Kaatera: ಕರ್ನಾಟಕದಲ್ಲಿ ಮೊಳಗಿತು ‘ಕಾಟೇರ’ನ ಕಹಳೆ; ರಾತ್ರಿಯಿಂದಲೇ ಶುರು ಡಿ ಬಾಸ್ ಜಾತ್ರೆ, ಸಾವಿರ ತೆರೆಗಳಲ್ಲಿ ದರ್ಶನ್ ‘ದರ್ಶನ’
ಡಿ. 29ರಂದು ರಾಜ್ಯಾದ್ಯಂತ ದರ್ಶನ್ ಅಭಿನಯದ ಕಾಟೇರ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಮುಂಗಡ ಟಿಕೆಟ್‌ಗಳನ್ನು ಗರಿ ಗರಿಯಾಗಿ ಮಾರಿಕೊಂಡಿರುವ ಈ ಸಿನಿಮಾ, ಕೆಲವು ಕಡೆಗಳಲ್ಲಿ ಇಂದು ಮಧ್ಯ ರಾತ್ರಿ 12 ಗಂಟೆಯಿಂದಲೇ ಶೋಗಳನ್ನು ಆಯೋಜಿಸಿದ್ದು, ಆ ಟಿಕೆಟ್‌ಗಳೂ ಬಿಕರಿಯಾಗಿವೆ.
Kaatera: ಸಹಜವಾಗಿ ನಟ ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಅಲ್ಲಿ ಅಭಿಮಾನಿಗಳ ಕ್ರೇಜ್ ಮುಗಿಲು ಮುಟ್ಟಿರುತ್ತದೆ. ಇದೀಗ ಆ ಕ್ರೇಜ್ ಬುಡಕ್ಕೆ ಬೆಂಕಿ ಬಿದ್ದಿದೆ. ಅಂದರೆ, ಈ ಮೊದಲಿನ ಸಿನಿಮಾಗಳಿಗಿಂತ ಕಾಟೇರ ಸಿನಿಮಾದ ಹೈಪ್ ದೊಡ್ಡ ಮಟ್ಟದಲ್ಲಿ ರಾಜ್ಯವನ್ನಷ್ಟೇ ಅಲ್ಲದೇ ಪರಭಾಷಾ ಸಿನಿಮಾಸಕ್ತರ ಗಮನವನನ್ನೂ ಸೆಳೆದಿದೆ. ಟ್ರೇಲರ್ ಮೂಲಕವೇ ಮಾಸ್ ಪ್ರೇಕ್ಷಕರನ್ನು ಬರಸೆಳೆದ ಈ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ಕ್ಷಣಗಳಷ್ಟೇ ಬಾಕಿ ಉಳಿದಿದೆ.
ತರುಣ್ ಸುಧೀರ್ ನಿರ್ದೇಶನದ ಕಾಟೇರ ಕೇವಲ ಸಿನಿಮಾ ಅಭಿಮಾನಿಗಳಿಗಷ್ಟೇ ಅಲ್ಲ ಸ್ವತಃ ದರ್ಶನ್‌ಗೂ ಹೊಸ ಅನುಭವ. ಈ ವರೆಗಿನ ಸಿನಿಮಾಗಳಲ್ಲಿ ಕಾಣಿಸಿದ ದರ್ಶನ್ ಬೇರೆ, ಈ ಸಿನಿಮಾದಲ್ಲಿನ ದರ್ಶನ್ ಅವರೇ ಬೇರೆ. ಈ ವಿಚಾರವನ್ನು ಸ್ವತಃ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ. 1970ರ ಕಾಲಘಟ್ಟದ ಕಥೆಯಾಗಿರೋದ್ರಿಂದ ಆ ಕಾರಣಕ್ಕೂ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಾಗುವುದಕ್ಕೆ ಮುಖ್ಯ ಕಾರಣ. ಟ್ರೇಲರ್ ಮೂಲಕ ಗುಲ್ಲೆಬ್ಬಿಸಿದ್ದ ಈ ಸಿನಿಮಾ ಬ್ಯಾಕ್ ಟು ಬ್ಯಾಕ್ ಹಾಡುಗಳಿಂದಲೂ ಕಿವಿಗಿಂಪು ನೀಡಿತ್ತು.
