Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ-sandalwood news diganth manchale dhanya ramkumar powder movie review powder review in kannada mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ

Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ

Powder Movie Review: ಡ್ರಗ್ಸ್‌ ಕಥೆ ಎಂದರೆ ಅಲ್ಲಿ ಕ್ರೈಂ ಥ್ರಿಲ್ಲರ್‌ ಎಳೆಯ ಕಥೆ ಇರುತ್ತದೆ. ಆದರೆ, ಪೌಡರ್‌ ಸಿನಿಮಾದಲ್ಲಿ ಆ ಡ್ರಗ್ಸ್‌ ಕಥೆಯನ್ನೇ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ. ತೆರೆಮೇಲೆ ಏನು ಕಾಣುತ್ತದೆಯೋ ಅದನ್ನು ನೋಡಿ ನಗಬೇಕಷ್ಟೇ ವಿನಃ ಇದ್ಯಾಕೆ ಹೀಗೆ, ಅದ್ಯಾಕೆ ಹಾಗೆ ಎಂದು ಪ್ರಶ್ನೆ ಮಾಡುವಂತಿಲ್ಲ.

ಡ್ರಗ್ಸ್‌ ಕಥೆ ಎಂದರೆ ಅಲ್ಲಿ ಕ್ರೈಂ ಥ್ರಿಲ್ಲರ್‌ ಎಳೆಯ ಕಥೆ ಇರುತ್ತದೆ. ಆದರೆ, ಪೌಡರ್‌ ಸಿನಿಮಾದಲ್ಲಿ ಆ ಡ್ರಗ್ಸ್‌ ಕಥೆಯನ್ನೇ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ.
ಡ್ರಗ್ಸ್‌ ಕಥೆ ಎಂದರೆ ಅಲ್ಲಿ ಕ್ರೈಂ ಥ್ರಿಲ್ಲರ್‌ ಎಳೆಯ ಕಥೆ ಇರುತ್ತದೆ. ಆದರೆ, ಪೌಡರ್‌ ಸಿನಿಮಾದಲ್ಲಿ ಆ ಡ್ರಗ್ಸ್‌ ಕಥೆಯನ್ನೇ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ.

Powder Movie Review: ಈ ಹಿಂದೆ ಸೈಬರ್‌ ಕ್ರೈಂ ಹಿನ್ನೆಲೆಯ ಗುಳ್ಟು ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ. 2018ರಲ್ಲಿ ತೆರೆಗೆ ಬಂದಿದ್ದ ಆ ಸಿನಿಮಾ, ವೀಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ ಒಳ್ಳೆಯ ಕಂಟೆಂಟ್‌ನಿಂದಲೇ ಸುದ್ದಿಯಾಗಿತ್ತು. ಇದೀಗ ಇದೇ ನಿರ್ದೇಶಕ ಪೌಡರ್‌ ಸಿನಿಮಾ ಮೂಲಕ ಕಾಮಿಡಿ ಕಥೆ ಹೇಳಲು ಆಗಮಿಸಿದ್ದಾರೆ. ಅದರಂತೆ ದಿಗಂತ್‌ ಮಂಚಾಲೆ, ಧನ್ಯಾ ರಾಮ್‌ಕುಮಾರ್‌, ರಂಗಾಯಣ ರಘು, ಶರ್ಮಿಳಾ ಮಾಂಡ್ರೆ, ರವಿಶಂಕರ್ ಗೌಡ, ಅನಿರುದ್ಧ್‌ ಅವರನ್ನು ಒಂದೆಡೆ ಸೇರಿಸಿಕೊಂಡು ಪೌಡರ್‌ ಹೆಸರಿನ ಸಿನಿಮಾ ಮಾಡಿದ್ದಾರೆ. ಇಂದು (ಆಗಸ್ಟ್‌ 23) ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗಿದೆ.

ಇದು ಆ ಪೌಡರ್‌ ಕಥೆ!

