ದರ್ಶನ್ ಗ್ಯಾಂಗ್‌ಗೆ ಇದೆಂಥಾ ಸ್ಥಿತಿ! ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದವನ ತಾಯಿ ನಿಧನ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A4 ಆರೋಪಿ ರಘು ಅವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಪುಸಲಾಯಿಸಿ, ಕಿಡ್ನಾಪ್ ಮಾಡಿದ್ದೇ ಈ ರಾಘವೇಂದ್ರ.
Chitradurga Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ದರ್ಶನ್ ಸೇರಿ ಒಟ್ಟು 17 ಮಂದಿ ಜೈಲಿನಲ್ಲಿದ್ದಾರೆ. ಇತ್ತೀಚೆಗಷ್ಟೇ ಅಂದರೆ, ಜುಲೈ 18ರಂದು ಮತ್ತೆ ವಿಚಾರಣೆ ನಡೆಸಿದ್ದ ಕೋರ್ಟ್, ಎಲ್ಲರಿಗೂ ಮುಂದಿನ 14 ದಿನಗಳ ಕಾಲ ಮಗದೊಮ್ಮೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ತೀರ್ಪು ಪ್ರಕಟಿಸಿತ್ತು. ಹೀಗೆ ದರ್ಶನ್ ಅಂಡ್ ಗ್ಯಾಂಗ್‌ಗೆ ಒಂದಿಲ್ಲೊಂದು ತೊಡರು ಎದುರಾಗುತ್ತಲೇ ಇದೆ. ಇದೀಗ ಹೀಗೆ ಇದೇ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ವ್ಯಕ್ತಿಯ ತಾಯಿ ಇದೀಗ ನಿಧನರಾಗಿದ್ದಾರೆ.
ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ರಘು ಅವರ ತಾಯಿ ಮಂಜುಳಮ್ಮ (70) ವಯಸ್ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ4 ಆರೋಪಿ ಆಗಿರುವ ರಘು, ಚಿತ್ರದುರ್ಗದಿಂದ ಬೆಂಗಳೂರಿಗೆ ದರ್ಶನ್ ಆಪ್ತರ ಸಲಹೆ ಮೇರೆಗೆ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆ ತಂದಿದ್ದ. ಇದೀಗ ರಘು ನ್ಯಾಯಾಂಗ ಬಂಧನದಲ್ಲಿರುವಾಗಲೇ ಅವರ ತಾಯಿ ಮಂಜುಳಮ್ಮ ನಿಧನರಾಗಿದ್ದಾರೆ.
ಕಳೆದ ಒಂದು ವರ್ಷದಿಂದ ರಘು ಅವರ ತಾಯಿ ಮಂಜುಳಮ್ಮ ಹಾಸಿಗೆ ಹಿಡಿದಿದ್ದರು. ಈ ನಡುವೆ ಮಗ ಜೈಲಿಗೆ ಹೋದ ಎಂಬ ಕಾರಣಕ್ಕೆ ಅವರ ಆರೋಗ್ಯ ಮತ್ತಷ್ಟು ಕ್ಷಿಣಿಸಿತ್ತು. ಇದೀಗ ತಾಯಿಯ ಅಂತ್ಯ ಸಂಸ್ಕಾರಕ್ಕೆ ಚಿತ್ರದುರ್ಗ ಬಳಿಯ ಕೋಳಿ ಬುರುಜನಹಟ್ಟಿ ಗ್ರಾಮಕ್ಕೆ ರಘುನನ್ನು ಕಳುಹಿಸಿಕೊಡಿ ಎಂದು ಕುಟುಂಬದವರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಮೊದಲು ಇದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯೊಬ್ಬರಲ್ಲಿ ಒಬ್ಬರಾದ ಅನಿಲ್ ಕುಮಾರ್ ಸಹ ಅವರ ತಂದೆಯನ್ನು ಕಳೆದುಕೊಂಡಿದ್ದರು. ಅನಿಲ್ ಕುಮಾರ್ ಅರೆಸ್ಟ್ ಆಗುತ್ತಿದ್ದಂತೆ, ಅವರ ತಂದೆ ಚಂದ್ರಪ್ಪ ಶಾಕ್‌ಗೆ ಒಳಗಾಗಿ ಹೃದಯಾಘಾತದಿಂದ ನಿಧನರಾಗಿದ್ದರು. ತಂದೆಯ ಅಂತ್ಯಸಂಸ್ಕಾರಕ್ಕೆ ಅನಿಲ್ ಕುಮಾರ್ ಅವರನ್ನು ಪೊಲೀಸರು ಕರೆದೊಯ್ದಿದ್ದರು.
ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಏನಿದೆ?
ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿ ತನಿಖಾಧಿಕಾರಿಗಳ ಕೈ ಸೇರಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕೊಲೆ ಹೇಗೆ ನಡೆದಿದೆ ಎಂದು ವಿವರವಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿಗೆ 4-5 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಗಂಭೀರವಾಗಿ ಹಲ್ಲೆ ನಡೆಸಿರುವುದು ತಿಳಿದುಬಂದಿದೆ. ವಿಪರೀತವಾಗಿ ಹೊಡೆದಿರುವುದರಿಂದ ನೋವು ತಾಳಲಾರದೆ ರೇಣುಕಸ್ವಾಮಿ ಕೊನೆಯುಸಿರು ಬಿಟ್ಟಿದ್ದಾರೆ. ತೀವ್ರವಾದ ಹೊಡೆತಗಳು ಬಿದ್ದಿರುವುದರಿಂದ ದೇಹದ ಕೆಲವು ಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ವಿಭಾಗ