ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ರಂತೆ ಚಂದನ್ ಶೆಟ್ಟಿ ನಿವೇದಿತಾ ಗೌಡ; 3 ವಾರದ ಹಿಂದಷ್ಟೇ ಲವ್-ಕುಕ್ಕಿ ಅಂತಿದ್ರು ಬಿಗ್‌ಬಾಸ್ ಕ್ಯೂಟ್ ಜೋಡಿ
Chandan Shetty Niveditha Gowda Divorce: ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ಗಾಗಿ ಬೆಂಗಳೂರಿನ ಕೌಟುಂಬಿಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಇವರು ಪರಿಚಿತರಾಗಿ ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಬಳಿಕ ವಿವಾಹವಾಗಿದ್ದರು.

ಬೆಂಗಳೂರು: ಬಿಗ್‌ಬಾಸ್‌ನ ಕ್ಯೂಟ್ ಜೋಡಿ ನಿವೇದಿತಾ ಗೌಡ ಮತ್ತು ರಾಪರ್ ಚಂದನ್ ಶೆಟ್ಟಿ ವಿವಾಹ ವಿಚ್ಛೇದನ (Chandan Shetty Niveditha Gowda Divorce) ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಮೂರು ವಾರದ ಹಿಂದೆ ನಿವೇದಿತಾ ಗೌಡರಿಗೆ ಪ್ರೀತಿಯಿಂದ ಹ್ಯಾಪಿ ಬರ್ತ್‌ಡೇ ಲವ್ ಎಂದಿದ್ರು ಚಂದನ್ ಶೆಟ್ಟಿ. ಚಂದನ್ ಶೆಟ್ಟಿ ಹುಟ್ಟುಹಬ್ಬದ ವಿಶ್‌ಗೆ ನಿವೇದಿತ ಗೌಡ ಪ್ರೀತಿಯಿಂದ ಥ್ಯಾಂಕ್ ಯು ಕುಕ್ಕಿ ಎಂದಿದ್ದರು. ಇಷ್ಟು ಪ್ರೀತಿ ಹಂಚಿಕೊಂಡಿದ್ದ ಜೋಡಿ ಇದಾದ ಮೂರು ವಾರದಲ್ಲಿಯೇ ಡಿವೋರ್ಸ್ ನೀಡುತ್ತಿದ್ದಾರೆ ಎಂಬ ಸುದ್ದಿ ಸಹಜವಾಗಿ ಅಭಿಮಾನಿಗಳಿಗೆ ಆತಂಕ ತಂದಿದೆ.
ಕನ್ನಡದ ಸ್ಟಾರ್ ಜೋಡಿ, ಕ್ಯೂಟ್ ಜೋಡಿ ಎಂದೇ ಜನಪ್ರಿಯತೆ ಪಡೆದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಡಿವೋರ್ಸ್ ಪ್ರಕ್ರಿಯೆಯಲ್ಲಿದ್ದಾರೆ ಎಂದು ವರದಿಗಳು ತಿಳಸಿವೆ. ಇಬ್ಬರು ಪರಸ್ಪರ ಒಪ್ಪಿಗೆಯಿಂದ ಈ ಪ್ರಕ್ರಿಯೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ರಲ್ಲಿ ಜನರಿಗೆ ಪರಿಚಯವಾಗಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ, ಲವ್ ಆಗಿತ್ತು. ನಿವೇದಿತಾ ಗೌಡರ ಮೇಳೆ ಬೊಂಬೆ ಬೊಂಬೆ ಎಂಬ ಹಾಡು ಬರೆದು ಎಲ್ಲರನ್ನೂ ರಂಜಿಸಿದ್ದರು. ಇವರಿಬ್ಬರ ಮುದ್ದಾದ ಜೋಡಿಗೆ ಎಲ್ಲರೂ ವಾಹ್ ಎಂದಿದ್ದರು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾ ಗೌಡರಿಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಈ ರೀತಿ ಪ್ರಪೋಸ್ ಮಾಡಿದ್ದು ವಿವಾದಕ್ಕೂ ಕಾರಣವಾಗಿತ್ತು.
ಬೆಂಗಳೂರಿನ ಶಾಂತಿನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ನಿವೇದಿತಾ ಗೌಡ ಅಥವಾ ಚಂದನ್ ಶೆಟ್ಟಿ ಅವರ ಕುಟುಂಬ ಮಾಹಿತಿ ನೀಡಿಲ್ಲ. ಈ ಕುರಿತು ಇವರಿಬ್ಬರು ನೇರವಾಗಿ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಟಿಕ್‌ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಈಗ ಜಿಎಸ್‌ಟಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಜಿಎಸ್‌ಟಿ ಸಿನಿಮಾದಲ್ಲಿ ಸೃಜನ್ ಲೋಕೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಸೃಜನ್‌ಗೆ ನಾಯಕಿಯಾಗಿ ಬಿಗ್‌ಬಾಸ್ ಗೊಂಬೆ ನಿವೇದಿತಾ ಗೌಡ ನಟಿಸುತ್ತಿದ್ದಾರೆ. ಜಿಎಸ್‌ಟಿ ಸಿನಿಮಾ ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಈ ಸಿನಿಮಾದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಸೃಜನ್ ಪುತ್ರ ಸುಕೃತ್ ನಟಿಸುತ್ತಿದ್ದಾರೆ. ಅಜ್ಜಿ, ಮಗ ಮತ್ತು ಮೊಮ್ಮಗ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ನಿವೇದಿತ ಗೌಡರ ಪತಿ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಇದೇ ಸಮಯದಲ್ಲಿ ಕ್ಯಾಂಡಿ ಕ್ರಶ್ ಎಂಬ ಸಿನಿಮಾದಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜತೆಯಾಗಿ ನಟಿಸುತ್ತಿದ್ದಾರೆ. ಇದೇ ಸಮಯದಲ್ಲಿ ಇವರಿಬ್ಬರ ಡಿವೋರ್ಸ್ ಸುದ್ದಿ ಬಂದಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
