ಕನ್ನಡ ಸುದ್ದಿ  /  ಮನರಂಜನೆ  /  ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

ಬ್ಲಿಂಕ್‌ ಕನ್ನಡ ಸಿನಿಮಾ ನಿರ್ದೇಶಕ ಶ್ರೀನಿಧಿಯವರು ಕನ್ನಡಕ್ಕೆ ಒಬ್ಬರು “ಕ್ರಿಸ್ಟೋಫರ್ ನೋಲನ್”ನಂತೆ ಸಿಕ್ಕಿದ್ದಾರೆ. ನೋಲನ್ ಅವರ ಇನ್ ಸೆಪ್ಷನ್ ಸೇರಿದಂತೆ ಇತರ ಸೈ-ಫೈ ಸಿನಿಮಾ ನೋಡಿದವರಿಗೆ ಬ್ಲಿಂಕ್ ಯಾಕೆ ಮುಖ್ಯ ಎಂಬುದು ಹೆಚ್ಚು ಅರ್ಥವಾಗುತ್ತದೆ. (ಬರಹ: ಶ್ರೀನಿವಾಸ ಮಠ)

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್
ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್

ಈ ‘ಬ್ಲಿಂಕ್” ಸಿನಿಮಾವನ್ನ ಯಾಕಿಷ್ಟು ಹೊಗಳ್ತಾರೆ ಅನ್ನೋ ಪ್ರಶ್ನೆ ಇರುವವರಿಗೆ ಆ ಸಿನಿಮಾವನ್ನು ನೋಡಿದ ಮೇಲೆ ಖಂಡಿತಾ ಆ ಪ್ರಶ್ನೆಯನ್ನೇ ಕೇಳಿಕೊಳ್ಳಬಾರದಿತ್ತು ಅನಿಸುತ್ತದೆ. ಯಾಕೆಂದರೆ ನಿರ್ದೇಶನ- ಕಥೆ- ಚಿತ್ರಕತೆ ಇದೆಲ್ಲವನ್ನೂ ಮಾಡಿರುವ ಶ್ರೀನಿಧಿ ಬೆಂಗಳೂರು ಪ್ರತಿ ಕನ್ನಡ ಸಿನಿಮಾಭಿಮಾನಿಯು ಹೆಮ್ಮೆ ಪಡುವಂಥದ್ದನ್ನು ತೆರೆ ಮೇಲೆ ತಂದಿದ್ದಾರೆ. ಅದರ ಜೊತೆಗೆ ಎಡಿಟಿಂಗ್ ಮಾಡಿರುವ ಸಂಜೀವ್ ಜಾಗೀರ್‌ದಾರ್ ಬಗ್ಗೆಯೇ ಎಷ್ಟು ಬರೆಯಬೇಕು ಅಂದರೆ, ಈ ಸಿನಿಮಾದ ಎಡಿಟಿಂಗ್ ಹೇಗೆ ಮಾಡಿದರು ಎಂಬ ಬಗ್ಗೆ ಒಂದು ಪುಸ್ತಕ ಅಥವಾ ಡಾಕ್ಯುಮೆಂಟರಿ ತಂದರೆ ತುಂಬ ಒಳ್ಳೆಯದು. ಇನ್ನು ಸಂಗೀತದ ಜವಾಬ್ದಾರಿ ವಹಿಸಿಕೊಂಡಿರುವ ಪ್ರಸನ್ನಕುಮಾರ್ ಎಂ.ಎಸ್. ಕೂಡ ಅದ್ಭುತವನ್ನೇ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕನ್ನಡದಲ್ಲಿ ಸೈ-ಫೈ (ಸೈನ್ಸ್ ಫಿಕ್ಷನ್) ಬರುವುದು ಅಪರೂಪದಲ್ಲಿ ಅಪರೂಪ. ಹಾಗೆ ಬಂದರೂ ಅಯ್ಯೋ ಜನರಿಗೆ ಅರ್ಥವಾಗುವ ಹಾಗೆ ಮಾಡಿರಿ ಎಂಬುದು ಸಹಜವಾಗಿಯೇ ನಿರ್ಮಾಪಕರ ಮೊದಲ ಕಂಡೀಷನ್ ಆಗಿರುತ್ತೆ. ಆದರೆ ಈ ಚಿತ್ರದ ನಿರ್ಮಾಪಕರಾದ ಎಜೆ ರವಿಚಂದ್ರ ಎಂಟೆದೆ ನಿರ್ಮಾಪಕರು. ಇದು ಹೊಸಬರ ಸಿನಿಮಾಗೆ ಹಣ ಹೂಡಿದ್ದಾರೆ, ಬಹಳ ಕ್ಲಿಷ್ಟವಾದ ಸಬ್ಜೆಕ್ಟ್ ಒಪ್ಪಿಕೊಂಡಿದ್ದಾರೆ ಅಂತ ಮಾತ್ರ ಅಲ್ಲ. ಇಡೀ ಸಿನಿಮಾದಲ್ಲಿ ಒಂದು ಅಭಿರುಚಿ ಇದೆ. ಸಾಹಿತ್ಯವು ಈ ಸಿನಿಮಾದಲ್ಲಿ ತುಂಬ ಮುಖ್ಯಪಾತ್ರ ವಹಿಸುತ್ತದೆ. ಜತೆಗೆ ಈ ಸಿನಿಮಾದಲ್ಲಿ ಪದೇಪದೇ ಹಿನ್ನೆಲೆಯಲ್ಲಿ ಬರುವಂಥ ಸಿನಿಮಾ ಪೋಸ್ಟರ್ ಗಳನ್ನು ಸಹ ಸೂಕ್ಷ್ಮವಾಗಿ ಗಮನಿಸಿ, ಅದೇ ರೀತಿ ನಾಟಕದಲ್ಲಿನ ಡೈಲಾಗ್ ಗಳು, ಆರಂಭದಲ್ಲಿಯೇ ಬರುವಂಥ ಪಿ. ಲಂಕೇಶ್ ಅವರ ಆಕಾಶವಾಣಿ ಇಂಟರ್ ವ್ಯೂ… ಹೀಗೆ ಇಲ್ಲಿ ಎಲ್ಲವೂ ಸಿನಿಮಾದ ಕಥೆಯನ್ನು ತುಂಬ ಗಟ್ಟಿಯಾಗಿ ನೋಡುಗನಿಗೆ ಆವರಿಸಿಕೊಳ್ಳುತ್ತದೆ.

