ಬ್ಲಿಂಕ್ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ; ಅಮೆಜಾನ್ ಪ್ರೈಮ್‌ನಲ್ಲಿರುವ ಈ ಸಿನಿಮಾ ನಿಮಗೆ ಕಾಣಿಸುತ್ತಾ ನೋಡಿ
Blink Movie OTT Release: ಬ್ಲಿಂಕ್ ಕನ್ನಡ ಸಿನಿಮಾವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಬ್ಲಿಂಕ್ ಎಂಬ ಲಿಂಕ್ ಇದ್ದರೂ ಭಾರತದಲ್ಲಿರುವರಿಗೆ ಈ ಸಿನಿಮಾ ಸದ್ಯ ಲಭ್ಯವಿಲ್ಲ. ಅಮೆರಿಕ, ಇಂಗ್ಲೆಂಡ್ ವೀಕ್ಷಕರು ರೆಂಟಲ್ ಆಧಾರದಲ್ಲಿ ನೋಡಬಹುದು.
ಬೆಂಗಳೂರು: ಬ್ಲಿಂಕ್ ಕನ್ನಡ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ದೀಕ್ಷಿತ್ ಶೆಟ್ಟಿ ನಟನೆಯ ಕನ್ನಡ ಸೈಂಟಿಫಿಕ್ ಸಿನಿಮಾ ಬ್ಲಿಂಕ್ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಸದ್ಯಕ್ಕೆ ಈ ಸಿನಿಮಾವನ್ನು ಭಾರತದಲ್ಲಿರುವ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರು ನೋಡುವಂತೆ ಇಲ್ಲ. ಚಿತ್ರಮಂದಿರಗಳಲ್ಲಿ ನೋಡದೆ ಒಟಿಟಿಗೆ ಬಂದ ಬಳಿಕ ನೋಡೋಣ ಎಂದು ಕಾದು ಕುಳಿತವರಿಗೆ ಇದರಿಂದ ನಿರಾಶೆಯಾಗಿರಬಹುದು. ಏಕೆಂದರೆ, ಇಂಗ್ಲೆಂಡ್, ಅಮೆರಿಕದಲ್ಲಿ ಮಾತ್ರ ಬಾಡಿಗೆ ಆಧರಿತವಾಗಿ ಈ ಸಿನಿಮಾವನ್ನು ನೋಡಬಹುದು. ಇಂಗ್ಲೆಂಡ್‌ನಲ್ಲಿ ಈ ಸಿನಿಮಾವನ್ನು 3.49 ಪೌಂಡ್ ರೆಂಟ್ ನೀಡಿ ನೋಡಬಹುದು.
ಬ್ಲಿಂಕ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬ್ಲಿಂಕ್ ಸಿನಿಮಾದ ಲಿಂಕ್ ದೊರಕಿದರೂ ಭಾರತದಲ್ಲಿ ನೋಡಲಾಗದು. "ಸದ್ಯ ನೀವಿರುವ ಲೊಕೆಷನ್‌ನಲ್ಲಿ ಬ್ಲಿಂಕ್ ಸಿನಿಮಾ ಲಭ್ಯವಿಲ್ಲ" ಎಂಬ ಸೂಚನೆ ದೊರಕುತ್ತದೆ. ಇನ್ನು ಕೆಲವು ವಾರಗಳ ಬಳಿಕ ಭಾರತೀಯರಿಗೆ ಬ್ಲಿಂಕ್ ಸಿನಿಮಾ ಒಟಿಟಿಯಲ್ಲಿ ನೋಡುವ ಅವಕಾಶ ದೊರಕಬಹುದು.
ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಸಿನಿಮಾ
ಬ್ಲಿಂಕ್ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಸಾಕಷ್ಟು ಸಕಾರಾತ್ಮಕ ವಿಮರ್ಶೆಗಳು ಬಂದಿದ್ದವು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನರು ಥಿಯೇಟರ್‌ಗೆ ಆಗಮಿಸದೆ ಇದ್ದ ಕಾರಣ ಚಿತ್ರತಂಡ ಬೇಸರವ್ಯಕ್ತಪಡಿಸಿತ್ತು. "25 ದಿನ ಬ್ಲಿಂಕ್ ಕಂಪ್ಲೀಟ್ ಆಗಿರುವುದು ಖುಷಿ ಇದೆ. ಆದರೆ 25 ದಿನ ಅಷ್ಟೇ ಓಡುವಂತಹ ಸಿನಿಮಾವಲ್ಲ. ಬ್ಲಿಂಕ್ ನನ್ನ ಪ್ರಕಾರ ಇನ್ನೂ ಹೆಚ್ಚಿನ ಜನಕ್ಕೆ ಸೇರುವ ಸಿನಿಮಾ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಬೇಕು ಎಂದರೆ ಇದು ಮಾದರಿಯಾಗುತ್ತದೆ" ಎಂದು ನಟ ದೀಕ್ಷಿತ್ ಶೆಟ್ಟಿ ಹೇಳಿದ್ದರು.
ಬ್ಲಿಂಕ್ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ನೋಡುವಂತೆ ಸಾಕಷ್ಟು ಸೆಲೆಬ್ರಿಟಿಗಳು ಹೇಳಿದ್ದರು. ಮಾರ್ಚ್ 08ರಂದು ಕರಟಕ ದಮನಕ, ರಂಗನಾಯಕ ಚಿತ್ರದ ಜತೆ ಬ್ಲಿಂಕ್ ಚಿತ್ರ ರಿಲೀಸ್ ಆಗಿತ್ತು. ಕರಟಕ ದಮನಕ, ರಂಗನಾಯಕಕ್ಕಿಂತ ಬ್ಲಿಂಕ್ ಚೆನ್ನಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿತ್ತು. ಬ್ಲಿಂಕ್ ಸಿನಿಮಾವನ್ನು ನೋಡುವಂತೆ ಶಿವರಾಜ್ ಕುಮಾರ್ ಕೇಳಿಕೊಂಡಿದ್ದರು. "ಬ್ಲಿಂಕ್ ಸಿನಿಮಾದ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಕೇಳುತ್ತ ಇದ್ದೇನೆ. ಆದಷ್ಟು ಬೇಗ ಇದನ್ನು ನೋಡುವೆ. ನೀವೂ ಚಿತ್ರಮಂದಿರಕ್ಕೆ ಆಗಮಿಸಿ ನೋಡಿ" ಎಂದು ಕೇಳಿಕೊಂಡಿದ್ದರು.
"ಬ್ಲಿಂಕ್ ಸಿನಿಮಾ ಮಲಯಾಳಂ ಭಾಷೆಯಲ್ಲಿ ಬಂದಿದ್ರೆ ಕನ್ನಡಿಗರೆಲ್ಲಾ ನೋಡ್ತಾ ಇದ್ರು... ಆದ್ರೆ ಇದು ಕನ್ನಡ ಸಿನೆಮಾ ಅದಕ್ಕೆ ಯಾರೂ ನೋಡುತ್ತಿಲ್ಲ" ಎಂದು ಸಿಂಪಲ್ ಸುನಿ ಬೇಸರ ವ್ಯಕ್ತಪಡಿಸಿದ್ದರು. ಬ್ಲಿಂಕ್ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ಕೂಡ ನಟಿಸಿದ್ದು, ಹಲವು ಕಡೆ ಪ್ರಮೋಷನ್‌ನಲ್ಲಿ ಭಾಗವಹಿಸಿದ್ದರು.
ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