Blink Movie: ಚೈತ್ರಾ ಆಚಾರ್ ಕರಿಮಣಿ ಮಾಲೀಕ ಯಾರು? ಸ್ಟಾಂಡಪ್ ಕಾಮಿಡಿಯನ್ ಕಾರ್ತಿಕ್ ಪತ್ತಾರ್ ಜತೆ ಬ್ಲಿಂಕ್ ಬ್ಯೂಟಿ
ಮಾರ್ಚ್ 8ರಂದು ಬ್ಲಿಂಕ್ ಕನ್ನಡ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಚಿತ್ರದ ನಾಯಕಿ ಚೈತ್ರಾ ಜೆ ಆಚಾರ್ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ಕಾರ್ತಿಕ್ ಪತ್ತಾರ್ ಜತೆ ಚರ್ಚಿಸಿದ್ದಾರೆ. ಸಿನಿಮಾ ವಿಷಯ ಮಾತ್ರವಲ್ಲದೆ ಇವರಿಬ್ಬರ ಒಂದಿಷ್ಟು ತಲೆಹರಟೆ ಮಾತುಗಳು ಇವೆ.
ಈ ಶುಕ್ರವಾರ ಅಂದರೆ ಮಾರ್ಚ್ 8ರಂದು ಹಲವು ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ಬ್ಲಿಂಕ್ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ವಿನೂತನ ಎಕ್ಸ್‌ಪಿರಿಮಿಂಟ್ ಸಬ್ಜೆಕ್ಟ್‌ನಿಂದ ಎಲ್ಲರ ಗಮನ ಸೆಳೆದಿದೆ. ಲೂಸಿಯಾ ಸಿನಿಮಾದಂತೆ ಬ್ಲಿಂಕ್ ಕೂಡ ಭಿನ್ನ ಕಥಾ ಹಂದರ ಹೊಂದಿರುವಂತೆ ಕಾಣಿಸುತ್ತದೆ. ಈ ಸಿನಿಮಾದ ಕುರಿತು ಕಾರ್ತಿಕ್ ಪತ್ತಾರ್ ಜತೆ ಚೈತ್ರಾ ಜೆ ಆಚಾರ್ ಮಾತನಾಡಿದ್ದಾರೆ. ಬೆಂಗಳೂರು ನಗರದಲ್ಲಿ ಚಲಿಸುವ ರಿಕ್ಷಾದಲ್ಲಿ ಈ ಇಂಟರ್‌ವ್ಯೂ ನಡೆದಿದೆ.
ಕಾರ್ತಿಕ್ ಪತ್ತಾರ್ ಜತೆ ಚೈತ್ರಾ ಜೆ ಆಚಾರ್
ಕಾರ್ತಿಕ್ ಪತ್ತಾರ್ ಇದ್ರೆ ಅಲ್ಲಿ ನಗು ಇರೋದು ಸಹಜ. ಈ ಸಂದರ್ಶನದಲ್ಲೂ ಅಲ್ಲಲ್ಲಿ ನಗು ತರಿಸೋ ಸಂಗತಿಗಳು ಸಾಕಷ್ಟಿವೆ. ಮೊದಲಿಗೆ ಕಾರ್ತಿಕ್ ಪತ್ತಾರ್ ಅವರು "ಚೈತ್ರಾ ಶೆಟ್ಟಿ" ಎಂದು ಕರೆದಾಗ "ನಾನು ಚೈತ್ರಾ ಆಚಾರ್" ಅಂತ ಎಂದು ನಟಿ ಸರಿಪಡಿಸುತ್ತಾರೆ. ಬ್ಲಿಂಕ್ ಸಿನಿಮಾ ಈ ಮಾರ್ಚ್ 8ಕ್ಕೆ ಬಿಡುಗಡೆಯಾಗುತ್ತಿದೆ ಎಂದು ಚೈತ್ರಾ ಹೇಳುತ್ತಾರೆ. "ಪಕ್ಕಾ ರಿಲೀಸಾ? ಹೋದ ವರ್ಷ ಮಾರ್ಚ್‌ಗೆ ರಿಲೀಸ್ ಅಂದ್ಕೊಂಡೆ" ಎಂದು ಕಾರ್ತಿಕ್ ಹೇಳುತ್ತಾರೆ. "ನಾನು ನಿಮ್ಮನ್ನು ಆಟೋಕ್ಕೆ ಕರೆದಿಲ್ಲ. ನೀವೇ ಹತ್ಕೊಂಡ್ರಿ" ಎಂದು ಹೇಳುತ್ತ ಇವರ ಆಟೋದೊಳಗಿನ ಸಂದರ್ಶನ ನಡೆಯುತ್ತದೆ. ನಟಿಯ ಪರಿಚಯದ ಸಂದರ್ಭದಲ್ಲೂ ಕಾರ್ತಿಕ್ ಹಲವು ಸುಳ್ಳು ಹೇಳುತ್ತಾರೆ.