ಸಿನಿಮಾ ಹೆಸರು ಪೌಡರ್‌. ಆದರೆ ಈ ಪೌಡರ್‌ ಸಿನಿಮಾ ಒಳಗೇನಿದೆ? ಮೈಸೂರಿನ ಸುಂದರ ವಾತಾವರಣದಲ್ಲಿ ಸಾಗುತ್ತದೆ ಈ ಪೌಡರ್‌ ಘಮ. ಸೂರ್ಯ (ದಿಗಂತ್)‌ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುವ ಹುಡುಗ. ಈ ಸೂರ್ಯ ಮತ್ತು ನಿತ್ಯಾಳ (ಧನ್ಯಾ ರಾಮ್‌ಕುಮಾರ್‌) ನಡುವೆ ಪ್ರೀತಿ ಪ್ರೇಮ. ಹೇಗಾದರೂ ಮಾಡಿ ಒಳ್ಳೆಯ ದುಡ್ಡು ಮಾಡಿ ಲೈಫ್‌ನ ಎಂಜಾಯ್‌ ಮಾಡಬೇಕು ಎಂಬುದು ನಿತ್ಯಾಳ ಕನಸು. ಇವರಿಬ್ಬರಿಗೂ ಜತೆಯಾಗಿರುವ ಕರಣ್‌ಗೂ (ಅನಿರುದ್ಧ) ಹಣ ಮಾಡಬೇಕು ಅನ್ನೋ ಬಯಕೆ. ಹೀಗಿರುವ ಈ ಮೂವರ ಕೈಗೆ ಬಿಳಿ ಪೌಡರ್‌ ಸಿಗುತ್ತದೆ. ಅದು ಮುಖಕ್ಕೆ ಹಾಕೋ ಪೌಡರ್‌ ಅಲ್ಲ, ಬದಲಿಗೆ ಕೋಟಿ ಬೆಲೆಬಾಳೋ ಡ್ರಗ್ಸ್‌! ಹಾಗೇ ಸಿಗುವ ಪೌಡರ್ ಕಳೆದು‌ ಹೋಗುತ್ತದೆ. ಆ ಡ್ರಗ್ಸ್‌ ಪಾಕೆಟ್‌ ಸಿಗುತ್ತಾ? ಇದೇ ಸಿನಿಮಾದ ಒಂದೆಳೆ.

ನಗಬೇಕು.. ನಗಬೇಕು

ಸಹಜವಾಗಿ ಡ್ರಗ್ಸ್‌ ಕಥೆ ಎಂದರೆ ಅಲ್ಲಿ ಕ್ರೈಂ ಥ್ರಿಲ್ಲರ್‌ ಎಳೆಯ ಕಥೆ ಇರುತ್ತದೆ. ಆದರೆ, ಪೌಡರ್‌ ಸಿನಿಮಾದಲ್ಲಿ ಆ ಡ್ರಗ್ಸ್‌ ಕಥೆಯನ್ನೇ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ. ತೆರೆಮೇಲೆ ಏನು ಕಾಣುತ್ತದೆಯೋ ಅದನ್ನು ನೋಡಿ ನಗಬೇಕಷ್ಟೇ ವಿನಃ, ಇದ್ಯಾಕೆ ಹೀಗೆ, ಅದ್ಯಾಕೆ ಹಾಗೆ ಎಂದು ಲೆಕ್ಕ ಹಾಕುವಂತಿಲ್ಲ, ಪ್ರಶ್ನೆ ಮಾಡುವಂತಿಲ್ಲ. ಅಂದರೆ ಲಾಜಿಕ್‌ ಬದಿಗಿರಿಸಿ, ಮ್ಯಾಜಿಕ್‌ ಮಾಡಿದ್ದನ್ನಷ್ಟೇ ನೋಡಿ ಸವಿಯಬೇಕು. ಮೊದಲ ಗುಳ್ಟು ಸಿನಿಮಾದಲ್ಲಿ ಸೀಟಿನ ತುದಿಗೆ ತಂದು ಕೂರಿಸಿದ್ದ ನಿರ್ದೇಶಕ ಜನಾರ್ದನ್‌, ಪೌಡರ್‌ ಚಿತ್ರದಲ್ಲಿ ನಗಿಸುವ ಕಾಯಕಕ್ಕೆ ಇಳಿದಿದ್ದಾರೆ. ಹಾಗಾಗಿ ನಗೋದಷ್ಟೇ ಪ್ರೇಕ್ಷಕನ ಕೆಲಸ.

