ಕೇಸ್‌ ಆಫ್‌ ಕೊಂಡಾಣ ಸಿನಿಮಾ ವಿಮರ್ಶೆ: ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನಡುವೆ ವಿಜಯ್‌ ರಾಘವೇಂದ್ರ ನೈಟ್‌ ಸಫಾರಿ
ಕನ್ನಡ ಸುದ್ದಿ  /  ಮನರಂಜನೆ  /  ಕೇಸ್‌ ಆಫ್‌ ಕೊಂಡಾಣ ಸಿನಿಮಾ ವಿಮರ್ಶೆ: ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನಡುವೆ ವಿಜಯ್‌ ರಾಘವೇಂದ್ರ ನೈಟ್‌ ಸಫಾರಿ

ಕೇಸ್‌ ಆಫ್‌ ಕೊಂಡಾಣ ಸಿನಿಮಾ ವಿಮರ್ಶೆ: ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನಡುವೆ ವಿಜಯ್‌ ರಾಘವೇಂದ್ರ ನೈಟ್‌ ಸಫಾರಿ

Case of kondana Movie Review: ದೇವಿ ಪ್ರಸಾದ್‌ ಶೆಟ್ಟಿ ನಿರ್ದೇಶನದ, ವಿಜಯ್‌ ರಾಘವೇಂದ್ರ, ಭಾವನಾ ಮೆನನ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಕೇಸ್‌ ಆಫ್‌ ಕೊಂಡಾಣವು ಒಂದು ರಾತ್ರಿ ನಡೆಯುವ ಹಲವು ಘಟನೆಗಳ ಸುತ್ತ ಸುತ್ತುತ್ತದೆ ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನಡುವೆ ನೈಟ್‌ ಸಫಾರಿ ಮಾಡಿದಂತೆ ಪ್ರೇಕ್ಷಕರಿಗೆ ಭಾಸವಾಗಬಹುದು.

ಕೇಸ್‌ ಆಫ್‌ ಕೊಂಡಾಣ ಸಿನಿಮಾ ವಿಮರ್ಶೆ: ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನೈಟ್‌ ಸಫಾರಿ
ಕೇಸ್‌ ಆಫ್‌ ಕೊಂಡಾಣ ಸಿನಿಮಾ ವಿಮರ್ಶೆ: ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನೈಟ್‌ ಸಫಾರಿ

Case of kondana Movie Review: ಬೆಂಗಳೂರಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಪೊಲೀಸರು ಆ ಕೇಸ್‌ನ ಬೆನ್ನು ಬಿದ್ದಿದ್ದಾರೆ. ರೌಡಿ ಗ್ಯಾಂಗ್‌ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್‌ ಠಾಣೆಗೆ ಹೊಸದಾಗಿ ಎಎಸ್‌ಐಯಾಗಿ ವಿಲ್ಸನ್‌ ನೇಮಕವಾಗುತ್ತಾನೆ. ಮೊದಲ ದಿನವೇ ರೌಡಿ ಗ್ಯಾಂಗ್‌ಗೆ ಕಪಾಲಮೋಕ್ಷ ಮಾಡುತ್ತಾನೆ. ಮುಂದೆ ರೌಡಿಗಳು ಮತ್ತು ಈ ಪೊಲೀಸರ ನಡುವೆ ಫೈಟಿಂಗ್‌ ನಡೆಯುತ್ತದೆ. ಇದು ಕೇಸ್‌ ಆಫ್‌ ಕೊಂಡಾಣದ ಕಥೆ ಎಂದುಕೊಂಡಿರಾ? ನೋ, ನೋ.. ಇದು ಆರಂಭದ ತುಣುಕು ಅಷ್ಟೇ. ಕೇಸ್‌ ಆಫ್‌ ಕೊಂಡಾಣದ ನಿಜವಾದ ಸ್ಟೋರಿ ಇದಲ್ಲ. ಆಕಸ್ಮಿಕ, ಅನಿರೀಕ್ಷಿತ ಘಟನೆಗಳ ನಿಗೂಢ ಪತ್ತೆದಾರಿ ಕೊಂಡಾಣ ಕಥೆ ಬೇರೆಯೇ ಇದೆ.

