ಕನ್ನಡ ಸುದ್ದಿ  /  ಮನರಂಜನೆ  /  ಅಲ್ಲಿ ಪತ್ನಿ ಜತೆಗೆ ದರ್ಶನ್‌ ವಿವಾಹ ವಾರ್ಷಿಕೋತ್ಸವ ಆಚರಣೆ, ಇಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎಂದ ಪವಿತ್ರಾ ಗೌಡ

ಅಲ್ಲಿ ಪತ್ನಿ ಜತೆಗೆ ದರ್ಶನ್‌ ವಿವಾಹ ವಾರ್ಷಿಕೋತ್ಸವ ಆಚರಣೆ, ಇಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎಂದ ಪವಿತ್ರಾ ಗೌಡ

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಮತ್ತು ಪತ್ನಿ ವಿಜಯಲಕ್ಷ್ಮೀ ದರ್ಶನ್‌ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದರೆ, ಸೋಷಿಯಲ್‌ ಮೀಡಿಯಾದಲ್ಲಿ ಕರ್ಮದ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ ಪವಿತ್ರಾ ಗೌಡ.

ಅಲ್ಲಿ ಪತ್ನಿ ಜತೆಗೆ ದರ್ಶನ್‌ ವಿವಾಹ ವಾರ್ಷಿಕೋತ್ಸವ ಆಚರಣೆ, ಇಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎಂದ ಪವಿತ್ರಾ ಗೌಡ VIDEO
ಅಲ್ಲಿ ಪತ್ನಿ ಜತೆಗೆ ದರ್ಶನ್‌ ವಿವಾಹ ವಾರ್ಷಿಕೋತ್ಸವ ಆಚರಣೆ, ಇಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎಂದ ಪವಿತ್ರಾ ಗೌಡ VIDEO

Darshan Vijayalakshmi Wedding Annivarsary: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ದರ್ಶನ್‌ ಸಲುವಾಗಿ, ಈ ಜೋಡಿಯ ಕಿತ್ತಾಟ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇತ್ತೀಚಿನ ಕೆಲ ತಿಂಗಳಿದ್ದ ತಣ್ಣಗಿದ್ದ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವಿನ ಮುನಿಸು, ಇದೀಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಭುಗಿಲೆದ್ದಿದೆ. ದೂರದ ದುಬೈನಲ್ಲಿ ನಟ ದರ್ಶನ್‌ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಅದ್ಧೂರಿಯಾಗಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರೆ, ಇಲ್ಲಿ ಕರ್ಮದ ಪಾಠ ಮಾಡಿದ್ದಾರೆ ಪವಿತ್ರಾ ಗೌಡ!

ಟ್ರೆಂಡಿಂಗ್​ ಸುದ್ದಿ

ನಟ ದರ್ಶನ್‌ ಜತೆಗಿನ ಸಾಂಗತ್ಯಕ್ಕೆ ಒಂದು ದಶಕವಾಯ್ತು ಎಂದು ಅವರೊಟ್ಟಿಗಿನ ಸರಣಿ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಪವಿತ್ರಾ ಗೌಡ ಹಂಚಿಕೊಂಡಿದ್ದೇ ತಡ, ವಿಜಯಲಕ್ಷ್ಮೀ ದರ್ಶನ್‌ ಕೋಪಕ್ಕೆ ಕಾರಣವಾಗಿತ್ತು. ಆ ವರೆಗೂ ಒಳಗೊಳಗೆ ತಣ್ಣಗೆ ಕುದಿಯುತಲಿದ್ದ ದರ್ಶನ್‌ ಪತ್ನಿಯ ಆಕ್ರೋಶ ಸ್ಫೋಟಗೊಂಡಿತ್ತು. ನೇರವಾಗಿ ಪವಿತ್ರಾ ಅವರ ಖಾಸಗಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ, ಕಾನೂನು ಸಮರದ ಎಚ್ಚರಿಕೆ ರವಾನಿಸಿದ್ದರು. ಹೀಗೆ ಪವಿತ್ರಾ ಗೌಡಗೆ ಬಿಸಿ ಮುಟ್ಟಿಸಿದ್ದರು ದರ್ಶನ್‌ ಪತ್ನಿ.

