ಮೇಘನಾ ಅತ್ತಿಗೆ ಗರ್ಭಿಣಿ ಆದಾಗ್ಲೇ ಅಣ್ಣ ಚಿರಂಜೀವಿ ಸತ್ತಿದ್ದು, ಆ ನೋವು ನನಗೆ ಗೊತ್ತು! ರೇಣುಕಾಸ್ವಾಮಿ ಕುಟುಂಬಕ್ಕೆ ಧ್ರುವ ಸರ್ಜಾ ಅಭಯ
ರೇಣುಕಾಸ್ವಾಮಿ ಹತ್ಯೆ ಖಂಡಿಸಿ ನಟ ಧ್ರುವ ಸರ್ಜಾ ಮತ್ತವರ ಅಭಿಮಾನಿಗಳು ರೇಣುಕಾಸ್ವಾಮಿ ಕುಟುಂಬದ ಜತೆ ನಿಂತಿದೆ. ಹಣಕಾಸಿನ ನೆರವು ಮಾಡುವುದರ ಜತೆಗೆ, ಏನೇ ಸಹಾಯ ಬೇಕಿದ್ದರೂ ಕೇಳಿ ಎಂದೂ ಹೇಳಿದೆ. ಸ್ವತಃ ಧ್ರುವ ಕುಟುಂಬದ ಜತೆಗೆ ಫೋನ್‌ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದಾರೆ.
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ನಟ ದರ್ಶನ್ ತೂಗುದೀಪ ಸೇರಿ 17 ಮಂದಿಯನ್ನು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ನಡುವೆ ತನಿಖೆಯ ಕೊನೇ ಹಂತಕ್ಕೆ ಬಂದಿದ್ದು, ಇನ್ನಷ್ಟು ಸಾಕ್ಷ್ಯಗಳ ಹುಡುಕಾಟದಲ್ಲಿದ್ದಾರೆ ಪೊಲೀಸರು. ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಮಾಡಿದ ಎಂಬ ಕಾರಣಕ್ಕೆ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಪಟ್ಟಣಗೆರೆ ಶೆಡ್‌ನಲ್ಲಿ ಮೃಗೀಯ ರೀತಿಯಲ್ಲಿ ಆತನ ಮೇಲೆ ಎರಗಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ಬಳಿಕ ದರ್ಶನ್ ಪರವಾಗಿ ಕೆಲವರು ಮಾತನಾಡಿದರೆ, ಇನ್ನು ಕೆಲವರು ನ್ಯಾಯದ ಪರ ನಿಂತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದೂ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಾಚೆಗೆ ಇದರ ಬಗ್ಗೆ ಮಾತನಾಡುವುದೇ ಬೇಡ ಎಂದು ಮಾಧ್ಯಮಗಳಿಂದಲೇ ಅಂತರ ಕಾಯ್ದುಕೊಂಡಿದ್ದರು ಇನ್ನು ಕೆಲವರು ದರ್ಶನ್ ಆಪ್ತರು. ಇದೀಗ ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಅವರ ತಂದೆಯ ಜತೆಗೆ ಫೋನ್ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಅತ್ತಿಗೆ ಗರ್ಭಿಣಿ ಇದ್ದಾಗ್ಲೆ ಅಣ್ಣ ತೀರಿಹೋದ್ರು..
ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಪತ್ನಿಯೂ ಗರ್ಭಿಣಿ. ಈ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೆ ರೇಣುಕಾಸ್ವಾಮಿ ಮನೆಗೆ ಧ್ರುವ ಸರ್ಜಾ ಫ್ಯಾನ್ಸ್ ಭೇಟಿ ನೀಡಿ, ಬೆಂಬಲ ಸೂಚಿಸುವುದರ ಜತೆಗೆ ನಾವು ಸದಾ ನಿಮ್ಮ ಜತೆಗಿದ್ದೇವೆ. ಧ್ರುವ ಅಣ್ಣನೂ ನಿಮ್ಮ ಜತೆಗಿರುತ್ತಾರೆ ಎಂದೂ ಹೇಳಿದ್ದಾರೆ. ಚಿರು ಅವ್ರು ಜೂನ್ 7ರಂದು ನಿಧನರಾದ್ರು. ಅತ್ತಿಗೆ ಮೇಘನಾ ಅವ್ರು ಆಗ ಗರ್ಭಿಣಿ. ಮೇಘನಾ ಅವ್ರ ಹೊಟ್ಟೆಯಲ್ಲಿ ಮಗು ಇದ್ದಾಗ ಚಿರು ಅಣ್ಣ ತೀರಿಹೋದ್ರು. ಆ ನೋವು ಸಂಕಟ ಧ್ರುವ ಅವರಿಗೆ ಗೊತ್ತು. ನಮಗೆ ಇಲ್ಲಿಗೆ ಕಳಿಸಿ, ಅವರಿಗೆ ಏನೆಲ್ಲ ಸಪೋರ್ಟ್ ಬೇಕೋ ಮಾಡಲು ಹೇಳಿ ಎಂದು ಕಳಿಸಿದ್ದಾರೆ ಎಂದು ಧ್ರುವ ಸರ್ಜಾ ಫ್ಯಾನ್ಸ್ ಅವರ ಮನೆಯಲ್ಲಿನ ಮಾತುಕತೆಯ ವಿಡಿಯೋ ಶೇರ್ ಮಾಡಿದ್ದಾರೆ.