ಅದರಂತೆ ಮುಂಗಡ ಟಿಕೆಟ್ ಬುಕಿಂಗ್ ಶುರುವಾಗಿದ್ದೇ ತಡ, ಅಭಿಮಾನಿ ವಲಯದಲ್ಲಿ ಹಬ್ಬ ಮನೆ ಮಾಡಿತ್ತು. ಅದರಂತೆ ಕೆಲವೇ ಕ್ಷಣಗಳಲ್ಲಿ ಮುಂಗಡ ಟಿಕೆಟ್ ಸಹ ಗರಿ ಗರಿಯಾಗಿ ಬಿಕರಿಯಾಗುತ್ತಿವೆ. ಇದೀಗ ಇದೇ ಕಾಟೇರನಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಿನ ಜಾವದ ಶೋ ಜತೆಗೆ ಮಿಡ್ ನೈಟ್ ಶೋಗಳನ್ನೂ ಆಯೋಜಿಸಲಾಗಿದೆ. ಬೆಂಗಳೂರಿನ ಹಲವೆಡೆಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಕಾಟೇರನನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ರಾತ್ರಿ 12 ಗಂಟೆಗೆ ಕಾಟೇರ ಚಿತ್ರದ ಮೊದಲ ಶೋ ಪ್ರದರ್ಶನ ಕಾಣಲಿದೆ.
48 ಗಂಟೆಯಲ್ಲಿ 1 ಕೋಟಿ ಕಮಾಯಿ
ಚಿತ್ರತಂಡದ ಮಾಹಿತಿ ಪ್ರಕಾರ, ಕಾಟೇರ ಸಿನಿಮಾ ಕರ್ನಾಟಕದಲ್ಲಷ್ಟೇ ಬಿಡುಗಡೆ ಆಗುತ್ತಿದೆ. ಜತೆಗೆ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾದ ಕೇವಲ 48 ಗಂಟೆಗಳಲ್ಲಿಯೇ 1 ಕೋಟಿ ರೂಪಾಯಿಯನ್ನು ಬೊಕ್ಕಸಕ್ಕಿಳಿಸಿದೆ ಎಂದು ಚಿತ್ರತಂಡವೇ ಪೋಸ್ಟರ್ ಬಿಡುಗಡೆ ಮಾಡಿ ಸಂಭ್ರಮಿಸಿದೆ. ಕರ್ನಾಟಕದಾದ್ಯಂತ ಬುಕ್ ಮೈ ಶೋ ಮೂಲಕ 1ಲಕ್ಷ ಟಿಕೆಟ್‌ಗಳನ್ನೂ ಮಾರಿಕೊಂಡು ದಾಖಲೆ ಬರೆದಿದೆ ಕಾಟೇರ ಸಿನಿಮಾ. ಅದೇ ರೀತಿ ರಾಜ್ಯದಾದ್ಯಂತ ಮೊದಲ ದಿನವಾದ (ಡಿ. 29) ಶುಕ್ರವಾರದ ಎಲ್ಲ ಐದೂ ಶೋಗಳು ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಆಗಿವೆ.
500ರಿಂದ ಸಾವಿರಕ್ಕೆ ಏರಿದ ಸ್ಕ್ರೀನ್‌ಗಳ ಸಂಖ್ಯೆ
ಈ ಮೊದಲು ರಾಜ್ಯದಾದ್ಯಂತ 550 ಸ್ಕ್ರೀನ್‌ಗಳಲ್ಲಿ ಕಾಟೇರ ಸಿನಿಮಾ ತೆರೆಗೆ ತರುವ ಪ್ಲಾನ್ ಹಾಕಿತ್ತು ಚಿತ್ರತಂಡ. ಆದರೆ, ಅತಿಯಾದ ಬೇಡಿಕೆಯ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಕಾಟೇರ ಸಿನಿಮಾ ಅಬ್ಬರಿಸಲಿದೆ. ಅಷ್ಟೇ ಅಲ್ಲದೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ರಾಕ್‌ಲೈನ್ ಮಾಲ್‌ನಲ್ಲಿ ಇದೇ ಮೊದಲ ಸಲ ಕನ್ನಡ ಸಿನಿಮಾವೊಂದರ ಟಿಕೆಟ್‌ಗಳು 1 ಸಾವಿರ ರೂಪಾಯಿಗೆ ಬಿಕರಿಯಾಗಿವೆ.