ಮಲ್ಟಿಫ್ಲೆಕ್ಸ್, ಏಕಪರದೆ ಚಿತ್ರಮಂದಿರಗಳಲ್ಲಿ ನಾಳೆ ಸಿನಿಮಾ ಟಿಕೆಟ್ ದರ ಕೇವಲ 99 ರೂ; ಯಾರಿಗುಂಟು ಯಾರಿಗಿಲ್ಲ, ಬನ್ನಿ ಫಿಲ್ಮ್ ನೋಡಿ
Movie tickets at ₹99: ಸಿನಿಮಾ ಲವರ್ಸ್ ದಿನದ ಪ್ರಯುಕ್ತ ಮೇ 31ರಂದು ಮಲ್ಟಿಫ್ಲೆಕ್ಸ್ ಮತ್ತು ಏಕಪರದೆ ಚಿತ್ರಮಂದಿರಗಳಲ್ಲಿ ನಾಳೆ ಟಿಕೆಟ್ ದರ ಕೇವಲ 99 ರೂಪಾಯಿ ಇರಲಿದೆ. ಮಲ್ಟಿಫ್ಲೆಕ್ಸ್‌ಗಳು ಮಾತ್ರವಲ್ಲದೆ ಸಾಕಷ್ಟು ಏಕಪರದೆ ಚಿತ್ರಮಂದಿರಗಳು ನಾಳೆ ಡಿಸ್ಕೌಂಟ್ ದರದಲ್ಲಿ ಸಿನಿಮಾ ಟಿಕೆಟ್ ನೀಡಲಿವೆ.

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರಮುಖ ಸಿನಿಮಾಗಳ ರಿಲೀಸ್ ಇಲ್ಲದೆ ಇರುವುದು, ಚುನಾವಣೆ ಇತ್ಯಾದಿ ಕಾರಣಗಳಿಂದ ಥಿಯೇಟರ್‌ಗಳಿಗೆ ಪ್ರೇಕ್ಷಕರ ಆಗಮನ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಮಲ್ಟಿಫ್ಲೆಕ್ಸ್‌ಗಳು ಮತ್ತು ಏಕಪರದೆ ಚಿತ್ರಮಂದಿರಗಳು ಹೊಸ ಉಪಾಯ ಮಾಡಿದೆ. ನಾಳೆ ಮೇ 31 ಸಿನಿಮಾ ಲವರ್ಸ್ ಡೇ ನೆಪದಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ನೀಡಿದೆ. ಈ ಮೂಲಕ ಚಿತ್ರಮಂದಿರಗಳಿಗೆ ಸಾಕಷ್ಟು ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದೆ.
ಮೇ 31ರಂದು ಸಿನಿಮಾ ಲವರ್ಸ್ ಡೇ ಪ್ರಯುಕ್ತ ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶವನ್ನು ಮಲ್ಟಿಫ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಸಿನಿಮಾ ಥಿಯೇಟರ್‌ಗಳು ನೀಡಿವೆ. ಪಿವಿಆರ್ ಐನಾಕ್ಸ್, ಸಿನಿಪೋಲಿಸ್ ಇಂಡಿಯಾ, ಮಿರಾಜ್ ಸಿನಿಮಾಸ್, ಮುಲ್ತಾ ಎ2 ಮತ್ತು ಮೂವಿಮ್ಯಾಕ್ಸ್ ಸೇರಿದಂತೆ ಪ್ರಮುಖ ಮಲ್ಟಿಫ್ಲೆಕ್ಸ್‌ಗಳಲ್ಲಿಯೂ ಈ ಆಫರ್ ಇರಲಿದೆ. ಅಂದಹಾಗೆ, ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ ಇಂದು (ಗುರುವಾರ) ಕರ್ನಾಟಕದ ಏಕಪರದೆ ಚಿತ್ರಮಂದಿರಗಳಲ್ಲಿ 90 ರೂಪಾಯಿಗೆ ದಿ ಜಡ್ಜ್‌ಮೆಂಟ್ ಸಿನಿಮಾ ನೋಡಬಹುದಾಗಿದೆ.
"ದೇಶಾದ್ಯಂತ ಸುಮಾರು 4 ಸಾವಿರ ಪರದೆಗಳಲ್ಲಿ ನಾಳೆ ಡಿಸ್ಕೌಂಟ್ ದರದಲ್ಲಿ ಸಿನಿಮಾ ಟಿಕೆಟ್ ನೀಡಲಾಗುವುದು" ಎಂದು ಪಿವಿಆರ್ ಐನಾಕ್ಸ್ ಫಿಕ್ಚರ್ಸ್‌ನ ಸಿಇಒ ಮತ್ತು ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಎಂಎಐ) ಮುಖ್ಯಸ್ಥರಾದ ಕಮಲ್ ಗ್ಯಾನ್‌ಚಾಂದನಿ ಹೇಳಿದ್ದಾರೆ.
