Kaatera 200 Crore: ಬಾಕ್ಸ್ ಆಫೀಸ್‌ನಲ್ಲಿ ಸುಲ್ತಾನನಾದ ‘ಕಾಟೇರ’! ದರ್ಶನ್ ಬತ್ತಳಿಕೆಗೆ ಮೊದಲ 200 ಕೋಟಿ ಕಲೆಕ್ಷನ್ ಗರಿಮೆ
Darshan Kaatera Movie Box Office Collection: ಬಿಡುಗಡೆ ಆದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತಿರುವ ಕಾಟೇರ ಸಿನಿಮಾ, ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ. 19 ದಿನಗಳಲ್ಲಿ 206 ಕೋಟಿ ಗಳಿಕೆ ಕಾಣುವ ಮೂಲಕ ದರ್ಶನ್ ಬತ್ತಳಿಕಗೆ ದೊಡ್ಡ ಗೆಲುವೊಂದು ಸಿಕ್ಕಂತಾಗಿದೆ.
Kaatera 200 Crore: ಕಳೆದ ವರ್ಷದ ಡಿಸೆಂಬರ್ 29ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಬಿಡುಗಡೆ ಆಗಿತ್ತು. ಬಹು ನಿರೀಕ್ಷೆಯನ್ನೇ ಹೊತ್ತು ಬಂದಿದ್ದ ಈ ಸಿನಿಮಾ, ಬಿಡುಗಡೆ ಬಳಿಕ ಆ ನಿರೀಕ್ಷೆಯನ್ನು ನಿಜವಾಗಿಸಿ, ಕರುನಾಡ ಸಿನಿಮಾ ಪ್ರೇಕ್ಷಕರಿಂದ ಬಹುಪರಾಕ್ ಪಡೆದುಕೊಂಡಿತ್ತು. ಬಾಯಿ ಮಾತಿನ ಪ್ರಚಾರದಿಂದಲೇ ರಾಜ್ಯದ ಜತೆಗೆ ಪರಭಾಷೆಯವರ ಗಮನ ಸೆಳೆದಿತ್ತು. ವಿದೇಶದಲ್ಲಿಯೂ ಬಿಡುಗಡೆಯಾಗಿ ಮೆಚ್ಚುಗೆಯ ಮಹಾಪೂರವನ್ನೇ ಗಿಟ್ಟಿಸಿಕೊಂಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿ ಇಂದಿಗೆ (ಜ. 19) 20 ದಿನಗಳಾದವು. ಈ 20 ದಿನದಲ್ಲಿ ಬರೋಬ್ಬರಿ 206 ಕೋಟಿ ಬಾಚಿಕೊಂಡಿದ್ದಾನೆ ಕಾಟೇರ!
ತರುಣ್ ಕಿಶೋರ್ ಸುಧೀರ್ ನಿರ್ದೇಶದನಲ್ಲಿ ಮೂಡಿಬಂದಿರುವ ಕಾಟೇರ ಸಿನಿಮಾ, ನೈಜ ಘಟನೆಯ ಒಂದೆಳೆಯನ್ನೇ ಆಧರಿಸಿ 1970ರ ಕಾಲಘಟ್ಟಕ್ಕೆ ಕರೆದೊಯ್ದಿತ್ತು. ಮಾಸ್ ಪ್ರಿಯರಿಗೂ, ಕ್ಲಾಸ್ ಪ್ರಿಯರಿಗೂ ಸಿನಿಮಾ ಹಬ್ಬದೂಟವನ್ನೇ ಬಡಿಸಿತ್ತು. ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗಿದ್ದ ಕಾಟೇರ ಸಿನಿಮಾ, ಕೇವಲ ಒಂದು ವಾರದಲ್ಲಿ ನೂರು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಈ ಮೂಲಕ ದರ್ಶನ್ ಸಿನಿಮಾ ಕೆರಿಯರ್‌ನಲ್ಲೂ ದೊಡ್ಡ ಮೈಲಿಗಲ್ಲಾಗಿತ್ತು ಈ ಸಿನಿಮಾ. ಈಗ ಚಿತ್ರದ ಬಿಡುಗಡೆಯಾಗಿ 20 ದಿನಕ್ಕೆ ಮತ್ತೊಂದು ಇತಿಹಾಸ ಬರೆದಿದೆ ಈ ಸಿನಿಮಾ.
