Gowri Movie Review: ಗೌರಿ ಚಿತ್ರದಲ್ಲಿ ಮೇಳೈಸಿದ ಸಮರ್ಜಿತ್‌ ಲಂಕೇಶ್‌ ಹೀರೋಯಿಸಂ; ಇದು ಮಗನಿಗಾಗಿ ಇಂದ್ರಜಿತ್‌ ಸಿದ್ಧಪಡಿಸಿದ ಲಾಂಚ್‌ಪ್ಯಾಡ್-sandalwood news did samarjith lankesh saanya iyer catch everyones attention in the first gowri film gowri review mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Gowri Movie Review: ಗೌರಿ ಚಿತ್ರದಲ್ಲಿ ಮೇಳೈಸಿದ ಸಮರ್ಜಿತ್‌ ಲಂಕೇಶ್‌ ಹೀರೋಯಿಸಂ; ಇದು ಮಗನಿಗಾಗಿ ಇಂದ್ರಜಿತ್‌ ಸಿದ್ಧಪಡಿಸಿದ ಲಾಂಚ್‌ಪ್ಯಾಡ್

Gowri Movie Review: ಗೌರಿ ಚಿತ್ರದಲ್ಲಿ ಮೇಳೈಸಿದ ಸಮರ್ಜಿತ್‌ ಲಂಕೇಶ್‌ ಹೀರೋಯಿಸಂ; ಇದು ಮಗನಿಗಾಗಿ ಇಂದ್ರಜಿತ್‌ ಸಿದ್ಧಪಡಿಸಿದ ಲಾಂಚ್‌ಪ್ಯಾಡ್

Gowri Kannada Movie Review: ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಅವರ ಪುತ್ರ ಸಮರ್ಜಿತ್‌ ಕ ಲಂಕೇಶ್‌ ನಾಯಕ ನಟನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಗೌರಿ, ಆಗಸ್ಟ್‌ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಚಿತ್ರ ಹೇಗಿದೆ? ಮೊದಲ ಚಿತ್ರದಲ್ಲಿ ಸಮರ್ಜಿತ್‌ ಭರವಸೆ ಮೂಡಿಸಿದ್ದಾರಾ? ಗೌರಿ ಕಥೆ ಏನು ಇಲ್ಲಿದೆ ವಿಮರ್ಶೆ.

Gowri Kannada Movie Released: ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಪುತ್ರ ಸಮರ್ಜಿತ್‌ ನಾಯಕ ನಟನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಗೌರಿ, ಆಗಸ್ಟ್‌ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಇಲ್ಲಿದೆ ಈ ಚಿತ್ರದ ವಿಮಿರ್ಶೆ.
Gowri Kannada Movie Released: ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಪುತ್ರ ಸಮರ್ಜಿತ್‌ ನಾಯಕ ನಟನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಗೌರಿ, ಆಗಸ್ಟ್‌ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಇಲ್ಲಿದೆ ಈ ಚಿತ್ರದ ವಿಮಿರ್ಶೆ.

Gowri Movie Review: ನಟ, ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಅಕ್ಕನ ಹೆಸರನ್ನೇ ಇಟ್ಟುಕೊಂಡು ಮಗ ಸಮರ್ಜಿತ್‌ ಲಂಕೇಶ್‌ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಯಾವುದೇ ಆಡಂಬರವಿಲ್ಲದೆ, ಸರಳ ಕಥೆಯ ಮೂಲಕ ನೋಡುಗರನ್ನು ಸೆಳೆಯುವ ಪ್ರಯತ್ನ ಸಮರ್ಜಿತ್‌ ಅವರ ಚೊಚ್ಚಲ ಚಿತ್ರದಲ್ಲಾಗಿದೆ. ನಾನು ಯಾವುದಕ್ಕೆ ಸೈ, ನನ್ನೊಳಗಿನ ಪ್ರತಿಭೆ ಹೇಗಿದೆ, ನಾನೇನು ಮಾಡಬಲ್ಲೇ? ಹೀಗೆ ತಮ್ಮೊಳಗಿನ (ಸಮರ್ಜಿತ್‌) ಪ್ರತಿಭೆಯ ಅನಾವರಣಕ್ಕೆ ಒಂದು ವೇದಿಕೆಯಾಗಿ ನಿಂತಿದ್ದೇ ಗೌರಿ ಸಿನಿಮಾ.

