ಜೋಡೆತ್ತುಗಳ ಫೋಟೋ ಹಂಚಿಕೊಂಡು ಕಾಲಾಯ ತಸ್ಮೈ ನಮಃ ಎಂದ ದರ್ಶನ್; ಥ್ರಿಲ್ ಆದ ಅಭಿಮಾನಿಗಳು
ನಟಿ, ಸಂಸದೆ ಸುಮಲತಾ ಬರ್ತ್‌ಡೇ ಪಾರ್ಟಿಗೆ ಹೋಗಿ ಬಂದ ಮರು ದಿನವೇ ದರ್ಶನ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜೋಡೆತ್ತುಗಳ ಜೊತೆಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡು ಕಾಲಾಯ ತಸ್ಮಯ್ ನಮಃ ಎಂದು ಬರೆದುಕೊಂಡಿದ್ದಾರೆ.
ಒಂದು ಸಮಯದಲ್ಲಿ ಕುಚಿಕುಗಳಂತೆ ಇದ್ದ ದರ್ಶನ್ ಹಾಗೂ ಸುದೀಪ್ ಈಗ ಮುನಿಸಿನಿಂದ ದೂರ ದೂರ ಇದ್ದಾರೆ. ಆದಷ್ಟು ಬೇಗ ಇಬ್ಬರೂ ಮೊದಲಿನಂತೆ ಒಂದಾಗಬೇಕು ಅನ್ನೋದು ಅಭಿಮಾನಿಗಳ ಆಸೆ. ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಜೋಡೆತ್ತುಗಳ ಫೋಟೋ ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ.
ಕುಚಿಕು ಗೆಳೆಯರು
ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ದರ್ಶನ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಕ್ರಿಕೆಟ್ ಆಗಲೀ, ಸಿನಿಮಾ ಕಾರ್ಯಕ್ರಮಗಳಾಗಲೀ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಇಬ್ಬರೂ ದೂರಾದರು. ನಾವಿಬ್ಬರೂ ಇನ್ಮುಂದೆ ಸ್ನೇಹಿತರಲ್ಲ ಎಂದು ದರ್ಶನ್ ಪೋಸ್ಟ್ ಹಂಚಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು. ಇಬ್ಬರೂ ಬೇರೆ ಆಗಲು ಕಾರಣ ಏನು ಎಂದು ಕೆಲವರು ತಲೆ ಕೆಡಿಸಿಕೊಂಡರೆ, ಇನ್ನೂ ಕೆಲವರು ಆದಷ್ಟು ಬೇಗ ಇಬ್ಬರೂ ಮುನಿಸು ಮರೆತು ಮತ್ತೆ ಒಂದಾಗಲಿ ಎಂದು ಹಾರೈಸಿದ್ದರು.
ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಆಗಲೀ, ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳಬಹುದಾ? ಎಂಬ ಕುತೂಹಲದಿಂದ ಕಾಯುತ್ತಿದ್ದವರು ಎಷ್ಟೋ ಮಂದಿ. ಹೊಸಪೇಟೆ ಆಡಿಯೋ ಸಮಾರಂಭದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಗೆ ಸುದೀಪ್ ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದು , ಆ ಪೋಸ್ಟ್‌ಗೆ ದರ್ಶನ್ ರಿಪ್ಲೇ ಮಾಡಿದ್ದು ಗಮನ ಸೆಳೆದಿತ್ತು. ಇಷ್ಟು ದಿನಗಳ ಕಾಲ ಒಬ್ಬರ ಹೆಸರನ್ನು ಮತ್ತೊಬ್ಬರು ಎತ್ತದೆ ತಮ್ಮ ಪಾಡಿಗೆ ತಾವು ಸುಮ್ಮನಿರುತ್ತಿದ್ದ ಇಬ್ಬರೂ ಸಾರ್ವಜನಿಕವಾಗಿ ಈ ರೀತಿ ಪೋಸ್ಟ್ ಹಂಚಿಕೊಂಡಿದ್ದು ಎಲ್ಲರಿಗೂ ಖುಷಿ ನೀಡಿತ್ತು.
ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ದಚ್ಚು ಕಿಚ್ಚ
ಇದಾದ ನಂತರ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರೂ ದೂರ ದೂರ ನಿಂತಿದ್ದರಾದರೂ ಒಂದೇ ವೇದಿಕೆ ಮೇಲೆ ಕಂಡು ಬಂದರು. ಸುಮಲತಾ ದರ್ಶನ್‌ಗೆ ಕೇಕ್ ತಿನ್ನಿಸಿದ ಸ್ಪೂನ್‌ನಲ್ಲೇ ಸುದೀಪ್‌ಗೆ ಕೂಡಾ ತಿನ್ನಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಾದ ಮರು ದಿನವೇ ದರ್ಶನ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜೋಡೆತ್ತುಗಳ ಜೊತೆಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡು ಕಾಲಾಯ ತಸ್ಮಯ್ ನಮಃ.... ಎಂದು ಬರೆದುಕೊಂಡಿದ್ದಾರೆ.
''ಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ'' ಎಂಬುದು ಈ ವಾಕ್ಯದ ಅರ್ಥ. ದರ್ಶನ್ ಹೀಗೆ ಬರೆದುಕೊಂಡಿರುವುದು ಏಕೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸುದೀಪ್ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಸೆಪ್ಟೆಂಬರ್ 2 ರಂದು ದರ್ಶನ್, ಸುದೀಪ್‌ಗೆ ಬರ್ತ್‌ಡೇ ವಿಶ್ ಮಾಡುತ್ತಾರಾ? ಈ ಮೂಲಕ ಇಬ್ಬರೂ ಮತ್ತೆ ಒಂದಾಗುತ್ತಾರಾ? ಎಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ.