BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಾಂಕ ನಿಗದಿ; ಈ ಸಲದ ಚಿತ್ರೋತ್ಸವದ ಹೈಲೈಟ್ಸ್‌ ಏನು?
ಕನ್ನಡ ಸುದ್ದಿ  /  ಮನರಂಜನೆ  /  Biffes 2024: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಾಂಕ ನಿಗದಿ; ಈ ಸಲದ ಚಿತ್ರೋತ್ಸವದ ಹೈಲೈಟ್ಸ್‌ ಏನು?

BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಾಂಕ ನಿಗದಿ; ಈ ಸಲದ ಚಿತ್ರೋತ್ಸವದ ಹೈಲೈಟ್ಸ್‌ ಏನು?

ಪ್ರಸಕ್ತ ವರ್ಷದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 29ರಿಂದ ಮಾರ್ಚ್‌ 07ರ ವರೆಗೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಅದರ ಪೂರ್ತಿ ವಿವರ ಇಲ್ಲಿದೆ.

BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಾಂಕ ನಿಗದಿ; ಈ ಸಲದ ಚಿತ್ರೋತ್ಸವದ ಹೈಲೈಟ್ಸ್‌ ಏನು?
BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಾಂಕ ನಿಗದಿ; ಈ ಸಲದ ಚಿತ್ರೋತ್ಸವದ ಹೈಲೈಟ್ಸ್‌ ಏನು?

BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಘಟನಾ ಸಮಿತಿ ಸಭೆಯಲ್ಲಿ ಫೆಬ್ರವರಿ 29 ರಿಂದ ಮಾರ್ಚ್ 7 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜರುಗಿದ ಸಂಘಟನಾ ಸಮಿತಿ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15 ನೇ ಆವೃತ್ತಿಯನ್ನು ಫೆಬ್ರವರಿ 29ರ ಸಂಜೆ ಉದ್ಘಾಟನೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು, ವಿದೇಶಿ ಚಿತ್ರಗಳನ್ನು ಪ್ರದರ್ಶಿಸಲಾಗುವುದಲ್ಲದೆ, ಕನ್ನಡ ಸೇರಿ ದೇಶದ ವಿವಿಧ ಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಮಾರ್ಚ್ 7 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ರಾಜ್ಯಪಾಲರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

ಸಂಘಟನಾ ಸಮಿತಿ ಸಭೆಯ ಜೊತೆಗೆ ಕೋರ್ ಸಮಿತಿಯೂ ರಚನೆಯಾಗಿದ್ದು, ಸಮಾರಂಭ ಯಾವ ರೀತಿ ಏರ್ಪಡಿಸಬೇಕೆಂದು ತೀರ್ಮಾನವಾಗುತ್ತದೆ. ಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಸಿಎಂ ತಿಳಿಸಿದರು.

ಈ ಹಿಂದೆ ವಿಧಾನಸೌಧದ ಮುಂಭಾಗದಲ್ಲಿಯೇ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವದ ಉದ್ಘಾಟನೆಯಾಗುತ್ತಿತ್ತು. ದೇಶ ವಿದೇಶದ ಸಿನಿರಂಗದ ಪ್ರಖ್ಯಾತ ಕಲಾವಿದರನ್ನು ಕರೆಸಲಾಗುತ್ತಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಾರಾಷ್ಟ್ರಿಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.

ಸಮಿತಿ ಸಭೆಯ ಮುಖ್ಯಾಂಶಗಳು

ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಯಿತು

  • 1. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ಆಯೋಜಿಸುವ ಕುರಿತು ಸಂಘಟನಾ ಸಮಿತಿಯ ಸಭೆಯನ್ನು ಇಂದು ನಡೆಸಿದ್ದೇನೆ.
  • 2. ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ.
  • 3. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿದೆ. ಬೆಲ್ಜಿಯಂ ನ ಅಂತರರಾಷ್ಟ್ರೀಯ ಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟವಾದ FIAPF ನ ಮಾನ್ಯತೆಯನ್ನು ಪಡೆದುಕೊಂಡಿದೆ.
  • 4. 15 ನೇ ಚಲನಚಿತ್ರೋತ್ಸವವನ್ನು ಫೆಬ್ರವರಿ 29 ರಿಂದ ಮಾರ್ಚ್‌ 7ರ ವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ.
  • 5. ಪ್ರತಿ ವರ್ಷವೂ ಫೆಬ್ರವರಿ, ಮಾರ್ಚ್‌ನಲ್ಲಿ ಚಿತ್ರೋತ್ಸವವನ್ನು ಏರ್ಪಡಿಸುತ್ತಿದ್ದು, ಈ ಬಾರಿಯೂ ಫೆಬ್ರವರಿ / ಮಾರ್ಚ್ ತಿಂಗಳಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಏರ್ಪಡಿಸಲು ಕೆಳಕಂಡಂತೆ ತಾತ್ಕಾಲಿಕ ದಿನಾಂಕಗಳ ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ. a. ಫೆಬ್ರವರಿ 29 ರಂದು ಗುರುವಾರ ಸಂಜೆ ಸಿಎಂ ಅವರಿಂದ ಉದ್ಘಾಟನಾ ಸಮಾರಂಭ. b. ಮಾರ್ಚ್ 01 ರಿಂದ 07 ರವರೆಗೆ ಚಿತ್ರೋತ್ಸವದ ಚಲನಚಿತ್ರ ಪ್ರದರ್ಶನ. c. ಮಾರ್ಚ್ 07 ರಂದು ಗುರುವಾರ ಸಂಜೆ ಸಮಾರೋಪ ಸಮಾರಂಭ
  • 6. ಉದ್ಘಾಟನಾ ಸಮಾರಂಭವನ್ನು ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗುವುದು. ಸಮಾರೋಪ ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗುವುದು.
  • 7. ಚಲನಚಿತ್ರೋತ್ಸವ ಆಯೋಜನೆಗೆ 1.61 ಕೋಟಿ ರೂ. ಲಭ್ಯವಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
  • 8. ಲೀಲಾವತಿ, ಭಗವಾನ್‌ ಮತ್ತು ಸಿ.ವಿ. ಶಿವಶಂಕರ್‌ ಮೊದಲಾದ ಕನ್ನಡ ಚಿತ್ರರಂಗದ ಅಗಲಿದ ಗಣ್ಯರಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
  • 9. ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಯಿತು.
  • 10. ಈಗಾಗಲೇ ಚಿತ್ರೋತ್ಸವದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ದೇಶ- ವಿದೇಶಗಳ ಉತ್ತಮ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿನ ಪ್ರದರ್ಶನಕ್ಕಾಗಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
  • 11. ಚಿತ್ರೋತ್ಸವದ ಕೆಲಸಗಳಲ್ಲಿ ಪರಿಣಿತಿ ಹೊಂದಿರುವ ವಿದ್ಯಾಶಂಕರ್‌ ಅವರನ್ನು ಕಲಾತ್ಮಕ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಇದರೊಂದಿಗೆ ಸಂಘಟಕರು / ತಾಂತ್ರಿಕ ಸಲಹೆಗಾರರು / ಸ್ವಯಂ ಸೇವಕರುಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಸಂಭಾವನೆ ಆಧಾರದಲ್ಲಿ ಇವರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
  • 12. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೂ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.
  • 13. ಪ್ರತಿ ವರ್ಷದಂತೆ ಒರಾಯನ್ ಮಾಲ್‌ನಲ್ಲಿರುವ ಪಿವಿಆರ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುವುದು.

Whats_app_banner