ಹಿಂದೆಂದೂ ಕಂಡಿರದ ಲುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್; ಶಿವಣ್ಣನ ಹುಟ್ಟುಹಬ್ಬಕ್ಕೆ ಇನ್ನಷ್ಟು ಸರ್‌ಪ್ರೈಸ್ ನಿರೀಕ್ಷೆ
Bhairavana kone paata First Look: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾ "ಭೈರವನ ಕೊನೆ ಪಾಠ"ದ ಎರಡು ಹೊಸ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾ "ಭೈರವನ ಕೊನೆ ಪಾಠ"ದ ಎರಡು ಹೊಸ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಶಿವಣ್ಣ ಈ ಹಿಂದೆ ಎಂದೂ ಕಂಡಿರದ ಪಾತ್ರದಲ್ಲಿ ಕಾಣಿಸಿದ್ದಾರೆ. ತನ್ನ ವಯಸ್ಸು ಮೀರಿದ ಪಾತ್ರದಂತೆ ನಟಿಸಿದ್ದಾರೆ. ಹಿರಿಯ ಯೋಧನ ಪಾತ್ರದಲ್ಲಿ ಈ ಪೋಸ್ಟರ್‌ಗಳಲ್ಲಿ ಕಾಣಿಸಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ
ಬಹುತೇಕ ಅಭಿಮಾನಿಗಳು ಈ ಪೋಸ್ಟರ್ ನೋಡಿ ಬೆಂಕಿ ಎಮೋಜಿಗಳನ್ನು ಹಾಕಿದ್ದಾರೆ. ಖಂಡಿತಾ ಇದು ಬ್ಲಾಕ್ ಬಸ್ಟರ್ ಮೂವಿ ಆಗಿರಲಿದೆ, ಇದು ಗೇಮ್ ಚೇಂಜಿಂಗ್ ಸಿನಿಮಾ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. "ಆಡು ಮುಟ್ಟದ ಸೊಪ್ಪಿಲ್ಲ. ಶಿವಣ್ಣ ಮಾಡದ ಪಾತ್ರವಿಲ್ಲ" "ಜನರು ಏನೇ ಹೇಳಲಿ, ಇದು ಸ್ಯಾಂಡಲ್‌ವುಡ್‌ನಲ್ಲಿ ಐತಿಹಾಸಿಕ ಹಿಟ್ ಸಿನಿಮಾವಾಗಲಿದೆ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಈ ತಿಂಗಳ ಮೊದಲ ವಾರದಲ್ಲಿ ಭೈರವನ ಕೊನೆ ಪಾಠದ ಟೈಟಲ್ ಬಿಡುಗಡೆಯಾಗಿತ್ತು. ಈ ಸಿನಿಮಾದ ವಿನೂತನ ಟೈಟಲ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕರಾದ ಹೇಮಂತ್ ರಾವ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವ ಕಾರಣ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಪುಷ್ಕರ್ ಮಲ್ಲಿಕಾರ್ಜುನಾ ನಿರ್ಮಾಣದ, ರಕ್ಷಿತ್ ಶೆಟ್ಟಿ, ಅನಂತ್ ನಾಗ್, ವಸಿಷ್ಠ ಸಿಂಹ ಮುಂತಾದವರು ನಟಿಸಿರುವ ಗೋಧಿ ಬಣ್ಣ ಸಾಧಾರಣ ಮೈಕಟ್ಟು (ನಿರ್ದೇಶನ), ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್ (ಪ್ರೊಡ್ಯುಸರ್), ಭೀಮಸೇನಾ ನಳಮಹಾರಾಜ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ಮುಂತಾದ ಸಿನಿಮಾಗಳ ಮೂಲಕ ಹೇಮಂತ್ ರಾವ್ ಗಮನ ಸೆಳೆದಿದ್ದಾರೆ.
ಜುಲೈ 12ಕ್ಕೆ ಶಿವಣ್ಣನ ಹುಟ್ಟುಹಬ್ಬ. ಅಂದು ಈ ಸಿನಿಮಾದ ಅಪ್‌ಡೇಟ್ ಇರಲಿದೆಯೇ? ಅಥವಾ ಭೈರವಕೋನ, ಉತ್ತರಕಾಂಡದ ಅಪ್‌ಡೇಟ್ ಇರಬಹುದಾದ ಕಾರಣ ಅದಕ್ಕೂ ಮುಂಚಿತವಾಗಿಯೇ ಭೈರವನ ಕೊನೆ ಪಾಠದ ಪೋಸ್ಟರ್ ಬಿಡುಗಡೆ ಮಾಡಲಾಗಿದೆಯೇ ಎಂದು ಇನ್ನೂ ಸ್ಪಷ್ಟವಾಗಿಲ್ಲ.
ಭೈರವನ ಕೊನೆ ಪಾಠದಲ್ಲಿ ಶಿವಣ್ಣ ತಮ್ಮ ಕರಿಯರ್‌ನಲ್ಲಿ ಮಾಡದಂತಹ ಪಾತ್ರ ಮಾಡಲಿದ್ದಾರೆ ಎಂದು ಹೇಮಂತ್ ಈ ಹಿಂದೆಯೇ ಹೇಳಿದ್ದರು. ಇದೀಗ ಬಿಡುಗಡೆಯಾದ ಪೋಸ್ಟರ್‌ಗಳನ್ನು ನೋಡಿದವರಿಗೆ ಅದೇ ಫೀಲ್ ಬಂದಿದೆ. ಗಡ್ಡದಾರಿ ಹಿರಿಯ ಯೋಧ ರೂಪದಲ್ಲಿ ಕಾಣಿಸಿದ್ದಾರೆ. "ಇದು ಸೈನ್ಸ್ ಫಿಕ್ಷನ್ ಚಿತ್ರವಲ್ಲ. ಇದೊಂದು ಆಕ್ಷನ್ ಡ್ರಾಮಾ. ಶಿವಣ್ಣ ಸರ್ ತಮ್ಮ ವೃತ್ತಿಜೀವನದಲ್ಲಿ ಮಾಡದೆ ಇರುವಂತಹ ಕಥೆ ಇದಾಗಿದೆ. ಅವರ ಸಿನಿಮಾಗಳನ್ನು ನೋಡುತ್ತ ಬೆಳೆದ ನಾನು ಅವರನ್ನು ಹೊಸ ಪಾತ್ರದಲ್ಲಿ ನೋಡಲು ಬಯಸುತ್ತೇನೆ" ಎಂದು ಹೇಮಂತ್ ರಾವ್ ಈ ಹಿಂದೆ ಹೇಳಿದ್ದರು.
ಭೈರವನ ಕೊನೆ ಪಾಠ ರಿಲೀಸ್ ಯಾವಾಗ?
ಶಿವಣ್ಣ ನಟನೆಯ ಕೆಲವು ಮೂಲಗಳ ಪ್ರಕಾರ ಭೈರವನ ಕೊನೆ ಪಾಠ ಚಿತ್ರದಲ್ಲಿ ಹಿಸ್ಟಾರಿಕಲ್ ಅಂಶಗಳು ಇರುವ ಸಾಧ್ಯತೆ ಇದೆ. ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಇದೇ ಸಮಯದಲ್ಲಿ ಶಿವಣ್ಣ ಮತ್ತು ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾವೂ ನಿರೀಕ್ಷೆ ಹುಟ್ಟಿಸಿದೆ. ಉತ್ತರಕಾಂಡ ಸಿನಿಮಾವು ಈ ವರ್ಷ ಬಿಡುಗಡೆಯಾಗಲಿದೆ.