ಚಿತ್ರದ ಹೆಸರು: ಕೇಸ್‌ ಆಫ್‌ ಕೊಂಡಾಣ

ಭಾಷೆ: ಕನ್ನಡ

ವಿಷಯ: ಸಸ್ಪೆನ್ಸ್‌ ಥ್ರಿಲ್ಲರ್‌

ಕಥೆ ಮತ್ತು ನಿರ್ದೇಶನ: ದೇವಿ ಪ್ರಸಾದ್‌ ಶೆಟ್ಟಿ

ಪಾತ್ರವರ್ಗ: ವಿಜಯ್‌ ರಾಘವೇಂದ್ರ, ಭಾವನಾ ಮೆನನ್‌, ಖುಷಿ ರವಿ, ರಂಗಾಯಣ ರಘು, ಸುಂದರ್‌ ರಾಜ್‌ ಮತ್ತು ಇತರರು

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ರೇಟಿಂಗ್‌: *** 1/2

ಹೇಗಿದೆ ಕೇಸ್‌ ಆಫ್‌ ಕೊಂಡಾಣ?

ದೇವಿ ಪ್ರಸಾದ್‌ ಶೆಟ್ಟಿ ನಿರ್ದೇಶನದ, ವಿಜಯ್‌ ರಾಘವೇಂದ್ರ, ಭಾವನಾ ಮೆನನ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಕೇಸ್‌ ಆಫ್‌ ಕೊಂಡಾಣದಲ್ಲಿ ಹಲವು ವಿಷಯಗಳು ಇವೆ. ಹೊಸದಾಗಿ ಎಎಸ್‌ಐಯಾಗಿ ನೇಮಕಗೊಳ್ಳುವ ವಿಲ್ಸನ್‌ (ವಿಜಯ್‌ ರಾಘವೇಂದ್ರ), ನಿಗೂಢ ಸರಣಿ ಕೊಲೆಗಳ ಕುರಿತು ತನಿಖೆ ಮಾಡುವ ಡಿಎಸ್‌ಪಿ ಲಕ್ಷ್ಮಿ (ಭಾವನಾ ಮೆನನ್‌), ಹಳೆ ಮನೆಯ ಜತೆ ಭಾವನಾತ್ಮಕ ನಂಟು ಹೊಂದಿರುವ ಪೊಲೀಸ್‌ (ರಂಗಾಯಣ ರಘು) (ಇವರು ಡಿಎಸ್‌ಪಿಯ ತಂದೆಯೂ ಹೌದು), ಬೆಂಗಳೂರಿನ ರೌಡಿ ಗ್ಯಾಂಗ್‌, ಗಂಭೀರ ಕಾಯಿಲೆ ಹೊಂದಿರುವ ಮಗನಿಗೆ ಚಿಕಿತ್ಸೆ ನೀಡಲು ಪರದಾಡುವ ಪಾನಿಪುರಿ ಮಾರಾಟಗಾರ ರಾಜು, ಇವನ ಮಗನ ಚಿಕಿತ್ಸೆಗೆ ಸಹಕರಿಸುವ ವೈದ್ಯೆ (ಖುಷಿ ರವಿ)... ಹಲವು ನದಿಗಳು ಕಡಲು ಸೇರುವಂತೆ ಈ ಚಿತ್ರದಲ್ಲಿರುವ ಹಲವು ವಿಷಯಗಳು ಕೊಂಡಾಣ ಸೇರುತ್ತವೆ. ಕೊಂಡಾಣವೆಂಬ ಕಾಲ್ಪನಿಕ ಊರಿಗೆ ಕನೆಕ್ಟ್‌ ಆದ ಬಳಿಕ ಚಿತ್ರ ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ.

