‘ನಿರ್ಮಾಪಕರು ಅನ್ನ ಕೊಡೋ ಧಣಿಗಳು’; ಡಾ. ರಾಜ್‌ಕುಮಾರ್ ಹಳೇ ವಿಡಿಯೋ ಮೂಲಕ ದರ್ಶನ್‌ಗೆ ಟಕ್ಕರ್ ಕೊಟ್ಟ ಉಮಾಪತಿ!
ಕಾಟೇರ ಸಿನಿಮಾದ ಶೀರ್ಷಿಕೆ ವಿವಾದ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಟೈಟಲ್ ಕೊಟ್ಟಿದ್ದೇ ನಾನು ಎಂದು ಉಮಾಪತಿ ಹೇಳಿದರೆ, ಆ ಟೈಟಲ್ ಇಟ್ಟಿದ್ದೇ ನಾನು ಎನ್ನುತ್ತಿದ್ದಾರೆ ದರ್ಶನ್. ಈ ಪ್ರಹಸನದ ನಡುವೆಯೇ ಅಣ್ಣಾವ್ರ ವಿಡಿಯೋ ಶೇರ್ ಮಾಡಿ ದರ್ಶನ್‌ಗೆ ಟಕ್ಕರ್ ಕೊಟ್ಟಿದ್ದಾರೆ ಉಮಾಪತಿ.
Kaatera Title Controversy: ಕಳೆದ ಕೆಲ ದಿನಗಳ ಹಿಂದೆ ರಾಬರ್ಟ್ ಸಿನಿಮಾ ನಿರ್ಮಾಪಕರಾಗಿದ್ದ ಉಮಾಪತಿ ಶ್ರೀನಿವಾಸ್ ಗೌಡ, ಕಾಟೇರ ಸಿನಿಮಾ ಶೀರ್ಷಿಕೆ ಕೊಟ್ಟಿದ್ದೇ ನಾನು, ಸಿನಿಮಾ ಕಥೆಯನ್ನೂ ಡೆವೆಲಪ್ ಮಾಡಲು ಹೇಳಿದ್ದೂ ನಾನೇ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದಾಗಿ ಕೆಲ ದಿನಗಳ ಹಿಂದಷ್ಟೇ ಇದೇ ವಿಚಾರದ ಬಗ್ಗೆ ನಟ ದರ್ಶನ್, ವೇದಿಕೆ ಮೇಲೆಯೇ ಆ ಶೀರ್ಷಿಕೆ ಕೊಟ್ಟಿದ್ದೇ ನಾನು ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ನಿರ್ಮಾಪಕ ಉಮಾಪತಿಗೆ ಏ ತಗಡು, ಗುಮ್ಮಿಸ್ಕೋತಿಯ ಎಂದೂ ಸಂಬೋಧಿಸಿದ್ದರು.
ಈಗ ಇದೇ ವಿಚಾರ ಸ್ಯಾಂಡಲ್‌ವುಡ್ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸ್ವತಃ ಉಮಾಪತಿ ಸಹ ಕೌಂಟರ್ ಮೇಲೆ ಕೌಂಟರ್ ಕೊಡುತ್ತಿದ್ದಾರೆ. ನಮಗೂ ತಾಕತ್ತಿದೆ ಎಂದು ಮಾಧ್ಯಮಗಳಿಗೆ ಉತ್ತರಿಸಿದ್ದಾರೆ. ಇದೆಲ್ಲದರ ನಡುವೆಯೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡಾ. ರಾಜ್‌ಕುಮಾರ್ ಮಾತನಾಡಿದ ವಿಡಿಯೋ ತುಣುಕೊಂದನ್ನು ಹಂಚಿಕೊಂಡು, ದರ್ಶನ್‌ಗೆ ಟಕ್ಕರ್ ನೀಡಿದ್ದಾರೆ. ನಿರ್ಮಾಪಕರನ್ನು ಅಣ್ಣಾವ್ರು ಹೇಗೆ ಕಾಣುತ್ತಿದ್ದರು ಎಂಬುದು ಆ ವಿಡಿಯೋದಲ್ಲಿದೆ.
