲಿಲ್ಲ. ಮೊದಲ ಪತ್ನಿ ಚಂದ್ರಾಗೆ ಡಿವೋರ್ಸ್ ಕೊಡದೆ ಎರಡನೇ ಮದುವೆ ಆಗಿದ್ದು ವಿವಾದಕ್ಕೆ ಕಾರಣವಾಯ್ತು. ಜಯಪ್ರದಾ ಅವರನ್ನು ಮದುವೆ ಆದ ನಂತರವೂ ಶ್ರೀಕಾಂತ್, ಮೊದಲ ಪತ್ನಿಯೊಂದಿಗೆ ವಾಸವಿದ್ದರು. ಅಷ್ಟೇ ಅಲ್ಲ, ಎರಡನೇ ಮದುವೆ ನಂತರ ಶ್ರೀಕಾಂತ್, ಮೊದಲ ಪತ್ನಿ ಮೂರನೇ ಮಗುವಿಗೆ ಜನ್ಮ ನೀಡಿದರು.
ಆತ್ಮಹತ್ಯೆ ಯತ್ನ
1990ರಲ್ಲಿ ಜಯಪ್ರದಾ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಸಮಯದಲ್ಲಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ವಿಷ ಸೇವಿಸಿದ್ದ ಜಯಪ್ರದಾ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಲ್ಸನ್ ಗಾರ್ಡನ್ ನರ್ಸಿಂಗ್ ಹೋಮ್‌ನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿತ್ತು. ಆತ್ಮಹತ್ಯೆ ಪ್ರಯತ್ನಕ್ಕೆ ಜಯಪ್ರದಾ ವಿರುದ್ದ 309 ಐಪಿಸಿ ಸೆಕ್ಷನ್ ಅಡಿ ಕೇಸ್ ಕೂಡಾ ದಾಖಲಾಗಿತ್ತು. ಶ್ರೀಕಾಂತ್ ಅವರನ್ನು ಮದುವೆ ಆದ ನಂತರ ಆತನ ಮೊದಲ ಪತ್ನಿ ಚಂದ್ರಾ, ಪತಿಯನ್ನು ಬಿಡುವಂತೆ ಜಯಪ್ರದಾ ಮೇಲೆ ಒತ್ತಡ ಹೇರಿದ್ದರು. ಆ ಕಾರಣದಿಂದಲೇ ಜಯಪ್ರದಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಸುದ್ದಿ ಆ ಸಮಯದಲ್ಲಿ ವೈರಲ್ ಆಗಿತ್ತು.
ಪ್ರೀತಿಸಿ ಮದುವೆಯಾದರೂ ಜಯಪ್ರದಾ, ಪತಿಯೊಂದಿಗೆ ಸಂತೋಷದಿಂದ ಜೀವನ ನಡೆಸಲು ಸಾಧ್ಯವಾಗಲಿಲ್ಲ. ಆಗ್ಗಾಗ್ಗೆ ಇಬ್ಬರೂ ಭೇಟಿ ಆದರೂ ಮೊದಲ ಪತ್ನಿ ಹಾಗೂ ಮನೆಯವರ ಭಯ ಇಬ್ಬರಿಗೂ ಕಾಡುತ್ತಿತ್ತು. ಜಯಪ್ರದಾ ಹಾಗೂ ಶ್ರೀಕಾಂತ್ ದಂಪತಿಗೆ ಮಕ್ಕಳಿಲ್ಲ, ವೈವಾಹಿಕ ಜೀವನ ಹೀಗಾಯ್ತಲ್ಲ ಎಂಬ ನೋವಿನೊಂದಿಗೆ ಮಕ್ಕಳಿಲ್ಲದ ಬೇಸರ ಜಯಪ್ರದಾಗೆ ಕಾಡುತ್ತಿತ್ತು. ಈ ಕಾರಣದಿಂದಲೇ ಅವರು ತಮ್ಮ ಸಹೋದರಿ ಪುತ್ರ ಸಿದ್ದಾರ್ಥ್ ಎಂಬುವರನ್ನು ದತ್ತು ಪಡೆದರು. ಜಯಪ್ರದಾ, ಮಗನಿಗೆ ಮದುವೆ ಮಾಡಿದ್ದು ಸದ್ಯಕ್ಕೆ ಮಗ ಹಾಗೂ ಸೊಸೆಯೊಂದಿಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.
