ಕೇವಲ ಕಾಟೋ, ಮಾರೋ ಅಲ್ಲ ಈ ಕಾಟೇರ; ಶಿವಕುಮಾರ್ ಮಾವಲಿ ವಿಮರ್ಶೆ
ಚಾಲೆಂಜಿಂಗ್ ಸ್ಟಾರ್ ದರ್ಶನ್- ಆರಾಧನಾ ರಾಮ್ ನಟನೆಯ ಕಾಟೇರ ಸಿನಿಮಾ ನಿಜಾರ್ಥದ ಪ್ಯಾನ್ ಇಂಡಿಯಾ ಸಿನಿಮಾ ಎಂದಿದ್ದಾರೆ ಇಂಗ್ಲಿಷ್ ಉಪನ್ಯಾಸಕ ಮತ್ತು ಯುವ ಕನ್ನಡ ಬರಹಗಾರ ಶಿವಕುಮಾರ್ ಮಾವಲಿ.
ಕಾಟೇರ ನಿಜಾರ್ಥದ Pan India ಸಿನಿಮಾ. Casteism ಮತ್ತು Feudalism ಭಾರತದಾದ್ಯಂತ ಇದ್ದ ಮತ್ತು ಬೇರೆ ಬೇರೆ ರೂಪದಲ್ಲಿ ಈಗಲೂ ಇರುವ ವಾಸ್ತವಗಳು. ಹಾಗಾಗಿ ಇಲ್ಲಿನ ಕಥೆ ಪ್ಯಾನ್ ಇಂಡಿಯಾದ್ದೆ. ನೈಸರ್ಗಿಕ ಸಂಪತ್ತಾದ ಭೂಮಿಯ ಮೇಲೆ ಎಲ್ಲರಿಗೂ ಹಕ್ಕಿದೆ ಎನ್ನುವ ಸತ್ಯದ ವಿರುದ್ಧ ಹೋಗಿ, ಜಮೀನ್ದಾರರು ರೈತರ ಶೋಷಣೆಗೆ ನಿಂತ ಸಮಾಜದಲ್ಲಿ ರೈತರ ಪರವಾಗಿ, ತನ್ನೂರಿನ ಪರವಾಗಿ ನಿಲ್ಲುವ ನಾಯಕನ ಪಾತ್ರ ಸಿನಿಮ್ಯಾಟಿಕ್ ಆಗಿಯೇ ವಾಸ್ತವದ ಕಟು ಸತ್ಯಗಳನ್ನು ಸಂಭಾಷಣೆಯಲ್ಲಿ ನೆನಪಿಸುತ್ತದೆ.
"You can't put a fence around the planet earth" ಎನ್ನುತ್ತಾಳೆ ಕವಯತ್ರಿ Marina De Bellagente. ನೆನಪಿರಲಿ, ಮನುಷ್ಯನಿಗೆ Mother Earth ಆಗಿದ್ದ ಭೂಮಿ, ಒಡೆತನಕ್ಕೆ ಸಿಕ್ಕಾಗಿನಿಂದ ಕೇವಲ Raw Material ಆಗಿ ಹೋಯ್ತು. ಅಲ್ಲಿಗೆ ಜಮೀನ್ದಾರರ ಮತ್ತು ಬಂಡವಾಳಶಾಹಿಗಳ ಹಾವಳಿ ಶುರುವಾಯಿತು.
ಸಿನಿಮಾದಲ್ಲಿ ಒಂದು ಹಾಡೂ ಚೆನ್ನಾಗಿಲ್ಲ ಅನ್ನೋದು ಕಂಪ್ಲೆಂಟು. ಆದ್ರೆ ಆ ಸಿನಿಮಾದ ಪಾತ್ರಗಳ ಬದುಕು ಹಾಗೇ ಇದೆ. ಲಯಬದ್ಧವಾದ ಬದುಕಿನ ಹಾಡು ಆ ಜೀವನದಲ್ಲಿಲ್ಲದಿರುವುದು ದುರಂತ. ಜಾತಿ ಎಂಬುದು ಭಾರತೀಯರ DNA ಅಂತರ್ಗತವಾಗಿರುವ ಪ್ರಜ್ಞೆ. ಅದು ಈಗಲೂ ಒಂದು ದೊಡ್ಡ ಸಮಸ್ಯೆಯೇ. ಆದರೆ ಅದು ಇಲ್ಲ ಎನ್ನುವಂತೆ ನಾವು ಕೇವಲ ತೋರಿಕೆಗೆ ಹೇಳಿಕೊಂಡು ತಿರಾಗುಡುತ್ತೇವೆ ಅಷ್ಟೆ. ಇಂಥ ಸಬ್ಜೆಕ್ಟ್ ಗಳನ್ನು ತೀರ ನಿಧಾನ ಚಿತ್ರಕತೆಯಿಂದ ಮಂದಗತಿಯ ಸಿನಿಮಾ ಮಾಡಿ, ಫಿಲ್ಮ್ ಫೆಸ್ಟಿವಲ್ ಗಳಿಗೆ ಮಾತ್ರ ಸೀಮಿತ ಮಾಡಿಕೊಂಡು, ಯಾರೂ ನೋಡದ ಹಾಗೆ ಮಾಡುವುದಕ್ಕಿಂತ ಅದಕ್ಕೊಂದು ಕಮರ್ಷಿಯಲ್ ಟಚ್ ಕೊಟ್ಟು ದರ್ಶನ್ ಅಂಥವರಿಂದ ಮಾಡಿಸಿರುವುದು ನಿಜಕ್ಕೂ ಅಭಿನಂದನೀಯ.
