‘ಜೈಲಲ್ಲಿ ಕ್ರಿಮಿನಲ್ಸ್ ಜತೆಗೆ ಮಾತನಾಡದೇ ದರ್ಶನ್ ಮತ್ಯಾರ ಜತೆ ಮಾತನಾಡಬೇಕು’ ಎಂದಿದ್ದ ಸುಮಲತಾ ಅಂಬರೀಶ್‌ಗೆ ತಿವಿದ ಚೇತನ್ ಅಹಿಂಸಾ
ಜೈಲಿನಲ್ಲಿರುವ ನಟ ದರ್ಶನ್ ಅವರ ಪರ ಬ್ಯಾಟ್ ಬೀಸಿದ್ದ ‘ಮದರ್ ಇಂಡಿಯಾ’ ಸುಮಲತಾ ಅಂಬರೀಶ್ ಹೇಳಿಕೆಗೆ ಚೇತನ್ ಅಹಿಂಸಾ ಟಾಂಗ್ ಕೊಟ್ಟಿದ್ದಾರೆ . ಅಷ್ಟಕ್ಕೂ ದರ್ಶನ್ ಬಗ್ಗೆ ಸುಮಲತಾ ಹೇಳಿದ್ದೇನು, ಇತ್ತ ಸುಮಲತಾ ಅವರ ಯಾವ ಮಾತಿಗೆ ಚೇತನ್ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ಮಾಹಿತಿ.
Chetan ahimsa on Sumalata Ambareesh: ಸ್ಯಾಂಡಲ್‌ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್ ಬಗ್ಗೆಯೂ ಚೇತನ್ ಮಾತನಾಡಿದ್ದರು. ಇದೀಗ ಮತ್ತೆ ದರ್ಶನ್ ಅವರ ಪರ ಬ್ಯಾಟ್ ಬೀಸಿದ್ದ ‘ಮದರ್ ಇಂಡಿಯಾ’ ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ದರ್ಶನ್ ಬಗ್ಗೆ ಸುಮಲತಾ ಹೇಳಿದ್ದೇನು, ಇತ್ತ ಸುಮಲತಾ ಅವರ ಯಾವ ಮಾತಿಗೆ ಚೇತನ್ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ಮಾಹಿತಿ.
ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬುದಕ್ಕೆ ಸಾಕ್ಷ್ಯ ಎಂಬಂತೆ, ಇತ್ತೀಚೆಗೆ ಫೋಟೋವೊಂದು ಲೀಕ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಹಾಯಾಗಿ ಆಪ್ತರ ಜತೆಗೆ ಕುಳಿತುಕೊಂಡು, ಒಂದು ಕೈಯಲ್ಲಿ ಮಗ್ ಹಿಡಿದು ಕಾಫಿ ಹೀರುತ್ತಿದ್ದರೆ, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದರು. ವಿಲ್ಸನ್ ಗಾರ್ಡನ್ ನಾಗ ಸೇರಿ ದರ್ಶನ್ ಆಪ್ತರೂ ಆ ಫೋಟೋದಲ್ಲಿದ್ದರು. ಈ ಫೋಟೋ ಹೊರಬೀಳುತ್ತಿದ್ದಂತೆ, ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಎದುರಾದವು. ಅದರ ಪರಿಣಾಮ, ಕೆಲ ಸಿಬ್ಬಂದಿಯನ್ನೂ ಸಸ್ಪೆಂಡ್ ಮಾಡಲಾಗಿತ್ತು.
ಸುಮಲತಾ ಅಂಬರೀಶ್ ಹೇಳಿದ್ದೇನು?
ಹೀಗೆ ದರ್ಶನ್ ಅಲ್ಲಿದ್ದವರ ಜತೆಗೆ ಮಾತನಾಡುತ್ತ ಕುಳಿತಿದ್ದರ ಬಗ್ಗೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದರು. "ನಟ ದರ್ಶನ್ ನಮಗೆ ಆಪ್ತರು. ಅವರ ಕುರಿತು ಏನು ಮಾತನಾಡಿದರೂ ವಿವಾದದ ಸುದ್ದಿಯಾಗುತ್ತದೆ. ಆದರೆ, ಜೈಲಿನ ಕುರಿತು ಎಲ್ಲರಿಗೂ ಗೊತ್ತು. ಅಲ್ಲಿ ಈ ರೀತಿ ನಡೆಯುವುದು ಇದೇ ಮೊದಲಲ್ಲ. ಈ ಹಿಂದೆಯೂ ನಡೆಯುತ್ತದೆ. ಅಲ್ಲಿ ಹೀಗೆಲ್ಲ ನಡೆಯುವುದು ಮಾಮೂಲು ಎಂಬಂತಾಗಿದೆ" ಎಂದಿದ್ದರು.
"ಜೈಲಲ್ಲಿ ಒಳ್ಳೆಯವರು ಇರುತ್ತಾರ? ಜೈಲಲ್ಲಿ ಸಾಮಾನ್ಯವಾಗಿ ಅಪರಾಧ ಮಾಡಿ ಹೋದವರೇ ಇರುತ್ತಾರೆ. ಹಾಗಂತ ಜೈಲಲ್ಲಿ ದರ್ಶನ್ ಯಾರ ಜತೆಯೂ ಮಾತನಾಡಬಾರದೇ? ಜೈಲಲ್ಲಿ ಒಂದಿಷ್ಟು ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ. ಇದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಲ್ಲಿ ಮಾತ್ರವಲ್ಲ. ಎಲ್ಲಾ ಜೈಲಲ್ಲೂ ಇದು ನಡೆಯುತ್ತದೆ" ಎಂದಿದ್ದರು.
ಮುಂದುವರಿದು ಮಾತನಾಡಿದ್ದ ಸುಮಲತಾ ಅಂಬರೀಶ್, "ಅಮೆರಿಕದ ಜೈಲುಗಳಲ್ಲಿ ಡ್ರಗ್ಸ್, ಮೊಬೈಲ್, ಸಿಗರೇಟು ಎಲ್ಲವೂ ಸಿಗುತ್ತದೆ. ಹಾಗಂತ, ಈ ರೀತಿ ನಡೆಯುವುದು ಸರಿ ಎಂದು ಹೇಳುತ್ತಿಲ್ಲ. ಇದು ವ್ಯವಸ್ಥೆಯ ಭ್ರಷ್ಟಾಚಾರ. ಆದರೆ, ಮಾಧ್ಯಮಗಳು ಸದ್ಯ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಪ್ರಶ್ನೆ ಮಾಡ್ತಾ ಇದ್ದೀರಿ. ಜೈಲು ವ್ಯವಸ್ಥೆಯನ್ನು ಸಚಿವಾಲಯವು ಸರಿಮಾಡಬೇಕು" ಎಂದಿದ್ದರು.
ಸುಮಲತಾ ಹೇಳಿಕೆಗೆ ಚೇತನ್ ಟಾಂಗ್
"ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ರೌಡಿಗಳೊಂದಿಗಿನ ದರ್ಶನ್ರ ಚಿತ್ರವನ್ನು ಸಮರ್ಥಿಸಿಕೊಂಡ ಸುಮಲತಾ ‘ಕ್ರಿಮಿನಲ್ಸ್ ಹೊರತುಪಡಿಸಿ ಬೇರೆ ಯಾರು ಜೈಲಿನಲ್ಲಿದ್ದಾರೆ' ಎಂದು ಹೇಳಿದ್ದಾರೆ. ಸೆರೆವಾಸಕ್ಕೊಳಗಾದವರ ಅಪರಾಧಗಳಲ್ಲಿ ಕಾನೂನುಬಾಹಿರತೆ ಮತ್ತು ಅನೈತಿಕತೆಯ ವಿವಿಧ ಮಟ್ಟಗಳು ಅಸ್ತಿತ್ವದಲ್ಲಿವೆ ಎಂಬುದು ಸುಮಲತಾಗೆ ಅರ್ಥವಾಗಿಲ್ಲ. ಅನೇಕರು ಸಣ್ಣ ಕಳ್ಳತನ ಅಥವಾ ಲಂಚದ ಆರೋಪಗಳಿಂದಾಗಿ ಜೈಲಿನಲ್ಲಿದ್ದರೆ, ಇತರರು ಘೋರ ಕೊಲೆ ಮತ್ತು ಅತ್ಯಾಚಾರ ಆರೋಪಗಳಿಂದಾಗಿ ಜೈಲಿನಲ್ಲಿದ್ದಾರೆ. ಕೆಲವು ಅತ್ಯಂತ ಅಪಾಯಕಾರಿ ಭೂಗತ ಅಪರಾಧಿಗಳೊಂದಿಗೆ ಒಡನಾಟ ಹೊಂದಿರುವುದು ದರ್ಶನ್ ಬಗ್ಗೆ ಸಾಕಷ್ಟು ಹೇಳುತ್ತದೆ" ಎಂದಿದ್ದಾರೆ.