ಕನ್ನಡ ಸುದ್ದಿ  /  ಮನರಂಜನೆ  /  ‘ದ ಜಡ್ಜ್‌ಮೆಂಟ್’ ಚಿತ್ರದ ಶೂಟಿಂಗ್‌ ಮುಕ್ತಾಯ; ಮತ್ತೆ ಬ್ಲಾಕ್‌ ಕೋಟ್‌ ಧರಿಸಿ ಕೋರ್ಟ್‌ ರೂಮ್‌ಗಿಳಿದ ಕ್ರೇಜಿಸ್ಟಾರ್‌ ರವಿಚಂದ್ರನ್

‘ದ ಜಡ್ಜ್‌ಮೆಂಟ್’ ಚಿತ್ರದ ಶೂಟಿಂಗ್‌ ಮುಕ್ತಾಯ; ಮತ್ತೆ ಬ್ಲಾಕ್‌ ಕೋಟ್‌ ಧರಿಸಿ ಕೋರ್ಟ್‌ ರೂಮ್‌ಗಿಳಿದ ಕ್ರೇಜಿಸ್ಟಾರ್‌ ರವಿಚಂದ್ರನ್

ಕ್ರೇಜಿಸ್ಟಾರ್‌ ರವಿಚಂದ್ರನ್, ದಿಗಂತ್‌, ಧನ್ಯಾ ರಾಮ್‌ ಕುಮಾರ್‌, ಮೇಘನಾ ಗಾಂವ್ಕರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ದ ಜಡ್ಜ್‌ಮೆಂಟ್‌ ಸಿನಿಮಾದ ಶೂಟಿಂಗ್‌ ಮುಕ್ತಾಯವಾಗಿದೆ. ಮೇ ತಿಂಗಳಲ್ಲಿ ತೆರೆಗೆ ತರುವ ಪ್ಲಾನ್‌ ಚಿತ್ರತಂಡದ್ದು.

‘ದ ಜಡ್ಜ್‌ಮೆಂಟ್’ ಚಿತ್ರದ ಶೂಟಿಂಗ್‌ ಮುಕ್ತಾಯ; ಮತ್ತೆ ಬ್ಲಾಕ್‌ ಕೋಟ್‌ ಧರಿಸಿ ಕೋರ್ಟ್‌ ರೂಮ್‌ಗಿಳಿದ ಕ್ರೇಜಿಸ್ಟಾರ್‌ ರವಿಚಂದ್ರನ್
‘ದ ಜಡ್ಜ್‌ಮೆಂಟ್’ ಚಿತ್ರದ ಶೂಟಿಂಗ್‌ ಮುಕ್ತಾಯ; ಮತ್ತೆ ಬ್ಲಾಕ್‌ ಕೋಟ್‌ ಧರಿಸಿ ಕೋರ್ಟ್‌ ರೂಮ್‌ಗಿಳಿದ ಕ್ರೇಜಿಸ್ಟಾರ್‌ ರವಿಚಂದ್ರನ್

The Judgement: ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟಿಸಿರುವ ದ ಜಡ್ಜ್‌ಮೆಂಟ್‌ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ವರ್ಷದ ಡಾ. ರಾಜ್‌ಕುಮಾರ್‌ ಬರ್ತ್‌ಡೇ ದಿನವೇ ಶುರುವಾಗಿದ್ದ ಈ ಸಿನಿಮಾ, ಇದೀಗ ಅವರ ಬರ್ತ್‌ಡೇ ದಿನವೇ ಶೂಟಿಂಗ್‌ ಮುಗಿಸಿಕೊಂಡಿದೆ. ಈ ಸಿನಿಮಾದಲ್ಲಿ ರವಿಚಂದ್ರನ್‌ ವಕೀಲನಾಗಿ ಕಾಣಿಸಿಕೊಂಡಿದ್ದಾರೆ. ಕೋರ್ಟ್‌ ರೂಮ್‌ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ರಿಲೀಸ್‌ ಸಹ ಮಾಡುವುದು ತಂಡದ ಪ್ಲಾನ್.‌

ಟ್ರೆಂಡಿಂಗ್​ ಸುದ್ದಿ

ಜಿ9 ಕಮ್ಯೂನಿಕೇಷನ್‌ ಮೀಡಿಯಾ ಮತ್ತು ಎಂಟರ್ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ದ ಜಡ್ಜ್‌ಮೆಂಟ್‌ ಸಿನಿಮಾ ನಿರ್ಮಾಣವಾಗಿದೆ. ಗುರುರಾಜ್‌ ಕುಲಕರ್ಣಿ (ನಾಡಗೌಡ) ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್‌ ಮುಗಿದ ಬೆನ್ನಲ್ಲೇ ಚಿತ್ರದ ಬಗ್ಗೆ ಇಡೀ ತಂಡ ಮಾಹಿತಿ ನೀಡಿತು. ಮೊದಲಿಗೆ ನಿರ್ದೇಶಕರೇ ಮಾತು ಆರಂಭಿಸಿದರು.