ಧ್ರುವ ಫ್ಯಾನ್ಸ್ ಕಡೆಯಿಂದ ಧನ ಸಹಾಯ
ಇತ್ತೀಚೆಗಷ್ಟೇ ಧ್ರುವ ನಟನೆಯ ಬಹದ್ದೂರ್ ಸಿನಿಮಾ ಮರುಬಿಡುಗಡೆ ಆಗಿತ್ತು. ಆ ಸಿನಿಮಾದ ಸಂಭ್ರಮಾಚರಣೆಗೆ ಖರ್ಚು ಮಾಡಬೇಕಿದ್ದ ಹಣಕ್ಕೆ ಇನ್ನಷ್ಟು ಸೇರಿಸಿ, ರೇಣುಕಾಸ್ವಾಮಿ ಕುಟುಂಬಕ್ಕೆ ನೀಡಿದ್ದಾರೆ ಧ್ರುವ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ ಮತ್ತವರ ಟೀಮ್. ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಮತ್ತವರ ತಾಯಿ ರತ್ನಪ್ರಭ ಅವರನ್ನು ಭೇಟಿ ಮಾಡಿ ಹಣಕಾಸಿನ ನೆರವು ನೀಡಿದ್ದಾರೆ. ಫೋನ್ ಕಾಲ್‌ನಲ್ಲಿ ಮಾತನಾಡಿ, ನಿಮ್ಮ ಜತೆ ನಾವಿದ್ದೇವೆ, ಏನೇ ಸಹಾಯ ಬೇಕಿದ್ರು ನಮಗೆ ಕೇಳಿ ಎಂದೂ ಅಭಯ ನೀಡಿದ್ದಾರೆ ಧ್ರುವ ಸರ್ಜಾ.
ನಾನು ದರ್ಶನ್ ಪರ ಎಂದ ನಟಿ ಭಾವನಾ ರಾಮಣ್ಣ
ಇನ್ನು ಮತ್ತೊಂದು ಕಡೆ ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ದರ್ಶನ್ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಏನೇ ಆಗಲಿ ನಾನು ದರ್ಶನ್ ಪರ ಎಂದಿದ್ದಾರೆ. "ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ. ಕಹಿ ಸಿಹಿಯನ್ನು ಒಟ್ಟಿಗೆ ತೆಗೆದುಕೊಳ್ಳಬೇಕು. ಕೃತ್ಯವನ್ನು ಒಪ್ಪುತ್ತೆನೋ ಬಿಡುತ್ತೇನೋ ಗೊತ್ತಿಲ್ಲ. ಕಾನೂನು ಪ್ರಕಾರ ತೀರ್ಪು ಏನು ಬರುತ್ತೋ ಅದಾದ ಬಳಿಕ ಅದನ್ನು ಒಪ್ಪಬೇಕೋ ಬಿಡಬೇಕೋ ಎಂಬುದು ನಮ್ಮ ಮನಸ್ಥಿತಿಗೆ ಬಿಟ್ಟಿದ್ದು. ಆದರೆ, ಇಲ್ಲಿ ನಾನು ದರ್ಶನ್ ಜತೆ ನಿಲ್ಲುತ್ತೇನೆ. ನಾನು ದರ್ಶನ್ ಅವರನ್ನು ಈಗಿನಿಂದ ನೋಡುತ್ತ ಬಂದಿಲ್ಲ. ಅವರಿನ್ನೂ ಹೀರೋ ಆಗಿರಲಿಲ್ಲ. ಆಗಿನಿಂದಲೇ ನೋಡಿದ್ದೇನೆ. ಕಾನೂನು ರೀತಿ ಏನು ತೀರ್ಪು ಬರುತ್ತೋ ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ರೇಣುಕಾ ಸ್ವಾಮಿ ಕಳುಹಿಸಿದ ಸಂದೇಶವೇ ಅಷ್ಟೇ ಕೆಟ್ಟದಾಗಿದೆ. ಅದೂ ಕೂಡ ಒಪ್ಪುವಂಥದ್ದಲ್ಲ" ಎಂದಿದ್ದಾರೆ ಭಾವನಾ ರಾಮಣ್ಣ.