ಭೀಮ ಮ್ಯಾಕ್ಸ್ ಎಕ್ಸ್‌ವೈಝಡ್ ಯಾವುದೇ ಬರಲಿ, ಯಾರೂ ಥಿಯೇಟರ್‌ಗೆ ಹೋಗಬೇಡಿ, ಕನ್ನಡ ಸಿನಿಮಾ ನೋಡಬೇಡಿ; ದರ್ಶನ್ ಫ್ಯಾನ್ಸ್ ಕರೆ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಭೀಮ ಮ್ಯಾಕ್ಸ್ ಎಕ್ಸ್‌ವೈಝಡ್ ಯಾವುದೇ ಸಿನಿಮಾ ಬರಲಿ, ಯಾರೂ ಥಿಯೇಟರ್‌ಗೆ ಹೋಗಬೇಡಿ. ದರ್ಶನ್ ಹೊರಬರುವವರೆಗೆ ಕನ್ನಡ ಸಿನಿಮಾ ನೋಡಬೇಡಿ ಎಂದು ಡಿ ಬಾಸ್ ಫ್ಯಾನ್ಸ್ ಹೇಳಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇಂದಲ್ಲ ನಾಳೆ ಹೊರಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಡಿಬಾಸ್ ಫ್ಯಾನ್ಸ್ ಇದ್ದಾರೆ. ಇನ್ನೊಂದೆಡೆ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಇದೇ ಸಮಯದಲ್ಲಿ ಹಲವು ಕನ್ನಡ ಸಿನಿಮಾಗಳು ಚಿತ್ರಮಂದಿರಗಳಿಗೆ ಆಗಮಿಸಲು ಸರತಿಯಲ್ಲಿವೆ. ಕಳೆದ ಹಲವು ಸಮಯದಿಂದ ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳಲ್ಲಿ ಮತ್ತೆ ಜನದಟ್ಟಣೆ ಹೆಚ್ಚಿಸುವಂತಹ ಹಲವು ಸಿನಿಮಾಗಳು ಸರತಿಯಲ್ಲಿವೆ. ದುನಿಯಾ ವಿಜಯ್ ನಟನೆಯ ಭೀಮ, ಗೋಲ್ಡನ್ ಸ್ಟಾರ್ ದರ್ಶನ್ ಅಭಿನಯದ ಕೃಷ್ಣಂ ಪ್ರಣಯ ಸಖಿ, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್, ಧ್ರುವ ಸರ್ಜಾ ನಟನೆಯ ಮಾರ್ಟಿನ್, ಡಾಲಿ ಧನಂಜಯ್ ಶಿವಣ್ಣ ನಟನೆಯ ಉತ್ತರಕಾಂಡ... ಹೀಗೆ ಈ ವರ್ಷ ಸಾಲುಸಾಲು ಕನ್ನಡ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಇದೇ ಸಮಯದಲ್ಲಿ ಕೆಲವು ಡಿಬಾಸ್ ಅಭಿಮಾನಿಗಳು ಬೈಕಾಟ್ ಚಿತ್ರಮಂದಿರಕ್ಕೆ ಮುಂದಾಗಿರುವಂತೆ ತೋರುತ್ತಿದೆ.
ಯಾರೂ ಥಿಯೇಟರ್‌ಗೆ ಹೋಗಬೇಡಿ
ಕೆಲವು ದರ್ಶನ್ ಅಭಿಮಾನಿಗಳು "ಯಾವುದೇ ಕನ್ನಡ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಬೇಡಿ. ದರ್ಶನ್ ಹೊರಗೆ ಬರುವವರೆಗೆ ಯಾರೂ ಸಿನಿಮಾ ನೋಡಬೇಡಿ" ಎಂಬರ್ಥದ ಪೋಸ್ಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಡಿ ಬಾಸ್ ಸಾಮ್ರಾಜ್ಯ ಹಾವೇರಿ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಗಮನಿಸಿ.
ಭೀಮ್ ಮ್ಯಾಕ್ಸ್ ಎಕ್ಸ್‌ವೈಝಡ್ ಯಾವುದೇ ಸಿನಿಮಾ ಬರಲಿ ಯಾರೂ ಥಿಯೇಟರ್‌ಗೆ ನೋಡಲು ಹೋಗಬೇಡಿ ಎಂದು ಡಿಬಾಸ್ ಅಭಿಮಾನಿಯೊಬ್ಬರು ಆಕ್ರೋಶದಿಂದ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಮಾಧ್ಯಮಗಳ ಮುಂದೆ ಇವರೆಲ್ಲರು "ಯಾರೂ ಥಿಯೇಟರ್‌ಗಳಿಗೆ ಹೋಗಬೇಡಿ" ಎಂದು ಅಬ್ಬರಿಸಿದ್ದಾರೆ. "ಇವತ್ತು ಬಾಸು ಒಳಗಡೆ ಹೋಗಿದ್ದಾರೆ ಎಂದು ನಾಯಿನರಿಗಳೆಲ್ಲ ಬಾಲ ಬಿಚ್ಚಾ ಇದ್ದಾವೆ. ಕನ್ನಡದ ಯಾವುದೇ ಸಿನಿಮಾ ಬರಲಿ. ಯಾರೂ ಥಿಯೇಟರ್‌ಗೆ ಹೋಗಬೇಡಿ. ಅವರಿಗಿಷ್ಟು ಇರಬೇಕಾದರೆ ಇನ್ನು ಡಿಬಾಸ್ ಫ್ಯಾನ್ಸ್ ಆಗಿರುವ ನಮಗೆ ಸ್ವಾಭಿಮಾನ ಎಷ್ಟಿದೆ. ಡಿ ಬಾಸ್ ಫ್ಯಾನ್ಸ್ ಆದ ನಮಗೆ ಸ್ವಾಭಿಮಾನ ಎಷ್ಟಿರಬೇಕು. ಬಾಸ್ ಹೊರಗಡೆ ಬರೋ ತನಕ ಯಾರೂ ಕನ್ನಡ ಸಿನಿಮಾ ನೋಡಬೇಡಿ. ಎಲ್ಲರೂ ಇದಕ್ಕೆ ಫಿಕ್ಸ್ ಆಗಿ" ಎಂದು ಕರೆನೀಡಿದ್ದಾರೆ. ಜತೆಗೆ ಇತರೆ ಸಿನಿಮಾ ನಟರ ಫ್ಯಾನ್ಸ್‌ಗೆ ಒಂದಿಷ್ಟು ಅವಾಜ್ ಹಾಕಿರುವಂತಹ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ಕೂಡ ಡಿಬಾಸ್?
ಮಾರ್ಟಿನ್ ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಒರಿಜಿನಲ್ ಡಿಬಾಸ್ ಧ್ರುವ ಸರ್ಜಾ ಎಂದು ಆಕ್ಷನ್ ಫ್ರಿನ್ಸ್‌ನ ಅಭಿಮಾನಿಗಳು ಥಿಯೇಟರ್ ಮುಂದೆ ಬ್ಯಾನರ್ ಹಿಡಿದು ಸಂಭ್ರಮಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಎಂಬಂತೆ ಡಿಬಾಸ್ ಅಭಿಮಾನಿಗಳು ಯಾರೂ ಸಿನಿಮಾ ನೋಡಬೇಡಿ ಎಂಬರ್ಥದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಪೊಗರುದಸ್ತಾದ ಲುಕ್ ನೋಡಿ ಧ್ರುವ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ಡಿಬಾಸ್ ಧ್ರುವ ಸರ್ಜಾ ಎಂದು ಸಂಭ್ರಮಿಸಿದ್ದಾರೆ. ಇದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಒಟ್ಟಾರೆ, ಕನ್ನಡ ಚಿತ್ರರಂಗಕ್ಕೆ ಆಶಾದಾಯಕವಾಗಿರುವಂತೆ ಮುಂಬರುವ ದಿನಗಳಲ್ಲಿ ಹಲವು ಸಿನಿಮಾಗಳು ತೆರೆಕಾಣಲು ಸಿದ್ಧವಾಗುತ್ತಿವೆ. ಇದೇ ಸಮಯದಲ್ಲಿ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಯುದ್ಧ ನಡೆಯುತ್ತಿರುವಂತೆ ಕಾಣಿಸುತ್ತಿದೆ. ಗೌರಿ, ಭೀಮ, ಕೃಷ್ಣಂ ಪ್ರಣಯ ಸಖಿ, ಭೈರತಿ ರಣಗಲ್, ಮಾಫಿಯಾ, ಜೀನಿಯಸ್ ಮುತ್ತಾ, ಪವರ್, ಮಾರ್ಟಿನ್, ಕೆಡಿ ಹೀಗೆ ಹಲವು ಸಿನಿಮಾಗಳು ಬಿಡುಗಡೆಗೆ ಸರತಿಯಲ್ಲಿವೆ.
