ಕನ್ನಡ ಸುದ್ದಿ  /  ಮನರಂಜನೆ  /  ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೆ ದರ್ಶನ್‌ ಮುಂದಿನ ಸಿನಿಮಾಗಳ ಗತಿಯೇನು? ಭಗ್ನವಾಗುತ್ತ ಡಿಬಾಸ್‌ ಅಭಿಮಾನಿಗಳ ಡೆವಿಲ್‌ ಕನಸು

ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೆ ದರ್ಶನ್‌ ಮುಂದಿನ ಸಿನಿಮಾಗಳ ಗತಿಯೇನು? ಭಗ್ನವಾಗುತ್ತ ಡಿಬಾಸ್‌ ಅಭಿಮಾನಿಗಳ ಡೆವಿಲ್‌ ಕನಸು

Darshan Upcoming Movies: ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಂಧನವಾಗಿದೆ. ಇವರು ಸಹಿ ಹಾಕಿರುವ ಮುಂದಿನ ಸಿನಿಮಾಗಳ ಗತಿಯೇನು ಎಂಬ ಚಿಂತೆ ನಿರ್ದೇಶಕರು, ನಿರ್ಮಾಪಕರು ಮತ್ತು ಅಭಿಮಾನಿಗಳಲ್ಲಿ ಮೂಡಿದೆ. ಡೆವಿಲ್‌ ದಿ ಹೀರೋ, ಡಿ59 ಸೇರಿದಂತೆ ಹಲವು ಸಿನಿಮಾಗಳ ಮೇಲೆ ಈ ಪ್ರಕರಣ ಪರಿಣಾಮ ಬೀರಲಿವೆ.

ದರ್ಶನ್‌ ಮುಂಬರುವ ಸಿನಿಮಾಗಳು
ದರ್ಶನ್‌ ಮುಂಬರುವ ಸಿನಿಮಾಗಳು

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Kannada Actor Darshan Arrest) ಬಂಧನವಾಗಿದೆ. ಈ ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ದರ್ಶನ್‌ ಪಾಲಿಗೆ ಇದು ಗಂಭೀರ ಪ್ರಕರಣ. ಈ ಪ್ರಕರಣದಲ್ಲಿ ದರ್ಶನ್‌ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಗಂಭೀರ ಪ್ರಕರಣವಾಗಿರುವುದರಿಂದ ದರ್ಶನ್‌ಗೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗುತ್ತಿದೆ. ಎಲ್ಲಾದರೂ ಕನಿಷ್ಠ ಒಂದು ವರ್ಷದಿಂದ ಐದು ವರ್ಷದವರೆಗೆ ದರ್ಶನ್‌ಗೆ ಜೈಲು ಶಿಕ್ಷೆ ವಿಧಿಸಿದರೂ ಈಗಾಗಲೇ ದರ್ಶನ್‌ ಸಹಿ ಹಾಕಿರುವ ಹಲವು ಸಿನಿಮಾಗಳಿಗೆ ಪೆಟ್ಟು ಬೀಳಲಿದೆ. ಈಗಾಗಲೇ ಶೂಟಿಂಗ್‌ನಲ್ಲಿರುವ ಡೆವಿಲ್‌ನಂತಹ ಸಿನಿಮಾಗಳ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಡಿ ಬಾಸ್‌ ಫ್ಯಾನ್‌ಗಳದ್ದು. ಈ ಸಿನಿಮಾಗಳಿಗೆ ಈಗಾಗಲೇ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿರುವ ನಿರ್ಮಾಪಕರ ಗತಿಯೇನು? ಎಂಬ ಪ್ರಶ್ನೆಯೂ ಮೂಡಿದೆ. ಇದೇ ಸಮಯದಲ್ಲಿ ಸ್ಟಾರ್‌ ನಟರ ಸಿನಿಮಾಗಳ ಸಿನಿಮಾಗಳು ವರ್ಷಕ್ಕೆ ಒಂದು ಬರುವುದು ಅಪರೂಪವಾಗಿರುವ ಕಾಲದಲ್ಲಿ ವರ್ಷಕ್ಕೆ ಒಂದೆರಡು ಸಿನಿಮಾ ನೀಡುವ ಭರವಸೆ ನೀಡಿದ್ದ ದರ್ಶನ್‌ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ, ಮುಖ್ಯವಾಗಿ ಚಿತ್ರಮಂದಿರ ಮಾಲೀಕರಿಗೆ ನಷ್ಟವಾಗುವುದು ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗೆ ದರ್ಶನ್‌ ಹುಟ್ಟುಹಬ್ಬದ ಸಮಯದಲ್ಲಿ ಹಲವು ಸಿನಿಮಾಗಳಿಗೆ ಸಹಿ ಹಾಕಲಾಗಿತ್ತು. ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನಿಂದ ತರುಣ್‌ ಸುಧೀರ್‌ ಸೇರಿದಂತೆ ಹಲವು ನಿರ್ದೇಶಕರಿಗೆ ದರ್ಶನ್‌ ಕಾಲ್‌ಶೀಟ್‌ ನೀಡಿದ್ದರು. ಈ ಚಿತ್ರಗಳ ಗತಿಯೇನು ಎಂಬ ಪ್ರಶ್ನೆಯೂ ಡಿಬಾಸ್‌ ಅಭಿಮಾನಿಗಳಲ್ಲಿ ಮೂಡಿದೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ಡಿ ಬಾಸ್‌ ಅಭಿಮಾನಿಗಳು "ನಮ್ಮಣ್ಣ ಈ ಪ್ರಕರಣದಿಂದ ಬೇಗ ರಿಲೀಫ್‌ ಪಡೆಯುತ್ತಾರೆ" ಎಂಬ ಭರವಸೆಯ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನೊಂದಿಷ್ಟು ಜನರು "ಇಷ್ಟು ಕ್ರೂರವಾಗಿ ಹತ್ಯೆ ಮಾಡಿರುವ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು" ಎಂಬರ್ಥದ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ದರ್ಶನ್‌ನ ಯಾವೆಲ್ಲ ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಬೇಕಿತ್ತು? ಯಾವೆಲ್ಲ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದರು ಎನ್ನುವ ವಿವರ ಇಲ್ಲಿ ನೀಡಲಾಗಿದೆ.