ಕೇಸ್‌ ಆಫ್‌ ಕೊಂಡಾಣವನ್ನು ರೋಲರ್‌ಕಾಸ್ಟರ್‌ ರೈಡರ್‌ ರೀತಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ನಿರ್ದೇಶಕರು ದೇವಿ ಪ್ರಸಾದ್‌ ಮಾಡಿದ್ದಾರೆ. ಆಕಸ್ಮಿಕವೆಂಬ ರೋಲರ್‌ ಕಾಸ್ಟರ್‌ಗೆ ಕಥೆ ಪ್ರವೇಶ ಪಡೆದ ಬಳಿಕ ಗಮ್ಯ ತಲುಪದೆ ನಿರ್ಗಮನ ಸಾಧ್ಯವಿಲ್ಲದಂತೆ ಹಲವು ಘಟನೆಗಳ ಸರಮಾಲೆಯೇ ನಡೆಯುತ್ತದೆ. ಆರಂಭದಿಂದಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ, ಕಥೆ, ಚಿತ್ರಕಥೆ, ದೃಶ್ಯ ಸಂಯೋಜನೆ ಮಾಡಲಾಗಿದೆ. ಈ ಚಿತ್ರದ ಬಹುತೇಕ ಘಟನೆಗಳು ರಾತ್ರಿ ವೇಳೆ ನಡೆಯುತ್ತದೆ. ಹೀಗಾಗಿ, ಹಗಲಿಗಿಂತ ಕತ್ತಲಿನ ದೃಶ್ಯಗಳೇ ಚಿತ್ರದಲ್ಲಿ ಹೆಚ್ಚಿವೆ. ಕತ್ತಲಿಗೆ ಕಣ್ಣು ಮಂಕಾಗಿಸುವ ಗುಣವಿದೆ. ಇಂತಹ ಸಮಯದಲ್ಲಿ ಬೆಂಕಿಯ ಅಗತ್ಯ ಇರುತ್ತದೆ. ಬೆಂಕಿ ಬಿದ್ದ ಬಳಿಕ ಚಿತ್ರ ವೇಗ ಪಡೆಯುತ್ತದೆ.

ಕೆಲವೊಂದು ಕಡೆ ಮುಂದೆ ಏನಾಗಬಹುದು ಎಂದು ಪ್ರೇಕ್ಷಕ ಊಹಿಸುವಂತೆ ಇದೆ. ಒಂದು ಕಡೆ ಮಾತ್ರ ಊಹೆಗೆ ನಿಲುಕದಂತೆ ಘಟನೆ ನಡೆಯುತ್ತದೆ. ಇದನ್ನು ನೋಡಿ ಪ್ರೇಕ್ಷಕರು "ಇದು ಸೂಪರ್‌, ಬೆಂಕಿ ಗುರು" ಎಂದು ಹೇಳಬಹುದು. ಚಿತ್ರದ ದೃಶ್ಯಗಳು ಆರಂಭದಿಂದ ಕೊನೆಯವರೆಗೆ ಎಯಿಂದ ಝಡ್‌ವರೆಗೆ ಎಂಬಂತೆ, ಒಂದರಿಂದ 100ರವರೆಗೆ ಎಂಬಂತೆ ನೇರ ಹಾದಿಯಲ್ಲಿ ಸಾಗುತ್ತದೆ. ಕಥೆ ಉಲ್ಟಾಪಲ್ಟಾ ಹೇಳಿಲ್ಲ.  ಚಿತ್ರದ ಮೊದಲಾರ್ಧವನ್ನು ಸಾವಧಾನವಾಗಿ ಕುಳಿತು ನೋಡಬಹುದು, ದ್ವಿತೀಯಾರ್ಧ ಸೀಟಿನಂಚಿನಲ್ಲಿ ಕುಳಿತು ಕಾತರದಿಂದ ನೋಡುವಂತೆ ಇದೆ.

