Chow Chow Bath: ಸಿನಿ ಬಜಾರ್ ಡಿಜಿಟಲ್ ಥಿಯೇಟರ್‌ನಲ್ಲಿ ಬಿಡುಗಡೆಯಾಯ್ತು ಕನ್ನಡದ ಚೌಚೌ ಬಾತ್ ಸಿನಿಮಾ
ಹೊಸಬರ ಚೌ ಚೌ ಬಾತ್ ಸಿನಿಮಾ ಇದೀಗ ಡಿಜಿಟಲ್ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಸಿನಿ ಬಜಾರ್‌ನಲ್ಲಿ ಈ ಸಿನಿಮಾವನ್ನೀಗ ವೀಕ್ಷಣೆ ಮಾಡಬಹುದು. ಕೇಂಜ ಚೇತನ್ ಕುಮಾರ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.
Chow Chow Bath on OTT: ಕೇಂಜ ಚೇತನ್ ಕುಮಾರ್ ನಿರ್ದೇಶನದ `ಚೌ ಚೌ ಬಾತ್’ ಈ ವರ್ಷ ಬಿಡುಗಡೆಗೊಂಡಿರುವ ಚೆಂದದ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಒಂದಷ್ಟು ಪ್ರಯೋಗಾತ್ಮಕ ಅಂಶಗಳು, ಪ್ರೇಕ್ಷಕರನ್ನೇ ತನ್ನೊಳಗಿಳಿಸಿಕೊಂಡು ಕರೆದೊಯ್ಯುವ ಗುಣದ ದೃಷ್ಯದಿಂದ ಕಳೆಗಟ್ಟಿಕೊಂಡಿದ್ದ ಚಿತ್ರ ಚೌ ಚೌ ಬಾತ್. ಅತ್ತುತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದ್ದ ಚೌ ಚೌ ಬಾತ್ ಇದೀಗ ಸಿನಿ ಬಜಾರ್ ಎಂಬ ಡಿಜಿಟಲ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿದೆ.
ಸಿನಿ ಬಜಾರ್ ನಲ್ಲಿ ಬಿಡುಗಡೆಗೊಂಡ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಐವತ್ತು ದಿನಗಳ ಕಾಲ ಈ ಸಿನಿಮಾ ಸಿನಿ ಬಜಾರಿನಲ್ಲಿ ಪ್ರದರ್ಶನ ಕಾಣಲಿದೆ. ಆರಂಭದಿಂದಲೂ ಚೌ ಚೌ ಬಾತ್ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಯಶ ಕಂಡಿದ್ದೀಗ ಇತಿಹಾಸ. ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾದ್ದೊಂದು ಸಮ್ಮೋಹಕ ಶೈಲಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರೇಕ್ಷಕರಿಂದಲೇ ಈ ಚಿತ್ರ ಮೆಚ್ಚುಗೆ ಗಳಿಸಿಕೊಂಡಿತ್ತು.
ವೀಕ್ಷಣೆ ಎಲ್ಲಿ, ಹೇಗೆ?
ಇಂಥಾ ಸದಭಿಪ್ರಾಯ ಕೇಳಿ ಸಿನಿಮಾ ಮಂದಿರಗಳಲ್ಲಿ ನೋಡಬೇಕಂದುಕೊಂಡು ಸಾಧ್ಯವಾಗದವರು, ಸಿನಿ ಬಜಾರ್ ಡಾಟ್ ಕಾಮ್ ನಲ್ಲಿ ಚೌ ಚೌ ಬಾತ್ ನ ಅಸಲೀ ಸವಿಯನ್ನು ಆಸ್ವಾದಿಸುವ ಅವಕಾಶವೀಗ ಒದಗಿ ಬಂದಿದೆ. ಸಿನಿ ಬಜಾರ್ ಅಪ್ಲಿಕೇಷನ್‌ನಲ್ಲಿ ಚಿತ್ರತಂಡ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಕೇವಲ 29 ರೂಪಾಯಿ ಪಾವತಿಸಿ ಈ ಸಿನಿಮಾ ನೋಡಬಹುದಾಗಿದೆ.
ಹೈಪರ್ ಲಿಂಕ್ ಶೈಲಿಯ ಸಿನಿಮಾ
ಇದು ಹೈಪರ್ ಲಿಂಕ್ ರೊಮ್ಯಾಂಟಿಕ್ ಜಾನರಿನ ಚಿತ್ರ. ಕನ್ನಡದ ಮಟ್ಟಿಗಿದು ಅಪರೂಪದ ಜಾನರ್. ಮೂರು ವಿಭಿನ್ನ ಪ್ರೇಮ ಕಥನಗಳನ್ನು ತೆರೆದಿಡುವ ಚೌ ಚೌ ಬಾತ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ. ಹೀಗೊಂದು ಅಭಿಪ್ರಾಯ ನೋಡಿದವರಿಂದಲೇ ಮೂಡಿಕೊಂಡಿದೆ. ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ.
ತಾರಾಗಣ ಮತ್ತು ತಾಂತ್ರಿಕ ವರ್ಗ ಹೀಗಿದೆ
ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿದೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ `ಚೌ ಚೌ ಬಾತ್’ ಚಿತ್ರ ಮೂಡಿ ಬಂದಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)