ದರ್ಶನ್‌ ಪತ್ನಿಯ ಈ ಬೆದರಿಕೆಗೆ ಬಗ್ಗದ ಪವಿತ್ರಾ ಗೌಡ ಸಹ, ನಮಗೂ ಕಾನೂನು ಗೊತ್ತು, ನಾನೂ ಅದರ ಮೊರೆ ಹೋಗುತ್ತೇನೆ ಎಂದಿದ್ದರು. ಈ ಜಡೆ ಜಗಳ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದರ್ಶನ್‌ ಫ್ಯಾನ್ಸ್‌ ವಿಜಯಲಕ್ಷ್ಮೀ ಬೆಂಬಲಕ್ಕೆ ನಿಂತು, ಪವಿತ್ರಾ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ಇವರಿಬ್ಬರ ಜಗಳ ಹೆಚ್ಚು ಸದ್ದು ಮಾಡುತ್ತಿದ್ದಂತೆ, ಕಾಟೇರ ಸಿನಿಮಾದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ನಟ ದರ್ಶನ್‌ ಎಲ್ಲಿಯೂ ಇವರಿಬ್ಬರ ಹೆಸರನ್ನು ನೇರವಾಗಿ ಹೇಳದೇ, ಪರೋಕ್ಷವಾಗಿಯೇ ಚಾಟಿ ಬೀಸಿದ್ದರು. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಹೋಗ್ರಯ್ಯ ಎಂದಿದ್ದರು.

ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ

ನಟ ದರ್ಶನ್‌ ಕೈ ನೋವಿನ ಚಿಕಿತ್ಸೆ ಬಳಿಕ ಡೆವಿಲ್‌ ಸಿನಿಮಾ ಶೂಟಿಂಗ್‌ಗೆ ಬ್ರೇಕ್‌ ಹಾಕಿದ್ದಾರೆ. ಅದೇ ಕೈ ನೋವಿನಲ್ಲಿಯೇ ಚುನಾವಣಾ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು. ಇದೀಗ ಪತ್ನಿ ವಿಜಯಲಕ್ಷ್ಮೀ ಜತೆಗೆ ದುಬೈನಲ್ಲಿದ್ದಾರೆ ದರ್ಶನ್.‌ ಇತ್ತೀಚೆಗಷ್ಟೇ ಪತಿ ದರ್ಶನ್‌ ಅವರ ಬರ್ತ್‌ಡೇಯನ್ನು ಅಷ್ಟೇ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ್ದ ವಿಜಯಲಕ್ಷ್ಮೀ, ಇದೀಗ ತಮ್ಮ ಮದುವೆ ವಾರ್ಷಿಕೋತ್ಸವವನ್ನೂ ದುಬೈನಲ್ಲಿ ಆಚರಿಸಿದ್ದಾರೆ. ಅಲ್ಲಿನ ಅಭಿಮಾನಿಗಳು, ಆಪ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿ ಸಂಭ್ರಮಿಸಿದೆ.

ಈ ಮದುವೆ ವಾರಿಕೋತ್ಸವದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್ಸ್ಟಾಗ್ರಾಂನ ಸ್ಟೇಟಸ್‌ನಲ್ಲಿ ವಿಜಯಲಕ್ಷ್ಮೀ ದರ್ಶನ್‌ ಹಂಚಿಕೊಂಡಿದ್ದಾರೆ. ಅಭಿಮಾನಿ ವಲಯದಿಂದಲೂ ಅತ್ತಿಗೆ ಮತ್ತು ಅಣ್ಣನಿಗೆ ಹ್ಯಾಪಿ ಆನಿವರ್ಸರಿ, ನೂರು ಕಾಲ ಸುಖವಾಗಿರಿ ಎಂಬ ಶುಭ ಹಾರೈಕೆಗಳ ಸುರಿಮಳೆಯೇ ಸುರಿದಿದೆ. ಈ ನಡುವೆ ಇವರಿಬ್ಬರ ಮದುವೆ ವಾರ್ಷಿಕೋತ್ಸವದ ವಿಚಾರ ಪವಿತ್ರಾ ಗೌಡಗೂ ತಿಳಿದಿದೆ. ಅದಕ್ಕಾಗಿ ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬ ದರ್ಶನ್‌ ಅವರು ಹೇಳಿದ ವಿಡಿಯೋವನ್ನೇ ಸ್ಟೋರಿ ರೂಪದಲ್ಲಿ ಶೇರ್‌ ಮಾಡಿದ್ದಾರೆ.