ಕಾಕತಾಳೀಯವೋ ಗೊತ್ತಿಲ್ಲ..

“ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದ ವರ್ಷ ಡಾ. ರಾಜಕುಮಾರ್ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷದ ಬರ್ತ್‌ಡೇಗೆ ಮುಕ್ತಾಯವಾಗಿದೆ. ಅಂದುಕೊಂಡಂತೆ ಸಿನಿಮಾ ಯಾವುದೇ ಸಮಸ್ಯೆ ಇಲ್ಲದೇ ನೀಟಾಗಿ ಮುಗಿದಿದೆ. ಅದಕ್ಕೆ ರವಿಚಂದ್ರನ್‌ ಸೇರಿ ಎಲ್ಲ ಕಲಾವಿದರೇ ಕಾರಣ” ಎಂದರು.

ಮೇ ತಿಂಗಳಲ್ಲಿ ರಿಲೀಸ್‌ ಸಾಧ್ಯತೆ

ಇನ್ನು ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ನಿರ್ದೇಶಕರದ್ದು. "ಈ ಚಿತ್ರಕ್ಕೆ ನನ್ನನ್ನೂ ಸೇರಿ ಒಟ್ಟು ಐವರು ಬಂಡವಾಳ ಹೂಡಿ ನಿರ್ಮಿಸಿದ್ದೇವೆ. ಕೋರ್ಟ್ ರೂಮ್ ಥ್ರಿಲ್ಲರ್ ದ ಜಡ್ಜ್ ಮೆಂಟ್ ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ" ಎಂದರು ಗುರುರಾಜ್‌ ಕುಲಕರ್ಣಿ.

ಇನ್ನು ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಸಹ ನಟಿಸಿದ್ದಾರೆ. ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಯಾಗಿದೆ. ಇಡೀ ತಂಡ ಕಲಾವಿದರನ್ನು ನೋಡಿಕೊಂಡ ರೀತಿಯೂ ಖುಷಿಕೊಟ್ಟಿದೆ. ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು. ಡಾ. ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು.

ಅಣ್ಣಾವ್ರ ಆಶೀರ್ವಾದ ನಮ್ಮ ಚಿತ್ರಕ್ಕಿದೆ ಎಂದ ಮೇಘನಾ

ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮೇಘನಾ ಗಾಂವ್ಕರ್‌ ಸಹ ಮಾತನಾಡಿದರು. "ಈ ಸಿನಿಮಾ ತಂಡಕ್ಕೆ ಎಲ್ಲರಿಗಿಂತ ತಡವಾಗಿ ಬಂದವಳೇ ನಾನು. ರವಿಚಂದ್ರನ್‌ ಅವರ ಜತೆಗೆ ನಟಿಸಿದ್ದು, ಖುಷಿ ಇದೆ. ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಆರಂಭವಾಗಿ, ಈ ವರ್ಷದ ಅವರ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಮುಕ್ತಾಯವಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡಕ್ಕೆ ಇದೆ ಎಂದರು.

ಗೀತ ಸಾಹಿತಿ ಪ್ರಮೋದ್ ಮರವಂತೆ, ಕಲಾವಿದರಾದ ರೇಖಾ ಕೂಡ್ಲಗಿ, ನವಿಲ ಮಾತನಾಡಿದರು. ಚಿತ್ರದಲ್ಲಿ ನಟರಾದ ರವಿಚಂದ್ರನ್‌, ದಿಗಂತ್‌, ಧನ್ಯಾ ರಾಮ್‌ಕುಮಾರ್‌, ಮೇಘನಾ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ, ಕೃಷ್ಣ ಹೆಬ್ಬಾಳೆ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ "ದ ಜಡ್ಜ್ ಮೆಂಟ್" ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.

IPL_Entry_Point