ಸಿನಿಮಾ ಹೀರೋ ಆದ ಬಿಎಂಟಿಸಿ ನೌಕರ; ʻಕರಿಮಣಿ ಮಾಲೀಕ ನೀನಲ್ಲʼ ಚಿತ್ರದ ಟೀಸರ್ ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಹೀರೋ ಆದ ಬಿಎಂಟಿಸಿ ನೌಕರ; ʻಕರಿಮಣಿ ಮಾಲೀಕ ನೀನಲ್ಲʼ ಚಿತ್ರದ ಟೀಸರ್ ಬಿಡುಗಡೆ

ಸಿನಿಮಾ ಹೀರೋ ಆದ ಬಿಎಂಟಿಸಿ ನೌಕರ; ʻಕರಿಮಣಿ ಮಾಲೀಕ ನೀನಲ್ಲʼ ಚಿತ್ರದ ಟೀಸರ್ ಬಿಡುಗಡೆ

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಮಾರುತಿ ಇದೀಗ ʻಕರಿಮಣಿ ಮಾಲೀಕ ನೀನಲ್ಲʼ ಸಿನಿಮಾ ಮೂಲಕ ಚಂದನವನಕ್ಕೆ ನಾಯಕನಾಗಿ ಎಂಟ್ರಿಕೊಡುತ್ತಿದ್ದಾರೆ. ಇದೀಗ ಇದೇ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.

ಸಿನಿಮಾ ಹೀರೋ ಆದ ಬಿಎಂಟಿಸಿ ಬಸ್‌ ಡ್ರೈವರ್‌; ʻಕರಿಮಣಿ ಮಾಲಿಕ ನೀನಲ್ಲʼ ಚಿತ್ರದ ಟೀಸರ್ ಬಿಡುಗಡೆ
ಸಿನಿಮಾ ಹೀರೋ ಆದ ಬಿಎಂಟಿಸಿ ಬಸ್‌ ಡ್ರೈವರ್‌; ʻಕರಿಮಣಿ ಮಾಲಿಕ ನೀನಲ್ಲʼ ಚಿತ್ರದ ಟೀಸರ್ ಬಿಡುಗಡೆ

ಸ್ಯಾಂಡಲ್‌ವುಡ್‌ನಲ್ಲಿ ʻಯು ಟರ್ನ್ 2ʼ ಸಿನಿಮಾ ಮೂಲಕ ಗುರುತಿಸಿಕೊಂಡ ಚಂದ್ರು ಓಬಯ್ಯ ಅವರೀಗ ಒಂದರ ಮೇಲೊಂದರಂತೆ ಸಿನಿಮಾಗಳನ್ನು ಆರಂಭಿಸಿದ್ದಾರೆ. ಕೆಲವನ್ನು ಬಿಡುಗಡೆ ಹಂತಕ್ಕೂ ತಂದಿದ್ದಾರೆ. ಅದರಲ್ಲಿ ʻಕರಿಮಣಿ ಮಾಲಿಕ ನೀನಲ್ಲʼ ಸಿನಿಮಾ ಕೂಡ ಒಂದು. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿದೆ. ಚಂದ್ರು ಓಬಯ್ಯ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಹೀಗಿರುವ ಇದೇ ಚಿತ್ರದ ಟೀಸರ್‌ ಇದೀಗ ಬಿಡುಗಡೆ ಆಗಿದೆ.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಮಾರುತಿ ಈ ಚಿತ್ರದ ನಾಯಕನಾಗಿದ್ದು, ರಮಿಕ ಸುತಾರ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಕ್ರೋಚ್ ಸುಧಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್‌ ಅನ್ನು ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಹಾಗೂ ಅಂಜಿನಪ್ಪ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಟಿ.ಎನ್.ನಾಗೇಶ್, ಶ್ರೀನಿವಾಸ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ, ʻಕರಿಮಣಿ ಮಾಲಿಕ ನೀನಲ್ಲʼ ನನ್ನ ನಿರ್ದೇಶನದ 9ನೇ ಚಿತ್ರ. ಇದು ಬೆಂಗಳೂರಿನಲ್ಲೇ ನಡೆದ ನೈಜಘಟನೆ ಆಧಾರಿತ ಚಿತ್ರ. ಎಳನೀರು ಮಾರುವ ಹುಡುಗ, ಹೂ ಮಾರುವ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ. ಇವರಿಬ್ಬರ ನಡುವೆ ಮತ್ತೊಬ್ಬನ ಎಂಟ್ರಿ ಆಗುತ್ತೆ. ಇಲ್ಲಿ ನಾಯಕಿಯ ಕರಿಮಣಿ ಮಾಲೀಕ ಯಾರಾಗ್ತಾರೆ ಅನ್ನೋದೇ ಚಿತ್ರದ ಕಥೆ. ಬೆಂಗಳೂರು ಸುತ್ತಮುತ್ತ 35ಕ್ಕೂ ಹೆಚ್ಚು ದಿನಗಳ ಕಾಲ ನಮ್ಮ ಚಿತ್ರದ ಶೂಟಿಂಗ್ ನಡೆಸಿದ್ದೇವೆ. ಚಿತ್ರದ ಟೈಟಲ್ ಹಾಡನ್ನು ಪಾವಗಡದ ಬಳಿಯ ನಿಡಗಲ್ ಬೆಟ್ಟದಲ್ಲಿ ಶೂಟ್ ಮಾಡಿದ್ದೇವೆ. ʻಕರಿಮಣಿ ಮಾಲಿಕ ನೀನಲ್ಲʼ ಚಿತ್ರದಲ್ಲಿ 3 ಹಾಡುಗಳಿವೆ ಎಂದರು.