ಇಂದ್ರಜಿತ್‌ ಲಂಕೇಶ್‌ ಚಿತ್ರರಂಗದಲ್ಲಿ ಪಳಗಿದವರು. ಎರಡು ದಶಕಕ್ಕೂ ಅಧಿಕ ಕಾಲದಿಂದ ಚಿತ್ರೋದ್ಯಮದಲ್ಲಿದ್ದಾರೆ. ನಿರ್ದೇಶನದ ಮೂಲಕವೇ ಗುರುತಿಸಿಕೊಂಡಿದ್ದಾರೆ. ಇದೀಗ ಶತಾಯ ಗತಾಯ, ಮಗನನ್ನು ಗೆಲ್ಲಿಸಬೇಕು, ಚಿತ್ರರಂಗದಲ್ಲಿ ಆತನಿಗೊಂದು ಭದ್ರನೆಲೆ ಒದಗಿಸಬೇಕೆಂದು ಗೌರಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಇಂದ್ರಜಿತ್. ಅದರಂತೆ, ಎಲ್ಲ ಮಸಾಲೆಗಳನ್ನು ಹದವಾಗಿ ಬೆರೆಸಿ ಗೌರಿ ಚಿತ್ರದ ಮೂಲಕ ಸುಪುತ್ರ ಸಮರ್ಜಿತ್‌ ಲಂಕೇಶ್‌ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದ್ದಾರೆ. ಹಾಗಾದರೆ, ಏನಿದು ಗೌರಿ? ಇಲ್ಲಿದೆ ವಿಮರ್ಶೆ ಓದಿ.

ಇದು ಔಟ್‌ ಅಂಡ್‌ ಔಟ್‌ ಇಂಟ್ರಡಕ್ಷನ್‌ ಸಿನಿಮಾ. ಇಲ್ಲಿ ಸಮರ್ಜಿತ್‌ ಅವರೊಳಗಿನ ಪ್ರತಿಭಾ ಪ್ರದರ್ಶನಕ್ಕೆ ಗೌರಿ ಸಿನಿಮಾ ಮೂಡಿಬಂದಂತಿದೆ. ನಾಯಕ ನಟನ ಚೊಚ್ಚಲ ಸಿನಿಮಾದಲ್ಲಿ ಏನೆಲ್ಲ ಅಂಶಗಳು ಇರಬೇಕೆಂದು ಅರಿತಿರುವ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಮುದ ನೀಡುವ ಕಲರ್‌ಫುಲ್ ಹಾಡುಗಳು, ಆಕ್ಷನ್‌ ಸೀನ್‌ಗಳು, ಭಾವುಕ ಸನ್ನಿವೇಶಗಳು, ಡಾನ್ಸ್‌ ಮೋಡಿ, ನೋಡುಗರಿಗೆ ಟ್ವಿಸ್ಟ್‌ ಕೊಡುವ ಪ್ರಸಂಗಗಳು, ಒಂದು ಮುದ್ದಾದ ಲವ್‌ ಸ್ಟೋರಿ... ಹೀಗೆ ಒಂದಷ್ಟು ಸರಕನ್ನು ಹೊತ್ತು ತಂದು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಗೌರಿ ಕಥೆ ಏನು?

