ಕನ್ನಡ ಸುದ್ದಿ  /  Entertainment  /  Sandalwood News Biffes Lifetime Achievement Award To M S Sathyu, Who Is Mysore Shrinivas Sathyu Pcp

ಎಂಎಸ್‌ ಸತ್ಯುಗೆ ಜೀವಮಾನ ಸಾಧನೆ ಪ್ರಶಸ್ತಿ; ಪದ್ಮಶ್ರಿ ಪುರಸ್ಕೃತ ಮೈಸೂರು ಶ್ರೀನಿವಾಸ ಸತ್ಯು ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕಿರುಪರಿಚಯ

M S Sathyu Profile: ಕರ್ನಾಟಕದ ಚಲನಚಿತ್ರ ನಿರ್ದೇಶಕ, ರಂಗಕರ್ಮಿ, ಕಲಾ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಎಂಎಸ್‌ ಸತ್ಯು ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ"ದ "ಜೀವಮಾನ ಸಾಧನೆ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದೆ. ಎಂಎಸ್‌ ಸತ್ಯು ಬಾಲ್ಯ, ಶಿಕ್ಷಣ, ನಾಟಕ ಮತ್ತು ಸಿನಿಮಾರಂಗದ ಸಾಧನೆ, ಪಡೆದಿರುವ ಪ್ರಶಸ್ತಿಗಳ ವಿವರ ಇಲ್ಲಿದೆ.

ಎಂಎಸ್‌ ಸತ್ಯುಗೆ ಜೀವಮಾನ ಸಾಧನೆ ಪ್ರಶಸ್ತಿ; ಮೈಸೂರು ಶ್ರೀನಿವಾಸ ಸತ್ಯು ಪರಿಚಯ
ಎಂಎಸ್‌ ಸತ್ಯುಗೆ ಜೀವಮಾನ ಸಾಧನೆ ಪ್ರಶಸ್ತಿ; ಮೈಸೂರು ಶ್ರೀನಿವಾಸ ಸತ್ಯು ಪರಿಚಯ (wiki commons)

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಎಂಎಸ್‌ ಸತ್ಯು (91) ಅವರನ್ನು ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ಹಾಗೂ ಕಲಾ ನಿರ್ದೇಶಕರಾದ ಮೈಸೂರು ಶ್ರೀನಿವಾಸ ಸತ್ಯು (ಎಂ.ಎಸ್.ಸತ್ಯು) ಅವರು ಕಲಾಜಗತ್ತಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ "15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ"ದ "ಜೀವಮಾನ ಸಾಧನೆ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದೆ.

ಎಂಎಸ್‌ ಸತ್ಯು ನಿರ್ದೇಶನದ ಹಿಂದಿ ಚಿತ್ರ ಗರಂ ಹಲವಾರು ರಾಷ್ಟ್ರೀಯ - ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದರೆ, ಕನ್ನಡದ 'ಬರ' ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿತ್ತು.

ಕಲಾ ನಿರ್ದೇಶಕರಾಗಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರವಾದ ಹಕೀಕತ್ 'ಫಿಲ್ಮ್ ಫೇರ್ ಪ್ರಶಸ್ತಿ'ಯನ್ನು ಪಡೆದಿತ್ತು. ದಾರಾಶೀಕೋ ನಾಟಕವು ಆಧುನಿಕ ಉತ್ಕೃಷ್ಟ ನಾಟಕವೆಂದು ಗುರುತಿಸಲ್ಪಟ್ಟಿದ್ದು ಅವರ ಇನ್ನೊಂದು ಸಾಧನೆಯಾಗಿದೆ.

"ನಮ್ಮೂರಿನಲ್ಲಿ ಹುಟ್ಟಿದ ಮೇರು ಸಾಧಕ, ಹಿರಿಯ ರಂಗಕರ್ಮಿಯೊಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಎಂಎಸ್‌ ಸತ್ಯು ಪರಿಚಯ

ಇವರ ಪೂರ್ಣ ಹೆಸರು ಮೈಸೂರು ಶ್ರೀನಿವಾಸ್‌ ಸತ್ಯು. ಜುಲೈ 6, 1930ರಂದು ಜನಿಸಿದ ಇವರು ಭಾರತದ ಸಿನಿಮಾ ನಿರ್ದೇಶಕ, ನಾಟಕಕಾರ, ಕಲಾ ನಿರ್ದೇಶಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಹರ್ಮ್‌ ಹವಾ (1973) ಎಂಬ ಇವರ ಸಿನಿಮಾವು ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಭಾರತದ ವಿಭಜನೆ ಕುರಿತ ವಿಷಯವನ್ನು ಇದು ಹೊಂದಿತ್ತು. 1975ರಲ್ಲಿ ಎಂಎಸ್‌ ಸತ್ಯು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸತ್ಯು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ಆರಂಭಿಕ ಶಿಕ್ಷಣವನ್ನೂ ಮೈಸೂರಿನಲ್ಲೇ ಪಡೆದರು. ಬೆಂಗಳೂರಿನಲ್ಲಿ ಬ್ಯಾಚುಲರ್‌ ಆಫ್‌ ಸೈನ್ಸ್‌ ಡಿಗ್ರಿ ಓದಿದರು. ಶಮಾ ಝೈದಿ ಹೆಸರಿನ ಉತ್ತರ ಭಾರತದ ಶಿಯಾ ಮುಸ್ಲಿಂ ಮಹಿಳೆಯನ್ನು ಸತ್ಯು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