ತಾಂತ್ರಿಕವಾಗಿ ಈ ಪೌಡರ್‌ ಬಲಿಷ್ಠ

ಪೌಡರ್‌ ಸಿನಿಮಾ ತಾಂತ್ರಿಕವಾಗಿ ಬಲಿಷ್ಠವಾಗಿದೆ. ವಿಎಫ್‌ಎಕ್ಸ್‌, ಮೇಕಿಂಗ್‌ನಿಂದ ಹಿಡಿದು ವಾಸುಕಿ ವೈಭವ್‌ ಅವರ ಹಿನ್ನೆಲೆ ಸಂಗೀತ, ದೃಶ್ಯಗಳ ಅಂದಗಾಣಿಸುವಲ್ಲಿ ಛಾಯಾಗ್ರಾಹಕ ಅದ್ವೈತ್‌ ಗುರುಮೂರ್ತಿ ಅವರ ಪರಿಶ್ರಮ ಎದ್ದು ಕಾಣುತ್ತದೆ. ಅದೇ ರೀತಿ ಚಿತ್ರದ ಅವಧಿಯೂ ಹೆಚ್ಚೇನಿಲ್ಲ. 131 ನಿಮಿಷಗಳ ಈ ಸಿನಿಮಾದಲ್ಲಿ ತಾಂತ್ರಿಕತೆಯ ಜತೆಗೆ ಕಲಾವಿದರ ನಟನೆಗೂ ಹೆಚ್ಚು ಅಂಕ ಸಲ್ಲಬೇಕು. ದಿಗಂತ್‌ ನಗಿ ಉಕ್ಕಿಸುವ ಕೆಲಸ ಮುಂದುವರಿಸಿದ್ದಾರೆ. ಗಂಭೀರ ಪಾತ್ರದ ಮೂಲಕವೇ ಎದುರಾಗುತ್ತಿದ್ದ ನಟ ಗೋಪಾಲಕೃಷ್ಣ ದೇಶಪಾಂಡೆ, ಸುಲೇಮಾನ್‌ ಪಾತ್ರದಲ್ಲಿ ನಗಿಸುತ್ತಾರೆ. ಅಣ್ಣಾಚಿಯಾಗಿ ರಂಗಾಯಣ ರಘು, ನಿತ್ಯಾ ಪಾತ್ರದಲ್ಲಿ ಧನ್ಯಾ ರಾಮ್‌ಕುಮಾರ್‌, ಖಡಕ್‌ ಪಾತ್ರದಲ್ಲಿ ಶರ್ಮಿಳಾ ಮಾಂಡ್ರೆ, ಪವನ್‌ ಮತ್ತು ರವಿಶಂಕರ್‌ ಗೌಡ ಸಿಕ್ಕ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ.

ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕನನ್ನು ನಗಿಸಬೇಕು ಎಂಬುದೇ ಪೌಡರ್‌ ಚಿತ್ರತಂಡದ ಮುಖ್ಯ ಉದ್ದೇಶ. ಮಾದಕ ವಸ್ತು ಕಳೆದು ಹೋದಾಗ, ಅದರ ಹುಡುಕಾಟಕ್ಕಿಳಿದಾಗ ಏನೆಲ್ಲ ಘಟಿಸುತ್ತವೆ ಎಂಬುದನ್ನು ಕಾಮಿಡಿಯಾಗಿ ಹೇಳಿದ್ದಾರೆ ನಿರ್ದೇಶಕ ಜನಾರ್ದನ್. ಡ್ರಗ್ಸ್‌ ವಿಚಾರವನ್ನು ಕಾಮಿಡಿಗೆ ಬಳಕೆ ಮಾಡಿಕೊಳ್ಳಲಾಗಿದೆಯಾದರೂ, ಅದನ್ನು ವೈಭವಿಕರಿಸುವ ಕೆಲಸವಾಗಿಲ್ಲ ಎಂಬುದು ಖುಷಿಯ ಸಂಗತಿ.

ಚಿತ್ರ: ಪೌಡರ್

ನಿರ್ದೇಶನ: ಜನಾರ್ಧನ್‍ ಚಿಕ್ಕಣ್ಣ

ನಿರ್ಮಾಣ: ಕಾರ್ತಿಕ್‍ ಗೌಡ, ಯೋಗಿ ಜಿ ರಾಜ್‍, ವಿಜಯ್‍ ಸುಬ್ರಹ್ಮಣ್ಯಂ ಮತ್ತು ಅರುನಭ್‍ ಕುಮಾರ್

ತಾರಾಗಣ: ದಿಗಂತ್ ಮಂಚಾಲೆ, ಧನ್ಯಾ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ, ಅನಿರುದ್ಧ ಆಚಾರ್ಯ, ರವಿಶಂಕರ್ ಗೌಡ ಮುಂತಾದವರು

ರೇಟಿಂಗ್‌: 3/5

ವಿಮರ್ಶೆ: ಮಂಜು ಕೊಟಗುಣಸಿ