ಶಿವಣ್ಣ ವರ್ಸಸ್ ಅಲ್ಲು ಅರ್ಜುನ್: ಪುಷ್ಪಾ 2 ಬಿಡುಗಡೆ ದಿನವೇ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ರಿಲೀಸ್
Byrathi Ranagal vs Puspa 2: ಆಗಸ್ಟ್ 15ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಬಿಡುಗಡೆಯಾಗಲಿದೆ. ಅದೇ ದಿನ ಪುಷ್ಪಾ 2 ಬಿಡುಗಡೆಯಾಗಲಿದೆ. ಥಿಯೇಟರ್‌ಗಳಲ್ಲಿ ಶಿವಣ್ಣ ವರ್ಸಸ್ ಅಲ್ಲು ಅರ್ಜುನ್ ಮಾತ್ರವಲ್ಲದೆ ರಶ್ಮಿಕಾ ಮಂದಣ್ಣ ವರ್ಸಸ್ ರುಕ್ಮಿಣಿ ವಸಂತ್ ಇರಲಿದೆ.
ಬೆಂಗಳೂರು: ಈ ವರ್ಷ ಸ್ವಾತಂತ್ರ್ಯ ದಿನದಂದು ದಕ್ಷಿಣ ಭಾರತದ ಎರಡು ಪ್ರಮುಖ ಸಿನಿಮಾಗಳು ಥಿಯೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಕನ್ನಡದ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಕೂಡ ರಿಲೀಸ್ ಆಗುತ್ತಿದೆ.
ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸುತ್ತಿರುವ ಭೈರತಿ ರಣಗಲ್ ಸಿನಿಮಾಕ್ಕೆ ನರ್ತನ್ ನಿರ್ದೇಶನವಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ "ಭೈರತಿ ರಣಗಲ್ " ಬಿಡುಗಡೆಯ ದಿನಾಂಕವನ್ನು ಈಗಾಗಲೇ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.
ಶಿವಣ್ಣ ವರ್ಸಸ್ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಸಿನಿಮಾವು ಆಗಸ್ಟ್ 15ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿದ್ದಾರೆ. ಶಿವಣ್ಣ ನಟನೆಯ ಭೈರತಿ ರಣಗಲ್‌ನಲ್ಲಿ ರುಕ್ಮಿಣಿ ಮಂದಣ್ಣ ಹೀರೋಯಿನ್. ಹೀಗಾಗಿ ಆಗಸ್ಟ್ 15ರಿಂದ ಶಿವಣ್ಣ ವರ್ಸಸ್ ಅಲ್ಲು ಅರ್ಜುನ್ ಮಾತ್ರವಲ್ಲದೆ ರಶ್ಮಿಕಾ ಮಂದಣ್ಣ ವರ್ಸಸ್ ರುಕ್ಮಿಣಿ ವಸಂತ್ ಕೂಡ ಹೌದು.
ಮಫ್ತಿಯಿಂದ ಭೈರತಿ ರಣಗಲ್‌ವರೆಗೆ
‘ಭೈರತಿ ರಣಗಲ್’ ಚಿತ್ರ ಆರು ವರ್ಷಗಳ ಹಿಂದೆ ಬಿಡುಗಡೆಯಾದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಎಂದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಆದರೆ, ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್‌ನ ಸಣ್ಣಕಥೆಯನ್ನು ಇಲ್ಲಿ ಬೆಳೆಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದೇ ರೀತಿ ಜೈಲರ್ ಸಿನಿಮಾದ ನರಸಿಂಹನ ಪಾತ್ರವೂ ಪ್ರತ್ಯೇಕ ಸಿನಿಮಾವಾದರೆ ಅಚ್ಚರಿಯಿಲ್ಲ.
