ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ವಿಮರ್ಶೆ; ಹಳೇ ಶಾಲೆಯಲ್ಲಿ ಹೊಸ ಸ್ಟುಡೆಂಟ್ಸ್, ಮಕ್ಕಳಷ್ಟೇ ಅಲ್ಲ ಪೋಷಕರಿಗೂ ಇಲ್ಲಿದೆ ಪಾಠ
ನಿರ್ದೇಶಕ ಅರುಣ್ ಅಮುಕ್ತ ಈ ಕಥೆಯನ್ನು ಕೇವಲ ಒಂದು ವರ್ಗಕ್ಕೆ ಹೇಳಿಲ್ಲ. ಅದರ ಜತೆಗೆ ಇಡೀ ಮನೆಮಂದಿ ಕೂತು ನೋಡುವ ಸಿನಿಮಾ ಕಟ್ಟಿಕೊಡುವ ಕೆಲಸ ಅವರಿಂದ ಸಂದಾಯವಾಗಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ಹೆತ್ತವರಿಗೂ ಪಾಠ ಮಾಡಿದ್ದಾರವರು.
Vidhyarthi Vidyarthiniyare Review: ವಿದ್ಯಾರ್ಥಿ ವಿದ್ಯಾರ್ಥಿನಿಯರೇ.. ಈ ಶೀರ್ಷಿಕೆಯೇ ಹೇಳುತ್ತದೆ ಇದೊಂದು ಕಲರ್‌ಫುಲ್ ಶಾಲೆಯೊಂದರ ಕಹಾನಿ ಅಂತ. ಹಾಗಾಗಿ ಈ ಚಿತ್ರದಲ್ಲಿ ಏನೆಲ್ಲ ಸಿಗಬಹುದು ಎಂಬ ಒಂದು ಮಟ್ಟಿಗಿನ ಅಂದಾಜಂತೂ ಪ್ರೇಕ್ಷಕನಿಗೆ ಅದಾಗಲೇ ಸಿಕ್ಕಿದೆ. ಶಾಲೆ, ವಿದ್ಯಾರ್ಥಿಗಳು ಎಂದರೆ ಅದೇ ಹಳೇ ಮರ ಸುತ್ತುವ ವಿಷಯಗಳತ್ತ ಹೆಚ್ಚು ವಾಲದ ನಿರ್ದೇಶಕ ಅರುಣ್ ಅಮುಕ್ತ ಕೊಂಚ ಬೇರೆಯದನ್ನೇ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ನೋಡುಗರಿಗೂ ಅದು ಕೊಂಚ ಹೊಸದೆನಿಸುತ್ತದೆ. ಪ್ರಸ್ತುತ ಟ್ರೆಂಡ್ ಬಗ್ಗೆಯೂ ಅವರು ವಿದ್ಯಾರ್ಥಿಗಳಿಂದ ಮಾತನಾಡಿಸಿದ್ದಾರೆ.
ಒಂದು ಶಾಲೆ, ಆ ಶಾಲೆಯಲ್ಲಿ ಒಂದು ಗ್ಯಾಂಗ್. ಎಲ್ಲರನ್ನೂ ಟೀಸ್ ಮಾಡುತ್ತ, ತಮ್ಮದೇ ಸಹಪಾಠಿಗಳಿಂದ ಹಿಡಿದು ಪ್ರಿನ್ಸಿಪಾಲ್, ಪ್ಯೂನ್‌ವರೆಗೂ ಎಲ್ಲರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ತಂಡವದು. ಯಶ್, ಧ್ರುವ, ರಮ್ಯಾ, ನಿವೇದಿತಾ... ಈ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕಂಡರೆ ಇಡೀ ಶಾಲೆಗೆ ಶಾಲೆಯೇ ಬೈಯುತ್ತದೆ. ಅಷ್ಟೊಂದು ಕ್ವಾಟ್ಲೆ ಗಿರಾಕಿಗಳಿವರು. ದುರಹಂಕಾರಕ್ಕೆ ಮತ್ತೊಂದು ಹೆಸರೇ ಈ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಅವರ ಕೈಗೆ ಸಿಕ್ಕವರಾರು ತಪ್ಪಿಸಿಕೊಳ್ಳುವುದೇ ಕಷ್ಟ ಕಷ್ಟ. ಹೆತ್ತ ಅಪ್ಪ ಅಮ್ಮನಿಗೂ ಆವಾಜ್ ಹಾಕೋ ಸ್ಟುಡೆಂಟ್ಸ್ ಇವರು.