ಈ ಶ್ರೀನಿಧಿ ಮತ್ತು ತಂಡದವರು ಈ ಸಿನಿಮಾದ ಕಥೆ ಹೇಗೆ ಮಾಡಿದರು, ಇದರ ಒನ್ ಲೈನ್ ಹೇಗೆ ಮಾಡಿಕೊಂಡರು, ಇನ್ನೂ ಮುಂದುವರಿದು ಈ ಕಥೆಯನ್ನು ನಿರ್ಮಾಪಕರಿಗೆ ಹೇಗೆ ಹೇಳಿ, ಅರ್ಥ ಮಾಡಿಸಿದರು ಇವೆಲ್ಲ ಪ್ರಶ್ನೆಗಳನ್ನು ಸಿನಿಮಾ ನೋಡಿದ ಮೇಲೆ ಕೇಳಬೇಕು ಅನಿಸುತ್ತದೆ. ಆದರೆ ಶ್ರೀನಿಧಿ ಅವರನ್ನು ಕೇಳುವುದು ಹೇಗೆ? ನೀವು ಆ ಸಿನಿಮಾವನ್ನು ಎಲ್ಲಿ ನೋಡಿದಿರಿ ಎಂದು ಕೇಳಿದರೆ, ಅಮೆಜಾನ್ ಪ್ರೈಮ್ ನಲ್ಲಿ ಅಂತ ಹೇಳುವುದಕ್ಕೆ ನಾಚಿಕೆ- ಸಂಕೋಚ ಆಗುತ್ತದೆ.

ಟೈಮ್ ಟ್ರಾವೆಲ್ ಕಥೆಯನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ. ಆದರೆ ಚಿತ್ರಕತೆ ಹಾಗೂ ಅದನ್ನು ಹೇಳಿರುವ ವಿಧಾನ ಹಾಗೂ ಪಾತ್ರಗಳ ಆಯ್ಕೆ ಹಾಗೂ ಅವರೆಲ್ಲರಿಂದ ಅಭಿನಯ ತೆಗೆಸಿರುವ ರೀತಿ ಗಮನಿಸಿದರೆ, ಈಗ ಆಗಿರುವ ಬೆಳವಣಿಗೆಯಿಂದ ಇಡೀ ತಂಡಕ್ಕೆ ಎಂಥ ದುಃಖ (ಸ್ವಲ್ಪ ಸಮಾಧಾನವೂ ಆಗಬಹುದು) ಆಗುತ್ತದೆ ಎಂಬುದನ್ನು ಗ್ರಹಿಸಬಹುದು.