ಡೆವಿಲ್‌ ದಿ ಹೀರೋ

ಕಾಟೇರ ಯಶಸ್ಸಿನ ಬಳಿಕ ಡೆವಿಲ್‌ ಎಂಬ ಸಿನಿಮಾದಲ್ಲಿ ದರ್ಶನ್‌ ನಟಿಸುತ್ತಿದ್ದಾರೆ. ಈ ವರ್ಷಾಂತ್ಯದೊಳಗೆ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಈ ಸಿನಿಮಾದ ಶೂಟಿಂಗ್‌ ಭರದಿಂದ ನಡೆಯುತ್ತಿತ್ತು. ಈ ಚಿತ್ರದ ಗ್ಲಿಂಪ್ಸ್‌ ವಿಡಿಯೋ ಕೂಡ ರಿಲೀಸ್‌ ಮಾಡಲಾಗಿತ್ತು. ದರ್ಶನ್‌ ವಿಭಿನ್ನ ಅವತಾರದಲ್ಲಿ ಈ ವಿಡಿಯೋದಲ್ಲಿ ಕಾಣಿಸಿದ್ದರು. ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು ಎಂಬ ಧ್ವನಿಯೊಂದಿಗೆ ವಿಭಿನ್ನವಾಗಿ ದರ್ಶನ್‌ ಕಾಣಿಸಿಕೊಂಡಿದ್ದರು. ಕಾಟೇರ ಯಶಸ್ಸಿನ ಬಳಿಕ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರವಾಗಿದ್ದ ಡೆವಿಲ್‌ ಮೇಲೆ ಇದೀಗ ಕಾರ್ಮೋಡ ಕಾಣಿಸಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಡೆವಿಲ್‌ನಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಕೂಡ ನಟಿಸುತ್ತಿದ್ದಾರೆ. ಪ್ರಕಾಶ್‌ ವೀರ್‌ ನಿರ್ದೇಶನದ ಡೆವಿಲ್‌ ಸಿನಿಮಾದ ಭವಿಷ್ಯ ಏನಾಗಬಹುದು ಎಂಬ ಸಂದೇಹ ಎಲ್ಲರಲ್ಲಿಯೂ ಮೂಡಿದೆ.

