ದರ್ಶನ್ ಅತ್ಯಾಚಾರ ಆರೋಪಿ ಎಂದ ಬಿಜೆಪಿ ನಾಯಕಿ ರೇಖಾ ಶರ್ಮಾ; ಆತ ಕೊಲೆ ಆರೋಪಿ ಅಂದ್ರೂ ಡೋಂಟ್‌ಕೇರ್
Kannada actor Darshan: ನಟ ದರ್ಶನ್ ಕುರಿತು ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ರೇಖಾ ಶರ್ಮಾ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ದರ್ಶನ್‌ರನ್ನು ಟ್ವೀಟ್‌ನಲ್ಲಿ ಅತ್ಯಾಚಾರ ಆರೋಪಿ ಎಂದು ಇವರು ಕರೆದಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಕುರಿತು ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ರೇಖಾ ಶರ್ಮಾ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಅವರು ತನ್ನ ಟ್ವೀಟ್‌ನಲ್ಲಿ ದರ್ಶನ್‌ನನ್ನು ಅತ್ಯಾಚಾರಿ ಎಂದು ಉಲ್ಲೇಖಿಸಿದ್ದಾರೆ. ಈ ಕುರಿತು ಕಾಮೆಂಟ್‌ನಲ್ಲಿ ಸಾಕಷ್ಟು ಜನರು "ಮೇಡಂ ದರ್ಶನ್ ಕೊಲೆ ಆರೋಪಿ, ಅತ್ಯಾಚಾರ ಆರೋಪಿಯಲ್ಲ" ಎಂದು ಎರಡು ದಿನದಿಂದ ಎಚ್ಚರಿಸುತ್ತಿದ್ದರೂ ರೇಖಾ ಶರ್ಮಾ ಅವರು ಟ್ವೀಟ್ ಅನ್ನು ಅಳಿಸುವುದಾಗಲಿ, ಎಡಿಟ್ ಮಾಡುವುದಾಗಲಿ ಮಾಡಿಲ್ಲ. ಎಡಿಟ್ ಮಾಡಲು ಟ್ವೀಟರ್ ಪ್ರೀಮಿಯಂ ಖರೀದಿಸಬೇಕು. ಟ್ವೀಟರ್ ಪ್ರೀಮಿಯಂ ಖಾತೆ ಇಲ್ಲದೆ ಇದ್ದರೆ ತಪ್ಪಾಗಿ ಬರೆದ ಟ್ವೀಟ್ ಅನ್ನು ಅಳಿಸುವುದೊಂದೇ ದಾರಿ.
ರೇಖಾ ಶರ್ಮಾ ಟ್ವೀಟ್‌ನಲ್ಲಿ ಏನಿದೆ?
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ದೊರಕುತ್ತಿದೆ ಎಂಬ ವಿಚಾರ ರಾಷ್ಟ್ರೀಯ ಮಟ್ಟದ ಸುದ್ದಿಯಾದ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಟೀಕಿಸುವ ಭರದಲ್ಲಿ ಯಡವೊಟ್ಟೊಂದನ್ನು ಮಾಡಿದ್ದಾರೆ. ನಟ ದರ್ಶನ್‌ರನ್ನು ಕೊಲೆ ಆರೋಪಿ ಎನ್ನುವ ಬದಲು ಅತ್ಯಾಚಾರ ಆರೋಪಿ ಎಂದು ಎಕ್ಸ್ ಖಾತೆಯಲ್ಲಿ ನಮೂದಿಸಿದ್ದಾರೆ. ರೇಖಾ ಶರ್ಮಾ ಅವರು ಅವಸರದಲ್ಲಿ ಟ್ವೀಟ್ ಮಾಡಿದಂತೆ ಇದೆ. ಈ ಟ್ವೀಟ್‌ನಲ್ಲಿ ದರ್ಶನ್‌ರನ್ನು ಕೊಲೆ ಆರೋಪಿ ಮತ್ತು ಅತ್ಯಾಚಾರ ಆರೋಪಿ ಎಂದು ಹೇಳಿದ್ದಾರೆ.
"ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅತ್ಯಾಚಾರ ಆರೋಪಿ ಕನ್ನಡ ನಟ ದರ್ಶನ್ ತೂಗುದೀಪ ಅವರಿಗೆ ವಿಶೇಷ ರಾಜಾತಿಥ್ಯ ದೊರಕುತ್ತಿದೆ. ಈ ಕುರಿತು ಕೇಂದ್ರ ಕಾಂಗ್ರೆಸ್ ಮತ್ತು ರಾಜ್ಯ ಕಾಂಗ್ರೆಸ್‌ಗೆ ಟ್ಯಾಗ್ ಮಾಡಿದ್ದರು. ಈ ಕುರಿತು ಏನು ಹೇಳುವಿರಿ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೂ ಟ್ಯಾಗ್ ಮಾಡಿದ್ದರು.
ಅತ್ಯಾಚಾರಿ ಅಲ್ಲ ಕೊಲೆ ಆರೋಪಿ
ಈ ಟ್ವೀಟ್‌ಗೆ ಸಾಕಷ್ಟು ಜನರು "ಆತ ರೇ@ ಆರೋಪಿ ಅಲ್ಲ, ಅತ್ಯಾಚಾರ ಆರೋಪಿ" ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ, ರೇಖಾ ಶರ್ಮಾ ಅವರು ಯಾವುದೇ ಬದಲಾವಣೆ ಮಾಡಿಲ್ಲ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ನಟ ದರ್ಶನ್ ಹಲವು ವರ್ಷಗಳ ಹಿಂದೆ ತನ್ನ ಪತ್ನಿ ವಿಜಯಲಕ್ಷ್ಮಿಗೆ ಹಲ್ಲೆ ನಡೆಸಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಾದ ಬಳಿಕ ಪವಿತ್ರಾ ಗೌಡ ಜತೆಗೆ ಅಕ್ರಮ ಸಂಬಂಧದ ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಈ ಘಟನೆಗಳನ್ನು ಹೊರತುಪಡಿಸಿ ಮಹಿಳೆಯರ ವಿರುದ್ಧ ಕೆಟ್ಟದ್ದಾಗಿ ಎಂದಿಗೂ ದರ್ಶನ್ ನಡೆದುಕೊಂಡಿಲ್ಲ. ತನ್ನ ಸಿನಿಮಾ ಅಥವಾ ವಿವಿಧ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಮಹಿಳೆಯರನ್ನು ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಹೀಗಿರುವಾಗ ಇವರನ್ನು ಅತ್ಯಾಚಾರ ಆರೋಪಿ ಎಂದು ಕರೆಸಿಕೊಂಡಿರುವುದಕ್ಕೆ ಡಿಬಾಸ್ ಅಭಿಮಾನಿಗಳು ಖೇದ ವ್ಯಕ್ತಪಡಿಸಿದ್ದಾರೆ.