ಕನ್ನಡ ಸುದ್ದಿ  /  Entertainment  /  Sandalwood News Crazy Star Ravichandran Recalled The Death Of His Father Veeraswamy At Kanakagiri Utsava 2024 Mnk

Ravichandran: ‘ಅಪ್ಪ ತೀರಿಕೊಳ್ತಿದ್ದಂತೆ ಇನ್ಶುರೆನ್ಸ್‌ ಕಂಪನಿಯವರ ದಂಡೇ ಮನೆಗೆ ಬಂತು, ಆದ್ರೆ..’ ಹಳೇ ಘಟನೆ ನೆನೆದ ರವಿಚಂದ್ರನ್‌

ಶಾಂತಿ ಕ್ರಾಂತಿ ಸಿನಿಮಾ ಸೋತ ಬಳಿಕ ಅಪ್ಪ ವೀರಾಸ್ವಾಮಿ ಕುಗ್ಗಿದ್ದರು. ಆರೋಗ್ಯ ಹದಗೆಟ್ಟಿತ್ತು. ಮಗನ ಗೆಲುವನ್ನು ನೋಡಿಯೇ ಅವರು ಕಣ್ಮುಚ್ಚಬೇಕು ಎಂದು ನಿರ್ಧರಿಸಿದ ರವಿಚಂದ್ರನ್‌, ರಾಮಾಚಾರಿ ಮಾಡಿ ಗೆಲುವು ಕಂಡರು. ಕೊನೆಗೆ ವೀರಾಸ್ವಾಮಿಯವ್ರು ಮಗನ ಸಕ್ಸಸ್‌ ನೋಡಿಯೇ ಕಣ್ಮುಚ್ಚಿದರು. ಇದೇ ವೇಳೆ ಇನ್ಶುರೆನ್ಸ್‌ ವಿಚಾರವನ್ನೂ ರವಿಚಂದ್ರನ್‌ ಹೇಳಿಕೊಂಡಿದ್ದಾರೆ.

Ravichandran: ‘ಅಪ್ಪ ತೀರಿಕೊಳ್ತಿದ್ದಂತೆ ಇನ್ಶುರೆನ್ಸ್‌ ಕಂಪನಿಯವರ ದಂಡೇ ಮನೆಗೆ ಬಂತು, ಆದ್ರೆ..’; ಹಳೇ ಘಟನೆ ನೆನೆದ ರವಿಚಂದ್ರನ್‌
Ravichandran: ‘ಅಪ್ಪ ತೀರಿಕೊಳ್ತಿದ್ದಂತೆ ಇನ್ಶುರೆನ್ಸ್‌ ಕಂಪನಿಯವರ ದಂಡೇ ಮನೆಗೆ ಬಂತು, ಆದ್ರೆ..’; ಹಳೇ ಘಟನೆ ನೆನೆದ ರವಿಚಂದ್ರನ್‌

Ravichandran: ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು. ಅಂದ್ರೆ, ಶ್ರೀಮಂತ ಮನೆತನದಲ್ಲಿಯೇ ಬೆಳೆದವರು. ಅಪ್ಪ ವೀರಾಸ್ವಾಮಿ ಸಿನಿಮಾ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಸರಣಿ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಪ್ಪನ ಹಾದಿಯಲ್ಲಿಯೇ ಮಗ ರವಿಚಂದ್ರನ್‌ ಸಹ ನಟ, ನಿರ್ದೇಶಕ, ನಿರ್ಮಾಪಕನಾಗಿ ಬಣ್ಣದ ಲೋಕ ಪ್ರವೇಶಿಸಿದ್ದರು. ಅದರಂತೆ ಅಲ್ಲಿ ಸೋಲು ಗೆಲುವನ್ನೂ ಕಂಡರು. ಇದೀಗ ಇದೇ ರವಿಚಂದ್ರನ್‌, ಅಪ್ಪನ ಬಗ್ಗೆ ಮಾತನಾಡಿದ್ದಾರೆ.

ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಮೈಕ್‌ ಹಿಡಿಯುತ್ತಿದ್ದಂತೆ, ಆರಂಭದ ಸಿನಿಮಾ ದಿನಗಳು, ಪ್ರೇಮಲೋಕ ಸಿನಿಮಾ ಸೇರಿ ಒಂದಷ್ಟು ವಿಚಾರಗಳನ್ನು ಮಾತನಾಡಿದರು.

ಅಪ್ಪ ವೀರಾಸ್ವಾಮಿ ಅವರಿಗೆ ಹುಷಾರಿಲ್ಲದ ಸಂದರ್ಭದಲ್ಲಿ ಅವರು ತಮ್ಮ ಗೆಲವುವನ್ನು ನೋಡಿಯೇ ಹೋಗಬೇಕು ಎಂಬ ಆಸೆ ರವಿಚಂದ್ರನ್‌ ಅವರದ್ದಾಗಿತ್ತು. ಏಕೆಂದರೆ, ಅದಾಗಲೇ ಶಾಂತಿ ಕ್ರಾಂತಿ ಸಿನಿಮಾ ಮಾಡಿ, ಕೋಟಿ ಕೋಟಿ ಹಣ ಕಳೆದುಕೊಂಡು ಕೈ ಸುಟ್ಟುಕೊಂಡಿದ್ದರು ರವಿಚಂದ್ರನ್.‌ ಇದು ವೀರಾಸ್ವಾಮಿ ಅವರನ್ನೂ ಕುಗ್ಗಿಸಿತ್ತು. ಈ ಸಮಯದಲ್ಲಿಯೇ ಅವರನ್ನು ಮೊದಲಿನ ರವಿಚಂದ್ರನ್‌ ನೋಡಿಯೇ ಕಣ್ಮುಚ್ಚಬೇಕು ಎಂದು ನಿರ್ಧರಿಸಿದರು. ಆಗ ಮೂಡಿ ಬಂದ ಚಿತ್ರವೇ ರಾಮಾಚಾರಿ! ಆ ಚಿತ್ರದ ಸಕ್ಸಸ್‌ ನೋಡಿಯೇ ನಿಟ್ಟುಸಿರು ಬಿಟ್ಟುಕೊಂಡೇ ಅವರ ಕಾಲವಾಯ್ತು.

ನನ್ನ ಗೆಲುವು ನೋಡಿಯೇ ಅಪ್ಪ ಕಣ್ಮುಚ್ಚಿದರು..

"ಅಪ್ಪನಿಗೆ ಒಂದು ಮಾತು ಕೊಡ್ತೀನಿ. ಅಪ್ಪನಿಗೆ ಆಗ ಮೈ ಹುಷಾರಿಲ್ಲ. ನನಗೆ ಒಂದು ಭಯ ಏನು ಅಂದ್ರೆ, ನನ್ನ ಸೋಲು ಟೈಮ್‌ನಲ್ಲಿ, ನನ್ನ ಸಿನಿಮಾಕ್ಕೆ ಏಟು ಬೀಳೋ ಟೈಮ್‌ನಲ್ಲಿ ಅಪ್ಪ ತೀರಿಕೊಂಡು ಬಿಡ್ತಾರೆ ಅನ್ನೋ ಭಯ ತುಂಬ ಕಾಡಿತ್ತು. ನಮ್ಮ ಅಪ್ಪ ಬದುಕಿರುವಾಗಲೇ, ಈ ರವಿಚಂದ್ರನ್‌, ಕ್ರೇಜಿಸ್ಟಾರ್‌ ಸಕ್ಸಸ್‌ ನೋಡುಬೇಕು ಅಂತಲೇ ನಾನು ರಾಮಾಚಾರಿ ಸಿನಿಮಾ ಮಾಡಿದೆ. ಅದನ್ನು ಹೇಳಿಯೇ ಮಾಡಿದ್ದೆ. ಅಪ್ಪ ನೀನು ನಕ್ಕೋಂಡೆ ಹೋಗಬೇಕು. ಯಾವುದೇ ಕಾರಣಕ್ಕೂ ಅತ್ತುಕೊಂಡು ಹೋಗಬಾರದು. ಅದನ್ನು 60ದಿನಗಳಲ್ಲಿ ರಾಮಾಚಾರಿ ಸಿನಿಮಾ ಮಾಡಿ ಗೆಲ್ಲಿಸಿ ತೋರಿಸಿದೆ. ಇಲ್ಲಾಂದ್ರೆ, ಶಾಂತಿ ಕ್ರಾಂತಿಯ ಸೋಲು ನನ್ನನ್ನು ಕುಗ್ಗಿಸಿಬಿಡೋದು. ರಾಮಾಚಾರಿ ನನ್ನನ್ನು ಬದುಕಿಸಿತು.

