ಅಂದು ಕೆಜಿಎಫ್ ಕಾಂತಾರ ಈಗ ಕಾಟೇರ; 190 ಕೋಟಿ ತಲುಪಿದ ದರ್ಶನ್ ಸಿನಿಮಾ, ಈ ವಾರ 200 ಕೋಟಿ ಕ್ಲಬ್‌ಗೆ ದಚ್ಚು ಡಿಚ್ಚಿ
Darshan Kaatera Movie Box Office Collection: ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ಕಾಟೇರ ಇಲ್ಲಿಯವರೆಗೆ 190.89 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ವಾರ ದರ್ಶನ್, ಆರಾಧನಾ ರಾಮ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಕಾಟೇರ 200 ಕೋಟಿ ಕ್ಲಬ್‌ಗೆ ಸೇರುವ ನಿರೀಕ್ಷೆಯಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದು, ಈ ವಾರ 200 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಸೂಚನೆಯಿದೆ. ಕಳೆದ ಮೂರು ದಿನಗಳಲ್ಲಿ ತರುಣ್ ಸುಧೀರ್ ನಿರ್ದೇಶನದ ಕಾಟೇರ 33.47 ಗಳಿಕೆ ಮಾಡಿದೆ. ಈ ಮೂಲಕ ಆರಾಧನಾ ರಾಮ್ ನಟನೆಯ ಕಾಟೇರದ ಒಟ್ಟು ಗ್ರಾಸ್ ಕಲೆಕ್ಷನ್ 190.89 ಕೋಟಿ ರೂಪಾಯಿಗೆ ತಲುಪಿದೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಿನಿಮಾ ವರದಿಗಾರ್ತಿ ಎ. ಶಾರದಾ ಟ್ವೀಟ್ ಮಾಡಿದ್ದಾರೆ. ಅವರು ನೀಡಿರುವ ಅಪ್‌ಡೇಟ್ ಪ್ರಕಾರ "ಕಾಟೇರ ಸಂಕ್ರಾಂತಿಗೆ ಅಮೋಘ ಹಬ್ಬ ಮಾಡಿದೆ. ವೀಕ್ಷಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿ ಕಾಟೇರ ನೋಡುವುದನ್ನು ಮುಂದುವರೆಸಿದ್ದಾರೆ. ಒಟ್ಟು 5622 ರನ್ ಶೋಗಳು ಮತ್ತು 3864 ಹೌಸ್‌ಫುಲ್ ಶೋಗಳೊಂದಿಗೆ ಕಾಟೇರ ಸಿನಿಮಾವು ಕಳೆದ ಮೂರು ದಿನಗಳಲ್ಲಿ 33.47 ಕೋಟಿ ರೂಪಾಯಿ ಸಂಗ್ರಹಿಸಿದೆ. ಕಾಟೇರವು ಇಲ್ಲಿಯವರೆಗೆ ಒಟ್ಟು 190.89 ಕೋಟಿಗಳನ್ನು ಗಳಿಸಿದೆ. ಈ ವಾರ 200 ಕೋಟಿ ಗಡಿ ದಾಟುವ ನಿರೀಕ್ಷೆಯಲ್ಲಿದ್ದು, ಇನ್ನಷ್ಟು ದಾಖಲೆಗಳನ್ನು ಮುರಿಯಲು ಸಜ್ಜಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಾಟೇರ ಚಿತ್ರತಂಡವೂ ಗಳಿಕೆಯ ಕುರಿತು ಪೋಸ್ಟರ್‌ಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಒಟ್ಟಾರೆ ಈ ವಾರ ಕಾಟೇರ ಗಳಿಕೆ 200 ಕೋಟಿ ದಾಟುವ ಸೂಚನೆಯಿದೆ. ಯಶ್ ನಟನೆಯ ಕೆಜಿಎಫ್ 2, ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ, ಕೆಜಿಎಫ್ 1 ಬಳಿಕ ಕಾಟೇರ (ಈಗಲೂ ರನ್ನಿಂಗ್) ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ಗಳಿಕೆ ಮಾಡುತ್ತಿದೆ. ವಿಕ್ರಾಂತ್ ರೋಣ, ಜೇಮ್ಸ್, 777 ಚಾರ್ಲಿ, ರಾಬರ್ಟ್, ಕುರುಕ್ಷೇತ್ರ, ರಾಜ್‌ಕುಮಾರ್ ದಾಖಲೆಗಳನ್ನು ಹಿಂದಿಕ್ಕಿ ಕಾಟೇರ ಸಿನಿಮಾವು ಮುನ್ನುಗುತ್ತಿದೆ.
ಕಾಟೇರ ಸಿನಿಮಾವು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಡುಗಡೆಯಾಗಿದೆ. ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡುವ ಉದ್ದೇಶದಿಂದ ಕೆಲವೊಂದು ರಾಜ್ಯಗಳಲ್ಲಿ ಚಿತ್ರತಂಡವು ಕಾಟೇರವನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿಲ್ಲ. ಕಾಟೇರ ಸಿನಿಮಾವು ಎರಡು ವಾರದಲ್ಲಿ 158 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ ಮೂರು ದಿನಗಳಲ್ಲಿ ತನ್ನ ತಿಜೋರಿಗೆ 33.47 ಕೋಟಿ ರೂಪಾಯಿ ಸೇರಿಸಿಕೊಂಡಿದೆ.
ಕಾಟೇರ ಸಿನಿಮಾಕ್ಕೆ ವಿವಿಧ ರಾಜ್ಯಗಳಿಂದ ಡಬ್ಬಿಂಗ್‌ಗಾಗಿ ಬೇಡಿಕೆ ಆರಂಭವಾಗಿದೆ. ತೆರೆಮರೆಯಲ್ಲಿ ಡಬ್ಬಿಂಗ್ ಕೆಲಸವೂ ನಡೆಯುತ್ತಿದೆ ಎನ್ನಲಾಗಿದೆ. ಕಾಟೇರ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹಲವು ಬಾರಿ ನೋಡುತ್ತಿದ್ದಾರೆ. ಇತ್ತೀಚೆಗೆ ಗಿರಿನಗರದ ಚಿತ್ರಮಂದಿರದಲ್ಲಿ ಎಚ್‌ಟಿ ಕನ್ನಡದ ಸಿನಿಮಾ ವಿಮರ್ಶಕರು ಚಿತ್ರ ನೋಡಿದಾಗ ಹತ್ತು ಹಲವು ಅಭಿಮಾನಿಗಳು ನಾವು ಈಗಾಗಲೇ ಹಲವು ಬಾರಿ ಚಿತ್ರ ನೋಡಿರುವುದಾಗಿ ತಿಳಿಸಿದ್ದಾರೆ.
ದರ್ಶನ್ ಅಭಿನಯದ ಕಾಟೇರ ಸಿನಿಮಾವು ಬಿಡುಗಡೆಯಾದ ಸಂದರ್ಭದಲ್ಲಿಯೇ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದರೆ ಗಳಿಕೆ ಇನ್ನೂ ಹೆಚ್ಚಿರುತ್ತಿತ್ತು. ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಕಾಟೇರ ಡಬ್ಬಿಂಗ್ ಆವೃತ್ತಿ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಚಿತ್ರತಂಡ ಇದೆ. ಇದೇ ಸಮಯದಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲೂ ಕಾಟೇರ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ದರ್ಶನ್ ಹುಟ್ಟುಹಬ್ಬಕ್ಕೂ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಈಗಲೇ 29 ಡೇಸ್ ಟು ಗೋ ಎಂದು ದಿನಗಣನೆ ಆರಂಭಿಸಿದ್ದಾರೆ.