ಉಮಾಪತಿ ಹಂಚಿಕೊಂಡ ಪೋಸ್ಟ್ ಹೀಗಿದೆ
"ನೀವು ನಿರ್ಮಾಪಕರಿಗೆ ಕೊಟ್ಟಿರುವ ಗೌರವ ಹಾಗೂ ಅನ್ನದಾತರು ಎನ್ನುವ ಬಿರುದಿಗೆ ನಾವುಗಳು ನಿರ್ಮಾಪಕರಾಗಿ ನಮ್ಮ ಜೀವನ ಸಾರ್ಥಕವಾಯಿತು ಡಾ. ರಾಜಕುಮಾರ್ ಸಾರ್" ಎಂದು ಉಮಾಪತಿ ಶೇರ್ ಮಾಡಿದ್ದಾರೆ. ವಿಡಿಯೋ ತುಣುಕಿನ ಮೇಲೆ "ಒಬ್ಬ ನಿರ್ಮಾಪಕನಿಗೆ ಹೇಗೆ ಗೌರವ ಕೊಡಬೇಕು ಎಂದು ನಮ್ಮ ಯಜಮಾನರನ್ನು ನೋಡಿ ಮತ್ತು ಅವರ ಮಕ್ಕಳನ್ನು ನೋಡಿ ಕಲಿಯಬೇಕು. ಅಣ್ಣಾವ್ರ ಕುಟುಂಬದ ಮೇಲೆ ದಿನದಿಂದ ದಿನಕ್ಕೆ ಗೌರವ ಹೆಚ್ಚಾಗುತ್ತಿದೆ. ನಿಮ್ಮ ಒಂದೊಂದು ಮಾತು, ಒಂದೊಂದು ಮುತ್ತು. ಡಾ. ರಾಜ್‌ಕುಮಾರ್ ಅಣ್ಣಾವ್ರು’’
ವಿಡಿಯೋದಲ್ಲಿ ಡಾ. ರಾಜ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ನಿರ್ಮಾಪಕರು ಎಂದರೆ ನಮ್ಮ ಅನ್ನದಾತರು. ನಮ್ಮ ದಣಿಗಳು ಎಂದು ರಾಜ್‌ಕುಮಾರ್ ಹೇಳಿದ್ದಾರೆ. ಹೀಗಿದೆ ಆ ವಿಡಿಯೋದ ಪೂರ್ತಿ ಮಾತು. "ನಿರ್ಮಾಪಕರಾಗಿ ನಮಗೆ ಅನ್ನ ಹಾಕಿದ್ದಾರೆ. ಆದ್ದರಿಂದ ನಮಗೆ ಏನೇ ಮಾಡಿದರೂ ಕೂಡ, ಯಜಮಾನ ಅನ್ನೋದನ್ನ ಒಳಗಡೆಯಿಂದ ಅಳಿಸೋಕೆ ಆಗಲ್ಲ. ಅವನು ನಮಗೆ ಧಣಿ. ನಮಗೆ ಅನ್ನ ಕೊಟ್ಟ ಧಣಿ. ಇದು ಚಿಕ್ಕಂದಿನಿಂದ ಬಂದಿರೋದು. ಈ ಸಂಬಂಧ ಹೀಗೆ ಬೆಳೆದಿರೋದು" ಎಂದು ಸಂದರ್ಶನವೊಂದರಲ್ಲಿ ಅಣ್ಣಾವ್ರು ಹೇಳಿದ್ದಾರೆ.