ಇಲ್ಲದ ಲೋಕವೊಂದನ್ನು ಅಸಹಜವಾಗಿ ಸೃಷ್ಟಿಸಿ, ಕೇವಲ ಒಬ್ಬ ವ್ಯಕ್ತಿಯ ಯಾವುದೋ ದ್ವೇಷಕ್ಕಾಗಿ ಅಥವಾ ತಂದೆ-ತಾಯಿಯ ಆಸೆಯೊಂದನ್ನು ಈಡೇರಿಸಲು ನಿಮಿಷಕ್ಕೊಂದು ಕೊಲೆಯನ್ನು ವಿಚಿತ್ರ ಆಯುಧಗಳಿಂದ ಮಾಡಿಸಿ, ಸಿನಿಮಾನ ಟಾರ್ಚ್ ಹಾಕಿಕೊಂಡು ನೊಡುವ ಹಾಗೆ ಮಾಡುವ ಸಿನಿಮಾಗಳೆ ಮಧ್ಯೆ, ಇರುವ ಲೋಕದ ಬಹುಜನರ ಸಮಸ್ಯೆಯ, ಇದೇ ನೆಲದ ಕಥೆಯೊಂದನ್ನು ಒಬ್ಬ ಸ್ಟಾರ್ ನಟನಿಂದ ಮಾಡಿಸಿರುವ ಎದೆಗಾರಿಕೆಯನ್ನು ಮೆಚ್ಚಲೇಬೇಕು.
ಸಿನಿಮಾಗಳಿಂದ ಜನ ಬಹುವಾಗಿ ಬದಲಾಗುತ್ತಾರೆ ಎಂದೇನು ನಾನು ನಂಬುವುದಿಲ್ಲ. ಆದರೆ ವಾಸ್ತವಗಳು ಎದೆಯಲ್ಲಿ ಇಳಿದರೆ ಕೆಲವರಾದರೂ ಕೊಂಚ ಬದಲಾವಣೆ ಹೊಂದಬಹುದು. ಸಿನಿಮಾದಲ್ಲಿ ಶಾನಭೋಗರ ಮಗಳನ್ನು ಪ್ರೀತಿಸುವ ಕಾಟೇರ ಇದ್ದಾನೆ. ಆದ್ರೆ ಆಕೆಯ ಮನೆಯಿಂದ ಇದಕ್ಕೆ ಒಮ್ಮೆಯೂ ಪ್ರತಿರೋಧವನ್ನು ತೋರಿಸದಿರುವುದು ಆಶ್ಚರ್ಯ. ಆದರೆ ತನ್ನ ಅಕ್ಕ ಜಾತಿ ಬಿಟ್ಟು ಹೋದಳು ಎಂಬ ಕಾರಣಕ್ಕೆ ಅವಳನ್ನು ಮದುವೆಯ ಹಿಂದಿನ ದಿನವೇ ಕೊಲ್ಲುವ ಶಾನಭೋಗರ ಮಗನಂಥವರು ಈಗಲೂ ನಮ್ಮ ನಡುವೆ ಇದ್ದಾರೆ ಎಂಬುದು ನೋವಿನ ಸಂಗತಿ. ಅಂಥ ಅನೇಕ ಯಾವತ್ತೋ ಸತ್ತೋಗಿರಬೇಕಿದ್ದ ವ್ಯವಸ್ಥೆಗಳು ಇನ್ನೂ ಜೀವಂತ ಇರುವುದನ್ನು ನೆನಪಿಸುತ್ತದೆ ಕಾಟೇರ. ಯೆಸ್ , ಇದು ಕೇವಲ ಕಾಟೋ, ಮಾರೋ ಅಲ್ಲದ ಕಾಟೇರ.
ವಿಮರ್ಶಕರ ಪರಿಚಯ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಿವಕುಮಾರ್ ಮಾವಲಿ ಅವರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. ನೋ ಮೋರ್ ಇಂಗ್ಲಿಷ್, ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ ಸೇರಿದಂತೆ ಹಲವು ಕಥೆ, ಕವಿತೆ, ನಾಟಕ ರಚಿಸಿದ್ದಾರೆ. ಇವರ ಸುಪಾರಿ ಕೊಲೆ ನಾಟಕವನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಸಿನಿಮಾ ಮಾಡುತ್ತಿದ್ದಾರೆ.