ಈಗಲೂ ನನಗೆ ಯಾವುದೇ ವಿಮೆ ಇಲ್ಲ..

ದುಡ್ಡು ಮಾಡಬೇಕು, ದುಡ್ಡ ಕೂಡಿಡಬೇಕು ಎಂಬುದು ನನಗೆ ಆವತ್ತೂ ಇರಲಿಲ್ಲ. ಈಗಲೂ ಇಲ್ಲ. ಯಾಕೆ ಅಂದ್ರೆ ನನಗೆ ನಾಳೆ ಬಗ್ಗೆ ಚಿಂತೆ ಇಲ್ಲ. ಅಪ್ಪ ತೀರಿದ ಬಳಿಕ ಇನ್ಶೂರೆನ್ಸ್‌ ಕಂಪನಿಯವ್ರು ಬಂದ್ರು. ಸರ್‌, ನಿಮ್ಮ ತಂದೆಯವರ ಹೆಸರಲ್ಲಿ ಒಂದಷ್ಟು ದುಡ್ಡಿದೆ. ನಿಮಗೆ ಒಂದಷ್ಟು ದುಡ್ಡು ಬರುತ್ತೆ. ಅಯ್ಯೋ ನಿನ್ನ, ನಾನು ನಮ್ಮ ಅಪ್ಪ ಸತ್ರು ಅಂತ ದುಃಖ ಪಡ್ತಿದ್ರೆ, ನೀನಿಲ್ಲಿ ದುಡ್ಡು ಕೊಡ್ತಿದಿಯಾ. ಆವತ್ತಿಗೆ, ನಮ್ಮಪ್ಪ ನನ್ನ ಹೆಸರಿಗೆ ಮಾಡಿದ ಇನ್ಶೂರನ್ಸ್‌ ಅನ್ನೂ ಕಿತ್ತಾಗಿದೆ. ಅಂದಿನಿಂದ ನಾನು ಯಾವುದೇ ಇನ್ಶೂರನ್ಸ್‌ ಮಾಡಿಸಿಲ್ಲ. ಯಾಕೆಂದ್ರೆ ಸಾಯೋಕೆ ನಾನ್ಯಾಕೆ ದುಡ್ಡು ಕಟ್ಟಬೇಕು.

ಪ್ರೇಮಲೋಕ 2 ಶುರು

ಪ್ರೇಮಲೋಕ ಸಿನಿಮಾ ಬಗ್ಗೆಯೂ ಇದೇ ವೇದಿಕೆ ಮೇಲೆ ಮಾತನಾಡಿದ ರವಿಚಂದ್ರನ್‌, ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದರು. "ಮೇ 30ರಂದು ನನ್ನ ಪ್ರೇಮಲೋಕ 2 ಸಿನಿಮಾ ಶುರು ಮಾಡ್ತಿನಿ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ಮಾಡ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸಲಿದ್ದೇನೆ. ಈ ಸಿನಿಮಾದಲ್ಲಿ ಏನಿಲ್ಲ 20-25 ಹಾಡುಗಳು ಇರುತ್ವೆ. ನನಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅದೊಂದೇ ಮಾಡೋಕೆ ಬರೋದು ನನಗೆ" ಎಂದು ತಮ್ಮ ಹುಟ್ಟುಹಬ್ಬಕ್ಕೆ ಸಿಗುವ ಉಡುಗೊರೆ ಬಗ್ಗೆ ಹೇಳಿಕೊಂಡಿದ್ದಾರೆ ರವಿಚಂದ್ರನ್.‌

IPL_Entry_Point