ಒಂದರ ಹಿಂದೊಂದರಂತೆ ವಿವಾದಗಳನ್ನು ಎದುರಿಸುತ್ತಲೇ ಬಂದ ಜಯಪ್ರದಾ
ಜಯಪ್ರದಾ ಈಗ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಆಕೆ ಉತ್ತರ ಪ್ರದೇಶದ ರಾಂಪುರ್ ಲೋಕಸಭಾ ಕ್ಷೇತ್ರದ ಸಂಸದೆ. ರಾಜಕೀಯಕ್ಕೆ ಬಂದ ನಂತರ ಕೂಡಾ ಜಯಪ್ರದಾ ಅನೇಕ ವಿವಾದಗಳನ್ನು ಎದುರಿಸಿದ್ಧಾರೆ. ಆತ್ಮಹತ್ಯೆ ಪ್ರಯತ್ನ ನಡೆದ ಕೆಲವು ವರ್ಷಗಳ ನಂತರ ಜಯಪ್ರದಾರ ಮಾರ್ಪಿಂಗ್ ಮಾಡಲಾದ ಫೋಟೋಗಳು ವೈರಲ್ ಆಗಿತ್ತು. ಆಗಲೂ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಜಯಪ್ರದಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.
ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರೊಂದಿಗೆ ಜಯಪ್ರದಾ ಸಂಬಂಧದ ಕುರಿತು ಗಾಸಿಪ್ ಹರಡಿತ್ತು. ಈ ಸುದ್ದಿಗೆ ಪ್ರತಿಕ್ರಿಯಿಸಿದ್ದ ಜಯಪ್ರದಾ, ''ಅಮರ್ ಸಿಂಗ್ ನನಗೆ ಗಾಡ್ ಫಾದರ್, ನಾನು ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರೇ ಕಾರಣ, ನಾನು ಅವರಿಗೆ ರಾಖಿ ಕಟ್ಟಿದ್ದೇನೆ. ಆದರೂ ಜನರು ನಮ್ಮಿಬ್ಬರಿಗೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದ್ದರು.
ಜಯಪ್ರದಾ ಸಹೋದರ ರಾಜಬಾಬು, ವಿಜಯಲಕ್ಷ್ಮಿ ಸಹೋದರಿ ಉಷಾ ಅವರನ್ನು ಮದುವೆ ಆಗಿದ್ದು ಈ ದಂಪತಿಗೆ ಒಬ್ಬ ಮಗ ಇದ್ದಾನೆ. ''ನನ್ನ ಅಕ್ಕ ಉಷಾ ಜೀವನ ಹಾಳಾಗಲು ಜಯಪ್ರದಾ ಅವರೇ ಕಾರಣ. ಹೆಂಡತಿಯನ್ನು ನೋಡದಂತೆ, ಮಗನನ್ನು ತೋರಿಸದಂತೆ ಸಹೋದರನನ್ನು ತಡೆಯುತ್ತಿದ್ದಾರೆ'' ಎಂದು ವಿಜಯಲಕ್ಷ್ಮಿ ಆರೋಪಿಸಿದ್ದರು.
6 ತಿಂಗಳ ಜೈಲುಶಿಕ್ಷೆ
2019ರಲ್ಲಿ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಜಯಪ್ರದಾ ವಿರುದ್ಧ 2 ಕೇಸ್ ದಾಖಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಇತ್ತೀಚೆಗೆ ಜಯಪ್ರದಾಗೆ ಚೆನ್ನೈನ ಎಗ್ಮೋರ್ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದಾ, ತಮ್ಮ ಒಡೆತನದಲ್ಲಿದ್ದ ಚಿತ್ರಮಂದಿರದ ಕಾರ್ಮಿಕರ ಸಂಬಳದಿಂದ ಇಎಸ್‌ಐ ಹಣ ಕಡಿತಗೊಳಿಸಿದ್ದರು. ಆದರೆ ಈಗ ಥಿಯೇಟರ್ ಮುಚ್ಚಲಾಗಿದೆ. ಈಗಲೂ ನಮ್ಮಿಂದ ಪಡೆದ ಹಣವನ್ನು ಆಕೆ ವಾಸಪ್ ನೀಡಿಲ್ಲ ಎಂದು ಕಾರ್ಮಿಕರು ರಾಜ್ಯ ಕಾರ್ಮಿಕ ವಿಮೆ ಇಲಾಖೆಗೆ ದೂರು ದಾಖಲಿಸಿದ್ದರು. ಕಾರ್ಮಿಕ ವಿಮೆ ಇಲಾಖೆ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಟಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಒಟ್ಟಿನಲ್ಲಿ ಸಿನಿಮಾ ಬದುಕಿನಲ್ಲಿ ಯಶಸ್ಸು ಕಂಡರೂ ಜಯಪ್ರದಾ, ವೈಯಕ್ತಿಕ ಜೀವನದಲ್ಲಿ ಸೋಲು ಕಂಡಿದ್ದು ಅಭಿಮಾನಿಗಳಿಗೆ ಇನ್ನೂ ಬೇಸರ ಕಾಡುತ್ತಿದೆ.