ನಾನು ಚಪ್ಪಲಿಯಿಂದ ಹೊಡೆದೆ, ಆದರೆ ದರ್ಶನ್ ಮನಬಂದಂತೆ ಥಳಿಸಿದ್ರು! ಖಾಕಿ ಮುಂದೆ ದಚ್ಚು ವಿರುದ್ಧವೇ ಪವಿತ್ರಾ ಗೌಡ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಸೇರಿ 17 ಮಂದಿ ಮೇಲೆ ಕೇಸ್ ದಾಖಲಿಸಿ, ವಿಚಾರಣಾಧೀನ ಕೈದಿಯಾಗಿ ಎಲ್ಲರನ್ನೂ ಬಂಧಿಸಲಾಗಿದೆ. ಈ ನಡುವೆ ದರ್ಶನ್ ವಿರುದ್ಧವೇ ಪವಿತ್ರಾ ಗೌಡ ಹೇಳಿಕೆಯೊಂದನ್ನು ನೀಡಿದ್ದಾರೆ.

Pavitra Gowda gave a statement against Darshan: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಸೇರಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ ಜುಲೈ 4ರ ವರೆಗೆ ಇವರೆಲ್ಲರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಅದಾದ ಬಳಿಕ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಈ ನಡುವೆ ವಿಚಾರಣೆ ವೇಳೆ ಆರ್‌ಆರ್ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದರ ಬಗ್ಗೆ ಪವಿತ್ರಾ ಹೇಳಿಕೊಂಡಿದ್ದಾರೆ.
ವಿಚಾರಣೆ ವೇಳೆ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ದರ್ಶನ್ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದಾಗ, ನಾನು ಆತನಿಗೆ ಚಪ್ಪಲಿಯಿಂದ ಎರಡು ಏಟು ಹೊಡೆದೆ. ಆದರೆ, ದರ್ಶನ್ ಮಾತ್ರ ಸುಮ್ಮನಾಗಲಿಲ್ಲ. ಮನಬಂದಂತೆ ಥಳಿಸಿದರು ಎಂದು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಅಶ್ಲೀಲ ಮೆಸೆಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಪಹರಣ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಅಲ್ಲಿಂದ ಪಟ್ಟಣಗೆರೆ ಶೆಡ್‌ಗೆ ಕರೆದಯ್ದು, ಮೃಗೀಯ ರೀತಿಯಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿತ್ತು. ಪವಿತ್ರಾ ಗೌಡ ಶೆಡ್‌ಗೆ ಬರುವುದಕ್ಕೂ ಮುನ್ನ ದರ್ಶನ್ ಅದಾಗಲೇ ಆಗಮಿಸಿ ಆತನ ಮೇಲೆ ಹಲ್ಲೆ ಮಾಡಿದ್ದರು ಎಂದೂ ಪವಿತ್ರಾ ಹೇಳಿಕೊಂಡಿದ್ದಾರೆ.
ದರ್ಶನ್ ವಿರುದ್ಧವೇ ತಿರುಗಿ ಬಿದ್ದ ಪವಿತ್ರಾ
ಅಶ್ಲೀಲ ಮೆಸೆಜ್ ಮಾಡಿದ್ದಕ್ಕಾಗಿ ರೇಣುಕಾಸ್ವಾಮಿಗೆ ನಾನೇ ಒಂದೇಟು ಚಪ್ಪಲಿಯಿಂದ ಹೊಡೆದೆ. ಅದಾಗಲೇ ದರ್ಶನ್ ಬಂದು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ನಾನು ಬಂದ ಮೇಲೂ ಹಲ್ಲೆ ಮಾಡಿದ್ದು ನಿಜ ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಪವಿತ್ರಾ ಗೌಡ.