ಕರ್ಮದ ಪಾಠ ಮಾಡಿದ ಪವಿತ್ರಾ

"ಕರ್ಮ ಎಂಬುದು ಒಂದು ರೀತಿ ಬ್ಯಾಗೇಜ್ ಇದ್ದಂತೆ. ಅದರಲ್ಲಿ ನೀವು ಏನನ್ನು ಫಿಲ್ ಮಾಡ್ತೀರ ಅದೇ ನಿಮಗೆ ದಕುತ್ತೆ. ಮೊದಲೆಲ್ಲ ಹೇಳೋರು, ನಾವೆಲ್ಲಾ ಸಣ್ಣವರಿದ್ದಾಗ ನಮ್ಮ ಅಜ್ಜಿ, ತಾತ, ಇಲ್ಲಾ ಯಾರೋ ದೊಡ್ಡೋವ್ರು ಹೇಳ್ತಾ ಇದ್ರು, ಈಗ ಕರ್ಮ ಮಾಡ್ತಾ ಇದ್ದೀಯಾ ಅದು ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆ ಕರ್ಮ ಮುಂದಿನ ಜನ್ಮಕ್ಕೂ ಹೋಗ್ತಿತ್ತು ಅಂತ. ಅದೇನೂ ಇಲ್ಲ. ಈಗ ಅಲ್ಲೆ ಡ್ರಾ ಅಲ್ಲೇ ಬಹುಮಾನ" ಎಂದು ಕ್ರಾಂತಿ ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ನಟ ದರ್ಶನ್‌ ಸಂದರ್ಶನವೊಂದರಲ್ಲಿ ಆಡಿದ ಮಾತನ್ನೇ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್‌ ಹಂಚಿಕೊಂಡಿದ್ದಾರೆ ಪವಿತ್ರಾ ಗೌಡ.

ಯಾರನ್ನು ಗುರಿಯಾಗಿಸಿಕೊಂಡ್ರು ಪವಿತ್ರಾ?

ದರ್ಶನ್‌ ವಿವಾಹ ವಾರ್ಷಿಕೋತ್ಸವದ ದಿನವೇ ಈ ರೀತಿಯ ಪೋಸ್ಟ್‌ ಹಂಚಿಕೊಂಡಿರುವ ಪವಿತ್ರಾ, ಇದನ್ನು ಯಾರಿಗೆ ಅರ್ಪಿಸಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿಲ್ಲ. ಈ ನಡುವೆ ಇದನ್ನು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರಿಗೆ ಪರೋಕ್ಷವಾಗಿ ಹೇಳಿರಬಹುದಾ? ಅಥವಾ ದರ್ಶನ್‌ಗೆ ಹೇಳಿರಬಹುದಾ? ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ವಿಜಯಲಕ್ಷೀ ಮತ್ತು ಪವಿತ್ರಾ ನಡುವಿನ ಕಿತ್ತಾಟ ಮತ್ತೆ ಮುನ್ನೆಲೆಗೆ ಬಂತಾ? ಸದ್ಯಕ್ಕೆ ಇದ್ಯಾವುದಕ್ಕೂ ಉತ್ತರವಿಲ್ಲ. ಅಭಿಮಾನಿ ವಲಯದಲ್ಲಿ ಮಾತ್ರ ಈ ವಿಚಾರ ಮತ್ತೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಟಿ20 ವರ್ಲ್ಡ್‌ಕಪ್ 2024