Kaatera: ದರ್ಶನ್ ಕಾಟೇರ ಸಿನಿಮಾದ ಹಾವಿನ ವಿಷದ ಡೈಲಾಗ್ ವಿರುದ್ಧ ಏಕೆ ದ್ವೇಷ; ದೂರು ನೀಡಿರುವವರ ವಿರುದ್ಧ ಡಿ ಬಾಸ್ ಫ್ಯಾನ್ಸ್ ಗರಂ
Darshan kaatera movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಇದೇ ಡಿಸೆಂಬರ್ 29ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಸಮಯದಲ್ಲಿ ಹಾವಿನ ವಿಷಕ್ಕೆ ಸಂಬಂಧಪಟ್ಟಂತೆ ದರ್ಶನ್ ಹೇಳಿರುವ ಡೈಲಾಗ್ ವಿವಾದವೆಬ್ಬಿಸಿದೆ. ಈ ಕುರಿತ ವರದಿ ಇಲ್ಲಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಕಲಾವಿದರೊಬ್ಬರು "ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಎಂಬ ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ಕುರಿತು ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಗರಂ ಆಗಿದೆ. ಹಾವಿನ ವಿಷದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ದೂರು ದಾಖಲಿಸಿರುವ ವನ್ಯಜೀವಿ ಒಕ್ಕೂಟದ ವಿರುದ್ಧ ಇದೇ ಸಂದರ್ಭದಲ್ಲಿ ಡಿ ಬಾಸ್ ಅಭಿಮಾನಿಗಳೂ ಗರಂ ಆಗಿದ್ದಾರೆ.
ದರ್ಶನ್ ವಿರುದ್ಧ ದೂರು
ಕಾಟೇರ ಸಿನಿಮಾದಲ್ಲಿ ಹಾವಿನ ವಿಷಕ್ಕೆ ಸಂಬಂಧಪಟ್ಟಂತೆ ದರ್ಶನ್ ಹೇಳಿರುವ ಡೈಲಾಗ್ ಹೊಸ ವಿವಾದಕ್ಕೆ ಕಾರಣವಾಗಿದೆ. "ದರ್ಶನ್ ಅವರು ಹಾವಿನ ಕುರಿತು ನೀಡಿರುವ ಹೇಳಿಕೆಯು ಸಮಾಜದ ಮೇಲೆ ಕೆಟ್ಟ ಸಂದೇಶ, ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಹೇಳಿರುವ ಡೈಲಾಗ್ ಕಾನೂನಿಗೆ ವಿರುದ್ಧವಾದದ್ದು. ಹಾವುಗಳನ್ನು ಉಳಿಸಬೇಕೇ ಹೊರತು ಕೊಲ್ಲಲು ಪ್ರಚೋದನೆ ನೀಡಬಾರದು" ಎಂದು ವನ್ಯಜೀವಿ ರಕ್ಷಣಾ ಒಕ್ಕೂಟವು ರಾಜ್ಯಪಾಲರಿಗೆ ದೂರು ನೀಡಿದೆ ಎಂದು ವರದಿಗಳು ತಿಳಿಸಿವೆ. ದೂರು ನೀಡಿರುವ ಕುರಿತು ಎಚ್‌ಟಿ ಕನ್ನಡವು ಸ್ವತಂತ್ರವಾಗಿ ಖಚಿತಪಡಿಸಿಕೊಂಡಿಲ್ಲ. ಆದರೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ದೂರು ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿ ಬಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿ ಬಾಸ್ ಅಭಿಮಾನಿಗಳು ಗರಂ