ಶಾಲೆ ಅಂದರೆ ಅಲ್ಲಿ ದ್ವೇಷ, ಪ್ರೀತಿ ಇರಲೇಬೇಕಲ್ಲವೇ. ಅದರ ನೆರಳೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದಲ್ಲಿ ಕಾಣಿಸುತ್ತದೆ. ಹೊಡಿ ಬಡಿ ಎನ್ನುತ್ತ ಕೈ ಕೈ ಮಿಲಾಯಿಸಲೂ ಹಿಂಜರಿಯಲ್ಲ ಈ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಇದೆಲ್ಲದಕ್ಕಿಂತ ಡ್ರಗ್ ವ್ಯಸನದ ವ್ಯವಸ್ಥಿತ ಜಾಲದ ಬಗ್ಗೆಯೂ ನಿರ್ದೇಶಕರು ಈ ವಿದ್ಯಾರ್ಥಿಗಳಿಂದ ಹೇಳಿಸುವ ಪ್ರಯತ್ನ ಮಾಡಿದ್ದಾರೆ. ಹೀಗೆ ಯಾವ ಮಾತಿಗೂ ಕಿವಿಗೊಡದ ಈ ಹುಡುಗ ಹುಡುಗಿಯರು ಮುಂದೊಂದು ದಿನ ಸರಿ ದಾರಿಗೆ ಬರ್ತಾರೆ. ಮಾಡಿದ ತಪ್ಪು ಅರಿವಿಗೆ ಬಂದು ತಲೆ ತಗ್ಗಿಸುತ್ತಾರೆ. ಅಷ್ಟಕ್ಕೂ ಇವರೆನ್ನು ಸರಿದಾರಿಗೆ ತಂದವರಾರು? ಅದೇ ಈ ಸಿನಿಮಾದ ಕುತೂಹಲದ ಘಟ್ಟ.
ನಿರ್ದೇಶಕ ಅರುಣ್ ಅಮುಕ್ತ ಈ ಕಥೆಯನ್ನು ಕೇವಲ ಒಂದು ವರ್ಗಕ್ಕೆ ಹೇಳಿಲ್ಲ. ಅದರ ಜತೆಗೆ ಇಡೀ ಮನೆಮಂದಿ ಕೂತು ನೋಡುವ ಸಿನಿಮಾ ಕಟ್ಟಿಕೊಡುವ ಕೆಲಸ ಅವರಿಂದ ಸಂದಾಯವಾಗಿದೆ. ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ಹೆತ್ತವರಿಗೂ ಪಾಠ ಮಾಡಿದ್ದಾರವರು. ಆಧುನಿಕತೆ, ತಂತ್ರಜ್ಞಾನದ ಸೆಳೆತಕ್ಕೆ ಸಿಕ್ಕು ಯುವಪೀಳಿಗೆಯ ಹಾದಿ ತಪ್ಪುತ್ತಿರುವಲ್ಲಿ ಪಾಲಕರ ಪಾತ್ರವೂ ಎಷ್ಟಿದೆ ಎಂಬುದನ್ನೂ ಅವರು ಹೇಳಿದ್ದಾರೆ. ಹಣವೊಂದೆ ಎಲ್ಲವೂ ಅಲ್ಲ, ಅದರಾಚೆಗೆ ಪ್ರೀತಿಯೂ ಎಷ್ಟು ಮುಖ್ಯ ಎಂಬ ಅಂಶವೂ ಈ ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಅರುಣ್ ಅಮುಕ್ತ.