"ನಮ್ಮ ಜತೆ ಚೈತ್ರಾ ಶೆಟ್ಟಿ ನಮ್ಮ ಜತೆಗಿದ್ದಾರೆ" "ನಾನು ಚೈತ್ರಾ ಆಚಾರ್ ಅಂತ" "ಹೌದು ರೀ ನಾನು ನಿಮ್ಮ ಹಲವು ಸಿನಿಮಾ ನೋಡಿದ್ದೀನಿ, ಕಾಟೇರದಲ್ಲಿ ಮಸ್ತ್ ಆಗಿ ಆಕ್ಟ್ ಮಾಡಿದ್ದೀರಿ" "ಕಾಟೇರದಲ್ಲಿ ನಾನು ಇದ್ನ" "ಕಾಟೇರದಲ್ಲಿ ನೀವು ಮಾಡಿಲ್ವ, ನೋಡಿದಾಂಗೆ ಇತ್ತು" "ರೀಸೆಂಟಾಗಿ ನಾನು ಮಾಡಿದ್ದು ಸಪ್ತ ಸಾಗರದಾಚೆ ಸೈಡ್ ಬಿ" " ಅದು ರಕ್ಷಿತ್ ಶೆಟ್ಟಿಯವರದ್ದು ಅಲ್ವ ಸಿನಿಮಾ?" "ರಕ್ಷಿತ್ ಶೆಟ್ಟಿ ಇದ್ರು, ರುಕ್ಮಿಣಿ ಇದ್ರು, ನಾನು ಇದ್ದೆ" "ನೀವು ಸಪ್ತ ಸಾಗರದಾಚೆ ನೋಡಿದ್ರ" "ನೋಡಿದ್ದೀನಿ" "ಐ ಲವ್ ಯು ಮನು ಅಂತ ಹೇಳೋದು ಅಲ್ವ" "ಸೆಕೆಂಡ್ ಹಾಫ್ ನೋಡಿದ್ರ" ಹೀಗೆ ಇವರ ತಮಾಷೆಯ ಚಾಟಿಂಗ್ ನಡೆಯುತ್ತದೆ.
ಚೈತ್ರಾ ಜೆ ಆಚಾರ್ ಕರಿಮಣಿ ಮಾಲೀಕ ಯಾರು?
ಕೊನೆಗೆ ಚೈತ್ರಾ ಜೆ ಆಚಾರ್ ಮದುವೆ ಕುರಿತು ಕಾರ್ತಿಕ್ ಪ್ರಶ್ನಿಸುತ್ತಾರೆ. "ನನಗಿನ್ನೂ 23 ವರ್ಷ. 30 ವರ್ಷ ಆದ ಮೇಲೆ ನೋಡೋಣ" ಎನ್ನುತ್ತಾರೆ. ಈ ಕುರಿತು ಒಂದಿಷ್ಟು ಮಾತುಕತೆ ನಡೆಯುತ್ತದೆ. ಈ ಯೂಟ್ಯೂಬ್ ವಿಡಿಯೋಗೆ ಚೈತ್ರಾ ಜೆ ಆಚಾರ್ ಕರಿಮಣಿ ಮಾಲೀಕ ಯಾರು ಎಂದೇ ಥಂಬ್‌ನೆಲ್ ಮಾಡ್ತೇನೆ ಎಂದು ಕಾರ್ತಿಕ್ ಹೇಳುತ್ತಾರೆ. ಒಂದಿಷ್ಟು ತಮಾಷೆ ಮಾತುಗಳು ಮುಂದುವರೆಯುತ್ತವೆ.