ದೇಹ ಅಷ್ಟೇ ಅಲ್ಲ, ಮಾತೂ ತೂಕವಾಗಿರಬೇಕು,
ಕಾಟೇರ ಶೀರ್ಷಿಕೆ ಬಗ್ಗೆ ದರ್ಶನ್ ಹೀಗೆ ಓಪನ್ ಆಗಿಯೇ ಮಾತನಾಡುತ್ತಿದ್ದಂತೆ, ಉಮಾಪತಿ ಶ್ರೀನಿವಾಸ್ ಗೌಡ ಸಹ ಪ್ರತಿಕ್ರಿಯಿಸಿದ್ದಾರೆ. "ಈವರೆಗೂ ಇದ್ದಿದ್ದನ್ನೇ ನಾನು ಹೇಳಿದ್ದೇನೆ. ನಂಗೇನು ಭಯ? ಕೈಲಾಗದವನಾ ನಾನು? ನಾನು ಇನ್ನೊಬ್ಬರ ಆಶ್ರಯದಲ್ಲಿ ಬೆಳೆದಿಲ್ಲ. ನಮಗೂ ತಾಕತ್ತಿದೆ. ಯಾವುದೇ ವ್ಯಕ್ತಿ ಏನೇ ಮಾತನಾಡುವುದಿದ್ದರೂ ತೂಕವಾಗಿಯೇ ಮಾತನಾಡಬೇಕಾಗುತ್ತದೆ. ನಮ್ಮ ದೇಹ ತೂಕ ಇದ್ದರೆ ಸಾಲದು, ಮಾತೂ ತೂಕ ಇರಬೇಕು. ಅವರು ನನ್ನ ಬಗ್ಗೆ ಹೇಗೆ ಬೇಕಾದರೂ ಮಾತನಾಡಲಿ ನನಗೆ ಬೇಜಾರಿಲ್ಲ. ನನಗೆ ಬೇರೆ ಕೆಲಸಗಳಿವೆ. ನಾನು ಸೀರಿಯಸ್ ಸಿನಿಮಾ ಮೇಕರ್ ಅಲ್ಲ, ನಾನು ಸೀರಿಯಸ್ ಉದ್ಯಮಿ" ಎಂದು ಹೇಳಿಕೊಂಡಿದ್ದರು ಉಮಾಪತಿ.
ದರ್ಶನ್ ಹೇಳಿದ್ದೇನು?
ಕಾಟೇರ 50ನೇ ದಿನದ ಸಂಭ್ರಮದಲ್ಲಿ ವೇದಿಕೆ ಮೇಲೆ ಮಾತನಾಡಿದ್ದ ದರ್ಶನ್, "ಕಾಟೇರ ಸಿನಿಮಾದ ಯಶಸ್ಸಿನ ಬಗ್ಗೆ ಏನೂ ಹೇಳುವುದಿಲ್ಲ. ಈಗಾಗಲೇ ಮಾತನಾಡಿದ್ದೇವೆ. ಈ ಸಂದರ್ಭದಲ್ಲಿ ಕೆಲವು ಕ್ಲಾರಿಫಿಕೇಷನ್ ಕೊಟ್ಟು ಬಿಡುತ್ತೇನೆ. ಕಾಟೇರ ಚಿತ್ರದ ಕಥೆ ನಾನು ಮಾಡಿಸ್ಧೆ, ಟೈಟಲ್ ನಾನು ಮಾಡಿಸ್ದೆ, ಟೈಟಲ್ ಇಟ್ಟಿದ್ದೇ ನಾನು.. ಎಂದೆಲ್ಲ ಹೇಳ್ತಾರೆ. ಅಯ್ಯೋ ತಗಡೇ... ನಿನಗೆ ರಾಬರ್ಟ್ ಕಥೆ, ಟೈಟಲ್ ಕೊಡಿಸಿರೋದೇ ನಾನು. ನೀನೇ ಟೈಟಲ್ ಮಾಡಿಸ್ದೆ ಎಂದಾದರೆ ಇಂತಹ ಒಳ್ಳೆಯ ಕಥೆ ಯಾಕೆ ಬಿಟ್ಟೆ ನೀನು? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದ್ದರೆ ನೀನೇ ಮಾಡಬಹುದಿತ್ತಲ್ವ? ಬಂದು ಬಂದು ನಮ್ಮ ಕೈಯಿಂದಲೇ ಯಾಕೆ ಗುಮ್ಮುಸ್ಕೋತಿಯಾ" ಎಂದು ಉಮಾಪತಿ ಬಗ್ಗೆ ಮಾತನಾಡಿದ್ದರು ದರ್ಶನ್.
ವಿಭಾಗ