ಹಳ್ಳಿಯಲ್ಲಿ ಹುಟ್ಟಿದ, ಸಂಗೀತದ ಹಿನ್ನೆಲೆಯ ಕುಟುಂಬದಿಂದ ಬಂದ ಗೌರಿಶಂಕರ್‌ (ಸಮರ್ಜಿತ್‌ ಲಂಕೇಶ್‌) ತಾನೊಬ್ಬ ಹಾಡುಗಾರನಾಗಬೇಕೆಂಬ ಆಸೆ. ಆ ಕನಸ ಬೆನ್ನತ್ತಿ ಮಹಾನಗರ ಬೆಂಗಳೂರಿಗೆ ಮನೆ ಬಿಟ್ಟು ಬಂದಿಳಿಯುತ್ತಾನೆ. ಏನೂ ತಿಳಿಯದ ಆತನಿಗೆ, ಸಮಂತಾಳ (ಸಾನ್ಯಾ ಅಯ್ಯರ್) ಪರಿಚಯವಾಗುತ್ತದೆ. ಪರಿಚಯ ಗಾಢ ಸ್ನೇಹಕ್ಕೆ ಹೊರಳುತ್ತದೆ. ಆ ಸ್ನೇಹಕ್ಕೆ ಪ್ರೀತಿ ನಂಟೂ ಅಂಟಿಕೊಳ್ಳುತ್ತದೆ. ತಮ್ಮ ಗುರಿಯತ್ತಲೂ ಗಮನಹರಿಸುವ ನಾಯಕನಿಗೆ ಒಂದು ರಿಯಾಲಿಟಿ ಶೋ ವೇದಿಕೆಯಲ್ಲಿ ಹಾಡುವ ಅವಕಾಶ ಸಿಗುತ್ತದೆ. ಆ ವೇದಿಕೆ ಮೇಲೆ ಕಥಾನಾಯಕ ಹಾಡ್ತಾನಾ? ತನ್ನ ಕನಸನ್ನು ನನಸು ಮಾಡಿಕೊಳ್ತಾನಾ? ಎದುರಾಗುವ ಸಮಸ್ಯೆಗಳೇನು? ಹೀಗೆ ಒಂದಷ್ಟು ರೋಚಕತೆಯಲ್ಲಿಯೇ ಸಿನಿಮಾ ನೋಡಿಸಿಕೊಂಡು ಸಾಗುತ್ತದೆ.

ಇಡೀ ಸಿನಿಮಾದಲ್ಲಿ ಮೊದಲಾರ್ಧ ಪಾತ್ರ ಪರಿಚಯದ ಕಾಯಕ ಮಾಡಿದ್ದಾರೆ ನಿರ್ದೇಶಕ ಇಂದ್ರಜಿತ್.‌ ಕಲರ್‌ಫುಲ್‌ ಆಗಿಯೇ ಸಾಗುವ ಮೊದಲಾರ್ಧ, ದ್ವಿತಿಯಾರ್ಧಕ್ಕೆ ಹೊರಳುತ್ತಿದ್ದಂತೆ, ಮುಖ್ಯಘಟ್ಟಕ್ಕೆ ಸಿನಿಮಾ ಬಂದು ನಿಲ್ಲುತ್ತದೆ. ವಿಶೇಷಚೇತನರ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಅದೇ ಚಿತ್ರದ ತಾಯಿ ಬೇರು. ಈ ಮೂಲಕ ಸಾಮಾಜಿಕ ಕಳಕಳಿಯ ಕಥೆಯೊಂದನ್ನು, ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ತೀರಾ ವಿಶೇಷವಾದುದ್ದನ್ನೇ ನಿರ್ದೇಶಕರು ಹೇಳಿದ್ದಾರೆ ಎಂದು ಅನಿಸದೇ ಹೋದರೂ, ನೋಡುಗನಿಗೆ ಫ್ರೆಶ್‌ ಫೀಲ್‌ ಆಗುವ ಅಂಶಗಳನ್ನು ಬೆರೆಸಿದ್ದಾರೆ.

ಚಿತ್ರದಲ್ಲಿ ನೆಗೆಟಿವ್‌ ಅಂಶಗಳು ಇಲ್ಲವೇ?

ಮಗನ ಚೊಚ್ಚಲ ಸಿನಿಮಾ ಎಂಬ ಕಾರಣಕ್ಕೋ ಅಥವಾ ಕಥೆಯೇ ಬೇಡಿದೆ ಎಂಬ ಕಾರಣಕ್ಕೋ ಉಳಿದೆಲ್ಲವನ್ನು ಗೌಣವಾಗಿಸಿ, ನಾಯಕನ ಹಿರೋಯಿಸಂಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಿದೆ. ಸಿನಿಮಾ ಅಂದರೆ, ಅಲ್ಲಿ ಲಾಜಿಕ್‌ ನಿರೀಕ್ಷಿಸುವುದು ತಪ್ಪು. ಆದರೆ, ಪ್ರೇಕ್ಷಕನಿಗೆ ಅದು ಇರಿಸುಮುರಿಸು ಉಂಟು ಮಾಡಬಾರದು. ಮಂಜು ಪಾವಗಡ, ನವಾಜ್‌ ಕಾಮಿಡಿ ಕಳೆ ಹೆಚ್ಚಿಸಿದ್ದರೂ, ಬೇಕು ಅಂತಲೇ ಆ ದೃಶ್ಯಗಳನ್ನು ತಂದು ಕೂರಿಸಿದಂತಿದೆ. ಇಂದ್ರಜಿತ್‌ ಲಂಕೇಶ್‌ ಸಿನಿಮಾದ ಹಾಡುಗಳಲ್ಲಿ ಕಲರ್‌ಫುಲ್‌ ಜಾಸ್ತಿ. ಇಲ್ಲಿಯೂ ಅದು ಮುಂದುವರಿದೆ. ಆದರೆ, ಕೆಲವನ್ನು ಬದಿಗಿಟ್ಟರೆ, ಇನ್ನುಳಿದ ಹಾಡುಗಳಿಗೆ ಗುನುಗುವ ಗುಣವಿಲ್ಲ.

