ಕನ್ನಡಕ್ಕೆ ಮೊದಲ Cannes ಪ್ರಶಸ್ತಿ ತಂದು ಕೊಟ್ಟ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರ; ನಟ ಯಶ್ ಮೆಚ್ಚುಗೆ
ಮೈಸೂರು ಮೂಲದ ಡಾ. ಚಿದಾನಂದ್ ಎಸ್ ನಾಯ್ಕ್ ನಿರ್ದೇಶನದಲ್ಲಿ ಮೂಡಿಬಂದ ಕನ್ನಡದ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ (Sunflowers Were the First Ones to Know) ಕಿರುಚಿತ್ರವೀಗ ವಿದೇಶಿ ನೆಲದಲ್ಲಿ ಮೋಡಿ ಮಾಡಿ, ಕಾನ್ ಸಿನಿಮೋತ್ಸವದ ಲಾ ಸಿನೆಫ್ ವಿಭಾಗದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಬಾಚಿಕೊಂಡಿದೆ.

Chidananda S Naik: ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಕನ್ನಡದ ಸೂರ್ಯಕಾಂತಿ ಹೂವಿಗೆ ಪ್ರಶಸ್ತಿ ಲಭಿಸಿದೆ. ಅಂದರೆ, ಮೈಸೂರು ಮೂಲದ ಡಾ. ಚಿದಾನಂದ್ ಎಸ್ ನಾಯ್ಕ್ ನಿರ್ದೇಶನದಲ್ಲಿ ಮೂಡಿಬಂದ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ (Sunflowers Were the First Ones to Know) ಕಿರುಚಿತ್ರವೀಗ ವಿದೇಶಿ ನೆಲದಲ್ಲಿ ಮೋಡಿ ಮಾಡಿ, ಕಾನ್ ಸಿನಿಮೋತ್ಸವದ ಲಾ ಸಿನೆಫ್ ವಿಭಾಗದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. 2020ರಲ್ಲಿ ಅಶ್ಮಿತಾ ಗುಹಾ ನಿಯೋಗಿ ಅವರ ಕ್ಯಾಟ್ ಡಾಗ್ ಕಾನ್ ಸಿನಿಮೋತ್ಸವದ ಲಾ ಸಿನೆಫ್ ಪ್ರಶಸ್ತಿ ಗೆದ್ದ ಮೊದಲ ಕಿರುಚಿತ್ರವಾಗಿತ್ತು.
ಈ ಕಿರುಚಿತ್ರಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು?
ಕನ್ನಡದ ಯಾವುದೇ ಸಿನಿಮಾ ಅಥವಾ ಕಿರುಚಿತ್ರಕ್ಕೆ ಈ ವರೆಗೂ ಕಾನ್ ಸಿನಿಮೋತ್ಸವದಲ್ಲಿ ಪ್ರಶಸ್ತಿ ಲಭಿಸಿರಲಿಲ್ಲ. ಇದೀಗ ಇದೇ ಮೊದಲ ಸಲ ಅಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ ಮೂಲದ ಡಾ. ಚಿದಾನಂದ್ ಎಸ್ ನಾಯ್ಕ್ ನಿರ್ದೇಶನದ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರ. ಹೀಗೆ ಮೊದಲ ಸ್ಥಾನ ಪಡೆದ ಈ ಕಿರುಚಿತ್ರಕ್ಕೆ ಬಹುಮಾನದ ರೂಪದಲ್ಲಿ 15 ಸಾವಿರ ಯೂರೋ (13,48,335 ರೂಪಾಯಿ) ಸಿಕ್ಕಿದೆ. ಈ ಶಾರ್ಟ್‌ಫಿಲಂನಲ್ಲಿ ನಟ ಜಹಾಂಗೀರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸ್ಪರ್ಧಾ ಕಣದಲ್ಲಿ ಇದ್ದ ಕಿರುಚಿತ್ರಗಳೆಷ್ಟು?
ವಿಶೇಷ ಏನೆಂದರೆ, ಕಿರುಚಿತ್ರ ವಿಭಾಗಕ್ಕೆ ಒಟ್ಟು 2263 ಚಿತ್ರಗಳು ಅರ್ಜಿ ಸಲ್ಲಿಸಿದ್ದವು. ಆ ಪೈಕಿ ಅಂತಿಮವಾಗಿ 18 ಚಿತ್ರಗಳು ಆಯ್ಕೆಯಾಗಿದ್ದವು. ಆ 18 ಕಿರುಚಿತ್ರಗಳಲ್ಲಿ ಚಿದಾನಂದ ಎಸ್ ನಾಯ್ಕ್ ಅವರ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. 2263 ಕಿರುಚಿತ್ರಗಳಲ್ಲಿ ಪೈಕಿ ಭಾರತದ ಏಕೈಕ ಕಿರುಚಿತ್ರವೂ ಇದಾಗಿದೆ. 16 ನಿಮಿಷಗಳ ಈ ಕಿರುಚಿತ್ರ ಹುಂಜ ಮತ್ತು ಅಜ್ಜಿಯ ಕಥೆಯನ್ನು ಒಳಗೊಂಡಿದೆ. ಪುಣಿಯ ಫಿಲಂ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (FTII) ಸಂಸ್ಥೆ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ.
ಎರಡು, ಮೂರನೇ ಸ್ಥಾನ ಯಾರಿಗೆ?
ಇನ್ನು ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಚಿತ್ರಕ್ಕೆ 15,000 ಯೂರೋಗಳು ಬಹುಮಾನದ ರೂಪದಲ್ಲಿ ಸಿಕ್ಕರೆ, ಕೊಲಂಬಿಯಾ ಯೂನಿವರ್ಸಿಟಿಯ ಅಸ್ಯ ಸೆಗಲೋವಿಚ್ ನಿರ್ದೇಶನದ "ಔಟ್ ಆಫ್ ದಿ ವಿಡೋ ಥ್ರೂ ದಿ ವಾಲ್" ಕಿರುಚಿತ್ರ ಎರಡನೇ ಸ್ಥಾನ ಪಡೆದಿದ್ದು, ಬಹುಮಾನದ ರೂಪದಲ್ಲಿ 11,250 ಯುರೋಗಳು ಸಿಕ್ಕಿವೆ. ಮಾನ್ಸಿ ಮಹೇಶ್ವರಿ ಅವರ ಯುಕೆ ಮೂಲದ ಆನಿಮೇಟೆಡ್ 'ಬನ್ನಿಹುಡ್' ಕಿರುಚಿತ್ರ ಮೂರನೇ ಸ್ಥಾನ ಪಡೆದು, 7,500 ಯುರೋಗಳನ್ನು ಬಹುಮಾನವಾಗಿ ಪಡೆದಿದೆ.
ನಟ ಯಶ್ ಮೆಚ್ಚುಗೆ..
‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರಕ್ಕೆ ಮೊದಲ ಕಾನ್ ಸಿನಿಮೋತ್ಸವದಲ್ಲಿ ಪ್ರಶಸ್ತಿ ಸಿಗುತ್ತಿದ್ದಂತೆ, ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನಟ ಯಶ್, ಇಡೀತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. "ಅಭಿನಂದನೆಗಳು ಚಿದಾನಂದ್ ನಾಯ್ಕ್. ಕಾನ್ ಸಿನಿಮೋತ್ಸವದ ಲಾ ಸಿನೆಫ್ ವಿಭಾಗದಲ್ಲಿ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರುಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ. ಕನ್ನಡ ಜಾನಪದವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದು, ಭಾರತೀಯ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