ರೌಡಿಸಂ, ಕತ್ತಿಯಲ್ಲಿ ಕತ್ತರಿಸುವ ದೃಶ್ಯಗಳಿದ್ದರೂ ಪ್ರೇಕ್ಷಕರ ಕಣ್ಣಿಗೆ ಅಸಹನೀಯವಾಗುವಷ್ಟು ರಕ್ತ ಎರಚದೆ ಇರುವುದಕ್ಕೆ ನಿರ್ದೇಶಕರಿಗೆ ಥ್ಯಾಂಕ್ಸ್‌ ಹೇಳಬೇಕು. ಬಹುತೇಕ ಕೌರ್ಯಗಳನ್ನು ಹಿನ್ನಲೆ ಸಂಗೀತದಲ್ಲೇ ಹೇಳಲಾಗಿದೆ. ಚಿತ್ರದ ಒಟ್ಟಾರೆ ಹಿನ್ನೆಲೆ ಸಂಗೀತವು ಚಿತ್ರವು ಕತ್ತಲಲ್ಲಿ ಮಂಕಾಗುವುದನ್ನು ತಪ್ಪಿಸಿದೆ. ವಿಜಯ್‌ ರಾಘವೇಂದ್ರ ಅವರ ನಟನೆ ಇಷ್ಟವಾಗುತ್ತದೆ. ಭಾವನಾ ಡಿಎಸ್‌ಪಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಬಹುತೇಕ ಎಲ್ಲರೂ ಪಾತ್ರಗಳಲ್ಲಿಯೇ ಜೀವಿಸಿದ್ದಾರೆ.  ಗಗನ್‌ ಬಡೆರಿಯಾ ಸಂಗೀತ, ವಿಶ್ವಜಿತ್‌ ರಾವ್‌ ಸಿನಿಮಾಟ್ರೊಗ್ರಫಿ, ಜೋಗಿ ಚಿತ್ರಕಥೆ, ಭವಾನಿ ಶಂಕರ್‌ ಆನೆಕಲ್ಲು ಅವರ ಕಲಾ ನಿರ್ದೇಶನವು ಕೇಸ್‌ ಆಫ್‌ ಕೊಂಡಾಣವನ್ನು ಹಿತವಾಗಿಸಿದೆ.

ಫೈಟಿಂಗ್‌ ದೃಶ್ಯಗಳು ಇದ್ದರೂ ಇದು ಹೀರೋಯಿಸಂ ಸಿನಿಮಾವಲ್ಲ. ಖುಷಿ, ತಮಾಷೆ, ಫನ್‌ ಬಯಸುವವರಿಗೆ ಕೇಸ್‌ ಆಫ್‌ ಕೊಂಡಾಣದಲ್ಲಿ ಏನೂ ದೊರಕದು. ನೆನಪಿನಲ್ಲಿಟ್ಟುಕೊಳ್ಳುವಂತಹ ಹಾಡುಗಳೂ ಇಲ್ಲ. ಇದು ಕಥೆ ಚಿತ್ರಕಥೆಗೆ ನ್ಯಾಯ ಒದಗಿಸುವ ಸಿನಿಮಾ. ಯಾವುದೇ ಅನಪೇಕ್ಷಿತ ವಿಷಯಗಳನ್ನು ತುರುಕಲಾಗಿಲ್ಲ. ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾ ಇಷ್ಟಪಡುವವರಿಗೆ ಕೇಸ್‌ ಆಫ್‌ ಕೊಂಡಾಣ ಇಷ್ಟವಾಗಬಹುದು.

ಚಿತ್ರ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಪ್ರಕಟವಾಗಿರುವ ಇತ್ತೀಚಿನ ಸಿನಿಮಾ ವಿಮರ್ಶೆಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

Whats_app_banner