ಭರವಸೆ ಮೂಡಿಸಿದ್ರಾ ಸಮರ್ಜಿತ್‌?

ಚೊಚ್ಚಲ ನಟನೆಯಲ್ಲಿ ಡಾನ್ಸ್‌, ಸಾಹಸ ಸನ್ನಿವೇಷಗಳ ಮೂಲಕ ಸಮರ್ಜಿತ್‌ ಲಂಕೇಶ್‌ ತಮ್ಮ ಶೇ 100 ಶ್ರಮ ಹಾಕಿದ್ದಾರೆ. ಸಮರ್ಜಿತ್‌ ಅವರನ್ನು ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ ಅಪ್ಪ ಇಂದ್ರಜಿತ್‌. ಸಮರ್ಜಿತ್‌ ಅರ್ಬನ್‌ ಕಿಡ್‌ ಆಗಿರೋದ್ರಿಂದ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅಷ್ಟೊಂದು ಆಪ್ತರಂತೆ ಕಾಣಿಸಲ್ಲ. ನಟನೆಯಲ್ಲಿ ಇನ್ನಷ್ಟು ಅವರಿಂದ ನೈಜತೆ ಸಂದಾಯವಾಗಬೇಕಿತ್ತು. ಇವೆಲ್ಲದಕ್ಕೂ ಚೂರು ಸಾಣೆ ಹಿಡಿದರೆ, ಕನ್ನಡಕ್ಕೊಬ್ಬ ಭರವಸೆಯ ನಟನ ಸ್ಥಾನ ತುಂಬಬಲ್ಲ ತಾಕತ್ತು ಸಮರ್ಜಿತ್‌ಗಿದೆ. 

ಇನ್ನುಳಿದಂತೆ ನಾಯಕಿಯಾಗಿ ಪದಾರ್ಪಣೆ ಮಾಡಿರುವ ಸಾನ್ಯಾ ಅಯ್ಯರ್‌ ಗ್ಲಾಮರ್‌ ಗೊಂಬೆಯಾಗಿ ಕಾಣಿಸಿದ್ದೇ ಹೆಚ್ಚು.  ಒಂದೊಳ್ಳೆಯ ಉದ್ದೇಶದೊಂದಿಗೆ ಮೆಚ್ಯೂರ್‌ ಆಗಿ ಕಾಣಿಸಿಕೊಳ್ಳುತ್ತಾರವರು. ಇನ್ನು ಸಂಪತ್‌ ಮೈತ್ರೇಯ, ಮಾನಸಿ ಸುಧೀರ್‌ ಕೊಟ್ಟ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಸಂಗೀತದ ಕುರಿತ ಸಿನಿಮಾ ಆಗಿರುವುದಿರಂದ, ಕಥೆಗೆ ಪೂರಕವಾಗಿದೆ. ಇದೆಲ್ಲವನ್ನು ಹೊರತುಪಡಿಸಿದರೆ, ಗೌರಿ ಒಂದೊಳ್ಳೆ ಯುಥ್‌ ಓರಿಯೆಂಟೆಡ್‌ ಕಥೆ, ಕೊಟ್ಟ ದುಡ್ಡಿಗೆ ಈ ಸಿನಿಮಾ ಮೋಸ ಮಾಡದು.

ಚಿತ್ರ: ಗೌರಿ

ನಿರ್ದೇಶನ: ಇಂದ್ರಜಿತ್‌ ಲಂಕೇಶ್‌

ನಿರ್ಮಾಣ: ಲಾಫಿಂಗ್‌ ಬುದ್ಧ ಫಿಲಂಸ್‌

ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ರಾಜೀವ್ ಪಿಲ್ಲೆ

ರೇಟಿಂಗ್‌: 3\5

ವಿಮರ್ಶೆ: ಮಂಜು ಕೊಟಗುಣಸಿ