ಡಿ59

ತರುಣ್‌ ಸುಧೀರ್‌ ನಿರ್ದೇಶನದ ಕಾಟೇರ ಸಿನಿಮಾ ಈಗಾಗಲೇ ಬ್ಲಾಕ್‌ಬಸ್ಟರ್‌ ಯಶಸ್ಸು ಪಡೆದಿದೆ. ತರುಣ್‌ ಸುಧೀರ್‌ ಅವರು ದರ್ಶನ್‌ ನಟನೆಯ 59ನೇ ಸಿನಿಮಾಕ್ಕೂ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಇತ್ಯಾದಿ ಕೆಲಸಗಳಿಗೆ ಸಂಬಂಧಪಟ್ಟಂತೆ ತರುಣ್‌ ಸುಧೀರ್‌ ತಂಡ ಈಗಾಗಲೇ ಕೆಲಸ ಮಾಡುತ್ತಿದೆ. ಇದು ವೀರ ಸಿಂಧೂರ ಲಕ್ಷ್ಮಣ ಸಾಹಸಗಾಥೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.

ದರ್ಶನ್‌-ಪ್ರೇಮ್‌ ಸಿನಿಮಾ

ಈಗಾಗಲೇ ದರ್ಶನ್‌ ನಟನೆಯ ಪ್ರೇಮ್‌ ನಿರ್ದೇಶನದ ಸಿನಿಮಾದ ಪ್ರಮೋ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಹೆಸರು ಇನ್ನೂ ಬಹಿರಂಗವಾಗಿಲ್ಲ. ಈ ಸಿನಿಮಾದ ಮೇಲೂ ದರ್ಶನ್‌ ಬಂಧನ ಕೆಟ್ಟ ಪರಿಣಾಮ ಬೀರುವ ಸೂಚನೆಯಿದೆ.

ರಾಜವೀರ ಮದಕರಿ ನಾಯಕ

ಇದು ಸಹ ದರ್ಶನ್‌ ಮುಂಬರುವ ಸಿನಿಮಾ. 2019ರಲ್ಲಿಯೇ ಶೂಟಿಂಗ್‌ ಆರಂಭವಾಗಿತ್ತು. ಎಸ್‌.ವಿ. ರಾಜೇಂದ್ರಬಾಬು ಸಿಂಗ್‌ ಬಾಬು ನಿರ್ದೇಶನದ ಈ ಸಿನಿಮಾದ ಭವಿಷ್ಯದ ಮೇಲೂ ದರ್ಶನ್‌ ಬಂಧನ ಪರಿಣಾಮ ಬೀರಲಿದೆ.

ಇತ್ತೀಚೆಗೆ ದರ್ಶನ್‌ ತನ್ನ ಹುಟ್ಟುಹಬ್ಬದಂದು ಹಲವು ನಿರ್ಮಾಪಕರಿಗೆ ಕಾಲ್‌ಶೀಟ್‌ ನೀಡಿದ್ದಾರೆ. ಡಿ59 ಮಾತ್ರವಲ್ಲದೆ ಇನ್ನೊಂದು ಸಿನಿಮಾಕ್ಕೂ ಕಾಲ್‌ಶೀಟ್‌ ನೀಡಿದ್ದರು. ಹುಟ್ಟುಹಬ್ಬದಂದು ಶೈಲಜಾ ನಾಗ್ ಮತ್ತು ಬಿ.ಸುರೇಶ, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಮುಂತಾದವರ ನಿರ್ಮಾಣದ ಚಿತ್ರಗಳಿಗೆ ದರ್ಶನ್‌ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್‌ ಬಂಧನ, ಮುಂದಿನ ತನಿಖೆಯ ಹಾದಿ, ಶಿಕ್ಷೆ ಇತ್ಯಾದಿಗಳು ಚಾಲೆಂಜಿಂಗ್‌ ಸ್ಟಾರ್‌ನ ಮುಂದಿನ ಸಿನಿಮಾಗಳ ಭವಿಷ್ಯ ನಿರ್ಧರಿಸಲಿವೆ.

ಟಿ20 ವರ್ಲ್ಡ್‌ಕಪ್ 2024