ದರ್ಶನ್ ಜತೆ ಬಂಧಿತರಾಗಿರುವ 13 ಆರೋಪಿಗಳ ವಿವರ ಬಹಿರಂಗ; ಚಾಲೆಂಜಿಂಗ್ ಸ್ಟಾರ್‌ನ ಕಾಪಾಡಲು ಪ್ರಭಾವಿಗಳ ಒತ್ತಡಕ್ಕೆ ಬಗ್ಗದ ಕರ್ನಾಟಕ ಪೊಲೀಸರು
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ನಟ ದರ್ಶನ್, ಪವಿತ್ರಾ ಗೌಡ ಬಂಧನವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧನದಲ್ಲಿರುವ 13 ಆರೋಪಿಗಳ ವಿವರ ಇಲ್ಲಿದೆ. ಈ ಪ್ರಕರಣದಲ್ಲಿ ಪ್ರಭಾವಿಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎನ್ನುವ ವಿವರವೂ ಬಹಿರಂಗವಾಗಿದೆ.

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸ್ ಬಂಧನದಲ್ಲಿದ್ದು, ಇಂದು ಸಂಜೆ 4.30ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಮತ್ತು ಇತರರನ್ನು ಪೊಲೀಸರು ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹದಿಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಹೆಸರು ಬಹಿರಂಗವಾಗಿದೆ.
ಬಂಧಿತರ ವಿವರ
ಪೊಲೀಸರು ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ ಸೇರಿದಂತೆ ವಿವಿಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಹೆಸರು ಮತ್ತು ಊರಿನ ವಿವರ ಈ ಮುಂದಿನಂತೆ ಇದೆ. ವಿನಯ್ ವಿ, ಜಯಣ್ಣ ಫಾರ್ಮ್ ಹೌಸ್, ಎಂ ಲಕ್ಷ್ಮಣ್, ಆರ್‌ಪಿಸಿ ಬಡಾವಣೆ ಬೆಂಗಳೂರು, ನಾಗರಾಜು ಆರ್, ರಾಮಕೃಷ್ಣ ನಗರ ಮೈಸೂರು, ಪವನ್ ಕೆ, ಆರ್‌ಆರ್ ನಗರ/ಚನ್ನಪಟ್ಟಣ, ಪ್ರದೋಶ್ ಎಸ್, ಗಿರಿನಗರ, ಬೆಂಗಳೂರು, ದೀಪಕ್ ಕುಮಾರ್ ಎಂ, ಆರ್‌ಆರ್ ನಗರ, ಬೆಂಗಳೂರು., ನಂದೀಶ್, ಆರ್‌ಆರ್ ನಗರ/ಮಂಡ್ಯ, ಕಾರ್ತಿಕ್, ಗಿರಿನಗರ, ಬೆಂಗಳೂರು., ನಿಖಿಲ್ ನಾಯಕ್, ಬನ್ನೇರುಘಟ್ಟ, ಬೆಂಗಳೂರು., ಕೇಶವಮೂರ್ತಿ, ಗಿರಿನಗರ, ಬೆಂಗಳೂರು., ರಾಘವೇಂದ್ರ ಆಲಿಯಾಸ್ ರಾಘು, ಕೋಳಿಹಟ್ಟಿ ದೊಡ್ಡಪೇಟೆ, ಚಿತ್ರದುರ್ಗ ಬಂಧಿತರು.
ಪ್ರಭಾವಿಗಳ ಒತ್ತಡ
ದರ್ಶನ್‌ಗೆ ಈ ಪ್ರಕರಣದಲ್ಲಿ ಪೊಲೀಸರು ಬಂಧಿಸುವ ಸೂಚನೆ ಮೊದಲೇ ದೊರಕಿತ್ತು. ನಿನ್ನೆ ರಾತ್ರಿ ಕೆಲವು ರಾಜಕಾರಣಿಗಳು, ಸಿನಿಮಾ ಕ್ಷೇತ್ರದ ಹಲವು ಜನರು ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣದಲ್ಲಿ ದರ್ಶನ್ ಅವರನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲಿ ದರ್ಶನ್‌ಗೆ ಆತ್ಮೀಯರಿದ್ದಾರೆ. ಇವರ ಮೂಲಕ ಪ್ರಭಾವ ಬೀರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಕ್ಯಾರೇ ಎನ್ನದ ಕರ್ನಾಟಕದ ಪೊಲೀಸರು ದರ್ಶನ್ ಅವರನ್ನು ಎ1 ಆರೋಪಿಯಾಗಿ ಪರಿಗಣಿಸಿ ಕೇಸು ಜಡಿದಿದ್ದಾರೆ.
ಪ್ರಬಲ ಸಾಕ್ಷಿಗಳಿಂದ ಸಂಕಷ್ಟ
ವಿವಿಧ ಸಿಸಿಟೀವಿಗಳಲ್ಲಿ ಆರೋಪಿಗಳು ಸೆರೆಯಾಗಿದ್ದಾರೆ. ಆರೋಪಿಗಳ ಮೊಬೈಲ್ ನೆಟ್‌ವರ್ಕ್‌ಗಳ ಲೊಕೇಶನ್‌ಗಳನ್ನೂ ನೋಡಲಾಗಿದೆ. ರೇಣುಕಾಸ್ವಾಮಿಯ ಮೊಬೈಲ್ ಲೊಕೇಶನ್ ಪತ್ತೆಯಾಗಿತ್ತು. ಆರೋಪಿಗಳು ಈಗಾಗಲೇ ನೀಡಿರುವ ಹೇಳಿಕೆಯಂತೆ ಅಲ್ಲಿ ದರ್ಶನ್ ಇದ್ದದ್ದೂ ಖಚಿತವಾಗಿದೆ. ದರ್ಶನ್ ಫೋನ್ ಲೊಕೇಶನ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್ ಅವರನ್ನು ಎ1 ಆರೋಪಿಯಾಗಿ ಮಾಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸ ಕಾರಣಕ್ಕೆ ಅಪಹರಣ ಮಾಡಿ ಬೆಂಗಳೂರಿನಲ್ಲಿ ಕೊಲೆ ಮಾಡಲಾಗಿತ್ತು. ಶವನವನ್ನು ಕಾಮಕ್ಷಿಪಾಳ್ಯ ವ್ಯಾಪ್ತಿಯ ಸುಮನಹಳ್ಳಿ ದೊಡ್ಡ ಮೋರಿಯಲ್ಲಿ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ ಪಾಲ್ಗೊಳ್ಳುವಿಕೆ ಜಾಹೀರಾದ ಬಳಿಕ ರಾಷ್ಟ್ರಪಟ್ಟದಲ್ಲಿ ಈ ಪ್ರಕರಣ ಸುದ್ದಿಯಾಗುತ್ತಿದೆ.

ವಿಭಾಗ