"ಮಫ್ತಿ ಚಿತ್ರ ಮಾಡುವಾಗ ಈ ಚಿತ್ರದಲ್ಲಿ ನಟಿಸಬೇಕಾ ? ಎಂಬ ಗೊಂದಲ ನನ್ನಗಿತ್ತು" ಎಂದು ಶಿವಣ್ಣ ಹೇಳಿದ್ದಾರೆ. ‘ಆ ಚಿತ್ರದಲ್ಲಿ ನನ್ನ ಪಾತ್ರ ಬರುವುದೇ ಇಂಟರ್ ವೆಲ್ ನಂತರ. ಶ್ರೀಮುರಳಿ ಈ ಚಿತ್ರದಲ್ಲಿ ಇನ್ನೊಂದು ಪಾತ್ರವನ್ನು ಮಾಡುತ್ತಿದ್ದರು. ಮುರಳಿ ನನ್ನ ಮಾವನ ಮಗ. ಇಲ್ಲ ಎನ್ನುವಂತೆಯೂ ಇರಲಿಲ್ಲ. ಹಾಗಿರುವಾಗ, ಏನು ಮಾಡುವುದು ಎಂಬ ಪ್ರಶ್ನೆ ಇದ್ದೇ ಇತ್ತು. ಅಂತಹ ಸಂದರ್ಭದಲ್ಲಿ ನಿರ್ದೇಶಕ ನರ್ತನ್ ಬಂದು ನೀವು ಈ ಪಾತ್ರ ಮಾಡಿ ಎಂದಾಗ ನನಗೆ ಧೈರ್ಯ ಬಂತು. ಮಫ್ತಿಯಲ್ಲಿ ನಟಿಸಿದೆ" ಎಂದು ಶಿವಣ್ಣ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಒಳ್ಳೆಯ ಕಥೆ ಎಂದ ಶಿವಣ್ಣ
"ಮಫ್ತಿ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿಯೇ ಆ ಪಾತ್ರ ನನಗೆ ಇಷ್ಟವಾಗಿತ್ತು. ಆ ಹೆಸರು ಕೂಡ ಅದಕ್ಕೆ ಕಾರಣ. ಇಂತಹ ಹೆಸರು ಕೇಳಲು ಸಾಧ್ಯವಿಲ್ಲ. ಸಂಭಾಷಣೆಯೂ ಚೆನ್ನಾಗಿತ್ತು. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಕುರಿತಾದ ಸ್ಟೋರಿಯನ್ನು ಇಲ್ಲಿ ವಿಸ್ತರಿಸಲಾಗಿದೆ. ಅವನ್ಯಾಕೆ ಭೈರತಿ ರಣಗಲ್ ಆಗುತ್ತಾನೆ. ಜನರಿಗ್ಯಾಕೆ ಅವನು ಇಷ್ಟ? ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕರು" ಎಂದು ಶಿವಣ್ಣ ಹೇಳಿದ್ದಾರೆ.
"ಭೈರತಿ ರಣಗಲ್" ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ?
ಈ ಚಿತ್ರದ ಕುರಿತು ನಿರ್ದೇಶಕ ನರ್ತನ್ ಕೂಡ ಸಾಕಷ್ಟು ವಿವರ ನೀಡಿದ್ದಾರೆ. ಮಫ್ತಿ ಚಿತ್ರದಲ್ಲಿಯೇ ಭೈರತಿ ರಣಗಲ್ ಪಾತ್ರಕ್ಕೆ ತೂಕವಿತ್ತು. ಜನರಿಗೆ ಮಫ್ತಿಯಲ್ಲಿದ್ದ ಭೈರತಿ ಸಾಕಾಗಿರಲಿಲ್ಲ. ಇದರ ಹಿನ್ನೆಲೆ ಬರೆಯೋಣ ಎಂದುಕೊಂಡೆ. ಬಹಳ ಸಲೀಸಾಗಿ ಕಥೆ ಸೃಷ್ಟಿಯಾಗಿದೆ. "ಭೈರತಿ ರಣಗಲ್" ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲಾಕ್ ಡ್ರೆಸ್ ಯಾಕೆ ಹಾಕುತ್ತಾರೆ ಇತ್ಯಾದಿ ವಿಚಾರಗಳು ಇವೆ. ಕಥೆ ಹೇಳಿದಾಗ ಗೀತಕ್ಕ ಮತ್ತು ಶಿವಣ್ಣ ಏನೂ ಹೆಚ್ಚು ಮಾತನಾಡದೆ ಸಿನಿಮಾ ಮಾಡು ಎಂದು ಹುರಿದುಂಬಿಸಿದ್ದರು. ಈಗಾಗಲೇ ಚಿತ್ರದ ಶೇಕಡ 70 ಭಾಗದ ಶೂಟಿಂಗ್ ಮುಗಿದಿದೆ" ಎಂದು ಭೈರತಿ ರಣಗಲ್ ಸಿನಿಮಾದ ನಿರ್ದೇಶಕರಾದ ನರ್ತನ್ ಹೇಳಿದ್ದಾರೆ.
ರುಕ್ಮಿಣಿ ವಸಂತ್ ಹೀರೋಯಿನ್
"ಭೈರತಿ ರಣಗಲ್" ಸಿನಿಮಾದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿಯಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಸಂಗೀತವಿದೆ.
ವಿಭಾಗ