ಬ್ಲಿಂಕ್ ಸಿನಿಮಾದ ವಿವರ
ಬ್ಲಿಂಕ್ ಅಂತ ಚಿತ್ರದ ಹೆಸರು ಯಾಕೆ ಇಟ್ಟಿದ್ದಾರೆ? ಎಂದು ಕಾರ್ತಿಕ್ ಕೇಳುತ್ತಾರೆ. "ಇದು ಥ್ರಿಲ್ಲರ್ ಸಿನಿಮಾ. ದೀಕ್ಷಿತ್ ಶೆಟ್ಟಿ ಇದ್ದಾರೆ. ಅವರು ಶೆಟ್ಟಿ ನಾನು ಆಚಾರ್. ಸೈನ್ಸ್ ಫಿಕ್ಷನ್ ಕಥೆಯೂ ಇದೆ. ಮ್ಯೂಸಿಕಲ್ ಆಗಿ ಥ್ರಿಲ್ಲರ್ ಸಿನಿಮಾ ಇದು" ಎಂದು ಚೈತ್ರಾ ಹೇಳುತ್ತಾರೆ. ಇದ್ಯಾವ ಕಾಂಬಿನೇಷನ್ ಎಂದೆಲ್ಲ ಚರ್ಚೆ ನಡೆಯುತ್ತದೆ. ಮ್ಯೂಸಿಕ್, ಸೈನ್ಸ್ ಥ್ರಿಲ್ಲರ್, "ಮಿಕ್ಸ್ ಪ್ಯಾಕೇಜ್ಡ್ ಸಿನಿಮಾ" ಎನ್ನುತ್ತಾರೆ. ಇದಾದ ಬಳಿಕ ನೀವು ಏನು ಓದಿದ್ದೀರಿ ಎಂದು ಕೇಳಿದಾಗ ಚೈತ್ರಾ "ಎಂಜಿನಿಯರ್" ಅನ್ನುತ್ತಾರೆ. ಕಾರ್ತಿಕ್ ಕೂಡ "ನಾನೂ ಎಂಜಿನಿಯರ್" ಅಂತಾರೆ. ಆಟೋ ಚಾಲಕ ಕೂಡ "ನಾನು ಎಂಜಿನಿಯರಿಂಗ್" ಅನ್ತಾರೆ. ಹೀಗೆ ಲವಲವಿಕೆಯಿಂದ ಇವರ ಮಾತುಕತೆ ನಡೆಯುತ್ತಿದೆ. ಆಸಕ್ತರು ಈ ಕೆಳಗೆ ನೀಡಲಾದ ವಿಡಿಯೋ ಮೂಲಕ ಈ ಸಂದರ್ಶನ ವೀಕ್ಷಿಸಬಹುದು.
ಬ್ಲಿಂಕ್ ಸಿನಿಮಾದ ಟ್ರೇಲರ್ ವೀಕ್ಷಿಸಿ
ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬರುತ್ತಿರುವ 'ಬ್ಲಿಂಕ್', ಕನ್ನಡದಲ್ಲಿ ಒಂದು ಹೊಸ ಶೈಲಿಯ ಸಿನಿಮಾವಾಗಿದೆ. ವಿನೂತನ ಚಿತ್ರಕಥೆಯ ಈ ಚಿತ್ರ ಕನ್ನಡದ ಮಟ್ಟಿಗೆ ಹೊಸ ಪ್ರಯೋಗ ಎನ್ನಲಾಗುತ್ತಿದೆ.. ಬ್ಲಿಂಕ್ ಸಿನಿಮಾಗೆ ರವಿಚಂದ್ರ ಎಜೆ ಬಂಡವಾಳ ಹೂಡಿದ್ದು, ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಅವನ ಸುತ್ತ ಮುತ್ತಲಿನ ವಾತಾವರಣವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ. ಸೈಂಟಿಫಿಕ್ ಫಿಕ್ಷನ್ ಶೈಲಿಯಲ್ಲಿ ಮೂಡಿ ಬರುತ್ತಿರುವ 'ಬ್ಲಿಂಕ್' ಚಿತ್ರಕ್ಕೆ ನಾಯಕನಾಗಿ ದಿಯಾ ಹಾಗೂ ತೆಲುಗಿನ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ಇದ್ದಾರೆ. ಇವರೊಂದಿಗೆ ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರಕ್ಕೆ ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗಿರ್ದಾರ್ ಸಂಕಲನ, ಪ್ರಸನ್ನ ಕುಮಾರ್ ಸಂಗೀತವಿದೆ.