200 ಕೋಟಿಯ ಗಡಿ ದಾಟಿದ ಕಾಟೇರ
ಈ ವರೆಗೂ ದರ್ಶನ್ ಅವರ ಬೇರಾವ ಸಿನಿಮಾ 200 ಕೋಟಿ ಗಳಿಸಿದ ಉದಾಹರಣೆ ಇರಲಿಲ್ಲ. ಈ ಹಿಂದೆ ರಿಲೀಸ್ ಆಗಿದ್ದ ಇದೇ ಜೋಡಿಯ ರಾಬರ್ಟ್ ಸಿನಿಮಾ 100 ಕೋಟಿ ಪ್ಲಸ್ ಗಳಿಸಿದ್ದನ್ನು ಬಿಟ್ಟರೆ, ಈ ಮಟ್ಟದ ಯಶಸ್ಸು ದರ್ಶನ್ ಅವರ ಬೇರಾವ ಸಿನಿಮಾಕ್ಕೂ ಸಿಕ್ಕಿರಲಿಲ್ಲ. ಒಂದೇ ವಾರದಲ್ಲಿ 100 ಕೋಟಿ ಗಡಿದಾಟಿದ್ದ ಕಾಟೇರ, ಇದೀಗ ಕೇವಲ 20 ದಿನಗಳಲ್ಲಿ 206 ಕೋಟಿ ಗಳಿಸಿದ್ದಾನೆ. ಟಿಕೆಟ್ ಬುಕಿಂಗ್‌ನಲ್ಲೂ ದಾಖಲೆ ಬರೆದ ಕಾಟೇರ ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟವಾಗಿವೆ. ಹೊಸ ವರ್ಷದ ಜತೆಗೆ ಸಂಕ್ರಾಂತಿ ಹಬ್ಬವನ್ನೂ ಈ ಸಿನಿಮಾ ಎನ್‌ಕ್ಯಾಶ್ ಮಾಡಿಕೊಂಡಿದೆ.
ಪರಭಾಷೆಗಳಿಗೂ ಕಾಟೇರ ಪ್ರಯಾಣ
ಕಾಟೇರ ಸಿನಿಮಾ ಕರುನಾಡಿನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡ ಬಳಿಕ, ವಿದೇಶದಲ್ಲೂ ಅಬ್ಬರಿಸುತ್ತಿದೆ. ಈಗಾಗಲೇ ಜ. 5ರಿಂದ ಕೆನಡಾ, ದುಬೈ, ಇಂಗ್ಲೆಂಡ್, ಅಮೆರಿಕಾಗಳಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಅದೇ ರೀತಿ ಇದೇ ಚಿತ್ರವನ್ನು ಪರಭಾಷಿಕರಿಗೂ ತೋರಿಸುವ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಇದೇ ಫೆಬ್ರವರಿಯಲ್ಲಿ ಪಕ್ಕದ ತೆಲುಗು, ತಮಿಳು, ಹಿಂದಿಯಲ್ಲಿಯೂ ಈ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡುವ ಕೆಲಸ ನಡೆಯುತ್ತಿದೆ.
ಒಂದೇ ವಾರದಲ್ಲಿ 100 ಕೋಟಿ
- ಮೊದಲೇ ದಿನ (ಡಿ. 29 ) 19.79 ಕೋಟಿ
- ಎರಡನೇ ದಿನ (ಡಿ.30) 17.35 ಕೋಟಿ
- ಮೂರನೇ ದಿನ (ಡಿ.31) 20.96 ಕೋಟಿ
- ನಾಲ್ಕನೇ ದಿನ (ಜ. 1) 18.26 ಕೋಟಿ
- ಐದನೇ ದಿನ (ಡಿ. 2) 9.24 ಕೋಟಿ
- ಆರನೇ ದಿನ (ಜ.3) 9.78 ಕೋಟಿ
- ಏಳನೇ ದಿನ (ಜ. 4) 9.52 ಕೋಟಿ (ಒಟ್ಟು 104. 58)
- ಎರಡು ವಾರಕ್ಕೆ ಒಟ್ಟು 150 ಕೋಟಿ ಗಳಿಕೆ
- 18 ದಿನಕ್ಕೆ ಒಟ್ಟು 190.89 ಕೋಟಿ
- 20 ದಿನಕ್ಕೆ ಒಟ್ಟು 206.19 ಕೋಟಿ