1952ರಿಂದ 53ರವೆಗೆ ಅನಿಮೇಟರ್‌ ಆಗಿ ಫ್ರೀಲ್ಯಾನ್ಸ್‌ ಕೆಲಸ ಮಾಡಿದರು. ನಾಲ್ಕು ವರ್ಷ ಕೆಲಸ ಇಲ್ಲದೆ ಇದ್ದ ಇವರಿಗೆ ಚೇತನ್‌ ಆನಂದ್‌ ನಿರ್ದೇಶಕರು ಅಸಿಸ್ಟೆಂಟ್‌ ಡೈರೆಕ್ಟರ್‌ ಎಂಬ ವೇತನ ಇರುವ ಉದ್ಯೋಗ ನೀಡಿದರು. ಹಿಂದೂಸ್ತಾನಿ ಥಿಯೇಟರ್‌, ಓಕ್ಲಾ ಥಿಯೇಟರ್‌, ಕನ್ನಡ ಭಾರತಿ ಮುಂತಾದ ಕಡೆ ಕೆಲಸ ಮಾಡಿದರು. ಕಲಾ ನಿರ್ದೇಶಕ, ಕ್ಯಾಮೆರಾಮ್ಯಾನ್‌, ಬರಹಗಾರ, ನಿರ್ಮಾಪಕ, ನಿರ್ದೇಶಕ ಹೀಗೆ ಹಲವು ಕೆಲಸ ಮಾಡಿದರು. ಕಲಾ ನಿರ್ದೇಶಕರಾಗಿ ಹಕೀಕತ್‌ ಎಂಬ ಸಿನಿಮಾ ಹೊರತಂದರು. 1965ರಲ್ಲಿ ಈ ಸಿನಿಮಾಕ್ಕೆ ಅತ್ಯುತ್ತಮ ಕಲಾ ನಿರ್ದೇಶಕ ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿತ್ತು. ಇವರು 15 ಡಾಕ್ಯುಮೆಂಟರಿ, 8 ಫೀಚರ್‌ ಫಿಲ್ಮ್‌ಗಳನ್ನು ಹಿಂದಿ, ಉರ್ದು ಮತ್ತು ಕನ್ನಡದಲ್ಲಿ ಹೊರತಂದಿದ್ದಾರೆ.

ಗರ್ಮ್‌ ಹವಾ ಸಿನಿಮಾ ಇವರಿಗೆ ಸಾಕಷ್ಟು ಹೆಸರುತಂದುಕೊಟ್ಟಿತ್ತು. ಇದಕ್ಕೆ ಹಲವು ಪ್ರಶಸ್ತಿಗಳು ದೊರಕಿವೆ. ಇದು ಆಸ್ಕರ್‌ಗೆ ಪ್ರವೇಶವನ್ನೂ ಪಡೆದಿತ್ತು. ಸ್ಕ್ರೀನ್‌ಪ್ಲೇ ವಿಷಯದಲ್ಲಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿತ್ತು. ಟೆಲಿವಿಷನ್‌ ಮತ್ತು ನಾಟಕ ಕ್ಷೇತ್ರದಲ್ಲಿ ಎಂಎಸ್‌ ಸತ್ಯು ಸಾಕಷ್ಟು ಸಾಧನೆ ಮಾಡಿದ್ದಾರೆ. ಗೂಗಲ್‌ ರಿಯೂನಿಯನ್‌ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ವಿಭಜನೆಗೆ ಸಂದರ್ಭದ ರಿಯೂನಿಯನ್‌ ಜಾಹೀರಾತು ಸಾಕಷ್ಟು ವೈರಲ್‌ ಆಗಿತ್ತು. ಗುಲ್‌ ಇ ಬಕವಾಲಿ ಎಂಬ ಸಂಗೀತ ನಾಟಕವನ್ನೂ ನಿರ್ದೇಶನ ಮಾಡಿದ್ದಾರೆ. ದರ ಶಿಖೋ, ಅಮಿತಾ, ಬಕ್ರಿ, ಕುರಿ, ಅಕ್ರಿ ಶರ್ಮಾ ಮುಂತಾದ ನಾಟಕ ನಿರ್ದೇಶನ ಮಾಡಿದ್ದಾರೆ. 2014ರಲ್ಲಿ ಗರ್ಮ್‌ ಹವಾ ಸಿನಿಮಾ ಮರುಬಿಡುಗಡೆಗೊಂಡಿತ್ತು.

ಎಂಎಸ್‌ ಸತ್ಯು ಪಡೆದ ಪ್ರಶಸ್ತಿಗಳು

1965ರಲ್ಲಿ ಅತ್ಯುತ್ತಮ ಕಲಾ ನಿರ್ದೇಶಕ- ಫಿಲ್ಮ್‌ಫೇರ್‌ ಅವಾರ್ಡ್‌, ಸಿನಿಮಾ ಹಕೀಕತ್‌. ಗರ್ಮ್‌ ಹವಾ ಸಿನಿಮಾವು ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಗೋಲ್ಡನ್‌ ಪಾಮ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಇದಲ್ಲದೆ ಹಲವು ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌, ಫಿಲ್ಮ್‌ಫೇರ್‌ ಅವಾರ್ಡ್‌ ಪಡೆದಿದ್ದಾರೆ. ಕನ್ನಡದ ಬರ ಸಿನಿಮಾಕ್ಕೆ ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿದೆ. ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. 1975ರಲ್ಲಿ ಎಂಎಸ್‌ ಸತ್ಯು ಅವರು ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

IPL_Entry_Point