ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಈಗ ಕೇದಾರ್‌ನಾಥ್ ಕುರಿಫಾರಂ ಚಿತ್ರದ ಹೀರೋ; ಇದೇ ಮಾಸಾಂತ್ಯಕ್ಕೆ ತೆರೆಗೆ
ಕಾಮಿಡಿ ಕಿಲಾಡಿಗಳು ಶೋ ಮೂಲಕ ನಗು ಉಕ್ಕಿಸಿದ್ದ ಮಡೆನೂರ್ ಮನು, ಇದೀಗ ಕೇದಾರ್‌ನಾಥ್ ಕುರಿಫಾರಂ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಇತ್ತೀಚೆಷ್ಟೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆ ಆಗಿವೆ.

Kedarnath kuri farm: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಿಂದ ಬಂದ ಎಷ್ಟೋ ಮಂದಿ ಕಲಾವಿದರು, ಸಿನಿಮಾ, ಸೀರಿಯಲ್‌ಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ಕೆಲವರು ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಮಾಡುವ ಕಾಯಕವನ್ನು ಮುಂದುವರಿಸಿದ್ದಾರೆ. ಆ ಪೈಕಿ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚಿದ್ದ ಮಡೆನೂರ್ ಮನು ಇದೀಗ ಸಿನಿಮಾವೊಂದರ ನಾಯಕನಾಗಿದ್ದಾರೆ. ಕೇದಾರ್‌ನಾಥ್ ಕುರಿಫಾರಂ ಶೀರ್ಷಿಕೆಯ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಿವೆ. ಹಾಗಾದರೆ ಏನಿದು ಸಿನಿಮಾ? ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು ಹೀಗೆ.
ಜೆ.ಕೆ. ಮೂವೀಸ್ ಬ್ಯಾನರ್‌ನಲ್ಲಿ ಕೆ.ಎಂ ನಟರಾಜ್ ನಿರ್ಮಿಸಿರುವ ಸಿನಿಮಾ ಈ ಕೇದಾರ್‌ನಾಥ್ ಕುರಿಫಾರಂ. ಶೀನು ಸಾಗರ್ ನಿರ್ದೇಶನದಲ್ಲಿ ಮಡೆನೂರ್ ಮನು ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಕಣ್ಣೂರ್ ಜಗದೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಳಿಕ ಇಡೀ ತಂಡ ಚಿತ್ರದ ಬಗ್ಗೆ ಮಾತನಾಡಿತು.
ನಾನು ದುನಿಯಾ ಸೂರಿ ಅವರ ನಿರ್ದೇಶನದ ಚಿತ್ರಗಳಲ್ಲಿ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೆ. ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಬಳಿ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿದ್ದೆ. ನಿರ್ದೇಶಕನಾಗಿ ಇದು ಎರಡನೇ ಚಿತ್ರ. ನಾನು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನ ರಾಜೇಶ್ ಸಾಲುಂಡಿ ಅವರದು ಎಂದರು ನಿರ್ದೇಶನ ಶೀನು ಸಾಗರ್.
ಮುಂದುವರಿದು ಏನಿದು ಸಿನಿಮಾ ಎಂಬ ಬಗ್ಗೆ ಮಾಹಿತಿ ನೀಡಿದ ಅವರು, "ಇದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಕಾಮಿಡಿ ಥ್ರಿಲ್ಲರ್ ಜಾನರ್‌ನ ಕಥಾ ಹಂದರ ಹೊಂದಿರುವ ಈ ಚಿತ್ರ, ನೂರು ರೂಪಾಯಿ ಕೊಟ್ಟು ಟಿಕೆಟ್ ಪಡೆದ ಪ್ರೇಕ್ಷಕನಿಗೆ ಬೇಸರ ಮಾಡದೆ ಮನೋರಂಜನೆಯ ಮಹಾಪೂರವನ್ನೇ ಹರಿಸುತ್ತದೆ. ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿದ್ದ ಮಡೆನೂರ್ ಮನು ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿರ್ಮಾಪಕ ಕೆ.ಎಂ.ನಟರಾಜ್ ಈ ಚಿತ್ರವನ್ನು ಆಗಸ್ಟ್ 30 ರಂದು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ಎಂದು ನಿರ್ದೇಶಕ ಶೀನು ಸಾಗರ್ ತಿಳಿಸಿದರು.
ಕಾಲೇಜ್ ಕುಮಾರ, ಜಾನ್ ಜಾನಿ ಜನಾರ್ದನ್ ಚಿತ್ರಗಳಿಗೆ ಸಹ ನಿರ್ಮಾಪಕನಾಗಿದ್ದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ನಾಯಕಿಯ ತಂದೆಯ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ನಟರಾಜ್. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಂತರ ನಾನು ನಟಿಸಿರುವ ಮೊದಲ ಚಿತ್ರವಿದು. ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಮನೋರಂಜನೆಗೆ ಬರವಿಲ್ಲ. ಮಂಜು ನನ್ನ ಪಾತ್ರದ ಹೆಸರು ಎಂದು ಮಡೆನೂರ್ ಮನು ತಿಳಿಸಿದರು. ನಾಯಕಿ ಶಿವಾನಿ ಹಾಗೂ ನಟ ಮುತ್ತು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.