ಸಿನಿಮಾದ ಎಳೆ ಚೆನ್ನಾಗಿದೆಯಾದರೂ, ಇಂಥ ಗಟ್ಟಿ ಸಂದೇಶದ ಸಿನಿಮಾಗಳು ಈ ಹಿಂದೆ ಸಾಕಷ್ಟು ಬಂದು ಹೋಗಿವೆ. ಹತ್ತರಲ್ಲಿ ಹನ್ನೊಂದಾಗಬಾರದು, ನೀತಿ ಪಾಠ ಹೇಳಿದಂತೆ ಅನಿಸಬಾರದು ಎಂಬ ಕಾರಣಕ್ಕೆ ಹೊಸ ಪ್ರಯೋಗ ಮತ್ತು ಪ್ರಯತ್ನಕ್ಕೆ ನಿರ್ದೇಶಕರು ಒಗ್ಗಿಕೊಂಡರೂ, ಅದ್ಯಾಕೋ ಕೊಂಚ ಎಳೆದಂತೆ ಭಾಸವಾಗುತ್ತದೆ. ನೋಡುಗನ ತಾಳ್ಮೆಯನ್ನೂ ಕೆಲವೊಮ್ಮೆ ಪರೀಕ್ಷಿಸುತ್ತದೆ. ಮೊದಲಾರ್ಧ ವಿದ್ಯಾರ್ಥಿಗಳ ಉಪಟಳದಲ್ಲಿಯೇ ಮುಗಿಯುವ ಈ ಸಿನಿಮಾ, ಎರಡನೇ ಭಾಗಕ್ಕೆ ಬರುವಷ್ಟರಲ್ಲಿ ಕುತೂಹಲಕ್ಕೆ ಕರೆದೊಯ್ಯುತ್ತದೆ. ಅಲ್ಲಿಂದ ಅಸಲಿ ಕಥೆ ಶುರುವಾಗುತ್ತದೆ.
ಅದರ ಜತೆಯಲ್ಲಿಯೇ, ವಿದ್ಯಾರ್ಥಿ ವಿದ್ಯಾರ್ಥಿನಿಯರ ಅತಿರೇಕ ಮಾತುಗಳು ನೋಡುಗರ ಸಹನೆ ಪರೀಕ್ಷಿಸುತ್ತವೆ. ಇದರಾಚೆಗೆ ನಿರ್ದೇಶಕರು ತಾವು ಹೇಳಬೇಕು ಎನಿಸಿದ ಅಂಶವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ನಟನೆಯ ವಿಚಾರದಲ್ಲಿ ಚಂದನ್ ಶೆಟ್ಟಿ ಕೊಂಚ ಪಳಗಿದ್ದಾರೆ. ಎರಡು ಶೇಡ್‌ನ ಅವರ ಪಾತ್ರಕ್ಕೆ ಮೆಚ್ಚುಗೆ ಸಂದಾಯವಾಗಿದೆ. ಅವರೀಗ ಫುಲ್ ಟೈಮ್ ನಟ ಕೂಡ ಹೌದು. ಇನ್ನುಳಿದಂತೆ ಅಮರ್, ವಿವಾನ್, ಭಾವನಾ, ಮನಸ್ವಿ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಹಿರಿಯ ನಟಿ ಭವ್ಯ, ಸುನೀಲ್ ಪುರಾಣಿಕ್ ಸೇರಿ ಇನ್ನೂ ಹಲವರು ಅಚ್ಚುಕಟ್ಟಾಗಿ ಕೊಟ್ಟ ಪಾತ್ರದಲ್ಲಿ ಜೀವಿಸಿದ್ದಾರೆ. ವಿಜೇತ್ ಕೃಷ್ಣ ಅವರ ಸಂಗೀತವೂ, ಕುಮಾರ್ ಗೌಡ ಅವರ ಛಾಯಾಗ್ರಹಣವೂ ಚಿತ್ರದ ತೂಕ ಹೆಚ್ಚಿಸಿವೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಹೇಳುವುದಾದರೆ, ಹಳೇ ಶಾಲೆಗೆ ಹೊಸ ಸ್ಟುಡೆಂಟ್ಸ್ ಬಂದಿದ್ದಾರೆ, ಮಕ್ಕಳಷ್ಟೇ ಅಲ್ಲ ಪೋಷಕರಿಗೂ ಇಲ್ಲಿ ಪಾಠವಿದೆ.
ಚಿತ್ರ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ
ನಿರ್ದೇಶನ: ಅರುಣ್ ಅಮುಕ್ತ
ನಿರ್ಮಾಣ: ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ. ಶಿವಲಿಂಗೇಗೌಡ
ಪಾತ್ರವರ್ಗ: ಚಂದನ್ ಶೆಟ್ಟಿ, ಅಮರ್, ಮನಸ್ವಿ, ಭಾವನಾ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ಪ್ರಶಾಂತ್ ಸಂಬರ್ಗಿ, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ ಮುಂತಾದವರು
ರೇಟಿಂಗ್: 3\5
ವಿಮರ್ಶೆ: ಮಂಜು ಕೊಟಗುಣಸಿ