ಕಾಟೇರ ಸಿನಿಮಾ ಬರೆಯಿತು 3 ಹೊಸ ದಾಖಲೆ, ದರ್ಶನ್ ಅಭಿನಯದ ಕನ್ನಡ ನೆಲದ ಚಿತ್ರಕ್ಕೆ ಬಹುಪರಾಕ್
ಕನ್ನಡ ಕಾಟೇರ ಸಿನಿಮಾ ಒಂದೆಡೆ ಬಾಕ್ಸ್ ಆಫೀಸ್‌ನಲ್ಲಿ ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ಹಲವು ಹೊಸ ದಾಖಲೆಗಳನ್ನೂ ಬರೆಯುತ್ತಿದೆ. ಬಿಡುಗಡೆಯಾದ ಚಿತ್ರಮಂದಿರಗಳ ಸಂಖ್ಯೆಯಲ್ಲಿ, ಗ್ರಾಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ಕಾಟೇರವು ಹಲವು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಕನ್ನಡ ಚಿತ್ರವೊಂದು ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿ ಬಳಿಕ ಹೊರರಾಜ್ಯಗಳಿಗೆ, ಹೊರದೇಶಗಳಿಗೆ ಕಾಲಿಡುವ ಸಮಯದಲ್ಲಿ ಕನ್ನಡ ನೆಲದಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿರುವುದು ವಿಶೇಷ. ಕಾಟೇರ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ಮಾಲಾಶ್ರಿ ಪುತ್ರಿ ಆರಾಧನಾ ರಾಮ್ ಬಣ್ಣ ಹಚ್ಚಿದ್ದರು. ಈ ಚಿತ್ರವು ಕಥೆ, ನಿರೂಪಣೆ ಸೇರಿದಂತೆ ಹತ್ತು ಹಲವು ವಿಷಯಗಳಿಂದ ಸಿನಿಪ್ರಿಯರ ಗಮನ ಸೆಳೆದಿದೆ.
ಕಾಟೇರ ಸಿನಿಮಾದ 3 ಹೊಸ ದಾಖಲೆಗಳು
1. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿರುವ ಕನ್ನದ ಚಿತ್ರ ಮೊದಲ ಒಂದು ವಾರದಲ್ಲಿ ಚಿತ್ರಮಂದಿರಗಳ ವಿಷಯದಲ್ಲಿ ಒಂದು ದಾಖಲೆ ಬರೆದಿದೆ. ಮೊದಲ ವಾರಬಿಡುಗಡೆಯಾದ 406 ಚಿತ್ರಮಂದಿರಗಳು ಸೇರಿದಂತೆ ಎರಡನೇ ವಾರದಲ್ಲಿ 462 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ. ಸಾಮಾನ್ಯವಾಗಿ ಮೊದಲ ವಾರದಿಂದ ಎರಡನೇ ವಾರಕ್ಕೆ ಥಿಯೇಟರ್‌ಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುವುದು ವಾಡಿಕೆ. ಆದರೆ, ಎರಡನೇ ವಾರದಲ್ಲಿ ಕಾಟೇರ ಕರ್ನಾಟಕದಲ್ಲಿ ಥಿಯೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
2. 27 ಚಿತ್ರಮಂದಿರಗಳಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿರುವ ಕನ್ನಡದ ಮೊದಲ ಸಿನಿಮಾ ಎಂಬ ದಾಖಲೆಯನ್ನೂ ಕಾಟೇರ ಬರೆದಿದೆ.
3. ಕರ್ನಾಟಕದ 13 ಜಿಲ್ಲೆಗಳಲ್ಲಿ 2 ಚಿತ್ರಮಂದಿರಗಲಲ್ಲಿ ಬಿಡುಗಡೆಯಾಗಿ, ಅಷ್ಟೇ 2 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದ ಕನ್ನಡದ ಮೊದಲ ಚಿತ್ರ ಎಂಬ ದಾಖಲೆಯನ್ನೂ ಬರೆದಿದೆ.
ಕಾಟೇರ ಸಿನಿಮಾ ಸುದೀಪ್ ನೋಡ್ತಾರಂತೆ
ಇತ್ತೀಚೆಗೆ ಕಾಟೇರ ಸಿನಿಮಾವನ್ನು ವೀಕ್ಷಿಸಲು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗಿತ್ತು. ವಿಶೇಷ ಸೆಲೆಬ್ರಿಟಿ ಶೋಗೆ ಆಗಮಿಸಿ ಸಾಕಷ್ಟು ಕಲಾವಿದರು, ತಂತ್ರಜ್ಞರು ಚಿತ್ರ ವೀಕ್ಷಿಸಿದ್ದರು. ಇದೇ ಸಮಯದಲ್ಲಿ ಕಿಚ್ಚ ಸುದೀಪ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರು. ಸುದೀಪ್‌ಗೂ ಕಾಟೇರ ಸಿನಿಮಾ ವೀಕ್ಷಣೆಗೆ ಆಮಂತ್ರಣ ಹೋಗಿತ್ತು. ಈ ಕುರಿತು ಸ್ವತಃ ನಿರ್ದೇಶಕ ತರುಣ್ ಸುಧೀರ್ ಮಾಹಿತಿ ನೀಡಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಶೂಟಿಂಗ್‌ನಲ್ಲಿರುವ ಕಿಚ್ಚ ಸುದೀಪ್ ಅವರು ಕೂಡ "ಶೂಟಿಂಗ್ ಮುಗಿದು ಬಂದ ಮೇಲೆ ಖಂಡಿತವಾಗಿಯೂ ಕಾಟೇರ ಸಿನಿಮಾ ನೋಡುವೆ" ಎಂದು ಸುದೀಪ್ ಹೇಳಿದ್ದರು.
ವಿದೇಶಗಳಲ್ಲಿಯೂ ಕಾಟೇರ ಬಿಡುಗಡೆ
ಕಾಟೇರ ಸಿನಿಮಾ ಈಗ ಭಾರತದ ಹೊರಗೂ ಪ್ರದರ್ಶನಗೊಳ್ಳುತ್ತಿದೆ. ಒಮನ್ ಥಿಯೇಟರ್‌ಗಳಲ್ಲಿ ಕಾಟೇರ ಹೌಸ್‌ಫುಲ್ ಆಗಿದೆ. ಇದೇ ರೀತಿ, ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಕಾಟೇರ ಬಿಡುಗಡೆಯಾಗಿದೆ. ಮೊದಲ ವಾರದಲ್ಲಿಯೇ 100 ಕೋಟಿ ಕ್ಲಬ್‌ಗೆ ಸೇರಿದ ಕಾಟೇರ ಸಿನಿಮಾ ಈಗ ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಗಿದೆ. ವಿದೇಶಗಳಲ್ಲಿಯೂ ಬಿಡುಗಡೆಯಾಗಿದೆ. ಇದು ಕಾಟೇರದ ಗಲ್ಲಾಪೆಟ್ಟಿಗೆಗೆ ಇನ್ನಷ್ಟು ಕೋಟಿಗಳನ್ನು ತುಂಬಿಸುವ ನಿರೀಕ್ಷೆಯಿದೆ.