"ಇವರೆಲ್ಲ ಎಂತಹ ನೀಚ ಜನರು ಎಂದರೆ .. ಅರ್ಜುನ ಅನ್ನುವ ನಮ್ಮ ನಾಡಿನ ಹೆಮ್ಮೆಯ ಆನೆ ಕೊಲೆಯಾದಗ ಅದಕ್ಕೆ ಗುಂಡು ಹೊಡೆದವರು ಯಾರೆಂದು ತಿಳಿದಿದ್ದರೂ ಕನಿಷ್ಟ ಪಕ್ಷ ಧ್ವನಿ ಎತ್ತಲಿಲ್ಲ ಅ ಮಾವುತ ಗೋಳಾಡಿದರು ಅವರ ಪರ ಈ ನೀಚರು ನಿಲ್ಲುವುದಿಲ್ಲ. ಪಾಪ ಬಡವ ಮಾವುತ ಕೊಲೆಗಾರ ಯಾರೆಂದು ತಿಳಿದಿದ್ದರೂ ಏನು ಮಾಡಲು ಆಗದೆ ಅಸಹಾಯಕತೆಯಿಂದ ಮೊನ್ನೆ ಅದರ 11 ದಿನದ ಕಾರ್ಯ ಮುಗಿಸಿದರು ಆವಾಗ ನಾಪತ್ತೆಯಾಗಿದ್ದ ಇವರೆಲ್ಲ ಒಂದು ದೂರು ಸಹ ನೀಡಲಿಲ್ಲ . ಚಿತ್ರದಲ್ಲಿ ನಡೆಯುವ ಒಂದು ಸನ್ನಿವೇಶ : ಉಳ್ಳವ ವರ್ಗದ ಒಬ್ಬ ಹೇಗೆ ಉಳುವವರ ಜನರನ್ನು ಹೇಗೆ ಬಳಸಿಕೊಳ್ಳಬೇಕು ಅವರನ್ನು ಹೇಗೆ ಹಣವಂತರು ಬಡವರನ್ನು ಹೇಗೆ ಶೋಷಣೆ ಮಾಡುತ್ತಾನೆ ಅನ್ನುವ ಪರಿಯ ಡೈಲಾಗ್ ಗೆ ದೂರು ನೀಡುತ್ತಾರೆ ಅಂದರೆ ಇದರ ಹಿಂದಿರುವ ಚಿತ್ರ ತಂಡ ಯಾವುದು ? ಯೋಚಿಸಿ . ತೆರೆಯ ಮೇಲೆ ಬರುವ ಡೈಲಾಗ್ ಗೆ ಕರಗುವ ಇವರ ಮನಸು ? ನಮ್ಮ ನಾಡಿನ ಹೆಮ್ಮೆ ಅರ್ಜುನ ಆನೆಯ ದೇಹ ಕಾಣಿಸಲಿಲ್ಲವೆ? " ಎಂದು ದರ್ಶನ್ ಸೇನಾ ಸಮಿತಿ 'ರಿ' ಯುವ ಘಟಕ ಮದ್ದೂರು ಫೇಸ್‌ಬುಕ್ ಪುಟದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಫೇಸ್‌ಬುಕ್ ಮಾತ್ರವಲ್ಲದೆ ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲೂ ಡಿಬಾಸ್ ಅಭಿಮಾನಿಗಳು ಇದೇ ರೀತಿಯ ಸಂದೇಶಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾವಿನ ವಿಷದ ಡೈಲಾಗ್ ಇಲ್ಲಿದೆ ನೋಡಿ
ಮುಂದೆ ಏನಾಗಬಹುದು?
ವನ್ಯಜೀವಿ ಸಂರಕ್ಷಣಾ ನಿಯಮಕ್ಕೆ ಈ ಸಂಭಾಷಣೆ ವಿರುದ್ಧವಾಗಿದೆ ಎಂದು ಈ ಡೈಲಾಗ್‌ಗೆ ಕತ್ತರಿ ಪ್ರಯೋಗ ಮಾಡಬಹುದು. ಇದು ಸಿನಿಮಾ ಡೈಲಾಗ್, ಡೈಲಾಗ್‌ನಲ್ಲಿ ಇವರೆಲ್ಲ ಹಾವು ಇದ್ದಂಗೆ ಎಂದು ಸ್ಪಷ್ಟವಾಗಿ ಮನುಷ್ಯರಿಗೆ ಸಂಬಂಧಿಸಿದ ಡೈಲಾಗ್ ಹೇಳಿರುವುದರಿಂದ ದೂರನ್ನು ಕಡೆಗಣಿಸುವ ಸಾಧ್ಯತೆಯೂ ಇದೆ.
ವಿಭಾಗ