ನಿರ್ದೇಶಕ ಸಿಂಪಲ್ ಸುನಿ ಅವರ ಒಂದು ಸರಳ ಪ್ರೇಮಕಥೆ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಹೇಳಿದ್ದರು, ನಮ್ಮ ಸಿನಿಮಾ ನೋಡದಿದ್ದರೂ ಪರವಾಗಿಲ್ಲ, ಬ್ಲಿಂಕ್ ನೋಡಿ ಅಂತ. ಈ ಮನುಷ್ಯನಿಗೆ ಏನಾಗಿದೆ, ಯಾಕೆ ಹೀಗೆ ಹೇಳ್ತಾರೆ ಅನಿಸಿತ್ತು. ಆದರೆ ಈಗ ಗೊತ್ತಾಗುತ್ತದೆ ಸಿಂಪಲ್ ಸುನಿ ಅವರಂಥವರು ಈ ಬ್ಲಿಂಕ್ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ.

ಶ್ರೀನಿಧಿಯವರು ಕನ್ನಡಕ್ಕೆ ಒಬ್ಬರು “ಕ್ರಿಸ್ಟೋಫರ್ ನೋಲನ್”ನಂತೆ ಸಿಕ್ಕಿದ್ದಾರೆ. ನೋಲನ್ ಅವರ ಇನ್ ಸೆಪ್ಷನ್ ಸೇರಿದಂತೆ ಇತರ ಸೈ-ಫೈ ಸಿನಿಮಾ ನೋಡಿದವರಿಗೆ ಬ್ಲಿಂಕ್ ಯಾಕೆ ಮುಖ್ಯ ಎಂಬುದು ಹೆಚ್ಚು ಅರ್ಥವಾಗುತ್ತದೆ. ನಾವೆಲ್ಲರೂ ಟೈಮ್ ಟ್ರಾವೆಲರ್ ಗಳಾಗಿ ಮತ್ತೊಮ್ಮೆ ವಾಪಸ್ ಹೋಗಿ ಬ್ಲಿಂಕ್ ಗೆಲ್ಲಿಸಿಕೊಂಡರೆ ಚೆನ್ನಾಗಿರುತ್ತೆ. ಆದರೆ ಅದೇ ಸಮಯಕ್ಕೆ ಅನ್ನಿಸೋದು, ಹೌದು, ಆಗಿದ್ದು ಆಗಿಹೋಯಿತು. ಈಗಿನ ಸ್ಥಿತಿಯಲ್ಲಿ ಆ ಸಿನಿಮಾಗೆ ಹೇಗೆ ಜತೆಯಾಗಿ ನಾವು ನಿಲ್ಲುವುದಕ್ಕೆ ಸಾಧ್ಯ ಅನ್ನೋದು ಸಹ ಯೋಚನೆ ಮಾಡಬಹುದು ಅಲ್ಲವಾ?

ಇಲ್ಲಿ ಯಾವ ನಟ- ನಟಿಯರ ಹೆಸರನ್ನೂ ತೆಗೆದುಕೊಂಡಿಲ್ಲ. ಉದ್ದೇಶ ಇಷ್ಟೇ, ಈ ಸಿನಿಮಾ ಬಗ್ಗೆ ಇನ್ನು ನಾಲ್ಕೈದು ಲೇಖನವಾದರೂ ಪ್ರಕಟವಾಗಬೇಕು. ಬ್ಲಿಂಕ್ ಸಿನಿಮಾವನ್ನು ನಾವೆಲ್ಲರೂ ಸಂಭ್ರಮಿಸಬೇಕು. ಇನ್ನು ಬ್ಲಿಂಕ್ ನ ಸಿನಿಮಾಟೋಗ್ರಫಿ ಅವಿನಾಶ ಶಾಸ್ತ್ರಿ ಅವರದು. ಅವರಿಗೂ ಒಂದು ಸಲಾಂ.

ಕೊನೆ ಮಾತು: ಈ ಚಿತ್ರದ ಕ್ಲೈಮಾಕ್ಸ್ ಭಾರತೀಯ ಜಾಯಮಾನದಲ್ಲಿ ಜೀರ್ಣಿಸಿಕೊಳ್ಳುವುದು ಅಸಾಧ್ಯ.

  • ಬರಹ: ಶ್ರೀನಿವಾಸ ಮಠ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024