ಆದರೆ, ಚಿತ್ರಮಂದಿರಗಳಲ್ಲಿರುವ ಪ್ರೀಮಿಯಂ ಸೀಟುಗಳಾದ ರಿಕ್ಲೈನರ್ಸ್ ಇತ್ಯಾದಿಗಳು ಈ ಆಫರ್‌ನಲ್ಲಿ ಇಲ್ಲ. ಥಿಯೇಟರ್‌ನಲ್ಲಿ ಸುಮಾರು ಶೇಕಡ 90-95 ಸೀಟುಗಳು ಈ 99 ರೂಪಾಯಿ ಟಿಕೆಟ್ ದರದಲ್ಲಿ ದೊರಕಲಿದೆ. ಇದೇ ಸಮಯದಲ್ಲಿ ದಕ್ಷಿಣ ಭಾರತದ ಪ್ರಮುಖ ಏಕಪರದೆ ಚಿತ್ರಮಂದಿರಗಳು ಈ ಆಫರ್‌ಗೆ ಕೈಜೋಡಿಸಿವೆ. ಕೆಲವು ಏಕಪರದೆ ಚಿತ್ರಮಂದಿರಗಳಲ್ಲಿ 99 ರೂಪಾಯಿ, ಇನ್ನು ಕೆಲವು 70 ರೂಪಾಯಿಗೆ ಟಿಕೆಟ್ ನೀಡಲಿವೆ. ಚಿತ್ರಮಂದಿರಗಳಲ್ಲಿ ಜನರ ಸಂಖ್ಯೆಯನ್ನು ಹೆಚ್ಚಿಸಲು ಈ ಕಾರ್ಯತಂತ್ರ ನೆರವಾಗುವ ನಿರೀಕ್ಷೆಯನ್ನು ಗ್ಯಾನ್‌ಚಾಂದನಿ ವ್ಯಕ್ತಪಡಿಸಿದ್ದಾರೆ.
"ಕೇವಲ ಒಂದು ದಿನ ಮಾತ್ರ ಈ ಆಫರ್ ಇರಲಿದೆ. ಆದರೆ, ಬಾಕ್ಸ್ ಆಫೀಸ್‌ಗೆ ಇದರಿಂದ ದೊಡ್ಡ ನಷ್ಟವಾಗದು. ಒಟ್ಟಾರೆ ಇದು ವೀಕೆಂಡ್‌ನ ಉತ್ತಮ ಆರಂಭಕ್ಕೆ ನೆರವಾಗುತ್ತದೆ. ಹಾಲಿಡೇ ಅವಧಿಗಳಿಗೆ ಸಾಕಷ್ಟು ಪ್ರೇಕ್ಷಕರನ್ನು ಸೆಳೆಯಲಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಕಷ್ಟು ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಿಲ್ಲ. ಜೂನ್‌ನಿಂದ ಮತ್ತೆ ಸಿನಿಮಾ ಹಬ್ಬ ಆರಂಭವಾಗಲಿದೆ. ಅದಕ್ಕೆ ಈ ಆಫರ್ ಉತ್ತೇಜನ ನೀಡಲಿದೆ" ಎಂದು ಅವರು ಹೇಳಿದ್ದಾರೆ.
ಶ್ರೀಕಾಂತ್, ಮ್ಯಾಡ್ ಮ್ಯಾಕ್ಸ್ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳು ಸಾಕಷ್ಟು ಇವೆ. ಮಿಸ್ಟರ್ ಆಂಡ್ ಮಿಸೆಸ್ ಮಾಹಿ, ಛೋಟಾ ಬೀಮ್, ದಿ ಕರಸ್ ಆಫ್ ದಮ್ಯಾನ್ ಮುಂತಾದ ಸಿನಿಮಾಗಳು ರಿಲೀಸ್ ಆಗುತ್ತಿವೆ ಎಂದು ಗ್ಯಾನ್‌ಚಾಂದನಿ ಹೇಳಿದ್ದಾರೆ.
ಕೊರೊನಾ ಲಾಕ್‌ಡೌನ್ ಬಳಿಕ ಮಲ್ಟಿಫ್ಲೆಕ್ಸ್‌ಗಳಿಗೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಕೆಲವು ತಿಂಗಳಲ್ಲಿ ಚುನಾವಣೆ ಇತ್ಯಾದಿ ಕಾರಣಗಳಿಂದ ಹೊಸ ಸಿನಿಮಾಗಳು ಹೆಚ್ಚಾಗಿ ಬಿಡುಗಡೆಯಾಗಿರಲಿಲ್ಲ. ಇತ್ತೀಚಿನ ಒಟಿಟಿ ಜನಪ್ರಿಯತೆಯ ಬಳಿಕವಂತೂ ಸಾಕಷ್ಟು ಜನರು ಮಲ್ಟಿಫ್ಲೆಕ್ಸ್‌ಗಳಿಂದ ದೂರವುಳಿದಿದ್ದಾರೆ. ಇಂತಹ ಸಮಯದಲ್ಲಿ ವಿವಿಧ ಆಫರ್‌ಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಪ್ರಯತ್ನಿಸುತ್ತಿದೆ.
ಸಿನಿಮಾ ಸುದ್ದಿಗಳು ಇಲ್ಲಿವೆ ನೋಡಿ