ನಂತರ ಚಿತ್ರದ ನಾಯಕ ನಟ ಮಾರುತಿ ಬಿಎಂಟಿಸಿ ಸಹ ಚಿತ್ರದ ಬಗ್ಗೆ ಮಾತನಾಡಿದರು. ನಾನೀಗ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ವಿದ್ಯಾಭ್ಯಾಸದ ದಿನಗಳಲ್ಲಿ ಅನೇಕ ನಾಟಕಗಳನ್ನು ಮಾಡುತ್ತಿದ್ದೆ. ಸಿನಿಮಾ ನಟನಾಗಬೇಕು ಎಂಬುದು ನನ್ನ ಬಹುದಿನಗಳ ಕನಸು. ಅದಕ್ಕಾಗೇ ಸೃಷ್ಠಿ ಅಕಾಡೆಮಿಯಲ್ಲಿ ಅಭಿನಯ ಕಲಿತೆ. ಈ ಚಿತ್ರದಲ್ಲಿ ಎಳನೀರು ಮಾರುವ ಹುಡುಗನಾಗಿ ನಟಿಸಿದ್ದೇನೆ ಎಂದರು.

ನಾಯಕಿಯ ಪಾತ್ರದಲ್ಲಿ ರಮಿಕಾ ಸುತಾರ್‌ ನಟಿಸಿದ್ದಾರೆ. ನಾನು ಮೂಲತ: ಕಲಬುರಗಿಯವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಆಕ್ಟಿಂಗ್ ಕ್ಲಾಸ್ ಹೋಗಿದ್ದೇನೆ. ಈ ಚಿತ್ರದಲ್ಲಿ ಒಬ್ಬ ಹೂ ಮಾರುವ ಹುಡುಗಿಯಾಗಿ ನಟಿಸಿದ್ದೇನೆ. ಸ್ವಲ್ಪ ಬಜಾರಿ ಥರದ ಪಾತ್ರ, ಆಡಿಷನ್‌ನಲ್ಲಿ ಸೆಲೆಕ್ಟ್ ಆಗಿ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು.

ಕಾಕ್ರೋಚ್ ಸುಧೀ ಸಹ ಪಾತ್ರದ ಬಗ್ಗೆ ಮಾತನಾಡಿದರು. ನಾಯಕ ನಾಯಕಿ ಕಥೆಯಲ್ಲಿ ಬರೋ ಮತ್ತೊಬ್ಬ ವ್ಯಕ್ತಿಯ ಪಾತ್ರವನ್ನು ನಾನು ಮಾಡಿದ್ದೇನೆ, ಮಾರುತಿ ಅವರು ತುಂಬಾ ಕನಸಿಟ್ಟುಕೊಂಡು ಸಿನಿಮಾಗೆ ಬಂದಿದ್ದಾರೆ. ನೀನಲ್ಲ, ನೀನೇ ನಲ್ಲ ಅಂತ ನಾಯಕಿ ಯಾರ‍್ಯಾರಿಗೆ ಹೇಳ್ತಾಳೆ ಅನ್ನೋದೇ ಚಿತ್ರದ ಕಥೆ ಎಂದರು.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.