ಡಾಲಿ ಧನಂಜಯ್ ಹೊಸ ಸಿನಿಮಾಕ್ಕೆ ಪರಮೇಶ್ವರ್ ಗುಂಡ್ಕಲ್ ನಿರ್ದೇಶನ; ಕೋಟಿ ಸಿನಿಮಾದ ಟೈಟಲ್ ಬಿಡುಗಡೆ
ಯುಗಾದಿ ಹಬ್ಬದಂದು ನಟ ಡಾಲಿ ಧನಂಜಯ್ ಹೊಸ ಸಿನಿಮಾದ ಅಪ್‌ಡೇಟ್ ನೀಡಿದ್ದಾರೆ. ಕೋಟಿ ಎಂಬ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಸಿನಿಮಾಕ್ಕೆ ಪರಮ್ (ಪರಮೇಶ್ವರ್ ಗುಂಡ್ಕಲ್) ನಿರ್ದೇಶನವಿರುವುದು ಇನ್ನೊಂದು ವಿಶೇಷ.
ಬೆಂಗಳೂರು: ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಡಾಲಿ ಧನಂಜಯ ಅವರ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್ ನಿರ್ದೇಶನದ ಈ ಸಿನಿಮಾ ಹೆಸರು ಕೋಟಿ. ಈಗಾಗಲೇ ಟಿವಿ ಲೀಕದಲ್ಲಿ ಹಲವು ಪ್ರಯೋಗಗಳನ್ನು ಪರಮೇಶ್ವರ್ ಗುಂಡ್ಕಲ್ ಮಾಡಿದ್ದಾಎರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅವರಿದ್ದ ಸಂದರ್ಭ ಹಲವು ಕನ್ನಡ ಕಥೆಗಳನ್ನು ನೀಡಿದ್ದಾರೆ. ಇದೀಗ ಅಪ್ಪಟ ಕನ್ನಡ ಕಥೆಯೊಂದಿಗೆ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಯುಗಾದಿ ಹಬ್ಬಕ್ಕೆ ಪೋಸ್ಟರ್ ಬಿಡುಗಡೆ
ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ಹಣದ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್ ಅವರ ಕಣ್ಣುಗಳನ್ನು ಮಾತ್ರ ಕಾಣಿಸುತ್ತದೆ. ಡಾಲಿ ಧನಂಜಯ್ ಅವರ ತೀಕ್ಷ್ಣ ಕಣ್ಣುಗಳು ಮೋಡಿ ಮಾಡುವಂತೆ ಇದೆ.
ಕೋಟಿ ಕನಸು ಕಾಣುವ ಒಬ್ಬ ಜನ ಸಾಮಾನ್ಯನ ಕತೆ ಇದು ಎನ್ನುವುದನ್ನು ಕೋಟಿ ಸಿನಿಮಾದ ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಜನ ಸಾಮಾನ್ಯನ ಸೆಂಟಿಮೆಂಟ್ ಈ ಕಥೆಯಲ್ಲಿರಬಹುದು ಎಂಬ ಸೂಚನೆಯನ್ನು ಡಾಲಿ ಈಗಾಗಲೇ ನೀಡಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದಾಗಿದೆ. ಒಂದು ವರ್ಷದ ಅಂತರದ ನಂತರ ಡಾಲಿ ಧನಂಜಯ್ ಸಿನಿಮಾ ರಿಲೀಸ್ ಆಗಲಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಧನಂಜಯ್ ಅವರ ಸಿನಿ ಪ್ರಯಾಣದಲ್ಲಿ ಇದೊಂದು ಮೈಲಿಗಲ್ಲು ಆಗಬಹುದಾದ ಚಿತ್ರ ಎಂಬ ಅಭಿಪ್ರಾಯ ಈಗಾಗಲೇ ಮೂಡಿದೆ.
ಏಪ್ರಿಲ್ 15ರಂದು ಕೋಟಿ ಟೀಸರ್ ಬಿಡುಗಡೆ
“ಹೊಸ ವರ್ಷಕ್ಕೆ ಹೊಸ ಆರಂಭ. ಜಿಯೋ ಸ್ಟುಡಿಯೋಸ್‌ನ ಮೊದಲ ಕನ್ನಡ ಸಿನಿಮಾ. ಟೀಸರ್ ಬಿಡುಗಡೆ: 13 ಏಪ್ರಿಲ್. ಸಂಜೆ 5 ಗಂಟೆ” ಎಂದು ಡಾಲಿ ಧನಂಜಯ್ ಅಪ್‌ಡೇಟ್ ನೀಡಿದ್ದಾರೆ.
ಚಿತ್ರತಂಡದ ಕುರಿತು
ಕೋಟಿ ಸಿನಿಮಾಕ್ಕೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಕನ್ನಡ ಚಲನಚಿತ್ರ ಮಾಡಬೇಕು, ಡೈರೆಕ್ಟರ್ ಕ್ಯಾಪ್ ತೊಟ್ಟುಕೊಳ್ಳಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟಿವಿ ಉದ್ಯೋಗ ಬಿಟ್ಟು ಹೊರಗೆ ಬಂದಾಗ ತಾನು ಹಿರಿತೆರೆಯಲ್ಲಿ ಕಥೆಗಳನ್ನು ಹೇಳಲು ಬಯಸುವೆ ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಯುಗಾದಿ ಹಬ್ಬದ ಸಮಯದಲ್ಲಿ ತನ್ನ ಕನಸಿಗೆ ಮುನ್ನುಡಿ ಬರೆದಿದ್ದಾರೆ.
ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್ ನ ಜ್ಯೋತಿ ದೇಶಪಾಂಡೆ. ಈ ವರ್ಷ ಒಂದಾದ ಮೇಲೆ ಒಂದು ಹಿಟ್ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್ ಬ್ರಹ್ಮನ್ ಛಾಯಾಗ್ರಹಣವಿದೆ.
ಸಿನಿಮಾ ಶೀರ್ಷಿಕೆ ಅನಾವರಣ ಮಾಡುತ್ತಲೇ ಇದೇ ಶನಿವಾರ ಟೀಸರ್ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿದೆ.